Tel: 7676775624 | Mail: info@yellowandred.in

Language: EN KAN

    Follow us :


ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

Posted date: 31 Dec, 2018

Powered by:     Yellow and Red

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂಟು ವರ್ಷವಾದರು ಜನರು ಮರೆಯದ ಈ ಮಹಾನ್ ಚೇತನವನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಎಂದಿನ ಸಹಕಾರವಿರಲಿ.)


ಹದಿನೆಂಟು ವರ್ಷಗಳಲ್ಲಿ ಹತ್ತು ಕಡೆ ವರ್ಗಾವಣೆ


ಖ್ಯಾತ ಪತ್ರಕರ್ತ *ವಡ್ಡರ್ಸೆ ರಘುರಾಮಶೆಟ್ಟಿಯವರ ಪುತ್ರನಾಗಿ ಡಿಸೆಂಬರ್ ೧೭, ೧೯೭೧, ರಲ್ಲಿ ಜನಿಸಿದ ಇವರು ೧೯೯೯ ನೇ ಬ್ಯಾಚ್ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧಿಕಾರಿಯಾದ ಮಲೆನಾಡಿನ ಮಧುಕರ್ ಶೆಟ್ಟಿಯವರ ವೃತ್ತಿ ಪಯಣ ಚನ್ನಪಟ್ಟಣದ ಸಹಾಯಕ ಎಸ್ ಪಿ ಯಾಗಿ ಆರಂಭಗೊಂಡು ಕಲಬುರ್ಗಿಯ ಉಪವಿಭಾಗದ ಡಿವೈಎಸ್ಪಿ, ಚಿಕ್ಕಮಗಳೂರು ಮತ್ತು ಚಾಮನಗರ ಜಿಲ್ಲೆಯ ಎಸ್ ಪಿ ಯಾಗಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಪಡೆ, *ಕೊಸೊವೊದಲ್ಲಿನ ವಿಶ್ವಸಂಸ್ಥೆಯ ಯುದ್ಧಾಪರಾಧಗಳ ತನಿಖಾ ಘಟಕ,* ಬೆಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿಯಾಗಿ, ರಾಜ್ಯಪಾಲರ ಎಡಿಸಿ, ಲೋಕಾಯುಕ್ತ ಎಸ್ ಪಿ ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿಯಾಗಿ ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯ ನಿರ್ದೇಶಕರಾಗಿ ೨೦೧೭ ರ ಮಾಚ್೯ನಿಂದ ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೋಲಿಸ್ ಅಕಾಡೆಮಿಯ ಉಪ ನಿರ್ದೇಶಕರ ಹುದ್ದೆಯಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದು ಅಭಿಮಾನಿಗಳಿಗೆ ಅತೀವ ನೋವು ತಂದಿದೆ.


ಅವರೊಬ್ಬ ದೇವದೂತ ನಿವೃತ್ತ ಎಸ್ ಪಿ ಧರಣೀಂದ್ರ


ಮಧುಕರ್ ಶೆಟ್ಟಿ ಸರ್ ಬಂದ ಒಂದೂವರೆ ತಿಂಗಳಿಗೆ ನಾನು ಚನ್ನಪಟ್ಟಣ ವೃತ್ತ ನಿರೀಕ್ಷಕ ಹುದ್ದೆಗೆ ಬಂದೆ, ಅವರು ಕೇವಲ ಐಪಿಎಸ್ ಉತ್ತೀರ್ಣರಾಗಿ ಬಂದವರಲ್ಲ, ಅವರು ತಾಯಿ ಗರ್ಭದಲ್ಲಿದ್ದಾಗಲೇ ಮಾತೃ ಹೃದಯದ ವಿಷಯದಲ್ಲಿ ಪಿಎಚ್ಡಿ ಮಾಡಿ ಬಂದವರು, ಪೋಲಿಸ್ ಎಂದಾಕ್ಷಣ ಲಾಠಿ, ಬಂದೂಕು, ದರ್ಪ, ಐಷಾರಾಮಿ ಎನ್ನುವವರ ನಡುವೆ ಇವೆಲ್ಲದರ ವಿರುದ್ಧ ಇದ್ದು ಬದಲಾವಣೆ ತಂದವರು ನನ್ನ ಸಾಹೇಬ ಮಧುಕರ್ ಶೆಟ್ಟಿಯವರು.

