ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ರಾಮನಗರ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇವರಲ್ಲಿ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಮಾಗಡಿಯ ಕೆಂಪೇಗೌಡ ಶಾಲೆಯ ಪ್ರಾಚಾರ್ಯ ಶ್ರೀನಿವಾಸ, ಗುಮಾಸ್ತ ರಂಗೇಗೌಡ ಹಾಗೂ ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಉಳಿದ ಏಳು ಮಂದಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
*ಪ್ರಕರಣದ ವಿವರ:*
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ರಾಮನಗರ ಜಿಲ್ಲೆ ಮಾಗಡಿಯ ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ಪತ್ರಕರ್ತ ಸೇರಿದಂತೆ ಹತ್ತು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಳೆದ ಮಾರ್ಚ್–ಏಪ್ರಿಲ್ ತಿಂಗಳಿನಲ್ಲಿ ನಡೆದ ಹತ್ತನೇ ತರಗತಿಯ ಪರೀಕ್ಷೆಯ ಆರೂ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿರುವ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಹಾಗೂ ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಅವರನ್ನು ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಹತ್ತು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಕೆಂಪೇಗೌಡ ಶಾಲೆಯ ಪ್ರಾಚಾರ್ಯ ಶ್ರೀನಿವಾಸ, ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ವಿವಿಧ ಶಾಲೆಗಳ ಶಿಕ್ಷಕರಾದ ಸುಬ್ರಹ್ಮಣ್ಯ (ವಿಜ್ಞಾನ), ಶ್ರೀನಿವಾಸ (ಸಮಾಜ ವಿಜ್ಞಾನ) ಅರ್ಜುನ್ (ಕನ್ನಡ), ಅಲೀಂ ಉಲ್ಲಾ (ಹಿಂದಿ), ನಾಗರಾಜು (ಇಂಗ್ಲಿಷ್), ಲೋಕೇಶ್ ಮತ್ತು ಸ್ಥಳೀಯ ಪತ್ರಕರ್ತ ವಿಜಯ್‌ಕುಮಾರ್ ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ಪೊಲೀಸರು ಆರೋಪಿ ಗಳೆಲ್ಲರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದು, ಅದರಲ್ಲಿಯ ಮಾಹಿತಿ ಜಾಲಾಡುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನೂ ವಶಕ್ಕೆ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರೋಪಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
*ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ:*
ಮಾಗಡಿಯ ರಂಗನಾಥಸ್ವಾಮಿ ಪ್ರೌಢ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಇತ್ತು. ಅಲ್ಲಿನ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿ ಪರೀಕ್ಷೆಯ ಆರಂಭದ 15 ನಿಮಿಷಕ್ಕೆ ಮುನ್ನವೇ ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಅದನ್ನು ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಅವರಿಗೆ ರವಾನಿಸುತ್ತಿದ್ದರು. ರಂಗೇಗೌಡ ಆಯಾ ಪರೀಕ್ಷೆಯ ವಿಷಯ ತಜ್ಞರನ್ನು ಕೂರಿಸಿಕೊಂಡು ಅವರಿಂದ ಅದಕ್ಕೆ ಉತ್ತರ ಬರೆಯಿಸಿ ಅದನ್ನು ಮತ್ತೆ ಪರೀಕ್ಷಾ ಕೇಂದ್ರಕ್ಕೆ ರವಾನಿಸುತ್ತಿದ್ದರು. ಆ ಉತ್ತರವನ್ನು ಇಡೀ ಪರೀಕ್ಷಾ ಕೇಂದ್ರದ ಮಕ್ಕಳಿಗೆ ಹೇಳಿಕೊಡುತ್ತಿದ್ದರು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾಹಿತಿ ನೀಡಿದರು.
ಮಾಗಡಿಯ ಇತರ ಪರೀಕ್ಷಾ ಕೇಂದ್ರಗಳಲ್ಲಿಯೂ ಇದೇ ರೀತಿ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆ. ಹಣ ಪಡೆದು ಉತ್ತರ ಹೇಳಿಕೊಡಲಾಗಿದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದರು.
*ಮಾಗಡಿ: ಅಂಕಗಳಿಕೆ ದಿಢೀರ್ ಏರಿಕೆ*
ಪ್ರಕರಣದ ಪ್ರಮುಖ ಆರೋಪಿ ರಂಗೇಗೌಡ ಎಂಬುವರ ಪುತ್ರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಉತ್ತಮ ಅಂಕ ಪಡೆದಿದ್ದಾಳೆ. ಪರೀಕ್ಷೆ ವೇಳೆ ಮಗಳಿಗೂ ಸಹಾಯ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಪರೀಕ್ಷೆ ಅಕ್ರಮ ನಡೆದಿರುವ ಕೆಂಪೇಗೌಡ ಶಾಲೆ ಶೇ 100ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 65 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ ಉಳಿದವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದಿದ್ದಾರೆ.
ಮಾಗಡಿಯ ಇನ್ನೂ ನಾಲ್ಕಾರು ಶಾಲೆಗಳು ಇದೇ ಮಾದರಿಯ ಫಲಿತಾಂಶ ದಾಖಲಿಸಿದ್ದು, ಅಂಕ ಗಳಿಕೆ ಪ್ರಮಾಣದಲ್ಲಿಯೂ ಸಾಕಷ್ಟು ಏರಿಕೆ ಕಂಡುಬಂದಿದೆ. ಈ ಎಲ್ಲದರ ಬಗ್ಗೆ ವಿವರಣೆ ನೀಡುವಂತೆ ಪೊಲೀಸರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
*ಬಿಇಓ ತಲೆದಂಡ ಸಾಧ್ಯತೆ:*
ಅಕ್ರಮದ ಮಾಹಿತಿ ಗೊತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಸಂಗತಿ ಯತಿಕುಮಾರ್ ಅವರಿಗೆ ಮೊದಲೇ ತಿಳಿದಿತ್ತು. ಆರೋಪಿಗಳ ಬಗ್ಗೆ ಗೊತ್ತಿದ್ದರೂ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕ್ಕೆ ಮುಂದಾಗಲಿಲ್ಲ ಎಂದು ದೂರಲಾಗಿದೆ.
*ಬ್ಲಾಕ್‌ಮೇಲ್ ಮಾಡಿ ಸಿಕ್ಕಿಬಿದ್ದರು!*
ಏಪ್ರಿಲ್ 11ರಂದು ವಿಜ್ಞಾನ ಪರೀಕ್ಷೆ ನಡೆದಿದ್ದು, ಅಂದು 10.30ಕ್ಕೆ ಆರೋಪಿ ರಂಗೇಗೌಡ ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕೃಷ್ಣಮೂರ್ತಿಗೆ ಕಳುಹಿಸುವ ಬದಲಾಗಿ ಶಿಕ್ಷಕರ ಗುಂಪೊಂದಕ್ಕೆ ಹಾಕಿದ್ದರು. ನಂತರ ಎಚ್ಚೆತ್ತು ಅದನ್ನು ಡಿಲಿಟ್ ಮಾಡಿದ್ದರು. ಅಷ್ಟರಲ್ಲೇ ಶಿಕ್ಷಕ ಲೋಕೇಶ್ ಗುಂಪಿನಿಂದ ಪ್ರಶ್ನೆಪತ್ರಿಕೆಯನ್ನು ತಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದರು.
ಇದನ್ನೇ ಇಟ್ಟುಕೊಂಡು ಶಿಕ್ಷಕ ಲೋಕೇಶ್, ರಂಗೇಗೌಡ ಅವರನ್ನು ಬ್ಲಾಕ್‌ಮೇಲ್ ಮಾಡಿ ₹10 ಸಾವಿರ ಪಡೆದಿದ್ದರು. ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತ ವಿಜಯ್‌ಕುಮಾರ್ ಸಹ ರಂಗೇಗೌಡ ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದರು. ಈ ಇಬ್ಬರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕೆ ರಂಗೇಗೌಡ ಒಪ್ಪಿರಲಿಲ್ಲ. ಹೀಗಾಗಿ ಲೋಕೇಶ್ ಬೇರೊಂದು ಹೆಸರಿನಲ್ಲಿ ಮಾಗಡಿ ಪೊಲೀಸರಿಗೆ ಪತ್ರ ಬರೆದು ವಿಷಯ ಬಹಿರಂಗಪಡಿಸಿದರು ಎಂದು ತಿಳಿದುಬಂದಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in education »

ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ
ಚನ್ನಪಟ್ಟಣ : ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ, ನವೋದಯ ವಿದ್ಯಾಲಯ ಸ
ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
ರಾಮನಗರ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ರಾಮನಗರ ಜಿಲ್ಲೆಯ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜ

ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ
ರಾಮನಗರ, ಜೂ. 28: ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತ
ಪಜಾ ಮತ್ತು ಪಪಂ ದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ, ಜೂ. 17: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರ

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ
ಚನ್ನಪಟ್ಟಣ: ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ

ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ
ರಾಮನಗರ, ಜೂ. 09: ರಾಮನಗರ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು

ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ
ಚನ್ನಪಟ್ಟಣ: ತಾಲ್ಲೂಕಿನ ಚಕ್ಕಲೂರು ಗ್ರಾಮದಿಂದ ಚನ್ನಪಟ್ಟಣ ನಗರಕ್ಕೆ ಪ್ರತಿದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಇಪ್ಪತ್ನಾಲ್ಕು ಕಿಲೋಮೀಟರ್ ಪ್ರಯಾಣ

ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ
ರಾಮನಗರ, ಮೇ 2: ಅಪೌಷ್ಠಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಅಪೌಷ್ಠಿಕತೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅಪೌಷ್ಠಿಕತೆ ನಿವಾರಿಸಲು ತಾಯಿ

ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ
ಚನ್ನಪಟ್ಟಣ :ಪ್ರತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಶಿಸ್ತು ಮತ್ತು ಶ್ರದ್ಧೆಯ ಜೊತೆಗೆ ಸಮಯ ಪಾಲನೆ ರೂಢಿಸಿಕೊಂಡಲ್ಲಿ, ವಿದ್ಯಾರ್ಥಿಗಳು ತಮ್ಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ರಾಮನಗರ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇವರಲ್ಲಿ ಮೂವರನ್ನು ಹೆಚ್ಚಿನ ವಿಚಾರಣೆಗಾ
ಪ್ರತಿಕ್ರಿಯೆಗಳು