ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯಾರ ಬಳಿ ಹೇಗೆ ಮಾತನಾಡಬೇಕು, ಅಣಕಿಸುವುದು, ಕಟು ನುಡಿಗಳನ್ನಾಡುವುದು, ಕದಿಯುವುದು ಎಂಬುದನ್ನು ತಮಾಷೆಗಾಗಿಯೂ ಹೇಳಿಕೊಡಬಾರದು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ ಬಿ ಟಿ ನೇತ್ರಾವತಿಗೌಡ ಅಭಿಪ್ರಾಯಪಟ್ಟರು. ಅವರು ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಮೊದಲು ನಾವು ಬುದ್ದಿವಂತರಾಗಿ ವರ್ತಿಸಬೇಕು, ನಾನು ತಪ್ಪು ಮಾಡಿ, ನೀನು ತಪ್ಪು ಮಾಡಬೇಡ ಎನ್ನುವುದು ಸರಿಯಲ್ಲಾ, ಅವಿಭಕ್ತ ಕುಟುಂಬ ಎನ್ನುವುದು ಮರೆಯಾಗುತ್ತಿದ್ದು, ಸಂಬಂಧಗಳು ಹಾಳಾಗುತ್ತಿವೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆಂದು ಮಕ್ಕಳಿಗೆ ತಿಳಿಸಬೇಕು, ಹಾಗೆ ತಿಳಿಸಬೇಕಾದರೆ ನಾವು ಮೊದಲು ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂದರು. ಹದ್ದು ಮತ್ತು ಕೋಳಿ ಮರಿಗಳು ಸೇರಿದಂತೆ ಹಲವಾರು ಜಾನಪದ ಮತ್ತು ವಾಸ್ತವಿಕ ಕಥೆಗಳ ಉದಾಹರಣೆ ಹೇಳುವ ಮೂಲಕ ಮಹಿಳೆಯರಿಗೆ ತಿಳುವಳಿಕೆ ಮೂಡಿಸಿದರು.
ನಗರ ಆರಕ್ಷಕ ವೃತ್ತ ನಿರೀಕ್ಷಕಿ ಶೋಭಾ ವಿ ಮಾತನಾಡಿ ಪ್ರತಿಯೊಬ್ಬರಿಗೂ ಜ್ಞಾನ ಎಂಬುವುದು ಬಹಳ ಮುಖ್ಯ. ಪ್ರತಿ ದಿನವೂ ಕುಟುಂಬದ ಒತ್ತಡದಲ್ಲಿ ಸಿಲುಕಿಸುವ ಗೃಹಿಣಿಯರಿಗೆ ಹೆಚ್ಚು ಒತ್ತಡವಾಗುತ್ತಿದೆ. ಇಂತಹ ಮಹಿಳೆರಿಗೆ ಧರ್ಮಸ್ಥಳ ಸಂಘದವರು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡು, ಮಹಿಳೆಯರಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಉತ್ತಮ ಗುಣಗಳಿರುತ್ತವೆ. ಆ ಗುಣಗಳನ್ನು ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಆರ್ಟ್ ಆಫ್ ಲಿವಿಂಗ್ ನ ಸಂಯೋಜಕಿಯಾದ ರಾಧಿಕಾ ರವಿಕುಮಾರ್ ಮಾತನಾಡಿ ಸಮಾಜದಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು, ಯಾರೂ ಮೇಲಲ್ಲಾ, ಕೀಳಲ್ಲಾ. ಆದರೂ ಸಹ ಹೆಣ್ಣಿಗೆ ನಿರ್ಬಂಧಗಳು ಹೆಚ್ಚಿವೆ. ಅದು ಗಂಡಸರಿಗೂ ಅನ್ವಯವಾಗಬೇಕು. ಅದಾಗದಿರುವುದರಿಂದಲೇ ಕೆಲ ಸ್ಥಾನಗಳಲ್ಲಿ ಮೇಲಕ್ಕೇರುವ ಸ್ತ್ರೀಯರಿಗೆ ಕೀಳುಮಟ್ಟದಲ್ಲಿ ಮಾತನಾಡುವಾಗ ಪ್ರತಿಯೊಬ್ಬ ಮಹಿಳೆಗೂ ಸಹಜವಾಗಿ ಸಿಟ್ಟು ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಬೇರೆಯವರಿಂದ ಹಣ ಆಸ್ತಿ ಪಡೆಯಬಾರದು, ಒಳ್ಳೆಯ ಸಂಸ್ಕೃತಿಯನ್ನು ಪಡೆಯಬೇಕು. ಅದನ್ನೇ ನಾವು ಸಹ ಹಂಚಬೇಕು ಎಂದು ಸಭೆಯಲ್ಲಿ ನೆರೆದಿದ್ದ ಸಂಘದ ಮಹಿಳೆಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ, ಡಾ ಅನಿತಾ, ಸಂಘದ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಂದ್ರು ಲ್ಯಾಬ್ ನ ಚಂದ್ರೇಗೌಡ, ಸಂಘದ ತಾಲ್ಲೂಕು ನಿರ್ದೇಶಕಿ ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ಧೆ, ಕರಕುಶಲ ಉತ್ಪನ್ನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಚನ್ನಪಟ್ಟಣ:ತಾಲ್ಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ದಿಂದ ಇಂದು ಸಂಜೆ ಐದು ಗಂಟೆಗೆ ಬೈಕ್ ರ್ಯಾಲಿ ಹೊರಟು ನಂತರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸಮೃದ್ಧ-ಸದೃಢ ಭಾರತಕ್ಕಾಗಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮಕ್ಕೆ ಪುರ ಪೋಲಿಸರು ಅನುಮತಿ ನಿರಾಕರಣೆ ಮಾಡಿದ್ದಾರೆ.