ವಿಠಲೇನಹಳ್ಳಿ ಗೋಲಿಬಾರ್ ಸಂದರ್ಭದಲ್ಲಿ ಚಳವಳಿಕಾರರನ್ನು ಸಾವಧಾನದಿಂದ ಶೀಘ್ರವಾಗಿ ತಹಬಂದ ಕೀರ್ತಿಯೂ ಅವರಿಗೆ ಸಲ್ಲಬೇಕು.

೧೭/೧೦/೨೦೦೧ ರಿಂದ ೧೮/೦೪/೨೦೦೩ ರವರೆಗೆ ಚನ್ನಪಟ್ಟಣದ ಎ ಎಸ್ ಪಿಯಾಗಿದ್ದ ಅಷ್ಟು ದಿವಸವೂ ಸಹ ಪೋಲಿಸ್ ಅಧಿಕಾರಿ ಕೆಲಸ ಹೊರತುಪಡಿಸಿ ಸಮಾಜಸೇವಾ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದರು, ದಶವಾರ, ಅಂಬೇಡ್ಕರ್ ನಗರ, ಬಾಣಂತಹಳ್ಳಿ ಮುಂತಾದ ಹಳ್ಳಿಗಳಲ್ಲಿ ಸ್ವಂತ ಖರ್ಚಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು, ವೃತ್ತಿ ಬಾಂಧವರಿಗೆ ಶಿಸ್ತಿನ ಪಾಠವನ್ನು ಉತ್ತಮ ಕೆಲಸ ನಿರ್ವಹಿಸಿದವರಿಗೆ ತನ್ನ ಸಂಬಳದ ಹಣವನ್ನು ಉಡುಗೊರೆಯಾಗಿ ನೀಡಿ ಉತ್ತೇಜನಗೊಳಿಸುತ್ತಿದ್ದು ಇಂದಿಗೂ ಕಣ್ಣು ಕಟ್ಟಿದಂತಿದೆ, ಅವರಿನ್ನೂ ಸಮಾಜದ ಏಳ್ಗೆಗಾಗಿ ಬದುಕಿ ಬಾಳಬೇಕಿತ್ತು, ಆದರೆ ಅವರು ಆರೋಗ್ಯ ಕಡೆಗಣಿಸಿದ್ದರಿಂದಲೋ ಅಥವಾ ಬೇರೆನೋ ಕಾರಣದಿಂದ ನನ್ನ ಸಾಹೇಬರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಪೋನಿನಲ್ಲಿಯೇ ಗದ್ಗದಿತರಾದರು.


ಹಿರಿಯ ಅಧಿಕಾರಿಗಳು ಫಿದಾ


ಡಾ ಸುಭಾಷ್ ಭರಣಿ ಯವರನ್ನು ತಂದೆ ಎಂದೇ ಸಂಬೋಧಿಸುತಿದ್ದರು, ಅವರಿಂದ ನಾನು ಸಾಕಷ್ಟು ಕಲಿತೆ ಎಂದೇ ಹೇಳುತ್ತಿದ್ದರು, ಅವರು ಮದುವೆಯಾದ ನಂತರ ಸುಭಾಷ್ ಭರಣಿಯವರೇ ನಿಂತು ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಬಹುತೇಕ ಸ್ವಯಂ ಖರ್ಚಿನಲ್ಲಿ ಅಧಿಕಾರಿಗಳನ್ನು, ಆಪ್ತರನ್ನು ಕರೆದು ಆರತಕ್ಷತೆ ಏರ್ಪಡಿಸಿದ್ದರು, ಎಲ್ಲರ ಮನಗೆಲ್ಲುವ ವಿಶ್ವಾಸ ಗುಣ ಅವರಲ್ಲಿತ್ತು.


