Recent news »
-
ಲಯನ್ಸ್ ಕಣ್ಣಾಸ್ಪತ್ರೆಗೆ ಎರಡು ಲಕ್ಷ ನೀಡಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ
ರಾಮನಗರ : ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಮತ್ತು ಸಮಾಜದ ಏಳಿಗೆಯನ್ನು ಸಾಧಿಸಿಕೊಳ್ಳುವುದು ಮನುಷ್ಯತ್ವದ ಲಕ್ಷಣ ಎಂದು ತಿಳಿಸಿದರು.
ರಾಮನಗರದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿ ಶಾಸಕರ ಅನುದಾನದಿಂದ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ ರಾಮನಗರದಲ್ಲಿ ಲಯನ್ಸ್ ಸಂಸ್ಥೆ ಸ್ಥಾಪನೆಗೊಂಡು 39 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಕೆಲಸಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಈವರೆಗೆ 65 ಸಾವಿರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ಸತ್ತಾರ್ (ಸಾಹುಕಾರ್ ಅಮ್ಜದ್) ಮಾತನಾಡಿ ರಾಮನಗರದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಲಯನ್ಸ್ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಹಿರಿಯ ಜಿಲ್ಲಾ ಚೇರ್ಮನ್ ಸುರೇಶ್ ರಾಮು ಮಾತನಾಡಿ ಲಯನ್ಸ್ ಸಂಸ್ಥೆ ಅಂತರಾಷ್ಟ್ರೀಯ ಮಾನ್ಯತೆಯ ಸೇವಾ ಸಂಘಟನೆಯಾಗಿದೆ. ಅನೇಕ ಜನಪರ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಹೆಚ್ಚು ಜನರು ಇಂತಹ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಮುಂದೆ ಬರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆ ನಿರ್ಮಾಣಕ್ಕೆ ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರು ಎರಡು ಲಕ್ಷ ದೇಣಿಗೆ ನೀಡಿದರು. ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷೆ ಸತ್ಯವತಿಬಸವರಾಜು, ಮಾಜಿ ಕಾರ್ಪೊರೇಟರ್ ಆರೀಫ್ ಪಾಷಾ, ಲಯನ್ಸ್ ಸಂಸ್ಥೆಯ ಖಜಾಂಚಿ ಷಫಿ ಅಹಮದ್, ಮಹಮದ್ ಫೈರೋಜ್, ಲಯನೆಸ್ ಸಿಲ್ಕ್ ಸಿಟಿ ಸಂಸ್ಥೆ ಅಧ್ಯಕ್ಷೆ ಸುಧಾರಾಣಿ, ಖಜಾಂಚಿ ಸಂಧ್ಯಾ ಅಯ್ಯರ್, ವಿಜಯಮ್ಮ, ಶೋಭಾಗೌಡ ಇತರರು ಇದ್ದರು.
-
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.
ಕಳೆದ ವರ್ಷ 9 ಕರಗಗಳು ನಡೆದಿದ್ದವು. ಈ ಬಾರಿ ಚಾಮುಂಡೇಶ್ವರಿ, ಆದಿಶಕ್ತಿ ಐಜೂರು, ಆದಿಶಕ್ತಿ ಶೆಟ್ಟಿಹಳ್ಳಿಬೀದಿ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ, ತೋಪ್ ಖಾನ್ ಮೊಹಲ್ಲಾದ ಮುತ್ತುಮಾರಮ್ಮ ಕರಗಗಳು ನಡೆಯಲಿವೆ. ಆದಿಶಕ್ತಿ ಕೊಂಕಾಣಿದೊಡ್ಡಿ, ಟ್ರೂಪ್ ಲೇನ್ ಚೌಡೇಶ್ವರಿ ಕರಗ ಬಾರಿ ನಡೆಯುತ್ತಿಲ್ಲ. ಎಲ್ಲಾ ದೇವಾಲಯಗಳಲ್ಲೂ ಭರದ ಸಿದ್ದತೆ ನಡೆದಿದ್ದು, ತಳಿರು ತೋರಣಗಳಿಂದ ಕಂಗೊಳಿಸಲಾರಂಭಿಸಿವೆ.