ಇಂದು ನಗರದಲ್ಲಿ ಹದಿಮೂರು ಕಡೆ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಹಾಗೂ ಇಂದು ಈದ್-ಮಿಲಾದ್ ಹಬ್ಬ ಹಾಗೂ ಮೂರು ಕಡೆ ಮೆರವಣಿಗೆ ಇರುವುದರಿಂದ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲು ಆಗುವುದಿಲ್ಲಾ ಹಾಗೂ ಚನ್ನಪಟ್ಟಣ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಎರಡೂ ಕಾರ್ಯಕ್ರಮವೂ ಒಟ್ಟಿಗೆ ನಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಪೋಲಿಸರ ಅಭಿಪ್ರಾಯವಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಒಟ್ಟಾರೆ ಬ್ರೇಕ್ ಬಿದ್ದಂತಾಗಿದೆ.
ಕಳೆದ ೨೩ನೇ ತಾರೀಖಿನಂದು ನಮಗೆ ಅನುಮತಿ ನೀಡಿದ್ದು ನಂತರ ಆಗಲ್ಲಾ ಎಂದು ನಿರಾಕರಿಸಿದ್ದಾರೆ, ಕಾನೂನು-ಸುವ್ಯವಸ್ಥೆ ಮುಂದಿಟ್ಟುಕೊಂಡು ನಿರಾಕರಿಸಿದ್ದಾರೆ, ಆದರೆ ವೇದಿಕೆ ಕಾರ್ಯಕ್ರಮಕ್ಕೂ ಸಹ ಅನುಮತಿ ನೀಡಿಲ್ಲದಿರುವುದಿಂದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದವರೂ ಸಹ ನಿರಾಕರಿಸುತ್ತಿದ್ದಾರೆ, ಆದರೆ ಚಕ್ರವರ್ತಿ ಸೂಲಿಬೆಲೆ ಯವರು ಮಾತ್ರ ಪೂರ್ವ ಯೋಜನೆಯಂತೆ ನಗರಕ್ಕೆ ಆಗಮಿಸುತ್ತಾರೆ, ಕಾರ್ಯಕ್ರಮ ಆಗುವುದಾ ಇಲ್ಲವಾ ಎಂಬುದು ಗೊತ್ತಿಲ್ಲಾ ಎಂದು ಹಿಂದು ಜಾಗರಣ ವೇದಿಕೆಯ ಧನಂಜಯ ಮಾಹಿತಿ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ಕಾರಣದಿಂದ ಬೈಕ್ ರ್ಯಾಲಿ ನಿಷೇಧ ಮಾಡಲಿ ಆದರೆ ವೇದಿಕೆ ಕಾರ್ಯಕ್ರಮ ಕ್ಕೆ ಅನುಮತಿ ನೀಡಬೇಕಾಗಿತ್ತು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಹ ವೇದಿಕೆ ಕಾರ್ಯಕ್ರಮಕ್ಕೆ ಈಗಲೂ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ವಕೀಲ ಸುರೇಶ್ ತಿಳಿಸಿದ್ದಾರೆ.