ಚಳವಳಿಗಳ ಅಭಿಮಾನಿ, ಸಿ ಪುಟ್ಟಸ್ವಾಮಿ


ಚಳವಳಿಗಳ ಬಹುದೊಡ್ಡ ಅಭಿಮಾನಿಯಾಗಿದ್ದವರು ಮಧುಕರ್  ಶೆಟ್ಟಿಯವರು, ಅಭಿಮಾನಿಯಾಗಲು ಕಾರಣ ಅವರ ತಂದೆ ವಡ್ಡರ್ಸೆ ರಘುರಾಮಶೆಟ್ಟಿಯವರು ಮಾಧ್ಯಮ ಕ್ಷೇತ್ರದಲ್ಲಿ ಬರೆದ ಅನೇಕ ವಿಚಾರಧಾರೆಗಳ ಲೇಖನ ಮತ್ತು ವರದಿಗಳನ್ನೋದಿ ಬೆಳೆದ ಕಾರಣ ಚಳವಳಿಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು, ಒಬ್ಬ ದಕ್ಷ ಪೋಲಿಸ್ ಅಧಿಕಾರಿಯಾಗಿ ಸಮಾಜಕ್ಕೆ ಏನೇನು ಒಳಿತು ಮಾಡಬೇಕೋ ಅದನ್ನೆಲ್ಲ ಮಾಡಿಹೋಗಿದ್ದಾರೆ, 


ಆದರೆ ಅದು ಸಾಯುವ ವಯಸ್ಸೂ ಅಲ್ಲ, ಸಾಯಲು ಆ ಖಾಯಿಲೆಯೂ ಕಾರಣವಲ್ಲ, ನನಗೆಲ್ಲೋ ಒಂದು ಕಡೆ ಸಾವಿನ ಬಗ್ಗೆ ಅನುಮಾನವಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಸಿಬಿಐ ತನಿಖೆಗೊಪ್ಪಿಸಿದರೆ ಸತ್ಯ ತಿಳಿಯಬಹುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ ಪುಟ್ಟಸ್ವಾಮಿ ಒತ್ತಾಯಿಸಿದರು.


ಅತ್ಯಂತ ಸರಳ ಜೀವನ, ಕಸಂಇ ನಿ, ಎಂ ರಾಜು


ನಮ್ಮ ದಾಯಾದಿಗಳ ಕೇಸಿನ ವಿಚಾರವಾಗಿ ಅವರ ಮನೆಗೆ ತೆರಳಿದ ನನಗೆ ಒಂದು ರೀತಿಯ ಶಾಕ್ ಆಗಿತ್ತು, ಕಾರಣ ಅವರಿದ್ದ ಮನೆಯಲ್ಲಿ ಮನೆಗೆಲಸದವರಾಗಲಿ, ಮೇಜುಕುರ್ಚಿ ಟಿವಿ ಗಳಾಗಲಿ, ಅಲಂಕಾರಿಕ ವಸ್ತುಗಳಾಗಲಿ ಏನೊಂದು ಕಾಣಿಸಲಿಲ್ಲ. ಹೋಗಲಿ ಕೂತು ಮಾತನಾಡಲು ಒಂದು ಕುರ್ಚಿಯು ಸಹ ಇರಲಿಲ್ಲ, ಅವರು ಮಲಗಲು ಬಳಸುತಿದ್ದ ಚಾಪೆಯ ಮೇಲೆ ಕುಳ್ಳಿರಿಸಿ ಮಾತನಾಡಿ ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸುವ ಕ್ರಮಗಳನ್ನು ತಿಳಿಸಿದರು, ಅವರ ಮನೆಯ ತುಂಬೆಲ್ಲಾ ಕಣ್ಣಾಡಿಸಿದಾಗ ನನಗೆ ಕಂಡಿದ್ದು ಒಂದು ಚಾಪೆ, ಒಂದು ದಿಂಬು, ಒಂದು ಸಾಮಾನ್ಯ ಹೊದಿಕೆ, ಕೆಲವು ಪುಸ್ತಕಗಳು ಮತ್ತು ಸೂಟ್ ಕೇಸ್ ಅಷ್ಟೇ, ಇಂತಹ ಸರಳ ಜೀವನವನ್ನು ನಡೆಸಿದ ಮತ್ತೊಬ್ಬ ಪ್ರಾಮಾಣಿಕ ಉನ್ನತ ಅಧಿಕಾರಿಯನ್ನು ನಾನು ಕಣ್ಣಾರೆ ನೋಡಿಯೇ ಇಲ್ಲವೆಂದು ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಂ ರಾಜುರವರು ನೆನಪಿಸಿಕೊಂಡರು.