ಚಾಮುಂಡೇಶ್ವರಿ ಕರಗ : ಇಲ್ಲಿನ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲು ಕೋಟೆಯ ಪ್ರತಾಪ್ ಸಿಂಗ್ ಎಂಬುವರ ಸ್ಥಾಪಿಸಿದರು ಎನ್ನುವ ಇತಿಹಾಸವಿದೆ. ಪ್ರತಾಪ್ ಸಿಂಗ್ ಅವರು ಮೈಸೂರು ಮಹಾರಾಜರ ಕಾಲದಲ್ಲಿ ಪೆÇಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರಿಗೆ ಮಕ್ಕಳಿರಲಿಲ್ಲ. ಒಮ್ಮೆ ಇವರ ಕನಸಿನಲ್ಲಿ ಚಾಮುಂಡೇಶ್ವರಿಯು ಬಂದು ನಗರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ನನ್ನನ್ನು ಕಳ್ಳಕಾಕರು ಬಂದಿಸಿ ಪೂಜಿಸುತ್ತಿದ್ದಾರೆ. ಇದನ್ನು ತಂದು ದೇವರ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನ್ನ ಇಷ್ಟಾರ್ಥ ಪೂರೈಸುತ್ತದೆ ಎಂದು ಹೇಳಿದರಂತೆ.
ಇದರಂತೆ ಪ್ರತಾಪ್ ಸಿಂಗ್ ಬುಡಬುಡಕೆ ದಾಸಯ್ಯನ ವೇಷದಲ್ಲಿ ಕಾಡಿಗೆ ಹೋಗಿ ಗುಹೆಯಲ್ಲಿದ್ದ ಕಳ್ಳರನ್ನು ಹಿಡಿದು ಅಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹವನ್ನು ತಂದು ನಗರದಲ್ಲಿ ಗುಡಿ ಕಟ್ಟಿಸಿ ಪ್ರತಿಷ್ಠಾಪನೆ ಮಾಡಿದರು. ನಂತರ ಇವರಿಗೆ ಗುಂಡು ಮಕ್ಕಳು ಜನಿಸಿದವು. ಕಳ್ಳರನ್ನು ಹಿಡಿದ ಕಾರಣಕ್ಕೆ ಪ್ರತಾಪ್ ಸಿಂಗ್ ಅವರಿಗೆ ಮೈಸೂರು ಮಹಾರಾಜರು ಬಹುಮಾನವನ್ನು ನೀಡಿ ಗೌರವಿಸಿದರು. ಅಂದಿನಿಂದ ಇವರ ಕುಟುಂಬ ಚಾಮುಂಡೇಶ್ವರಿ ಅಮ್ಮನವರನ್ನು ಪೂಜಿಸುತ್ತಾ ಬಂದಿದ್ದಾರೆ.
ಪ್ರತಾಪ್ ಸಿಂಗ್ ಅವರ ನಂತರ ಇವರ ಮಗ ಗಿರಿಧರ್ ಸಿಂಗ್, ಇವರ ನಂತರ ಪದ್ಮನಾಭ ಸಿಂಗ್, ಇವರ ನಂತರ ಪಿ. ದೇವಿ ಪ್ರಸಾದ್ ಸಿಂಗ್ (ಬಾಬು) 20 ನೇ ಬಾರಿಗೆ ಕರಗಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಪುರಾತನವಾದುದಾಗಿದೆ. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ನಮ್ಮ ಕುಟುಂಬ ಐದನೆ ತಲೆಮಾರಿನಿಂದ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದೆ ಎಂದು ಕರಗಧಾರಕ ಪಿ. ದೇವಿಪ್ರಸಾದ್ ಸಿಂಗ್ ಮಾಹಿತಿ ನೀಡಿದರು.
