Tel: 7676775624 | Mail: info@yellowandred.in

Language: EN KAN

    Follow us :


ಬೆಳಗ್ಗೆ 8ರಿಂದಲೇ ಕಾಲೇಜು

Posted date: 18 Jul, 2018

Powered by:     Yellow and Red

ಬೆಳಗ್ಗೆ 8ರಿಂದಲೇ ಕಾಲೇಜು

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೆಳಗ್ಗೆ ತರಗತಿ ಆರಂಭಿಸುವ ಸಮಯವನ್ನು ಮತ್ತೆ ಪರಿಷ್ಕರಿಸಲಾಗಿದೆ. ಸ್ವಂತ ಕಟ್ಟಡ ಇಲ್ಲದ ಹಾಗೂ ಕೊಠಡಿಗಳ ಕೊರತೆ ಯಿದ್ದು, ಎರಡು ಪಾಳಿಯಲ್ಲಿ ತರಗತಿ ನಡೆಸುವ ಕಾಲೇಜುಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ.

ಕಾಲೇಜು ತರಗತಿ ಆರಂಭಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕರ ಸಂಘ ಹಾಗೂ ಸಾರ್ವಜನಿಕರು ಸಲ್ಲಿಸಿದ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಇಲಾಖೆ, ತರಗತಿ ಆರಂಭದ ಸಮಯಕ್ಕೆ ಸಂಬಂಧಿಸಿದ ಮೂರು ಮಾರ್ಗೋಪಾಯ ತಿಳಿಸಿದೆ. ಈಗಾಗಲೇ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸುತ್ತಿರುವ ಕಾಲೇಜುಗಳಲ್ಲಿ ಬೆಳಗಿನ ಬ್ಯಾಚ್‌ಗಳನ್ನು ಮತ್ತು ಎಲ್ಲ ಕಾಲೇಜುಗಳಲ್ಲೂ ಪ್ರಯೋಗಾಲಯ ಹಿಂದಿನಂತೆಯೇ ಬೆಳಗ್ಗೆ 8 ಗಂಟೆಗೆ ಆರಂಭಿಸುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಅನಾನುಕೂಲ ಆಗುತ್ತಿರುವ ಕಾಲೇಜುಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ದೃಷ್ಟಿಯಿಂದ ಬೆಳಗ್ಗೆ 9 ಗಂಟೆಯಿಂದ 10 ಗಂಟೆಯ ಮಧ್ಯದಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆರಂಭಿಸುವುದು. ಈ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರು ತೀರ್ಮಾನ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ವೇಳಾಪಟ್ಟಿ ಬದಲಾವಣೆಯಿಂದ ಪಠ್ಯೇತರ ಚಟುವಟಿಕೆಗಳಾದ ಎನ್‌ಎಸ್‌ಎಸ್‌, ಎನ್‌ಸಿಸಿ, ಕೌಶಲ್ಯಾಭಿವೃದ್ಧಿ ತರಬೇತಿ, ವಿಶೇಷ ತರಬೇತಿ, ಕ್ರೀಡಾ ಚಟುವಟಿಕೆಗಳನ್ನು ಯಾವುದೇ ರೀತಿಯಲ್ಲೂ ಕಡಿತಗೊಳಿಸದಂತೆ ಪ್ರಾಂಶು 
ಪಾಲಕರಿಗೆ ಎಚ್ಚರಿಕೆ ನೀಡಿದೆ.

ಸಾರಿಗೆ ಸಮಸ್ಯೆ ಪರಿಹಾರಕ್ಕೆ ಈ ಕ್ರಮ: ರಾಜ್ಯದಲ್ಲಿ 412 ಸರ್ಕಾರಿ ಪದವಿ ಕಾಲೇಜುಗಳಿದ್ದು, ಶೇ.25ರಷ್ಟು ಕಾಲೇಜುಗಳಲ್ಲಿ ಎರಡು ಪಾಳಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಉಳಿದ ಎಲ್ಲ ಕಾಲೇಜುಗಳಲ್ಲೂ ಬೆಳಗ್ಗೆಯಿಂದಲೇ ತರಗತಿ ನಡೆಯುತ್ತಿದೆ. ಪ್ರಸಕ್ತ ಸಾಲಿನ ತರಗತಿಗಳನ್ನು 9ಗಂಟೆಯಿಂದ ಆರಂಭಿಸುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆ ಸೂಚನೆ ನೀಡಿತ್ತು. ಇದಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರಾಂಶುಪಾಲರು ಮತ್ತು
ಪ್ರಾಧ್ಯಾಪಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯೂ ಎದುರಾಗುವುದರಿಂದ ಕಾಲೇಜು ಶಿಕ್ಷಣ ಇಲಾಖೆ ತರಗತಿ ಆರಂಭದ ವೇಳಾಪಟ್ಟಿ ಪರಿಷ್ಕರಿಸಿದೆ. 2017-18ನೇ ಸಾಲಿನ ಮಧ್ಯಭಾಗದಲ್ಲಿ ಪದವಿ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ ಆರಂಭಿಸಲು ಇಲಾಖೆ ನಿರ್ಧರಿಸಿ, ಎಲ್ಲ ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಿತ್ತು. ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳು ತೀವ್ರ
ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