ಮತ್ತೊಂದು ದಿನ ಕಾರ್ಯಕ್ರಮ ಮಾಡಿಕೊಳ್ಳುವಂತೆ ನಮೋ ಬ್ರಿಗೇಡ್ ನವರಿಗೆ ತಿಳುವಳಿಕೆ ನೀಡಲಾಗಿದೆ, ಮೇಲಾಧಿಕಾರಿಗಳ ಗಮನ ಕ್ಕೂ ಈ ವಿಷಯ ತಿಳಿಸಿದ್ದು ಅವರೂ ಸಹ ಅನುಮತಿ ನಿರಾಕರಿಸಿದ್ದಾರೆ ಎಂದು ಡಿವೈಎಸ್ಪಿ ಓಂಪ್ರಕಾಶ್, ನಗರ ವೃತ್ತ ನಿರೀಕ್ಷಕಿ ಶೋಭಾ ವಿ ಮತ್ತು ಉಪ ನಿರೀಕ್ಷಕ ಹರೀಶ್ ರವರು ಮಾಹಿತಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚರಿಸಲು ಒಕ್ಕೊರಲಿನಿಂದ ತೀರ್ಮಾನಿಸಿರುವುದರಿಂದ ನಾವೂ ಸಹ ಅಂದೇ ಚನ್ನಪಟ್ಟಣ ಬಂದ್ ಮಾಡುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡೋಣಾ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಮಾಜಿ ಶಾಸಕ ಅಶ್ವಥ್ ಮಾತನಾಡಿ ಕಾವೇರಿ ನಮ್ಮ ಹಕ್ಕು, ಯಾವ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ, ಕಾವೇರಿ ಮಂಡ್ಯಕ್ಕಷ್ಟೇ ಸೀಮಿತವಲ್ಲಾ, ಬೆಂಗಳೂರಿನ ನಿವಾಸಿಗಳು ಹೆಚ್ಚು ಆಸ್ಥೆ ವಹಿಸಿ ಬೀದಿಗಿಳಿಯಬೇಕು. ಚನ್ನಪಟ್ಟಣ ಸಹ ಚಳವಳಿಗೆ ಉತ್ತಮ ನಗರವಾಗಿದೆ, ಈ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ, ಧರ್ಮಾತೀತವಾಗಿ, ಒಗ್ಗೂಡಿ ಪ್ರತಿಭಟನೆ ಮಾಡಬೇಕು. ಪ್ರತಿ ಹಂತದಲ್ಲೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು, ಎಲ್ಲಾ ರೀತಿಯ ವ್ಯಾಪಾರಸ್ಥರು ಮುಕ್ತ ಮನಸ್ಸಿನಿಂದ ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ನೀಡಬೇಕೆಂದರು.
ಚನ್ನಪಟ್ಟಣ ನಗರ ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಗ್ರಾಮದ ಮುಖಂಡರ ಜೊತೆಗೂಡಿ ಪ್ರತಿಭಟನೆ ನಡೆಸಬೇಕು. ಚನ್ನಪಟ್ಟಣದಲ್ಲಿ ನಾಳೆಯೇ ಪ್ರತಿಭಟನೆ ಮಾಡಿದರೆ ಉತ್ತಮವಾಗಿತ್ತು. ಆದರೆ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿರುವುದರಿಂದ ಅದೇ ದಿನ ನಾವೂ ಸಹ ಬಂದ್ ಮಾಡೋಣಾ, ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಹಿರಿಯ ಪತ್ರಕರ್ತ ಸು ತ ರಾಮೇಗೌಡರು ಮಾತನಾಡಿ ಸಂಕಷ್ಟ ಸೂತ್ರ ಸಮೇತ ಹಲವಾರು ನಿರ್ಣಯಗಳನ್ನು ತೀರ್ಮಾನಿಸಿ, ಅದರಂತೆ ಒಗ್ಗೂಡಿ, ಎಲ್ಲರ ಬೆಂಬಲ ಪಡೆದು ಎರಡು ದಿನಗಳ ಕಾಲ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಮೂಲಕ ಪ್ರತಿಭಟನೆ ಮತ್ತು ಬಂದ್ ನ್ನು ಯಶಸ್ವಿಯಾಗಿ ಮಾಡೋಣಾ ಎಂದು ಕರೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಧರಣೀಶ್ ರಾಂಪುರ ಮಾತನಾಡಿ, ನಾವು ಈಗಾಗಲೇ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಶುಕ್ರವಾರವೂ ಸಹ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುತ್ತೇವೆ ಎಂದರು, ಸಭೆ ಸೇರಿದ್ದ ಹಲವಾರು ಸಂಘಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.
ಈ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲವೇಗೌಡ, ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಅಧ್ಯಕ್ಷ ಜಯರಾಮು, ರಾಜ್ ಕಲಾ ಬಳಗದ ಪದಾಧಿಕಾರಿಗಳು, ಕೆಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಜೈನ್ ಸಂಘದ ಪದಾಧಿಕಾರಿಗಳು, ಕರವೇ ಸತ್ಯನಾರಾಯಣ ಮತ್ತು ಪದಾಧಿಕಾರಿಗಳು, ಮುಸ್ಲಿಂ ಮುಖಂಡರುಗಳು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.