ಐಜೂರು ಆದಿಶಕ್ತಿ ಕರಗ : ಇಲ್ಲಿನ ಐಜೂರಿನ ಮಾಗಡಿ ರಸ್ತೆಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಆದಿಶಕ್ತಿ ದೇವಾಲಯವು ಪುರಾತನ ದೇವಾಲಯವಾಗಿದ್ದು, ಸುಮಾರು 76 ವರ್ಷಗಳಿಂದ ಇಲ್ಲಿ ಕರಗ ನಡೆಯುತ್ತಿದೆ. ವಿ. ವಿಜಯ್ ಅವರು 12 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.
ಬಿಸಿಲು ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಬಿಸಿಲು ಮಾರಮ್ಮ ಅಮ್ಮನವರ ಕರಗ ಸರಳವಾಗಿ ದೇವಾಸ್ಥಾನದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದ್ದು, ಪಿ. ಮಹೇಂದ್ರ ಅವರು 14 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.
ಮಗ್ಗದ ಕೇರಿ ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಮಗ್ಗದ ಕೇರಿ ಮಾರಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಪಿ. ಚೇತನ್ಕುಮಾರ್ ಅವರು 22ನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಭಂಡಾರಮ್ಮ ದೇವಿ ಕರಗ : ನಗರದ ಬಾಲಗೇರಿಯಲ್ಲಿ ಭಂಡಾರಮ್ಮ ದೇವಿಯವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಎನ್. ಸಾಗರ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಮುತ್ತುಮಾರಮ್ಮ ಕರಗ : ನಗರದ ತೋಪ್ ಖಾನ್ ಮೊಹಲ್ಲಾದಲ್ಲಿರುವ ಮುತ್ತುಮಾರಮ್ಮ ಅಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದೆ. ಎನ್. ಪ್ರಶಾಂತ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಶೆಟ್ಟಿಹಳ್ಳಿ ಆದಿಶಕ್ತಿ ಕರಗ : ನಗರದ ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿ ಕರಗ ಹಾಗೂ ಪ್ಲೇಗ್ ಮಾರಮ್ಮನವರ ಗಿಂಡಿ ಉತ್ಸವ ಸರಳವಾಗಿ ನಡೆಯಲಿದೆ. ಕೆ. ಅನಿಲ್ಕುಮಾರ್ ಅವರು 11ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ. ಆರ್. ಮಹೇಶ್ ಅವರು 18ನೇ ಬಾರಿಗೆ ಗಿಂಡಿ ಉತ್ಸವವನ್ನು ನಡೆಸಿಕೊಡಲಿದ್ದಾರೆ.
ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ : ನಗರದ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ರಾಮನಗರದಲ್ಲಿ ಮೊದಲು ಇಲ್ಲಿ ಆದಿಶಕ್ತಿ ಪ್ರತಿಷ್ಠಾಪನೆಯಾಗಿದ್ದು, ನಂತರ ನಗರದ ಇತರೆ ಭಾಗಗಳಲ್ಲಿ ಆದಿಶಕ್ತಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಎಚ್. ಮುನೀಂದ್ರ ಅವರು ಕರಗಧಾರಣೆ ಮಾಡುತ್ತಿದ್ದರು.
ಚೌಡೇಶ್ವರಿ ಅಮ್ಮನವರ ಕರಗ : ಇಲ್ಲಿನ ಅರ್ಕೇಶ್ವರ ಕಾಲೋನಿಯಲ್ಲಿರುವ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ವಿ. ಸುರೇಶ್ ಅವರು ಕರಗಧಾರಣೆ ಮಾಡುತ್ತಿದ್ದರು.
ಏಳುಮಂದಮ್ಮ ದೇವಸ್ಥಾನ : ಚಾಮುಂಡೇಶ್ವರಿ ದೇವಸ್ಥಾನವನ್ನು ಮೊದಲು ಏಳುಮಂದಮ್ಮನ ದೇವಸ್ಥಾನವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ಆದರೆ ಈಚಿನ ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ ಎಂದು ಗೃಹಿಣಿ ಜಿ. ಉಮಾಮಹೇಶ್ವರಿ ತಿಳಿಸಿದರು.
