Tel: 7676775624 | Mail: info@yellowandred.in

Language: EN KAN

    Follow us :


ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ

Posted date: 25 Oct, 2022

Powered by:     Yellow and Red

ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ

ಲಂಡನ್, ಅ.24: ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ ನಿಂದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್(Boris Johnson) ಹಿಂದೆ ಸರಿದ ಬಳಿಕ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ  ಭಾರತೀಯ ಮೂಲದ ಮುಖಂಡ, ಉದ್ಯಮಿ ರಿಷಿ ಸುನಾಕ್(Rishi Sunak) ಬ್ರಿಟನ್ ನ ಅತ್ಯಂತ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.


ಯಶ್ವೀರ್ ಸುನಾಕ್(Yashvir Sunak) ಮತ್ತು  ಉಷಾ ದಂಪತಿ ಪುತ್ರ ರಿಷಿ ಸುನಾಕ್ ಇಂಗ್ಲೆಂಡಿನ ಸೌಥಾಂಪ್ಟನ್ನ ಆಸ್ಪತ್ರೆಯಲ್ಲಿ 1980ರ ಮೇ 12ರಂದು ಜನಿಸಿದ್ದು, ಅವರ ತಾತ ಭಾರತದ ಪಂಜಾಬ್ ಪ್ರಾಂತದವರು. 1960ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್ಗೆ ವಲಸೆ ಬಂದರು. ಅವರ ತಾಯಿ ಉಷಾ ಸೌಥಾಂಪ್ಟನ್ನ ವೆಸ್ಟಾನ್ ಫಾರ್ಮಸಿಯಲ್ಲಿ ಮ್ಯಾನೇಜರ್ ಆಗಿದ್ದರೆ, ತಂದೆ ವೈದ್ಯರು. ರಿಷಿ ಸುನಾಕ್ ಸೌಥಾಂಪ್ಟನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಹ್ಯಾಂಪ್ಶೈರ್ನ ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದರು. ಆಕ್ಸ್‌ಫರ್ಡ್ ವಿವಿಯಲ್ಲಿ ತತ್ವಶಾಸ್ತ್ರ, ರಾಜಕೀಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಅಧ್ಯಯನ ನಡೆಸಿದ ಬಳಿಕ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿಯಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.


*ಸುನಾಕ್ ನಿವ್ವಳ ಆಸ್ತಿಯ ಮೌಲ್ಯ:*

ಈ ವರ್ಷದ ಆರಂಭದಲ್ಲಿ `ಸಂಡೇ ಟೈಮ್ಸ್' ಪ್ರಕಟಿಸಿದ  ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸುನಾಕ್ ಸ್ಥಾನ ಪಡೆದಿದ್ದರು. 1989ರಲ್ಲಿ ಪ್ರಾರಂಭವಾದ ಈ ವಾರ್ಷಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಮುಂಚೂಣಿ ರಾಜಕಾರಣಿ ಇವರು. ಸುನಾಕ್ ಮತ್ತವರ ಪತ್ನಿಯ ಒಟ್ಟು ಆಸ್ತಿಯ ಮೌಲ್ಯ 730 ಮಿಲಿಯನ್ ಪೌಂಡ್(ಸುಮಾರು 7 ಸಾವಿರ ಕೋಟಿ ರೂ.) ಆಗಿದ್ದು ಸಂಪತ್ತಿನ ಮೂಲವನ್ನು ತಂತ್ರಜ್ಞಾನ ಮತ್ತು ಹೆಜ್ಫಂಡ್(ಸಾಗರೋತ್ತರ ಹೂಡಿಕೆ ನಿಧಿ) ಎಂದು ವರ್ಗೀಕರಿಸಲಾಗಿದೆ. ವಿಶ್ವದ ವಿವಿಧೆಡೆ  ಸುಮಾರು 143 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.


ರಾಜಕೀಯ ಪ್ರವೇಶಕ್ಕೂ ಮುನ್ನ ಸುನಾಕ್ ಹೆಜ್ಫಂಡ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. 2009ರಲ್ಲಿ ಅವರು ಭಾರತದ ಕೋಟ್ಯಾಧಿಪತಿ ಉದ್ಯಮಿ, ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿಯ ಪುತ್ರಿ ಅಕ್ಷತಾ ಮೂರ್ತಿಯನ್ನು ವಿವಾಹವಾದರು. 2015ರಲ್ಲಿ ರಿಚ್ಮಂಡ್ ಸಂಸದೀಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದು 2018ರಲ್ಲಿ ಸಹಾಯಕ ಸಚಿವರಾಗಿ, 2019ರಲ್ಲಿ ವಿತ್ತ ಇಲಾಖೆಯ ಸಹಾಯಕ ಸಚಿವರಾಗಿ, 2020ರಲ್ಲಿ ಇಲಾಖೆಯ ಸಚಿವರಾಗಿ ಭಡ್ತಿ ಪಡೆದರು.


