Tel: 7676775624 | Mail: info@yellowandred.in

Language: EN KAN

    Follow us :


ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ

Posted date: 08 Aug, 2019

Powered by:     Yellow and Red

ಅತ್ತೆ ಮಾವನ ಸೇವೆ ಮಾಡಿದರೆ ವರಮಹಾಲಕ್ಷ್ಮಿ ಒಲಿಯುತ್ತಾಳೆ

||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ||


||ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||


ವರಮಹಾಲಕ್ಷ್ಮಿ ಗೆ ಸಂಬಂಧಿಸಿದ ಈ ಶ್ಲೋಕದಲ್ಲಿಯೇ ತಾಯಿಯ ಮಹಾತ್ಮೆ ತಿಳಿಯುತ್ತದೆ.


ವರಮಹಾಲಕ್ಷ್ಮಿ ಹಬ್ಬ ಕುರಿತು ಅನೇಕ ಜ್ಯೋತಿಷಿಗಳು, ಶಾಸ್ತ್ರಿಗಳು, ಪುರೋಹಿತರು ಸೇರಿದಂತೆ ಅನೇಕ ಮಂದಿ ಒಂದೊಂದು ರೀತಿ ಹೇಳುತ್ತಾರೆ, ಈ ದುಬಾರಿಯ ಕಾಲದಲ್ಲಿ ಜನಸಾಮಾನ್ಯರು ಅವೆಲ್ಲವನ್ನೂ ಮಾಡುವುದು ತುಸು ಕಷ್ಟದ ಕೆಲಸ, ಹಾಗಾಗಿ ಸಾಲ ಮಾಡಿ ಅತಿಯಾದ ಆಚರಣೆ ಮಾಡುವ ಬದಲು ಇರುವದರಲ್ಲೇ ಭಕ್ತಿಯಿಂದ ಪೂಜಿಸಿದರೆ ಅದ್ದೂರಿ ಆಚರಣೆಗಿಂತಲೂ ಹೆಚ್ಚು ಫಲ ದೊರೆಯುವುದರಲ್ಲಿ ಅನುಮಾನವಿಲ್ಲ.


ಈ ಹಿಂದಿನ ಪುರಾಣೇತರ ಕಥೆಗಳಲ್ಲಿ ಉಲ್ಲೇಕವಾಗಿರುವಂತೆ ಅದ್ದೂರಿ ಆಚರಣೆ ಮಾಡಿದ ರಾಜ ಮಹರಾಜರಿಗೆ ದೊರಕದ, ದರ್ಶನ ನೀಡದ ದೇವಾನು ದೇವತೆಗಳೆಲ್ಲರೂ ಭಕ್ತಿಯಿಂದ ಭಜಿಸಿದ ಬಡವನಿಗೆ ದರ್ಶನ ನೀಡಿ ಅಷ್ಟೈಶ್ವರ್ಯ ಕರುಣಿಸಿರವುದನ್ನು ಬಹುತೇಕ ಎಲ್ಲರೂ ಕೇಳಿದ್ದೀರಿ. ಹಾಗಾಗಿ ವೈಭವೋಪೇತ ಪೂಜೆಗಿಂತ ಭಕ್ತಿಯ ಪೂಜೆಯೇ ಲೇಸಲ್ಲವೆ ?


*ಹಬ್ಬದ ವಿಶೇಷ*


ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಒಂದರ ಹಿಂದೆ ಒಂದರಂತೆ ಸಾಲಾಗಿ ಬರುವ ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲಾ ಹೆಂಗಳೆಯರಿಗೂ ಬಹಳ ಪ್ರಿಯವಾದುದು.


ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಮಹಾಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ವಾಸುಕಿಯ ಸಹಾಯದಿಂದ ಕ್ಷೀರ ಸಾಗರದ ಮಥನ ಮಾಡಿದಾಗ ಅವತಾರ ತಾಳಿದಳೆಂದೂ ಹೇಳಲಾಗುತ್ತದೆ.


*ಸರಳವಾಗಿ ಪೂಜಿಸುವ ವಿಧಾನ*


ಅತಿಯಾದ ಆಡಂಬರವಿಲ್ಲದೆ ಸರಳವಾಗಿ ದೇವಿಯನ್ನು ಪೂಜಿಸಬಹುದು, ದೇವಿಯ ದುಬಾರಿ ಪ್ರತಿಕೃತಿಯ ಬದಲು ಮನೆಯಲ್ಲೇ ಇರುವ ಬೆಳ್ಳಿ, ತಾಮ್ರ, ಹಿತ್ತಾಳೆ ಅಥವಾ ಸ್ಟೀಲ್ ನ ಮಧ್ಯಮ ಗಾತ್ರದ ಬಿಂದಿಗೆಗೆ ನೀರು ತುಂಬಿಸಿ ಶುಭ್ರವಾದ ಕೆಂಪಂಚಿನ ಶ್ವೇತವರ್ಣದ ಸೀರೆ ಉಡಿಸಿ, ಸ್ಥಳೀಯವಾಗಿ ದೊರಕುವ ಬಾಳೆ, ಕಬ್ಬು, ಮಾವು, ವಿವಿಧ ಬಗೆಯ ಹೂವುಗಳು, ಅಗತ್ಯವಿದ್ದರೆ ಹಣ್ಣುಗಳು ಮತ್ತು ವೀಳ್ಯದೆಲೆಯಿಂದ ಶೃಂಗರಿಸಿ ಪೂಜಿಸಿಬಹುದು.