ಬಾಲಗೇರಿಯಲ್ಲಿ ಕೊಲ್ಲಾಪುರದಮ್ಮ ಕರಗವು ನಡೆಯುತ್ತಿತ್ತು. ಕೆಲವು ವರ್ಷಗಳಿಂದ ನಡೆಯುತ್ತಿಲ್ಲ. ಕಳೆದ ವಾರ ಬನ್ನಿಮಹಾಂಕಾಳಿ ಕರಗ, ಇದೇ 7 ರಂದು 7 ಕರಗಗಳು ನಡೆಯಲಿವೆ.
ಚಿತ್ರ-ಲೇಖನ :
ಎಸ್. ರುದ್ರೇಶ್ವರ
ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ
-
ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ
ರಾಮನಗರ : ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲಾ ಸಮಯದಲ್ಲಿ ಪತ್ರಿಕೆಗಳು ಬರುವುದರಲ್ಲಿ ಜನ ನೆನಪಿನಲ್ಲಿಡುವುದಿಲ್ಲ.
ಆದರೆ ಇದಕ್ಕೆಲ್ಲಾ ವಿರುದ್ಧವಾಗಿ ಎಂಬಂತೆ ಇಲ್ಲೊಬ್ಬರಿದ್ದರು. ಅವರ ಕಣ್ಣಿಗೆ ಯಾವುದೇ ಪತ್ರಿಕೆ, ನಿಯತಕಾಲಿಕೆ ಕಾಣಲಿ ಅದನ್ನು ಸಂಗ್ರಹಿಸಿ ಇಡುತ್ತಿದ್ದರು. ಅವುಗಳಿಗೊಂದು ದಾಖಲೆಯನ್ನು ಇಟ್ಟಿದ್ದರು. ಇವರ ಸಂಗ್ರಹದಲ್ಲಿ 3714ಕ್ಕೂ ಹೆಚ್ಚು ಕನ್ನಡದ ವಿವಿಧ ಪತ್ರಿಕೆ ಹಾಗೂ ನಿಯತಕಾಲಿಕಗಳ ಸಂಗ್ರಹವಿತ್ತು.
ಇವರು ರಾಮನಗರದ ದೇವರಸನೆಗೌಡನದೊಡ್ಡಿಯಲ್ಲಿರುವ ಕಾಮಗೆರೆ ಲ. ಕೃಷ್ಣೇಗೌಡ. ಇವರ ಹವ್ಯಾಸವೇ ಪತ್ರಿಕೆಗಳ ಸಂಗ್ರಹ. ಸಂಗ್ರಹಿಸಿದ ಪತ್ರಿಕೆಗಳ ವರ್ಗೀಕರಣ ಮಾಡಿ ಅದು ಯಾವ ಮಾಹಿತಿಯನ್ನು ನೀಡುತ್ತದೆ ಎಂದು ವಿವರವಾಗಿ ಬರೆದಿಟ್ಟಿದ್ದರು.
35 ವರ್ಷಗಳಿಂದ ಕೃಷ್ಣೇಗೌಡ ಅವರು ಪತ್ರಿಕೆ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದರು. ಇವರ ತಂದೆ \'ಪ್ರಜಾವಾಣಿ\' ಪತ್ರಿಕೆಯನ್ನು ಪಕ್ಕದ ಮನೆ ಹಾಗೂ ಅಂಗಡಿಯಿಂದ ತಂದು ಓದುತ್ತಿದ್ದರಂತೆ. ಆಗ ಕೃಷ್ಣೇಗೌಡರಿಗೂ ಓದಲು ನೀಡುತ್ತಿದ್ದರು. ಆಗಿನಿಂದಲೇ ಪತ್ರಿಕೆ ಸಂಗ್ರಹಿಸುವ ಹವ್ಯಾಸವನ್ನು ಕೃಷ್ಣೇಗೌಡರು ಬೆಳೆಸಿಕೊಂಡರು.