ಕೋವಿಡ್ ಸಂದರ್ಭದಲ್ಲಿ ಸುನಾಕ್ ಆರಂಭಿಸಿದ `ಈಟ್ ಔಟ್ ಟು ಹೆಲ್ಪ್ ಔಟ್' ಮುಂತಾದ ಹಲವು ಉಪಕ್ರಮಗಳು ದೇಶದ ಅರ್ಥವ್ಯವಸ್ಥೆಯನ್ನು ಹದಗೆಡದಂತೆ ನೆರವಾದವು. ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಪದತ್ಯಾಗಕ್ಕೆ ಪಕ್ಷದೊಳಗೆ ಆಗ್ರಹ ಹೆಚ್ಚಾದಾಗ, ಜಾನ್ಸನ್ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಪ್ರಥಮ ಸಚಿವನಾಗಿ ಸುನಾಕ್ ಗುರುತಿಸಿಕೊಂಡರು.


ಬೋರಿಸ್ ಜಾನ್ಸನ್ ರಾಜೀನಾಮೆ ಬಳಿಕ ತೆರವಾದ ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಸುನಾಕ್, ಅಂತಿಮ ಸುತ್ತಿನ ಹಣಾಹಣಿಯಲ್ಲಿ ಲಿಝ್ ಟ್ರಸ್ ಎದುರು ಸೋಲೊಪ್ಪಿಕೊಂಡರು. ಆದರೆ ಟ್ರಸ್ ಕೇವಲ 45 ದಿನಗಳಲ್ಲೇ ಪದತ್ಯಾಗ ಮಾಡಿದ್ದರಿಂದ  ಸುನಾಕ್ ಮತ್ತೆ ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಗೆ ಬಂದರು.


ಸುನಾಕ್ ದಂಪತಿಗೆ ಕೃಷ್ಣಾ ಮತ್ತು ಅನೂಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಬಿಡುವಿನ ವೇಳೆಯಲ್ಲಿ ಕ್ರಿಕೆಟ್, ಫುಟ್ಬಾಲ್ ಆಡುವುದು, ಸಿನೆಮಾ ವೀಕ್ಷಿಸುವುದು ಇವರ ಹವ್ಯಾಸವಾಗಿದೆ.


*ಹೋಟೆಲ್ನಲ್ಲಿ ವೈಟರ್ ಆಗಿದ್ದರು:*

2015ರಿಂದಲೂ ಯಾರ್ಕ್ಶೈರ್ ನ ರಿಚ್ಮಂಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುನಾಕ್, ಸಂಸದನಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು. 2018ರ ಜನವರಿಯಲ್ಲಿ  ಥೆರೆಸಾ ಮೇ ತಮ್ಮ  ಸರಕಾರದಲ್ಲಿ ಸ್ಥಳಿಯಾಡಳಿತ, ತೊಂದರೆಗೊಳಗಾದ ಕುಟುಂಬಗಳು ಹಾಗೂ ಉದ್ಯಾನವನ ಇಲಾಖೆಯ  ಸಹಾಯಕ ಸಚಿವನನ್ನಾಗಿ ಸುನಾಕ್ ಗೆ ಮೊದಲ ಅವಕಾಶ ನೀಡಿದ್ದರು.


ಆರಂಭದ ದಿನದಲ್ಲಿ ಸ್ಥಳೀಯ ಭಾರತೀಯ ರೆಸ್ಟಾರೆಂಟ್ ನಲ್ಲಿ ವೆಯ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾಗಿ ಸುನಾಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ತನ್ನ ಸ್ವಂತ ಕುಟುಂಬದ ಅನುಭವ, ದೊಡ್ಡ ಕುಟುಂಬದ ಶ್ರೀಮಂತ ಪತ್ನಿಯ ಅನುಭವವು ಕಠಿಣ ಪರಿಶ್ರಮ ಮತ್ತು ಆಕಾಂಕ್ಷೆಯ ಸಂಪ್ರದಾಯವಾದಿ ಕಥನವಾಗಿದೆ ಎಂದು ಸುನಾಕ್ ಹೇಳಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in international »

ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ
ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ

ಲಂಡನ್, ಅ.24: ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ ನಿಂದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್(Boris Johnson) ಹಿಂದೆ ಸರಿದ ಬಳಿಕ ನೂತನ ಪ್ರಧಾನಿಯ

Top Stories »  


Top ↑