Tel: 7676775624 | Mail: info@yellowandred.in

Language: EN KAN

    Follow us :


ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?

Posted date: 15 Dec, 2018

Powered by:     Yellow and Red

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮುಂದೋಗುವ ಮುಂಚೆಯೇ ಒಂದರ ಹಿಂದೊಂದು ವಾಹನ ಎಡೆಬಿಡದೆ ಬಂದು ಆ ನಾಯಿಯನ್ನು ಛಿದ್ರ ಛಿದ್ರವಾಗಿಸಿಕೊಂಡು ಹೋಗಿಬಿಡುತ್ತವೆ. ಕೇವಲ ಎರಡ್ಮೂರು ಗಂಟೆಗಳಲ್ಲಿ ‌ಇಲ್ಲೊಂದು ನಾಯಿ ಅಪಘಾತಕ್ಕೀಡಾಗಿತ್ತು ಅನ್ನೋದೆ ಗೊತ್ತಾಗದಷ್ಟು ರಸ್ತೆ ಶುಚಿಯಾಗಿಬಿಟ್ಟಿರುತ್ತೇ ! ಆ ನಾಯಿ ರಸ್ತೆಯ ನಡುವೆ ಹೊರತುಪಡಿಸಿ ರಸ್ತೆಯ ಮಗ್ಗುಲಲ್ಲಿ ಹೋಗಿ ಸತ್ತರೆ ಅನೇಕ ದಿನಗಳವರೆಗೆ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗುತ್ತದೆ.


ಇತ್ತೀಚೆಗಂತೂ ಬೀದಿನಾಯಿಗಳ ಜೊತೆಗೆ ಸಾಕು ಪ್ರಾಣಿಗಳು ಸಹ ಅಪಘಾತಕ್ಕೀಡಾಗುತ್ತಿರುವುದು ಆಘಾತಕ್ಕೀಡುಮಾಡಿದೆ.


ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಜೊತೆಗೆ ಬೀಡಾಡಿ ಹಸುಗಳು, ಮೇಕೆಗಳು, ಬೆಕ್ಕುಗಳು ಮತ್ತು ಹಂದಿಗಳು ಯಥೆಚ್ಚವಾಗಿ ಓಡಾಡುತ್ತಿರುತ್ತವೆ, ನಗರಸಭೆಯ ಅಧಿಕಾರಿಗಳಾಗಲಿ, ನಗರಸಭೆಯ ಸದಸ್ಯರಾಗಲಿ ಕಿಂಚಿತ್ತೂ ಇದರ ಕಡೆ ಗಮನಕೊಡದಿರುವುದು ನಾಚಿಕೆಗೇಡಿನ ಸಂಗತಿ.

ಸಂಬಂಧಿಸಿದ ಮಾಲೀಕರಿಗೆ ಎಚ್ಚರಿಕೆಯ ನೋಟಿಸ್ ನೀಡಿ ತದ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಿದರೆ ಎಲ್ಲೆಂದರಲ್ಲಿ ಸಾಕು ಪ್ರಾಣಿಗಳನ್ನು ಅಟ್ಟುವುದು ತಪ್ಪುತ್ತದೆ.


ಬೀದಿನಾಯಿಗಳು ಮತ್ತು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹೇಗೆಂದರಲ್ಲಿ ಅಡ್ಡ ಬರುವ ಪ್ರಾಣಿಗಳಿಂದ ಅದೆಷ್ಟೋ ದ್ವಿಚಕ್ರ ವಾಹನಗಳ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ, ತದನಂತರ ಪ್ರಾಣ ಕಳೆದುಕೊಂಡಿರುವ ಉದಾಹರಣೆಯೂ ಇದೆ.


ನಿನ್ನೆ ದಿನ ಹೆದ್ದಾರಿಯ ಬಳಿ ನಡೆದ ಒಂದು ಹೃದಯ ವಿದ್ರಾವಕ ಘಟನೆ ಎಂತಹವರ ಮನವನ್ನು ಕರಗಿಸುವಂತಿತ್ತು, ಒಂದು ಕುದುರೆಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಕುದುರೆಯ ಒಂದು ಕಾಲು ಸಂಪೂರ್ಣವಾಗಿ ಜಜ್ಜಿಹೋಗಿತ್ತು, ಮಾಲೀಕರಾಗಲಿ, ಪ್ರಾಣಿದಯಾಸಂಘದವರಾಗಲಿ, ಇನ್ನಿತರ ಇಲಾಖಾಧಿಕಾರಿಗಳಾಗಲಿ ಕಣ್ಣೆತ್ತಿಯೂ ನೋಡಿಲ್ಲ, ಪಶು ಆರೋಗ್ಯಾಧಿಕಾರಿಗಳಾದ ಡಾ ಜಯರಾಮು ರವರಿಗೆ ವಿಷಯ ಮುಟ್ಟಿಸಲಾಗಿ ಸಿಬ್ಬಂದಿ ಕಳುಹಿಸಿ ನೋವು ನಿವಾರಕ ಕೊಡಿಸಿದರು, ನಗರಸಭೆಯ ಆರೋಗ್ಯಾಧಿಕಾರಿ ವರಲಕ್ಷ್ಮಿ ಯವರು ಸಹ ಒಬ್ಬ ಸಿಬ್ಬಂದಿ ಕಳುಹಿಸಿ ಮಾನವೀಯತೆ ಮೆರೆದರು, ಅದನ್ನು ಬೆಂಗಳೂರಿನ ಒಂದು ಪ್ರಾಣಿ ಸಂಘಕ್ಕೆ ತೆಗೆದುಕೊಂಡು ಹೋಗಲು ಡಾ ಜಯರಾಮು ರವರು ಪ್ರಯತ್ತಿಸಿದರಾದರೂ ಸಹ ಸೂಕ್ತ ಸಮಯಕ್ಕೆ ವಾಹನ ಸಿಗದಿರುವುದು ಮತ್ತು ಅತಿಯಾದ ರಕ್ತ ಸ್ರಾವವಾಗಿದ್ದರಿಂದ  ಕುದರೆಯು ಅಸುನೀಗಿತು, ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಲು ಮುಂದಾದ ದಂಡಾಧಿಕಾರಿ ಯೋಗಾನಂದ ರವರು, ವ್ಯಾಪ್ತಿ, ಇಲಾಖೆ ಎಂದು ಸಬೂಬು ಹೇಳದೆ ಮಾನವೀಯತೆಯಿಂದ ಸ್ಪಂದಿಸಿದ ಮೇಲಿನ ಅಧಿಕಾರಿಗಳೆಲ್ಲರೂ ಸ್ಮರಣೀಯರು.


ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೀದಿನಾಯಿಗಳಿಗೆ ಕಡಿವಾಣ ಮತ್ತು ಸಾಕು ಪ್ರಾಣಿಗಳ ಮಾಲೀಕರಿಗೆ ಎಚ್ಚರಿಕೆ ಕೊಡಲಿಲ್ಲವೆಂದರೆ ಮುಂದಾಗುವ ಅನೇಕ ಅನಾಹುತಗಳಿಗೆ ದಂಡ ತೆರಬೇಕಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