Tel: 7676775624 | Mail: info@yellowandred.in

Language: EN KAN

    Follow us :


ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು

Posted date: 24 Apr, 2019

Powered by:     Yellow and Red

ಉಜ್ಜನಿ ಗ್ರಾಮದ ಹೆಬ್ಬಾರಮ್ಮ ದೇವಸ್ಥಾನದಲ್ಲಿ ದಲಿತರೇ ಪುರೋಹಿತರು

ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ದೇವಸ್ಥಾನದ ತೀರ್ಥಪ್ರಸಾದ ವನ್ನು ದೂರದಿಂದ ಹಾಕುತ್ತಾರೆ, ನಮಗೆ ನ್ಯಾಯ ಒದಗಿಸಿ, ದೇವಾಲಯ ಪ್ರವೇಶಿಸಲು, ದೇವರನ್ನು ಪೂಜಿಸಲು ಅನುವು ಮಾಡಿಕೊಡಿ ಎಂದು ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೆಲವು ಭಾಗದ ದಲಿತರು ಕೇಳುತ್ತಿದ್ದರೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ (ಚನ್ನಪಟ್ಟಣ ತಾಲ್ಲೂಕಿನ ಗಡಿ ಗೆ ಹೊಂದಿಕೊಂಡಿದೆ) ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ *ಹೆಬ್ಬಾರಮ್ಮ* ದೇವಾಲಯದಲ್ಲಿ ಎಂಟುನೂರು ವರ್ಷಗಳಿಂದಲೂ ದಲಿತರೇ ಪೌರೋಹಿತ್ಯ ವಹಿಸಿಕೊಂಡು ಪೂಜಿಸುತ್ತಿರುವುದು ಆಶ್ಚರ್ಯವಾದರು ಸತ್ಯ.


ಉಜ್ಜನಿ ಗ್ರಾಮದ ಗ್ರಾಮದೇವತೆ ಹೆಬ್ಬಾರಮ್ಮ ದೇವಿ ಯ ದೇವಾಲಯ ಸರಿ ಸುಮಾರು ಎಂಟು ನೂರು ವರ್ಷಗಳ ಇತಿಹಾಸ ಹೊಂದಿದೆ. ಸಣ್ಣ ಮಣ್ಣಿನ ದೇವಾಲಯ ಹೊಂದಿದ್ದ ಅಮ್ಮನವರ ದೇವಸ್ಥಾನ ನಂತರ ದುರಸ್ತಿಗೊಳಿಸಿ ಹೆಂಚು ಹೊದಿಸಲಾಗಿತ್ತು, ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ದೊಡ್ಡ ದೇವಾಲಯ ನಿರ್ಮಾಣಗೊಂಡಿದೆ. ಪ್ರತಿ ವರ್ಷವೂ ಯುಗಾದಿ ಹಬ್ಬವಾದ ಹದಿನೈದು ದಿನಕ್ಕೆ ಸರಿಯಾಗಿ ಜಾತ್ರೆ ಪ್ರಾರಂಭವಾಗಿ ಹತ್ತೊಂಭತ್ತು ದಿನಗಳವರೆಗೆ ವಿಶೇಷ ಪೂಜಾ ವಿಧಿವಿಧಾನಗಳು ನಡೆಯತ್ತವೆ.


ಬಹುತೇಕ ಎಲ್ಲಾ ಸಮುದಾಯದ ಜನರು ಗ್ರಾಮದಲ್ಲಿ ವಾಸವಿದ್ದು ದೇವಾಲಯದಲ್ಲಿ ಜಾತಿ ಪದ್ದತಿಯು ಎಂದೂ ಬಂದಿಲ್ಲ, ಸರ್ವ ಜನಾಂಗೀಯ ಬಂಧುಗಳು ದಿನನಿತ್ಯದ ಪೂಜೆಯ ಜೊತೆಗೆ ಹಬ್ಬ ಹರಿದಿನ ಹಾಗೂ ಜಾತ್ರೆಯಂತಹ ವಿಶೇಷ ದಿನಗಳಲ್ಲಿ ಸೌಹಾರ್ದತೆಯಿಂದ ಪೂಜೆಯಲ್ಲಿ ಪಾಲ್ಗೊಂಡು ದೇವಿ ಯ ಕೃಪೆಗೆ ಪಾತ್ರರಾಗುತ್ತಾರೆ.


