ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿದೆ. ಹೀಗಾದಲ್ಲಿ ರೇಷ್ಮೆ ಬೆಳೆಗಾರರು ಬೀದಿ ಪಾಲಾಗಲಿದ್ದಾರೆ ಎಂದು ಭಾರತೀಯ ರೇಷ್ಮೆ ಒಕ್ಕೂಟ (ಸಿಲ್ಕ್ ಅಸೋಸಿಯೇಷನ್ ಇಂಡಿಯಾ- ಎಸ್.ಎ.ಐ.) ಅಧ್ಯಕ್ಷರಾದ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಮೊದಲಿಗೆ ಕಾಣಿಸಿಕೊಂಡ ತಾಯಿ ಚಿಟ್ಟೆಯಿಂದ ಬರುವ ಈ ಗಂಟುರೋಗವು ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಉಲ್ಬಣಗೊಳ್ಳಲಿದೆ ಎಂದು ರೇಷ್ಮೆ ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣೆ, ಸಾಮೂಹಿಕ ಸೋಂಕು ನಿವಾರಣೆ ಹಾಗೂ ಬಿತ್ತನೆ ಮಾರುಕಟ್ಟೆಯಲ್ಲಿ ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿತ ರೇಷ್ಮೆ ಮೊಟ್ಟೆಗಳನ್ನು ಹಾಗೂ ಹುಳುಗಳನ್ನು ಸುಟ್ಟು ಹಾಕಬೇಕು. ವಿಜ್ಞಾನಿಗಳು ಹಾಗೂ ತಜ್ಞ ಸಿಬ್ಬಂದಿಯನ್ನು ಈ ಕೂಡಲೇ ಗಂಟುರೋಗ ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ ಗುಣಮಟ್ಟ ಪರೀಕ್ಷೆ ಮಾಡಿಸಿ ಪೆಬ್ರಿನ್ ರೋಗವನ್ನು ನಿಯಂತ್ರಣಕ್ಕೆ ತರಬೇಕು ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 46 ಬ್ಯಾಚ್‌ಗಳಲ್ಲಿ ಗಂಟು ರೋಗಾಣು ಕಂಡುಬಂದಿದೆ ಎಂಬುದನ್ನು ರೇಷ್ಮೆ ಇಲಾಖೆ ದೃಢಪಡಿಸಿದೆ. ಈ ಪೆಬ್ರಿನ್ ರೋಗಾಣು ಸೋಂಕಿತ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು, ರೈತರ ರೇಷ್ಮೆ ಹುಳು ಸಾಕಣೆ ಮನೆಗಳಲ್ಲಿ ಸೋಂಕು ನಿವಾರಣೆ ಮಾಡಬೇಕು, ಬಿತ್ತನೆ ಕೋಠಿ ಪಿ4, ಪಿ3, ಪಿ2 ಮತ್ತು ಪಿ1 ಹಂತದಲ್ಲಿ ಗಂಟುರೋಗ ಪತ್ತೆಹಚ್ಚಿ ನಿವಾರಣೆ ಮಾಡಬೇಕು. 1991-92ನೇ ಸಾಲಿನಲ್ಲಿ ರಾಜ್ಯದಲ್ಲಿ ಗಂಟುರೋಗ ಉಲ್ಬಣಗೊಂಡಿದ್ದಾಗ ಅನುಸರಿಸಿದ್ದ ಕ್ರಮಗಳನ್ನು ತಕ್ಷಣವೇ ಈಗಲೂ ಕೈಗೊಳ್ಳಬೇಕು. ರೋಗಾಣು ಮೂಲವನ್ನು ತ್ವರಿತವಾಗಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ರೇಷ್ಮೆ ಇಲಾಖೆಯವರು ಶೇ 1.5ರಿಂದ ಶೇ 2ರಷ್ಟು ಬಿತ್ತನೆ ಮೊಟ್ಟೆಗಳಿಗೆ ಮಾತ್ರ ಗಂಟುರೋಗ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ಶೇ 20ರಷ್ಟು ರೇಷ್ಮೆ ಮೊಟ್ಟೆಗಳಿಗೆ ಗಂಟು ರೋಗ ತಗುಲಿದೆ. ಈ ಹಂತದಲ್ಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೆಬ್ರಿನ್ ರೋಗವನ್ನು ನಿರ್ಲ್ಯಕ್ಷ ಮಾಡಿದರೆ ರೇಷ್ಮೆ ಉದ್ಯಮ ನಶಿಸಿಹೋಗಲಿದೆ. ಗಂಟುರೋಗ ಸೋಂಕಿನಿಂದ ಇಟಲಿ ಮತ್ತು ಫ್ರಾನ್ಸ್ ದೇಶಗಳಲ್ಲಿ ರೇಷ್ಮೆ ಉದ್ಯಮ ಸರ್ವನಾಶವಾಗಿರುವುದನ್ನು ಗಮನದಲ್ಲಿರಿಸಿಕೊಂಡು ತಕ್ಷಣವೇ ಕ್ರಮ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ, ರೇಷ್ಮೆ ಇಲಾಖೆಯಲ್ಲಿ 6,000 ಮಂದಿ ನೌಕರರು ಹಾಗೂ ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ, ಕೇವಲ 1600 ಮಂದಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿತ್ತನೆ ವಲಯದಲ್ಲಿ 466 ಸಿಬ್ಬಂದಿ ಇರಬೇಕಾಗಿದ್ದು ಕೇವಲ 122 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಟ್ಟೆ ಪರೀಕ್ಷಕರ ಕೊರತೆಯಿಂದಾಗಿ ಗಂಟುರೋಗ ಉಲ್ಬಣಗೊಂಡಿದೆ. ಕಳೆದ 20 ವರ್ಷಗಳಿಂದ ರೇಷ್ಮ್ಮೆ ಇಲಾಖೆಯಲ್ಲಿ ನೇಮಕಾತಿ ಮಾಡಿಲ್ಲ. ಹೀಗಾಗಿ ಚಿಟ್ಟೆ ಪರೀಕ್ಷಕರು ಹಾಗೂ ನುರಿತ ಸಿಬ್ಬಂದಿಯ ಕೊರತೆ ಇದೆ. ಮತ್ತೊಂದೆಡೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಂಶೋಧನಾ ಸಂಸ್ಥೆಗಳಲ್ಲಿ ಬೆರಳೆಣಿಕೆಯಷ್ಟು ವಿಜ್ಞಾನಿಗಳಿದ್ದು, ಅವು ಮುಚ್ಚುವ ಹಂತದಲ್ಲಿವೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯೋನ್ಮುಖವಾಗಿ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನು ನೇಮಕ ಮಾಡಿ ರೇಷ್ಮೆ ಉದ್ಯಮವನ್ನು ಉಳಿಸಬೇಕು ಹಾಗೂ ರೇಷ್ಮೆ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೇಷ್ಮೆ ಸಂಶೋಧನಾ ಸಂಸ್ಥೆಯನ್ನು ಬಲಪಡಿಸಿ ಸಮರ್ಥ ವಿಜ್ಞಾನಿಗಳನ್ನು ನೇಮಕಾತಿ ಮಾಡಬೇಕು, ಹೊಸ ರೇಷ್ಮೆ ತಳಿಗಳ ಬಿಡುಗಡೆಗೆ ಆದ್ಯತೆ ಕೊಡಬೇಕು ಹಾಗೂ ಭಾರತೀಯ ರೇಷ್ಮೆ ಒಕ್ಕೂಟ ಸಲ್ಲಿಸಿರುವ ಪ್ರಸ್ತಾವದ ಅನುಸಾರ 2,000 ಕೋಟಿ ರೂಪಾಯಿಗಳ ವಿಶ್ವಬ್ಯಾಂಕ್ ನೆರವು ಪಡೆದು ರೇಷ್ಮೆ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಂದ ವರ್ಷವೊಂದಕ್ಕೆ 13 ಕೋಟಿಗೂ ಹೆಚ್ಚು ಮೊಟ್ಟೆಗಳಿಗೆ ಬೇಡಿಕೆ ಇದೆ. ಇದರಲ್ಲಿ ನೋಂದಾಯಿತ ಖಾಸಗಿ ಮೊಟ್ಟೆ ತಯಾರಕರು ಶೇ 80ರಷ್ಟನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೊಟ್ಟೆ ತಯಾರಿಕಾ ಸಂಸ್ಥೆಗಳು ಶೇ 20ರಷ್ಟು ರೇಷ್ಮೆ ಬಿತ್ತನೆಯನ್ನು ಸರಬರಾಜು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 15 ಲಕ್ಷ ಜನ ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದು ವಾರ್ಷಿಕ 30,000 ಕೋಟಿ ರೂಪಾಯಿಯಷ್ಟು ರೇಷ್ಮೆ ವಹಿವಾಟು ನಡೆಯುತ್ತಿದೆ. ಕರ್ನಾಟಕದಲ್ಲಿ ರೇಷ್ಮೆ ಕೃಷಿಗೆ 200 ವರ್ಷಗಳ ಇತಿಹಾಸವಿದೆ. ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶ ಮೊದಲ ಸ್ಥಾನದಲ್ಲಿದ್ದರೆ ಭಾರತ ದೇಶ 2ನೇ ಸ್ಥಾನದಲ್ಲಿದ್ದು, ಇದರಲ್ಲಿ ಕರ್ನಾಟಕದ ಪಾಲು ಶೇ 70ಕ್ಕಿಂತಲೂ ಹೆಚ್ಚಾಗಿದ್ದದ್ದು ಹೆಮ್ಮೆಯ ಸಂಗತಿಯಾಗಿತ್ತು. ಆದರೆ, ಈ ಪ್ರಮಾಣ ಇದೀಗ ಶೇ 50ಕ್ಕಿಂತಲೂ ಕಡಿಮೆ ಆಗಿರುವುದು ನೋವಿನ ಸಂಗತಿಯಾಗಿದೆ ಎಂದು ಬಾಲಸುಬ್ರಮಣ್ಯಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಚೀನಾ ದೇಶದ ರೇಷ್ಮೆ ಉತ್ಪಾದನೆ 2 ವರ್ಷಗಳ ಹಿಂದೆ 1,60,00 ಮೆಟ್ರಿಕ್ ಟನ್‌ಗಳಷ್ಟು ಇದ್ದದ್ದು ಪ್ರಸ್ತುತ 55,300 ಮೆಟ್ರಿಕ್ ಟನ್‌ಗಳಿಗೆ ಕುಸಿದಿದೆ. ಈ ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಭಾರತ ದೇಶವು ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆಯಲಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವ ರೈತಾಪಿ ವರ್ಗಕ್ಕೆ ಸಹಕಾರಿಯಾಗಲಿದೆ ಹಾಗೂ ವಿದೇಶಿ ಅವಲಂಬನೆಯನ್ನು ತಪ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ರೇಷ್ಮೆ ಸಚಿವ ನಾರಾಯಣಗೌಡರು ಹಾಗೂ ರೇಷ್ಮೆ ಆಯುಕ್ತರಾದ ಸಿಂಧೂ ಬಿ ರೂಪೇಶ್ ಅವರ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಗಂಟು ರೋಗ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮನವಿ ಮಾಡಿರುವುದಾಗಿ ಇದೇ ವೇಳೆ ಬಾಲಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ..
- ವಿ.ಬಾಲಸುಬ್ರಮಣ್ಯಂ
ಅಧ್ಯಕ್ಷರು
9845970092
ಭಾರತೀಯ ರೇಷ್ಮೆ ಒಕ್ಕೂಟ (ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ- ಎಸ್‌ಎಐ)
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »

ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ

ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.

ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ

ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮೆಹರೀಶ್
ಚನ್ನಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಮತ್ತೀಕೆರೆ ಗ್ರಾಮದ ಮೆಹರೀಶ್ (ಮನು) ರವರು ಸೋಮವಾರ ಅವಿರೋಧವಾಗಿ ಆಯ್

ಪಂಪ್ ಸೆಟ್ ಬಾವಿ ನೀರಿಗಾಗಿ ತಾಯಿ, ಪುತ್ರ ಕೊಲೆ
ಪಾಂಡವಪುರ: ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ಬಾವಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಪುತ್ರನನ್ನು ಸ್ವಂತ ಸಂಬಂಧಿ

ಕೆರೆಯಲ್ಲಿ ಕುರಿ ಮೈತೊಳೆಯುತ್ತಿದ್ದ ಒಂದೇ ಕುಟುಂಬದ ಮೂರು ಮಂದಿ ಸಾವು
ಮಾಗಡಿ: ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿ ಗ್ರಾಮದ ಪೂಜಾರಿ ರಾಜಣ್ಣ ಎಂಬುವರ ಪುತ್ರ ನಾಗರಾಜು [30], ಜ್ಯೋತಿ [35], ಲಕ್ಷ್ಮೀ [22] ಕುರಿ ಮೈತೊಳೆಯುತ್ತ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ಗಂಟುರೋಗ (ಪೆಬ್ರಿನ್) ಸೋಂಕು ತಕ್ಷಣ ನಿಯಂತ್ರಿಸದಿದ್ದರೆ ರೇಷ್ಮೆ ಉದ್ಯಮ ಸರ್ವನಾಶ: ವಿ.ಬಾಲಸುಬ್ರಮಣ್ಯಂ ಆತಂಕ
ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿ
ಪ್ರತಿಕ್ರಿಯೆಗಳು