ತಾರತಮ್ಯವಿಲ್ಲದ ಅಧಿಕಾರಿ, ಕಾಂತರಾಜ್ ಪಟೇಲ್


ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದ ಜಮೀನೊಂದರ ಕೇಸಿನ ವಿಚಾರದಲ್ಲಿ ಒಮ್ಮೆ ಭೇಟಿಯಾಗಿದ್ದೆ, ಅವರ ಮಾತು, ತಾರತಮ್ಯ ಮಾಡದ ವಿಚಾರಣಾ ವೈಖರಿ, ಅವನೊಬ್ಬ ಸಾಮಾನ್ಯ, ನಾನು ಎಸಿಪಿ ಎಂಬ ಅಹಂಭಾವ ಇಲ್ಲದ ವ್ಯಕ್ತಿತ್ವ ಅವರದು, ಆ ಕೇಸಿನ ನಂತರ ಹಲವಾರು ಬಾರಿ ಅವರನ್ನು ಭೇಟಿ ಮಾಡಿದೆ, ಎಂದಿಗೂ ಕೋಪ, ಅಸಡ್ಡೆ ಮಾಡಿದವರಲ್ಲ, ಅಂತಹ ಅಧಿಕಾರಿಗಳನ್ನು ಕಳೆದುಕೊಂಡ ನಾವೇ ಅಭಾಗ್ಯರು ಎಂದು ನೆನಪಿನ ಬುತ್ತಿಗೆ ಜಾರಿದವರು ರಾಮನಗರದ ಕಾಂತರಾಜ್ ಪಟೇಲ್ ರವರು.


ಬಾಲಕಿಯರ ಕಾಲೇಜಿಗೆ ಭೇಟಿ ಅರಿವು


ಬಾಲಕಿಯರ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದ ಮಧುಕರ್ ಶೆಟ್ಟಿಯವರು ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ ಮಾತನಾಡಿದರು, ಕಾಲೇಜಿನ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲಿ ಅಡ್ಡಾಡುವ ಪುಂಡುಪೋಕರಿಗಳಲ್ಲಿ ನಡುಕ ಹುಟ್ಟುಸಿದ್ದರು, ಕಾಲೇಜಿನ ಮುಂಭಾಗವಿದ್ದ ಟೆಲಿಫೋನ್ ಬೂತ್  ಮತ್ತು ತರಕಾರಿ ಅಂಗಡಿಗಳನ್ನು ತೆರವುಗೊಳಿಸಿ ಇಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರ

 ನೇರವಾಗಿ ಬಂದು ತಿಳಿಸಿ ಎಂದಿದ್ದರು ಎಂದು ನೆನಪಿಸಿಕೊಂಡವರು ಶಿವರಾಮೇಗೌಡ ನಾಗವಾರ.


ಅಂದಿಗೆ ನಾನೊಬ್ಬ ಪುಂಡ, ಅವರಿಂದ ನಾ ಪರಿವರ್ತಿತನಾದೆ


ಮಧುಕರ್ ಶೆಟ್ಟಿಯವರು ಬಂದ ಹೊಸತರಲ್ಲಿ ನಾನು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ, ಹಾಗೂ ಸ್ಥಳೀಯ ಪುಂಡನಾಗಿದ್ದೆ, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದೆ, ಒಂದು ಬಾರಿ ಸ್ಥಳೀಯ ಸಬ್ ಇನ್ಸ್ ಪೆಕ್ಟರ್ ರೊಬ್ಬರಿಗೆ ಹೊಡೆದಿದ್ದು ಅವರ ಗಮನಕ್ಕೆ ಬಂದು ನನ್ನನ್ನು ಅವರ ಕಛೇರಿಗೆ ಕರೆಸಿಕೊಂಡರು, ನನ್ನ ಕುಟುಂಬದ ಬಗ್ಗೆ ವಿಚಾರಿಸಿದ ನಂತರ ಅವರು ಹೇಳಿದ್ದಿಷ್ಟೇ ಈ ಕೇಸಿನಲ್ಲಿ ನೀವು ಬಚಾವಾಗಲು ಸಾಧ್ಯವೇ ಇಲ್ಲಾ, ಆದರೂ ನಿಮಗೊಂದು ಛಾನ್ಸ್ ಕೊಡುತ್ತೇನೆ, ಇನ್ನೂ ನಿನ್ನಿಷ್ಟ ಎಂದು ಹೇಳಿದಾಗಲೇ ನನ್ನ ತಪ್ಪಿನ ಅರಿವಾಗಿತ್ತು, ಅಂದಿನ ನನ್ನ ಎಲ್ಲಾ ಕೆಟ್ಟ ಅಭ್ಯಾಸಗಳು ಅಂದಿಗೆ ನಿರ್ನಾಮವಾಗಿ ನಾನೊಬ್ಬ ಉತ್ತಮ ಕೃಷಿಕ, ವ್ಯವಹಾರಸ್ಥನಾಗಿ ಒಳ್ಳೆಯ ಹೆಸರುಗಳಿಸಲು ಸಾಧ್ಯವಾಯಿತು ಎಂದು ಹೆಸರೇಳಲಿಚ್ಚಿಸದ ಮುಖಂಡರೊಬ್ಬರು ತಿಳಿಸಿದರು. ಮತ್ತೊಬ್ಬ ಕಾಂಗ್ರೆಸ್ ಮುಖಂಡರಾದ ಮಂಗಾಡಹಳ್ಳಿ ಅರುಣಕುಮಾರ್ ರವರು ಸಹ ನೀರಾ ಚಳವಳಿ ಮತ್ತು ಮಧುಕರ್ ಶೆಟ್ಟಿಯವರನ್ನು ಹತ್ತಿರದಿಂದ ನೋಡಿದಾಗ ಅವರ ರೈತಪರ ಕಾಳಜಿ ಮತ್ತು ವೃತ್ತಿಪರತೆ ಇಂದಿಗೂ ನನ್ನ ಕಣ್ಣಲ್ಲಿ ಕಟ್ಟಿದಂತಿದೆ, ಅವರ ಸಾವು ನ್ಯಾಯೋಚಿತವಲ್ಲ ಎಂದು ಮರುಗಿದರು.


ಬಸ್ಕಿ ಹೊಡೆಸಿದ್ದಕ್ಕಾಗಿ ನಾನು ಅಭಿಮಾನಿಯಾದೆ, ಮಾಕಳಿ ಪ್ರಕಾಶ್


ನಮ್ಮ ಬಳಿ ಮೆಟಾಡೋರ್ (ಟೆಂಪೋ) ಇತ್ತು, ಆ ಸಮಯದಲ್ಲಿ ಹಳ್ಳಿಗಳ ಕಡೆ ಪ್ರಯಾಣಿಸಲು ವಾಹನಗಳು ಕಡಿಮೆಯಿದ್ದ ಕಾರಣ ಟೆಂಪೋದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಕಾರಣ ಸ್ಥಳದಲ್ಲಿಯೇ ಸಾರ್ವಜನಿಕರ ಎದುರು ಬಸ್ಕಿ ಹೊಡೆಸಿದ್ದರು, ನನಗಷ್ಟೇ ಅಲ್ಲಾ ತಪ್ಪು ಮಾಡಿದ ಯಾರೇ ಆಗಲಿ ಅವರಿಗೆ ಸಣ್ಣಪುಟ್ಟ ತಪ್ಪನ್ನು ಮಾಡಿದರೆ ಮೊದಲು ಎಚ್ಚರಿಕೆ ನಂತರ ದಂಡ ವಿಧಿಸದೆ ಎಚ್ಚೆತ್ತುಕೊಳ್ಳುವಂತೆ ಅವರದೇ ರೀತಿಯಲ್ಲಿ ಕ್ರಮ ಜರುಗಿಸುತ್ತಿದ್ದರು ಎಂದು ಮಾಕಳಿ ಗ್ರಾಮದ ಕಲ್ಯಾಣಿ ಮೋಟಾರ್ ನ ಪ್ರಕಾಶ್ ತಿಳಿಸಿದರು.