ತಲತಲಾಂತರದಿಂದ ವಂಶ ಪಾರಂಪರ್ಯವಾಗಿ ಬಂದಿರುವ ಅರ್ಚಕ ವೃತ್ತಿಯಲ್ಲಿ ಈಗ ನಾಗಣ್ಣ, ರಾಮಕೃಷ್ಣ, ವಡೆನಿಂಗಯ್ಯ, ರಾಜು, ಮರಿಚೌಡಯ್ಯ ಮತ್ತು ಚೌಡೇಶ್ ಎಂಬ ಆರು ಮಂದಿ ಸಹೋದರರು ಒಗ್ಗೂಡಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ, ಜಾತ್ರಾ ಸಮಯದ ಒಟ್ಟು ಹತ್ತೊಂಬತ್ತು ದಿನಗಳಲ್ಲಿ ಈ ಆರು ಮಂದಿಯೂ ಸಂಪೂರ್ಣ ಮನೆತೊರೆದು, ದೇವಾಲಯದಲ್ಲಿಯೇ ವಾಸ್ತವ್ಯ ಹೂಡುತ್ತಾರೆ.


ಬ್ರಾಹ್ಮಣ ಪುರೋಹಿತರಿಂದ ದೀಕ್ಷೆ ಪಡೆದು ಜನಿವಾರ ಧರಿಸಿ ದೇವಾಲಯದಲ್ಲಿರುವ ತನಕವೂ ರಾತ್ರಿ ಸಮಯ ಮಾತ್ರ ಫಲಹಾರ ಸೇವಿಸಿ ಮಿಕ್ಕಂತೆ ಉಪವಾಸ ಇರುತ್ತಾರೆ, ಜೊತೆಗೆ ದೇವಾಲಯ ಬಿಟ್ಟು ತಮ್ಮ ಸ್ವಂತ ಮನೆಗಾಗಲಿ, ಪರ ಊರಿಗಾಗಲಿ ಹೋಗುವುದಿಲ್ಲ, ಈ ಹತ್ತೊಂಬತ್ತು ದಿನಗಳು ಸಂಪೂರ್ಣವಾಗಿ ಬ್ರಹ್ಮಚಾರಿ ಬ್ರಾಹ್ಮಣ ರಂತೆಯೇ ನಡೆದುಕೊಂಡು ಬರುತ್ತಾರೆ. ದೇವಾಲಯದಲ್ಲಿ ಪೂಜೆ ನೆರವೇರಿಸುವವರು ಶುಚಿತ್ವದಿಂದ (ಮಡಿ ಮೈಲಿಗೆ) ಇರಬೇಕೆಂಬ ಉದ್ದೇಶದಿಂದಲೇ ಈ ಕಟ್ಟುಪಾಡುಗಳನ್ನು ಮಾಡಿದ್ದಾರೆ.

ಕೊಂಡ ಹಾಯುವ ಸಂದರ್ಭದಲ್ಲಿಯೂ ಸಹ ಈ ಆರು ಜನ ಸಹೋದರರ ಜೊತೆಗೆ ಒಕ್ಕಲಿಗ ಜನಾಂಗದ ಮೂರು ಮಂದಿಯೂ ಸಹ ಕೊಂಡ ಹಾಯುವುದು ವಿಶೇಷ.


ಏನಾದರಾಗಲಿ ಜಾತಿ ತಾರತಮ್ಯ ಮಾಡುವ ಇಂದಿನ ಕಾಲಕ್ಕೆ ಹೋಲಿಸಿದರೆ ಶತಶತಮಾನಗಳ ಹಿಂದೆಯೇ ದೇವಾಲಯದಲ್ಲಿ ದಲಿತರಿಗೆ ಮನ್ನಣೆ ನೀಡಿರುವುದು ಹಾಗೂ ಇಂದಿಗೂ ನಡೆದುಕೊಂಡು ಬರುತ್ತಿರುವುದು ಜಾತ್ಯಾತೀತೆಯ ಸಂಕೇತವೇ ಸರಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