ಕಾಮಗೆರೆ ಲ. ಕೃಷ್ಣೇಗೌಡರು ಸಂಗ್ರಹಿಸಿದ ಪತ್ರಿಕೆಗಳನ್ನು ವರ್ಗೀಕರಣ ಮಾಡಿ ಬರೆದಿಟ್ಟಿರುವುದು.
ಕೃಷ್ಣೇಗೌಡರು ಯಾವುದೇ ಊರಿಗೆ ಪ್ರಯಾಣ ಮಾಡಲಿ ಅಲ್ಲಿನ ಪ್ರಮುಖ ಸ್ಥಳ, ಸೇತುವೆ, ಗ್ರಾಮ, ದೇವಸ್ಥಾನ ಮುಂತಾದವುಗಳ ಮಾಹಿತಿಯನ್ನು ಸಹ ಬರೆದಿಟ್ಟಿದ್ದರು. ಅಲ್ಲಿನ ಸ್ಥಳೀಯ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಕೊಂಡು ತಂದು ತಮ್ಮ ಸಂಗ್ರಹದಲ್ಲಿ ಸೇರಿಸಿದ್ದರು.
ಕೃಷ್ಣೇಗೌಡರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಕಾಮಗೆರೆಯಲ್ಲಿ. ಓದಿದ್ದು 7ನೇ ತರಗತಿ. ಅಲ್ಲಿನ ಗುಂಡಲಾ ಜಲಾಶಯದಲ್ಲಿ ಸಣ್ಣ ನೌಕರಿಯಲ್ಲಿದ್ದ ಗೌಡರಿಗೆ ಆತ್ಮೀಯರೊಬ್ಬರು ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಲ್ಲಿ ನೌಕರಿ ಕೊಡಿಸಿದರು. ಆ ನಂತರ ಪ್ರಾರಂಭವಾದ ಇವರ ಪತ್ರಿಕೆ ಸಂಗ್ರಹ ಕಾರ್ಯ ಮುಂದುವರಿದೇ ಇತ್ತು. ಆದರೆ ಇವರ ಆರೋಗ್ಯ ಕಟ್ಟಿದ್ದರಿಂದ ಸಂಗ್ರಹ ಕಾರ್ಯ ನಿಂತು ಹೋಗಿತ್ತು.
ಇವರು ಪತ್ರಿಕೆಗಳನ್ನು ಸಂಗ್ರಹಿಸುವುದರ ಜತೆಗೆ ರಂಗಭೂಮಿ ಕಲಾವಿದರು ಆಗಿದ್ದರು. \'ಕನಸು\' ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದರು. ಕವಿಗೋಷ್ಠಿ ಸೇರಿದಂತೆ ಸಾಹಿತ್ಯಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹಲವು ಜಲಾಶಯಗಳ ಮಾಹಿತಿಯನ್ನು ಇವರು ಸಂಗ್ರಹಿಸಿದ್ದರು. 59 ಪ್ರಮುಖ ಜಲಾಶಯಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳಲ್ಲಿ ಬೇಸಿಗೆಯಲ್ಲಿ ನೀರಿನ ಮಟ್ಟ ಉದ್ದ, ಅಗಲ, ಮಳೆಗಾಲದಲ್ಲಿ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಎಲ್ಲಾ ಸೇರಿದೆ.
ಇದಿಷ್ಟೇ ಅಲ್ಲ : ಪತ್ರಿಕೆಗಳನ್ನು ಸಂಗ್ರಹಿಸಿ ಪ್ರಮುಖ ಸುದ್ದಿಗಳಾಗಿದ್ದರೆ ಅಥವಾ ಲೇಖನಗಳಾಗಿದ್ದರೆ ಅದನ್ನು ಬರೆದವರ ಹೆಸರು ಮುಂತಾದವನ್ನು ಬರೆದಿಟ್ಟಿದ್ದರು. 1979ರಿಂದ \'ಪ್ರಜಾವಾಣಿ\'ಯಲ್ಲಿ ಪ್ರಕಟವಾದ ಪ್ರಮುಖ ಸುದ್ದಿ ಬರೆದವರ ಹೆಸರು ಮಾಹಿತಿ ಸಹ ಇವರಲ್ಲಿ ಲಭ್ಯವಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವರು ಸಂಗ್ರಹಿಸಿರುವ ಪತ್ರಿಕೆಗಳ ಪ್ರದರ್ಶನವನ್ನು ಏರ್ಪಡಿಸಿದ್ದರು.