ಎಲ್ಲರೂ ಅಭಿಮಾನಿಗಳೇ


ಕೇವಲ ಜನಸಾಮಾನ್ಯರಷ್ಟೇ ಅಲ್ಲಾ, ಬಹುತೇಕ ಹಿರಿ ಕಿರಿಯ ಹಾಗೂ ದಕ್ಷ, ಭ್ರಷ್ಟ ಅಧಿಕಾರಿಗಳು ಸಹ ಅವರ ಅಭಿಮಾನಿಗಳಾಗಿದ್ದರು ಅನ್ನುವುದಕ್ಕೆ ಶವದ ಮುಂದೆ ಅತ್ತುಕರೆದ ಅಧಿಕಾರಿಗಳ ಜೊತೆಗೆ ಸಾಮಾಜಿಕ ಜಾಲತಾಣಗಳೇ ಸಾಕ್ಷಿ,


ಸಹಸ್ರಾರು ಚಳವಳಿಗಳ ಸರದಾರ ಎನಿಸಿಕೊಂಡವರನ್ನು, ಅಂದು ಅಟ್ಟಾಡಿಸಿ ರೌಡಿಶೀಟ್ ತೆರೆಯಲು ಮುಂದಾಗಿದ್ದು, ಕಲ್ಲು ಗಣಿಗಾರಿಕೆ ವಿರುದ್ಧ ಇದ್ದಾರೆ ಎಂದು ಕಿಡಿಕಾರುತ್ತಿದ್ದ ಪ್ರಭಾವಿ ರಾಜಕಾರಣಿಗಳು ಸಹ ಅವರು ಸತ್ತ ನಂತರ ಹೊಗಳುಭಟ್ಟರಂತೆ ಹೊಗಳುತ್ತಿರುವುದು ನಾಚಿಕೆಗೇಡಿನ ಸಂಗತಿ, ನೈತಿಕತೆಯೇ ಇಲ್ಲದ ಅಪ್ರಮಾಣಿಕರೂ ಇಂದು ಅವರನ್ನು ಹೊಗಳತ್ತಿದ್ದಾರೆಂದರೆ ಎಲ್ಲೋ ಒಂದು ಸಣ್ಣ ಪ್ರಮಾಣದಲ್ಲಿ ಬದಲಾಗಿದ್ದಾರೇನೋ ಎಂದೆನಿಸುತ್ತಿದೆ.


ಅಪ್ರಮಾಣಿಕ ಎಂದೊಪ್ಪಿಕೊಂಡವರ ಕಾಗದವನ್ನೊಮ್ಮೆ ಓದಿ, ಯಥಾವತ್ತಾಗಿ ನಿಮ್ಮ ಮುಂದೆ.


Dear ಮದುಕರ್ ಶೆಟ್ಟಿ ಸರ್...

          ಯಾಕೋ ರಾತ್ರಿ ಎಂದಿನಂತೆ ನಿದ್ರೆ ಬರಲಿಲ್ಲ.ನಿಮ್ಮೊಂದಿಗೆ ಮಾತನಾಡಬೇಕು ಅನ್ನಿಸಿತು ಹಾಗಾಗಿ ಬೆಳಿಗ್ಗೆಯೆ ಎದ್ದು ಈ ಪುಟ್ಟ ಪತ್ರದ ಮುಖೇನ ನನ್ನ ಮನಸ್ಸು ಮಾತಾಡ್ತಿದೆ.I mis u lot ಅಂತ ಹೇಳೋದಿಕ್ಕೆ ನನಗೆ ನೈತಿಕ ಹಕ್ಕೇ ಇಲ್ಲ.ಯಾಕೆಂದರೆ ನಾನೊಬ್ಬ ಅಪ್ರಾಮಾಣಿಕ,ಭ್ರಷ್ಟ. ನಾವೆಲ್ಲ ನಿಮ್ಮ mis ಮಾಡ್ಕೊಂಡು ಬಹಳ ವರ್ಷ ಗಳೇ ಆಗಿದೆ.ಸಮಾಜದಲ್ಲಿನ ಕೊಳಕನ್ನ ತೊಳೆಯಲು ಪ್ರಯತ್ನಿಸುತ್ತಿದ್ದ ನಿಮ್ಮ ಆದಿನಗಳೊಂದಿಗೆ ನಾವು ಯಾವಾಗ ನಿಲ್ಲದೆ ಪಲಾಯನ ಮಾಡಿ ಕೊಳಕೆ ಚೆಂದ ಅಂತ ಮೈಗೆ ಅಂಟಿಸಿ ಕೊಂಡು ಓಡಿಹೋದೆವೋ . ಅವತ್ತೆ ನಿಮ್ಮನ್ನ ಕಳೆದುಕೋಂಡಿದ್ದೀನಿ. ನೀವು ಎಷ್ಟು ಪ್ರಾಮಾಣಿಕತೆ ಮೆರೆದರೋ ಅದಕ್ಕಿನ್ನ ಹೆಚ್ಚು ಪ್ರಾಮಾಣಿಕತೆ ಯ ಕನಸುಕಂಡವನು ನಾನು.ಆದರೆ ನಿಮ್ಮಷ್ಟು ಗಟ್ಟಿಗ ನಾನಲ್ಲ. ಹೆಚ್ಚುದಿನ ಉಳಿಯಲಿಲ್ಲ ಕಾಲಕಳೆದಂತೆ ಕೊಳಕನ್ನೇ ಇಷ್ಟ ಪಡುವಂತಾಗಿ ಈಗ ಭ್ರಷ್ಟನಾಗಿ ಬಹುದೂರ ಸಾಗಿಬಿಟ್ಟಿದ್ದೇನೆ ವಾಪಸ್ಸು ನನ್ನ ಕನಸಿಗೆ ಹೋಗಲಾರದಷ್ಟು. ಒಮ್ಮೋಮ್ಮೆ ಆಸೆಯಾಗುತ್ತೆ ನನ್ನ ಕನಸಿಗೆ ಹೋಗಿಬಿಡಬೇಕು ಅಂತ ಆದರೆ ಈ ವ್ಯವಸ್ಥೆ ನಿಮ್ಮನ್ನ ಒಂಟಿಯಾಗಿಸಿದ ನೆನಪು ಬಂದ ಕೂಡಲೆ ನನಗೆ ಒಂಟಿತನದ ಭಯ ಕಾಡಲು ಶುರುವಾಗುತ್ತೆ. ನಾನು ಹೇಳಲಿಲ್ಲವೆ ನಿಮ್ಮಷ್ಟು ಗಟ್ಟಿಗ ಅಲ್ಲ ಅಂತ . ನೀವೊಂದು ಪ್ರಾಮಾಣಿಕಥೆಯ ಬೇದಿಸಲಾಗದ ಹೆಬ್ಬಂಡೆ.  ಕೊನೆಯವರೆಗೂ ನೀವು ನಿಮ್ಮಂತೆಯೇ ಇದ್ದದ್ದು ನಾನು ಕಂಡ ಆಶ್ಚರ್ಯ ಗಳಲ್ಲಿ ಒಂದು. ಇದು ಹೇಗೆ ಸಾಧ್ಯ ? ನಿಮ್ಮ ಆಂತರಿಕ ತಪಸ್ಸಲ್ಲದೇ ಬೇರೇನೂ ಅಲ್ಲ. ನೀವು ಬಹುತೇಕರಿಗೆ ಕೆಲಸ ಹೇಳಿಕೊಟ್ಟಿರಿ ಆದರೆ ನಿಮ್ಮ ತಪಸ್ಸನ್ನ ಹೇಳಿಕೊಡಲೇ ಇಲ್ಲ. ಅಥವಾ ನಿಮ್ಮ ಗುರುಕುಲಕ್ಕೆ ನಾವ್ಯಾರೂ ಅರ್ಹರಿರಲಿಲ್ಲವೇ?. ನಿಮ್ಮೊಂದಿಗಿರುವುದು ರೋಮಾಂಚನವಲ್ಲ ನೀವೇ ಒಂದು ರೋಮಾಂಚನ. ಕನ್ನಡದಲ್ಲಿ ಪ್ರಾಮಾಣಿಕತೆ ಅನ್ನೋ ಪದಕ್ಕೆ =ಮದುಕರ್ ಶೆಟ್ಟಿಅನ್ನುವ ನಿಮ್ಮ ಹೆಸರು ಹೊರತು ಬೇರೆ ಸಮಾನಾರ್ಥಕ ಪದಗಳಿಲ್ಲ ಅನ್ನುವುದು ನನ್ನ ಭಾವನೆ.ನೀವು ಸಾವಿನ ಹಾಸಿಗೆಯಲ್ಲಿದ್ದಾಗಲೂ ಬದುಕಲೇ ಬೇಕು ಅನ್ನೋ ಆಸೆ ನಿಮಗಿರಲಿಲ್ಲ ಅಂತ ಅಂದುಕೊಳ್ತೀನಿ. ಏಕೆಂದರೆ ನಿಮಗೆ ನಮ್ಮಂತೆ ಪ್ರಪಂಚದ ಯಾವ ಆಸೆಗಳೂ ಇರಲಿಲ್ಲ. ತಪಸ್ವಿಗೆ ಎಲ್ಲಿಯ ಆಸೆ. ಏನೂ ಇಲ್ಲದೆ ನೀವು ಹೋಗ್ತಿದ್ದೀರಿ, ಎಲ್ಲವನ್ನೂ ಬಿಟ್ಟು ನಾವು ಬರ್ತೀವಿ. ಅಷ್ಟೇ ವ್ಯತ್ಯಾಸ. ಭಾವನೆಗಳ ಹೊಳೆಗೆ ನಾನೀಗ ಕಟ್ಟೆಕಟ್ಟಬೇಕಿದೆ.ನಾವಂತು ನಿಮ್ಮೊಂದಿಗೆ ಇರಲು ಆಗಲಿಲ್ಲ ನೀವಾದರೂ ನಮ್ಮೋಂದಿಗಿರ್ತೀರ ಅಂತ ಭಾವಿಸುತ್ತಾ..

      ಎ.ಜಿ.ಮಂಜೇಗೌಡ ,ಪಿ.ಐ.

" ಬರವಣಿಗೆಗಾಗಿ ಬರೆದದ್ದಲ್ಲ ಭಾವನೆಗಳಿಗಾಗಿ...."


ಚನ್ನಪಟ್ಟಣದಲ್ಲಿ ಮಾತ್ರ ಮಧುಕರ್ ಶೆಟ್ಟಿಯವರು ಹೆಸರುಗಳಿಸಲು ಸಾಧ್ಯವಾಗಿತ್ತು, ಕಾರಣ ಅವರು ಪೋಲಿಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಕೆಲಸ ಮಾಡಿದ್ದರು, ಮಿಕ್ಕ ಕಡೆ ಈ ರೀತಿಯ ಅವಕಾಶ ಅವರಿಗೆ ಸಿಗಲಿಲ್ಲ, ಸಾರ್ವಜನಿಕರ ನಡುವೆ ಕೆಲಸ ಮಾಡುವ ಅವಕಾಶ ಎಲ್ಲಾ ಕಡೆಯೂ ದೊರೆತಿದ್ದರೆ ರಾಜ್ಯ ರಾಷ್ಟ್ರ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಚಿರಸ್ಥಾಯಿಯಾಗಿ ಉಳಿಯುತ್ತಿದ್ದರು.


ಅವರ ಸಾವು ಅಸಹಜ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿರುವುದರಿಂದ ಸಿಬಿಐ ಗೆ ವಹಿಸಿ ಸತ್ಯ ಹೊರಬರಲು ಸರ್ಕಾರಗಳು ಅನುವು ಮಾಡಿಕೊಡಬೇಕಾಗಿದೆ.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