Tel: 7676775624 | Mail: info@yellowandred.in

Language: EN KAN

    Follow us :


ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ

Posted date: 03 Dec, 2022

Powered by:     Yellow and Red

ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ

 ಚನ್ನಪಟ್ಟಣ:  ಚನ್ನಪಟ್ಟಣ ತಾಲ್ಲೂಕು ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಹೋರಾಟದ ಛಾಪನ್ನು ಒತ್ತಿದ, ವಿದ್ಯಾರ್ಥಿ ದೆಸೆಯಲ್ಲೇ ಮೈಸೂರಿನಲ್ಲಿ ಕನ್ನಡ ಪರ ಹೋರಾಟದ ಕಿಚ್ಚುಹತ್ತಿಸಿದ, ತಾಲ್ಲೂಕಿನ ಸಾಕ್ಷಿಪ್ರಜ್ಞೆ, ಕನ್ನಡದ ಕಟ್ಟಾಳು, ಹಿರಿಯ ಸಹಕಾರಿ ಧುರೀಣ, ಹೋರಾಟಗಾರ, ನ್ಯಾಯ ಸಂಧಾನಕಾರ ಸಿಂ.ಲಿಂ.ನಾಗರಾಜು(75) ಶನಿವಾರ ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 

 

ಕನ್ನಡಪರ ಹೋರಾಟಗಾರರಾಗಿ, ಶಿಕ್ಷಣ ಪ್ರೇಮಿಯಾಗಿ, ಸಹಕಾರಿ ಧುರೀಣರಾಗಿ, ಜನತಾ ಪರಿವಾರದ ಹಿರಿಯ ಮುಖಂಡರಾಗಿ, 

ರಾಮನಗರ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾಗಿ ತಾಲ್ಲೂಕಿಗೆ, ಜಿಲ್ಲೆಗೆ, ನಾಡಿಗೆ ಅವರ ಸೇವೆ ಅಪಾರ. ಪ್ರಸ್ತುತ ರಾಮನಗರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಿಂ.ಲಿಂ.ನಾಗರಾಜು ಅವರು ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು.

ಪತ್ನಿ ಸುಜಾತ, ಮಕ್ಕಳಾದ ಆದರ್ಶಕುಮಾರ್, ಅನುಪಮಾ, ಸೊಸೆ ರಜನಿ, ಅಳಿಯ ಮತ್ತು ಮೊಮ್ಮಕ್ಕಳು ಸೇರಿದಂತೆ ಅಸಂಖ್ಯಾತ ಬಂಧು-ಬಳಗವನ್ನು ಸಿಂ.ಲಿಂ.ನಾಗರಾಜು ಅಗಲಿದ್ದಾರೆ. 


2011ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್  ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. 

ಸೋಲು- ಗೆಲವನ್ನು ಸಮಾನವಾಗಿ ಸ್ವೀಕರಿಸಿ ‌ತಾಲ್ಲೂಕಿನ ತುಂಬೆಲ್ಲಾ ಜನಾನುರಾಗಗಳಿಸಿದ್ದರು. 


*ಸರಳತೆಯ ಸಾಕಾರಮೂರ್ತಿ:* 

ಕೆಲವರಿಗೆ ರಾಜಕೀಯ  ಹೊತ್ತು ಕಳೆಯಲಿಕ್ಕೆ ,

ಹೆಚ್ಚಿನವರಿಗೆ ರಾಜಕೀಯ ಹೊಟ್ಟೆ ಹೊರೆಯಲಿಕ್ಕೆ,

ಹಲವರಿಗೆ ರಾಜಕೀಯ ಕರ್ಮವೆಸಗಲಿಕ್ಕೆ,

ಬೆರಳೆಣಿಕೆ ಮಂದಿಗೆ ಮಾತ್ರ ರಾಜಕೀಯ  ಸೇವೆ ಸರ್ವಸಾಧನಕ್ಕೆ" ಎಂಬ ನುಡಿಮುತ್ತಿನಂತೆ ದಿನನಿತ್ಯದ ಸಮಾಜದಲ್ಲಿ ಮೇಲಿನ ರೀತಿಯ ನಾಲ್ಕು ವರ್ಗದ ವ್ಯಕ್ತಿಗಳಂತವರಲ್ಲಿ ನಾಲ್ಕನೆ ವರ್ಗದ ಗುಂಪಿಗೆ ಸೇರುವವರು ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದ ಸಿಂ.ಲಿಂ.ನಾಗರಾಜು ಸೇರಿದವರಾಗಿದ್ದರು.