\'ನಮ್ಮ ಯಜಮಾನರು ಮನೆಗೆ, ಸ್ವಂತಕ್ಕಾಗಿ ಏನನ್ನೂ ಮಾಡಲಿಲ್ಲ. ಬರುವ ಕಡಿಮೆ ಸಂಬಳವನ್ನೆಲ್ಲಾ ಪತ್ರಿಕೆಗಳನ್ನು ತರಲು ಬಳಸಿಕೊಂಡರು. ಸಾವಿರಾರು ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಆದರೆ ಅವರ ಆರೋಗ್ಯ ಹದಗೆಟ್ಟು ಮಾತು ನಿಂತು ಹೋಗಿತ್ತು, ಪ್ರಜ್ಞೆಯೂ ಇರಲಿಲ್ಲ. ಯಾರನ್ನು ಗುರುತಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಸಂಗ್ರಹಿಸಿದ ಪತ್ರಿಕೆಗಳನ್ನು ಪಾಂಡವಪುರದ ಅಂಕೇಗೌಡರ ಸಂಗ್ರಹಾಲಯಕ್ಕೆ ಕೊಟ್ಟು ಬಿಟ್ಟೆವು\' ಎಂದು ಕೃಷ್ಣೇಗೌಡರ ಪತ್ನಿ ಪ್ರಮೀಳಾ ತಿಳಿಸಿದರು.
\'ಇವರು ವಡೆ ಬೋಂಡ ಕಟ್ಟಿದ್ದ ಪತ್ರಿಕೆಗಳನ್ನು ಬಿಡುತ್ತಿರಲಿಲ್ಲ. ಅವುಗಳನ್ನು ತಂದು ಸಂಗ್ರಹಿಸಿ ರಾತ್ರಿಯೆಲ್ಲಾ ಕುಳಿತು ಅವುಗಳ ಬಗ್ಗೆ ಬರೆಯುತ್ತಿದ್ದರು. ಹಲವು ಸನ್ಮಾನಗಳನ್ನು ಇವರಿಗೆ ಮಾಡಲಾಗಿತ್ತು. ಸನ್ಮಾನದ ವಸ್ತುಗಳನ್ನು ಬಿಸಾಕಿದೆವು, ಇರುವುದು ಬಾಡಿಗೆ ಮನೆಯಲ್ಲಿ ಅವುಗಳನ್ನೆಲ್ಲಾ, ಸಾವಿರಾರು ಪತ್ರಿಕೆಗಳನ್ನು ಎಲ್ಲಿ ಇಟ್ಟುಕೊಳ್ಳುವುದು\' ಎಂದು ಪ್ರಶ್ನಿಸಿದರು.
\'ಇವರು ಚೆನ್ನಾಗಿದ್ದಾಗ ಎಲ್ಲರೂ ಬರುತ್ತಿದ್ದರು. ಆರೋಗ್ಯ ಹದಗೆಟ್ಟ ಮೇಲೆ ಇವರನ್ನು ನೋಡಲು ಯಾರೂ ಬರುತ್ತಿಲ್ಲ. ಇವರ ಚಿಕಿತ್ಸೆಯ ವೆಚ್ಚವನ್ನು ಭರಿಸುವುದೇ ನಮಗೆ ಕಷ್ಟವಾಗಿತ್ತು’ ಎಂದು ಕಣ್ಣೀರು ಹಾಕಿದರು.