ತಮ್ಮ ಮೈಮೇಲಿನ ಒಡವೆಗಳು ಮತ್ತು ಬೀರುವಿನಲ್ಲಿರುವ ಹಣಗಳಿಂದ ಮಾಡುವ ಶೃಂಗಾರ ಕಡಿಮೆ ಇರಲಿ, ಆಕೆಯೆ *ವರ ಮಹಾ ಲಕ್ಷ್ಮಿ ಆಗಿರುವಾಗ ಆ ದೇವಿಗೆ ಅದರ ಹಂಗಿರುವುದಿಲ್ಲ, ಆಕೆ ಕೇಳುವುದು ನಿಮ್ಮ ಭಕ್ತಿ ಭಾವ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಜಿಸಿದರೆ ಸಾಕು. *(ತಮ್ಮಲ್ಲಿರುವ ಒಡವೆ ವಸ್ತ್ರಗಳನ್ನು ಸಾರ್ವಜನಿಕವಾಗಿ ತೆರೆದಿಡುವುದು ಸಹ ಮುಂದೊಂದು ದಿನ ಅಪಯಕಾರಿಯಾದರೂ ಅಚ್ಚರಿ ಪಡಬೇಕಿಲ್ಲ)*


*ದೇವಿ ಪೂಜಿಸಲು ಗೋಧೂಳಿ ಒಳ್ಳೆಯ ಸಮಯ*


ದೇವಿಯನ್ನು ಕೂರಿಸಿ ಶೃಂಗರಿಸಿ ಪೂಜಿಸಲು ಸಂಜೆಯ ಗೋಧೂಳಿ ಸಮಯ ಬಹಳ ಪ್ರಶಸ್ತವಾದ ಸಮಯವೆಂದು ಹಿರಿಯರು ಹೇಳುತ್ತಾರೆ, ಸಂಪೂರ್ಣ ಉಪವಾಸ ಮಾಡಲಾಗದಿದ್ದರೂ ದ್ರವಹಾರ ಸೇವಿಸಿ ಪೂಜಿಸಿದರೂ ಸಾಕು. ದೇವಿಯ ಪೂಜೆಗೆ ಮೊದಲು ಗಣಪತಿಯನ್ನು ಪೂಜಿಸಿ ನಂತರ ದೇವಿಗೆ ಪೂಜೆ ಸಲ್ಲಿಸಬೇಕೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಪೂಜೆಯ ಸಮಯದಲ್ಲಿ ಕೈಗೆ ಕಟ್ಟಿಕೊಂಡ ದಾರವನ್ನು ಗೌರಿ ಹಬ್ಬದಂದೇ ಬಿಚ್ಚಬೇಕು.


ಹೊಸದಾಗಿ ಮದುವೆಯಾದ ಹೆಂಗಸರು ಒಂಭತ್ತು ವರ್ಷಗಳು ನಿರಂತರವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತಿಯಿಂದ ಪೂಜಿಸಿದರೆ ಶುಭಕರವಾಗಲಿದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.


ಹಬ್ಬದ ಹಿನ್ನೆಲೆ-ವೈಶಿಷ್ಟ್ಯ

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯ ಬಗ್ಗೆ ಯೋಚಿಸುವುದಾದರೆ ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡಿದ್ದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ದೇವಿಯು ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ವರಮಹಾಲಕ್ಷ್ಮಿ ಹಬ್ಬ. ಈ ದಿನ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂದರೆ ನೀವು ದೇವಿಯನ್ನು ಪೂಜಿಸಿದರೆ ಸಿಗುವ ಫಲಕ್ಕಿಂತ ನಿಮ್ಮ ಅತ್ತೆ ಮಾವಂದಿರನ್ನು ಪೂಜಿಸಿದರೇ ಹೆಚ್ಚಿನ ಫಲ ದೊರೆಯಲಿದೆ.


(ಕೆಲವು ಮಾಹಿತಿಯನ್ನು ಜಾಲತಾಣದಲ್ಲಿ ಹೆಕ್ಕಿಕೊಳ್ಳಲಾಗಿದೆ)




ಗೋ ರಾ ಶ್ರೀನಿವಾಸ...


ಮೊ;9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