*ಮದುವೆ, ಸಾವು, ತಿಥಿಗಳಿಗೆ ತಪ್ಪದೇ ಹಾಜರಾಗುತ್ತಿದ್ದ ಅತಿಥಿ!*

ತಾಲ್ಲೂಕು ಜಿಲ್ಲೆಯಲ್ಲಿನ ಯಾವುದೇ  ಹಳ್ಳಿಗಳಲ್ಲಿ  ನಡೆಯುವ ಮದುವೆ ಸಮಾರಂಭ, 

ಉತ್ತರ ಕ್ರಿಯಾದಿ ಸಮಾರಂಭ ಗೃಹಪ್ರವೇಶ ,ನಾಮಕರಣ, ಬೀಗರ ಔತಣಕೂಟ ಸೇರಿದಂತೆ ಯಾವುದೇ ಸಮಾರಂಭಗಳಿಗೂ ತಪ್ಪದೆ ಹಾಜರಾಗಿ ಶುಭ ಹಾರೈಸಿ ಎಲ್ಲರ ಸ್ನೇಹ ವಿಶ್ವಾಸ ಪ್ರೀತಿಗೆ ಪಾತ್ರರಾಗುವ  ಅಪರೂಪದ ವ್ಯಕ್ತಿಗಳಲ್ಲಿ ಸಿಂ ಲಿಂ ನಾಗರಾಜು ರವರು ಕೂಡ ಒಬ್ಬರು. ಅಂತಹ ವ್ಯಕ್ತಿಗೆ ಇಂದು ಎಪ್ಪತ್ತೈದನೇ ವರ್ಷದ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆದಿತ್ತು. ಸಿಂ.ಲಿಂ. ನಾಗರಾಜ್ ರವರು ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಲಿಂಗಪ್ಪ, ಲಕ್ಷ್ಮೀದೇವಮ್ಮ ದಂಪತಿಗಳ ಮಗನಾಗಿ 1947 ರ  ಡಿಸೆಂಬರ್  22 ನೇ ತಾರೀಖಿನಂದು ಜನಿಸಿದರು. ಇವರ ಪೂರ್ವಜರು ಹೊಟ್ಟಿಗನ ಹೊಸಹಳ್ಳಿ ಗ್ರಾಮದವರು. ಇವರ ಮುತ್ತಾತ ಲಿಂಗೇಗೌಡ ಸಿಂಗರಾಜಿಪುರ ಗ್ರಾಮಕ್ಕೆ ದತ್ತು ಹೋಗಲಾಗಿ ಅಲ್ಲಿ ನೆಲೆ ನಿಂತರು. ಸಿಂ.ಲಿಂ.  ರವರ ತಾಯಿಯ ಊರು ಮೈಸೂರು ಆದಕಾರಣ     ಇವರ ತಾತ ಸಿಂ .ಲಿಂ. ನಾಗರಾಜು ಅವರನ್ನು ಮೈಸೂರಿಗೆ ಕರೆದುಕೊಂಡು  ಹೋಗಿ ತಮ್ಮ ಮನೆಯಲ್ಲೇ ಇರಿಸಿಕೊಂಡರು. ಆ ಕಾರಣದಿಂದ ಸಿಂ. ಲಿಂ .ನಾಗರಾಜ್ ಅವರ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ ಮೈಸೂರು ನಗರದ ಪ್ರಸಿದ್ಧವಾದ ಬನುಮಯ್ಯ ಶಾಲೆಯಲ್ಲಿ ನಡೆಯಿತು.

 

*ನಾಗರಾಜು ಎಂಬ ವ್ಯಕ್ತಿ 

ಸಿಂ.ಲಿಂ. ಆದದ್ದು ಹೇಗೆ?:*

1963 ರಲ್ಲಿ ಬನುಮಯ್ಯ  ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ  ಓದುತ್ತಿದ್ದಾಗ ವಿದ್ಯಾರ್ಥಿ ಸಂಘದ  ಕಾರ್ಯದರ್ಶಿಯಾಗಿದ್ದ ಸಿಂ ಲಿಂ ನಾಗರಾಜ್ ರವರು ಶಾಲಾ ಸಮಾರೋಪ ಸಮಾರಂಭಕ್ಕೆ ಖ್ಯಾತ ಸಾಹಿತಿ  ತರಾಸು ರವರನ್ನು ಆಹ್ವಾನಿಸಲು ಹೋಗಿದ್ದಾಗ  ಎಸ್. ಎಲ್ .ನಾಗರಾಜ್ ಬದಲಿಗೆ ನಿನ್ನ  ಇನ್ಸಿಯಲ್ ಅನ್ನು  ಸಿಂ.ಲಿಂ.ಎಂದು ಬದಲಿಸಿಕೊಳ್ಳುವುದಾದರೆ ನಾನು ನಿಮ್ಮ ಶಾಲಾ  ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದರಂತೆ. ಅದರಂತೆ ಅವರ ಹೆಸರನ್ನು  ಸಿಂ.ಲಿಂ. ನಾಗರಾಜ್  ಎಂದು ಬದಲಾವಣೆ ಮಾಡಿದರಂತೆ.ಅಂದಿನಿಂದ ಎಸ್.ಎಲ್. ನಾಗರಾಜು ಸಿಂ. ಲಿಂ.ನಾಗರಾಜು ಅದರಂತೆ ಅದನ್ನು ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.


*ರಾಜ್ಯಕ್ಕೆ ವಾಟಾಳ್ ನಾಗರಾಜು

ಜಿಲ್ಲೆಗೆ ಸಿಂ.ಲಿಂ.ನಾಗರಾಜು*

1963 ರಲ್ಲಿ ವಾಣಿಜ್ಯ ವಿದ್ಯಾರ್ಥಿಯಾಗಿ ಕಾಲೇಜಿನಲ್ಲಿ ಓದುತ್ತಿದ್ದ  ನಾಗರಾಜುರವರು ವಾಟಾಳ್ ನಾಗರಾಜು ಪ್ರಭಾವಕ್ಕೆ ಒಳಗಾಗಿ ಕಾಲೇಜು ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು .1967 ರಲ್ಲಿ  ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾನ ಮನಸ್ಕರ ಸ್ನೇಹಿತರೊಡಗೂಡಿ ಬೆಂಗಳೂರಿಗೆ ಹೋಗಿ ವಾಟಾಳ್ ನಾಗರಾಜ್ ರವರ  ಪರವಾಗಿ  ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿದರು.1971 ರಲ್ಲಿ  ತಮ್ಮ  ತಾತನ ಮನೆಯಲ್ಲಿ ವಾಸವಿದ್ದಾಗ ಮೈಸೂರು  ನಗರಸಭೆಗೆ ವಾಟಾಳ್ ಕನ್ನಡ ಚಳುವಳಿ ಪಕ್ಷದಿಂದ ಸ್ಪರ್ಧಿಸಿ ನಲವತ್ತೈದು ಮತಗಳಿಂದ ಪರಾಜಿತರಾದರು.ಈ ನಡುವೆ ತಂದೆಯ ಸ್ನೇಹಿತರಾದ ಬಿ .ಜಿ.ಲಿಂಗೇಗೌಡ ಅವರ ಪರಿಚಯವಾಗಿ ಸಂಸ್ಥಾ ಕಾಂಗ್ರೆಸ್ ಸೇರಿದರು. 


*ಜನತಾ ಪರಿವಾರದ ಸುದೀರ್ಘ ನಂಟು

1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅದನ್ನು  ವಿರೋಧಿಸಿ ಬಂಧನಕ್ಕೊಳಗಾಗಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆಮನೆವಾಸ ಅನುಭವಿಸಿದರು. ಮುಂದೆ ಉದಯವಾದ ಜನತಾ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು .1989 ರಲ್ಲಿ  ರಾಮಕೃಷ್ಣ ಹೆಗಡೆ ಮತ್ತು  ದೇವೇಗೌಡರ ನಡುವೆ ಅಸಮಾಧಾನವಾದಾಗ ದೇವೆಗೌಡರ ಹಿಂಬಾಲಕರಾಗಿ      ಗುರುತಿಸಿಕೊಂಡು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಚನ್ನಪಟ್ಟಣ  ತಾಲ್ಲೂಕಿನ ಭೂಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ತಾಲೂಕು ಪಂಚಾಯಿತಿ ಸದಸ್ಯರಾದರು.


*ಎಂ.ಎಲ್.ಎ  ಚುನಾವಣೆ ಅಭ್ಯರ್ಥಿಯಾಗಿ  ಸಿಂ.ಲಿಂ:*

2011 ರ ವಿಧಾನಸಭೆ ಉಪ ಚುನಾವಣೆಯಲ್ಲಿ ದೇವೆಗೌಡರು ತಮ್ಮ ಜನತಾ ಪಾರ್ಟಿಯಿಂದ ಒಬ್ಬ ಪ್ರಾಮಾಣಿಕ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂಬ  ಸಂಕಲ್ಪದೊಂದಿಗೆ ನಾಗರಾಜು ಅವರಿಗೆ  ಟಿಕೆಟ್ ನೀಡಿದರು. ಹಣವಿಲ್ಲದಿದ್ದರೂ ತಮ್ಮ  ಗುಣದ ಆಧಾರದ ಮೇಲೆ ಜನರ ಮನಸ್ಸನ್ನು ಗೆದ್ದು ಸುಮಾರು 58576 ಮತಗಳನ್ನು ನಾಗರಾಜ್  ಪಡೆದರು. ಅತ್ಯಂತ ಕಡಿಮೆ ಅಂತರದಲ್ಲಿ ಸಿ ಪಿ ಯೋಗೇಶ್ವರ್ ವಿರುದ್ಧ ಸೋಲು ಕಂಡರು. ಚುನಾವಣೆಗೂ ಮುನ್ನಾ ಅವರು ಹೇಳಿದ್ದೇನೆಂದರೆ ಇಬ್ಬರೂ ಮತದಾರರಿಗೆ ಹಣ ಹಂಚುವುದಿಲ್ಲಾ ಎಂದು ಆಣೆ ಪ್ರಮಾಣ ಮಾಡೋಣಾ. ಆಗ ಯಾರು ಗೆಲ್ಲುತ್ತಾರೋ ನೋಡೋಣಾ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.


*ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ:*

2016 ರಲ್ಲಿ ನಡೆದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ  ಗೆಲುವನ್ನು ಸಾಧಿಸಿದ ನಾಗರಾಜ್ ರವರು 5ವರ್ಷಗಳ ಕಾಲ ಜಿಲ್ಲೆಯಾದ್ಯಂತ ಉತ್ತಮ ಕನ್ನಡ  ಕೆಲಸ ಮಾಡಿದರು. ತಾಲ್ಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ ಸೇರಿದಂತೆ ಕವಿಗೋಷ್ಠಿ ,ವಿಚಾರಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯಾದ್ಯಂತ ಕನ್ನಡದ ಕಂಪು ಬೀರುವಂತೆ ಮಾಡಿದರು. 


*ಹತ್ತಾರು ಸಂಘ- ಸಂಸ್ಥೆಗಳಲ್ಲಿ 

ಸಕ್ರಿಯ ಸಹಭಾಗಿತ್ವ:*

ಹತ್ತಾರು ಸಂಘಸಂಸ್ಥೆಗಳ ಪದಾಧಿಕಾರಿಯಾಗಿ ಸಾರ್ವಜನಿಕ ಹಾಗೂ ಸಮಾಜಸೇವೆ ಮಾಡಿರುವ ಸಿಂ .ಲಿಂ.ನಾಗರಾಜರವರು ತಮ್ಮ  ಹುಟ್ಟೂರಾದ  ಸಿಂಗರಾಜಿಪುರದಲ್ಲಿ ಗ್ರಾಮೀಣ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಭಾರತಮಾತಾ ವಿದ್ಯಾಸಂಸ್ಥೆಯನ್ನು ಕಟ್ಟಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿನವರೆಗೂ ಕೂಡ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದರು. ಇದಲ್ಲದೆ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ಯಲ್ಲಿ 3ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ  ಸೇವೆ ಸಲ್ಲಿಸುತ್ತಿದ್ದರು.ಇದಲ್ಲದೆ ಕನ್ನಡ ಸಂಘರ್ಷ ಸಮಿತಿಯ ಸದಸ್ಯರಾಗಿ, ಸಹಕಾರ ಯೂನಿಯನ್ ಜಿಲ್ಲಾ ಅಧ್ಯಕ್ಷರಾಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಸಿಂಗರಾಜಿಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಸಾರ್ವಜನಿಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


*ವಿಧಾನಸೌಧದ ಗ್ಯಾಲರಿಯಿಂದ ನೆಗೆದ ಸಿಂ.ಲಿಂ:*

ಕನ್ನಡ - ಕನ್ನಡ ಪರ ಹೋರಾಟವೆಂದರೆ  ಅಲ್ಲಿ ಸಿಂಲಿಂ ಇರಲೇಬೇಕು. 1971 ರಲ್ಲಿ ವಾಟಾಳ್ ನಾಗರಾಜ್ ರವರು ವಿಧಾನಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ವಿಧಾನಸೌಧದ ಗ್ಯಾಲರಿಯಲ್ಲಿ ಕುಳಿತಿದ್ದ ನಾಗರಾಜುರವರು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ವಿಧಾನಸೌಧದ ಗ್ಯಾಲರಿಯಿಂದ ಧುಮುಕಿ ಘೋಷಣೆ ಕೂಗಿ ಬಂಧನಕ್ಕೊಳಗಾದರು. ಶಾಂತವೇರಿ ಗೋಪಾಲಗೌಡರು  ಸಿಂ. ಲಿಂ. ನಾಗರಾಜು ಅವರಿಗೆ ಜಾಮೀನು ಕೊಟ್ಟು ಬಿಡಿಸಿಕೊಂಡು ಬಂದರು. ಕನ್ನಡಪರ ವಿಚಾರಗಳಿಗಾಗಿ ಎಂದೆಂದಿಗೂ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಕನ್ನಡದ ಕಟ್ಟಾಳು ಸಿಂ ಲಿಂ ನಾಗರಾಜು.


*ಬುರ್ಖಾ ಧರಿಸಿ ಮೈಸೂರಿನಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಘೋಷಣೆ ಕೂಗಿದ ಸಿಂ.ಲಿಂ:*

1973 ರಲ್ಲಿ  ಮೈಸೂರಿನ ಟೌನ್ ಹಾಲ್ ನಲ್ಲಿ ರಂಗಾಚಾರ್ಲು ಸ್ಮಾರಕ ಭವನದಲ್ಲಿ ಹಿಂದುಳಿದ ವರ್ಗದ ಇಲಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಅಂದು ಮುಖ್ಯ ಅತಿಥಿಗಳಾಗಿ  ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸುರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಂ. ಲಿಂ .ನಾಗರಾಜ್ ರವರು ಮೈಸೂರು ರಾಜ್ಯಕ್ಕೆ  ಮೈಸೂರು ರಾಜ್ಯದ ಬದಲಿಗಾಗಿ ಕರ್ನಾಟಕ ಎಂಬ ಹೆಸರನ್ನು ಇಡಬೇಕು ಎಂದು ಆಗ್ರಹಿಸಿ ಮುಸ್ಲಿಮ್ ಮಹಿಳೆಯ ಬಟ್ಟೆಯನ್ನು ಧರಿಸಿಕೊಂಡು ಬುರ್ಕಾ ಹಾಕಿಕೊಂಡು ಕಪ್ಪುಬಟ್ಟೆಯನ್ನು ಪ್ರದರ್ಶಿಸಿ ಬಂಧನಕ್ಕೊಳಗಾದರು.*ಸರಳ ಮಂತ್ರ ಮಾಂಗಲ್ಯದ ಪ್ರತಿಪಾದಕ ಸಿಂ.ಲಿಂ:

1980 ರಲ್ಲಿ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಖ್ಯಾತ ಪತ್ರಕರ್ತರಾದ ಕೋಡಿಹೊಸಳ್ಳಿ ರಾಮಣ್ಣ ಅವರ ವಿವಾಹ ಸಂಹಿತೆ  ಬೋಧನೆಯ ಮೂಲಕ ಕುವೆಂಪು  ಮಂತ್ರಮಾಂಗಲ್ಯ ವಿಧಾನದ ಮೂಲಕ ಶಾಸ್ತ್ರ ರಹಿತವಾಗಿ, ಪುರೋಹಿತರಿಲ್ಲದೆ ಮದುವೆಯಾದ ಹೆಗ್ಗಳಿಕೆ ನಾಗರಾಜು ಅವರದು. 

ಇವರ ಮದುವೆಗೆ ತಗುಲಿದ ವೆಚ್ಚ ಕೇವಲ 182 ರೂಪಾಯಿಗಳು ಎಂಬುದು ಇವರ ಸರಳತೆಗೆ ಹಿಡಿದ ಕೈಗನ್ನಡಿಯಾಗಿದೆ.


ಸಾಹಿತ್ಯ ಸೇವೆ, ಸಮಾಜ ಸೇವೆ, ಸಾರ್ವಜನಿಕ ಸೇವೆ , ರಾಜಕೀಯ ಸೇವೆ ಇವುಗಳೆಲ್ಲವುಗಳನ್ನು ಪರಿಗಣಿಸಿ ಹತ್ತಾರು ಸಂಘಟನೆಗಳು ಇವರನ್ನು ಗೌರವಿಸಿವೆ. ಬೀದರ್ ನಲ್ಲಿ ನಡೆದ 72 ನೇ  ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು  ಗುರುತಿಸಿ ಸನ್ಮಾನಿಸಲಾಗಿದೆ. ಸಹಕಾರ ಇಲಾಖೆಯು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮೈಸೂರಿನ ಒಕ್ಕಲಿಗರ ವೇದಿಕೆಯು ಕನ್ನಡ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ . ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.


*ತುಂಬು ಸಂಸಾರದ ಸರಳ ಸಾಕಾರಮೂರ್ತಿ:*

ಸಿಂ.ಲಿಂ.ನಾಗರಾಜು ಅವರು

ಪತ್ನಿ ಸುಜಾತ, ಮಕ್ಕಳಾದ ಆದರ್ಶಕುಮಾರ್, ಅನುಪಮಾ ಸೊಸೆ ರಜನಿ ಮತ್ತು ಮೊಮ್ಮಕ್ಕಳೊಂದಿಗೆ ಸುಂದರ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದರು. ನಾಗರಾಜುರವರು ಇಳಿ ವಯಸ್ಸಿನಲ್ಲಿಯೂ ಚಿರಯುವಕನಂತೆ ಪ್ರತಿನಿತ್ಯವೂ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ. 


*ಸಿಂ.ಲಿಂ.-75ಕ್ಕೆ ನಡೆದಿತ್ತು ಸಿದ್ಧತೆ:*

ಚನ್ನಪಟ್ಟಣ ತಾಲ್ಲೂಕು, ಜಿಲ್ಲೆ, ನಾಡಿನ ಸಾಕ್ಷಿಪ್ರಜ್ಞೆ ಸಿಂ.ಲಿಂ ನಾಗರಾಜು ಅವರು ಇದೇ ಡಿಸೆಂಬರ್ ೨೨ಕ್ಕೆ 74 ವಸಂತಗಳನ್ನು ದಾಟಿ ಎಪ್ಪತ್ತೈದನೇ ವಸಂತಕ್ಕೆ ಕಾಲಿಡುತ್ತಿದ್ದರು.75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಭಗವಂತ ಅವರಿಗೆ ಸಕಲ ಅಷ್ಟೈಶ್ವರ್ಯಗಳನ್ನು ನೀಡಲಿ ಆಯಸ್ಸು ಆರೋಗ್ಯವನ್ನು ಕರುಣಿಸಲಿ ಅವರ ಮಾರ್ಗದರ್ಶನ ಈ  ನಾಡಿಗೆ ದೊರಕುವಂತಾಗಲಿ ಎಂದು ಸಾಹಿತ್ಯ ಪ್ರೇಮಿಗಳು, ತಾಲ್ಲೂಕಿನ ಪ್ರಜ್ಞಾವಂತರು, ಅಭಿಮಾನಿ ಬಳಗದವರು ಹಾಗೂ ಬೊಂಬೆನಗರಿಯ ಸಮಸ್ತ ನಾಗರಿಕರ ಪರವಾಗಿ ಸಿಂ.ಲಿಂ.ಅಭಿನಂದನಾ ಸಮಾರಂಭ ನಡೆಸಲು ಸಕಲ ಸಿದ್ಧತೆ ನಡೆದಿತ್ತು. ಈ ನಡುವೆ ಶನಿವಾರದಂದು ಸಿಂ.ಲಿಂ. ನಾಗರಾಜು ಇಹಲೋಕ ತ್ಯಜಿಸಿದ ಸುದ್ದಿ ತಾಲ್ಲೂಕಿನಾದ್ಯಂತ ಬರ ಸಿಡಿಲಿನಂತೆ ಬಡಿದು ಎಲ್ಲೆಡೆ ಸೂತಕದ ಛಾಯೆ ಆವರಿಸಿರುವುದು ವಿಪರ್ಯಾಸವೇ ಸರಿ.


ಮುಂಜಾನೆಯಿಂದಲೇ ಅವರ ಪಾರ್ಥೀವ ಶರೀರ ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಶಾಲಾ ಮಕ್ಕಳು ಸಾಲಾಗಿ ಬಂದು ದರ್ಶನ ಪಡೆದರು. ಕೊನೆಯ ಘಳಿಗೆಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್ ಡಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜೊತೆಯಲ್ಲಿ ಬಂದು ನಮನ ಸಲ್ಲಿಸಿ ಗದ್ಗದಿತರಾದರು. ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗೇಶ್ವರ್, ಎಸ್ ರವಿ, ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಶಾಸಕ ಎಂ ಸಿ ಅಶ್ವಥ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ಸಾಹಿತ್ಯ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು, ತಾಲ್ಲೂಕಿನ ಪ್ರತಿ ಗ್ರಾಮದಿಂದ ನೂರಾರು ವ್ಯಕ್ತಿಗಳು ಸೇರಿದಂತೆ ಹತ್ತಾರು ಸಾವಿರ ಮಂದಿ ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದರು. ಇಳಿ ಹೊತ್ತಿನಲ್ಲಿ ಅವರ ಸಂಸ್ಕಾರ ಕಾರ್ಯ ಮುಗಿದಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.,

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ
ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ

ಚನ್ನಪಟ್ಟಣ.ಜ.೨೭: ನಗರದಲ್ಲಿನ ಬಮೂಲ್ ಕಛೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಚುನಾಯಿತ ಬಮೂಲ್ ನಿರ್ದೇಶಕ ಹೆಚ್ ಸಿ ಜಯಮುತ್ತು ಮತ್ತು ಇತ್ತೀಚೆಗೆ ಸರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ

ಚನ್ನಪಟ್ಟಣ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ( ರಿ) ತಾಲ್ಲೂಕು ಘಟಕ ಚನ್ನಪಟ್ಟಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚನ್

ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್
ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್

ರಾಮನಗರ, ಜ. 2:     ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.


<

ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ
ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ

ರಾಮನಗರ, ಜ. 2: ಜಿಲ್ಲೆಯಲ್ಲಿರುವ 2,500 ಕೆರೆಗಳಿಗೆ ನೀರು ತುಂಬಿಸುವ ಗುರಿಯೊಂದಿಗೆ ಹಲವಾರು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಒತ್ತುಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿ

ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ
ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ

ಮದ್ದೂರು: ೨೪-೨೩; ಜನನಿಬಿಡ ಪ್ರದೇಶವಾದ ತಾಲೂಕು ಕಚೇರಿಯ ಆವರಣದಲ್ಲಿ, ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ತನ್ನ ದಾಯಾದಿ ಮೇಲೆ ಕಣ್ಣಿಗೆ ಖಾ

ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ
ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಚನ್ನಪಟ್ಟಣ.ಜ.೨೩: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ

ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ
ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಚನ್ನಪಟ್ಟಣ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಅರಣ್

ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ
ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ,

ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು
ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು

ಚನ್ನಪಟ್ಟಣ: ಜಾನುವಾರುಗಳಿಗೆ ಇತ್ತೀಚೆಗೆ ರಾಜ್ಯದಾದ್ಯಂತ ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಇತಿಹಾಸ ಪ್ರಸಿದ್ಧ ಕೆಂಗ

Top Stories »  


Top ↑