ಜನರಿಗಿಂತ ಪತ್ರಿಕೆಗಳನ್ನು ಇಷ್ಟಪಡುತ್ತಿದ್ದರು : \'ನಮ್ಮ ತಂದೆ ಜನರಿಗಿಂತ ಹೆಚ್ಚಾಗಿ ಪತ್ರಿಕೆಗಳನ್ನು ಇಷ್ಟಪಡುತ್ತಿದ್ದರು. ತಮ್ಮ ದುಡಿಮೆಯನ್ನೆಲ್ಲಾ ಪತ್ರಿಕೆಗಳಿಗೆ ಸುರಿದು ರಾಜ್ಯದಲ್ಲಿರುವ ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಪತ್ರಿಕೆಗಳ ಪ್ರದರ್ಶನ ಏರ್ಪಡಿಸಿದ್ದಾಗಲೆಲ್ಲಾ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆಗ ಇವರನ್ನು ಎಲ್ಲರೂ ಹೊಗಳುತ್ತಿದ್ದರು. ಆದರೆ ನಮ್ಮ ತಂದೆಯ ಕಷ್ಟದ ಸಮಯದಲ್ಲಿ ಚೆನ್ನಾಗಿದ್ದೀರಾ ಎಂದು ಯಾರೂ ವಿಚಾರಿಸಲಿಲ್ಲ’ ಎಂದು ಕೃಷ್ಣೇಗೌಡರ ಪುತ್ರ ಸುದರ್ಶನ್ ಬೇಸರ ವ್ಯಕ್ತಪಡಿಸಿದರು.
2018 ರಲ್ಲಿ ನಿಧನ : ಕಾಮಗೆರೆ ಲ ಕೃಷ್ಣೇಗೌಡ ಅವರು ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಪತ್ರಿಕೆಗಳನ್ನು ಸಂಗ್ರಹಿಸುವುದು ಉತ್ತಮವಾದ ಹವ್ಯಾಸವಾಗಿದೆ. ಕಳೆದ 35 ವರ್ಷಗಳಿಂದ ಪತ್ರಿಕೆಗಳ ಸಂಗ್ರಹಕ್ಕಾಗಿಯೇ ತಮ್ಮ ಜೀವನದ ದುಡಿಮೆಯನ್ನು ಉಪಯೋಗಿಸಿದ್ದ ಕೃಷ್ಣೇಗೌಡ ಅವರು 2018ರ ಡಿಸೆಂಬರ್ 31ರಂದು ನಿಧನರಾದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮಾಧ್ಯಮ ಕ್ಷೇತ್ರವೂ ತನ್ನದೇ ಆದ ಗುರುತರವಾದ ಕೊಡುಗೆಯನ್ನು ನೀಡಿದೆ. ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿಯ ದೃಷ್ಟಿಯಿಂದ ಮಾಧ್ಯಮ ಕ್ಷೇತ್ರವು ಪ್ರಮುಖವಾದ ಕೆಲಸವನ್ನು ಮಾಡುತ್ತಿದೆ. ಕನ್ನಡ ಭಾಷೆಗೆ ಹೊಸ ಶಬ್ದಗಳು ಪ್ರತಿದಿನ ಮಾಧ್ಯಮದಿಂದ ಸೇರ್ಪಡೆಯಾಗುತ್ತಿವೆ.
ಮಾಧ್ಯಮ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮವು ಪ್ರಾಮುಖ್ಯತೆಯನ್ನು ಪಡೆದಿದೆ. ಇಂದಿನ ದೃಶ್ಯ ಮಾಧ್ಯಮಗಳ ಆರ್ಭಟದಲ್ಲೂ ಮುದ್ರಣ ಮಾಧ್ಯಮ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದೆ. ವಸ್ತು ನಿಷ್ಠ ವರದಿಗಳನ್ನು ನೀಡುತ್ತಿರುವ ಮುದ್ರಣ ಮಾಧ್ಯಮವು ಇಂದಿಗೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಮಹತ್ತರವಾದ ಕೊಡುಗೆ ನೀಡುತ್ತಿದೆ.
-ಎಸ್. ರುದ್ರೇಶ್ವರ
ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ.