Tel: 7676775624 | Mail: info@yellowandred.in

Language: EN KAN

    Follow us :


ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

Posted Date: 01 Nov, 2019

ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

ಚನ್ನಪಟ್ಟಣ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು ನುಡಿ ಜಲ ನಮ್ಮ ಹಕ್ಕು, ನಾವು ಕೊಡುಗೈ ದಾನಿಗಳೇ ವಿನಹ ಬೇಡಿ ಪಡೆಯುವರಲ್ಲ, ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರ ಋಣವನ್ನು ಇಂದಿಗೂ ತೀರಿಸಲಾಗಿಲ್ಲ. ಯಾರೋ ಪರದೇಶಿಗಳಿಂದ ನಮ್ಮ ಭಾಷೆ ಸೊರಗಿಲ್ಲ. ನಮ್ಮಿಂದ, ಕುರುಡು ಕಾಂಚಾಣಕ್ಕೆ ಕೈ ಒಡ್ಡುವ ಕೆಲ ಕನ್ನಡಿಗರಿಂದಲೇ ನಾಡು ನುಡಿಗೆ ಮಾರಕವಾಗಿದೆ ಎಂದು ಅರಳಾಳುಸಂದ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಆರ್ ದೇವರಾಜು ಅಭಿಪ್ರಾಯಪಟ್ಟರು.

ಅವರು ಇಂದು ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೬೪ ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ಕರ್ನಾಟಕದ ಏಕೀಕರಣಕ್ಕೆ ರಾಜ್ಯದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ನವರ ಕೊಡುಗೆ ಅಪಾರವಿದೆ, ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕುಮಾರವ್ಯಾಸ ನ ಕರ್ಣಾಟ ಭಾರತ ಕಥಾಮಂಜರಿ ಗ್ರಂಥವನ್ನು ಸರ್ಕಾರವೇ ಮುದ್ರಿಸುವ ಮೂಲಕ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮುನ್ನುಡಿ ಬರೆದರು.


೧೯೨೪ ರ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿಯವರ ಮುಂದೆ ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಗೀತೆಯನ್ನು ಮೊಳಗಿಸಲಾಯಿತು, ಇದರಿಂದ ೧೯೫೬ ರಲ್ಲಿ ಅಖಂಡ ಕರ್ನಾಟಕ ಉದಯವಾದರು ಭಾಷೆ ಮಾತ್ರ ಬೆಳವಣಿಗೆ ಕಾಣಲೇ ಇಲ್ಲ. ಜಾಗತೀಕರಣ, ಮುಕ್ತ ಆರ್ಥಿಕ ನೀತಿ ಯಂತಹ ಕಾನೂನುಗಳು ಬಡವರ, ರೈತರ ಅವನತಿಗೆ ಕಾರಣವಾದವು ಎಂದು ವಿಷಾದಿಸಿದರು.


ಕಳೆದ ೬೪ ವರ್ಷಗಳೂ ಸಹ ನಮ್ಮನ್ನು ನಮ್ಮವರೇ ಅರಸರಾಗಿ ಆಳಿದ್ದಾರೆ, ನೆಲ, ಜಲ ಮತ್ತು ಭಾಷೆಯ ಬೆಳವಣಿಗೆ ಆಗಲೇ ಇಲ್ಲ, ಸಮಸ್ಯೆಗಳು, ಬಿಕ್ಕಟ್ಟುಗಳ ಪರಿಹಾರವಾಗಲೇ ಇಲ್ಲ. ಆಳುವವರ ಜೊತೆಗೆ ನಾವು ಪೈಪೋಟಿಗೆ ಬಿದ್ದು ಮಕ್ಕಳನ್ನು ಇಂಗ್ಲಿಷ್ ಎಂಬ ಕನಿಷ್ಠ ಕೂಪಕ್ಕೆ ತಳ್ಳುತ್ತಿದ್ದೇವೆ, ಕನ್ನಡವನ್ನು ಉಳಿಸಲು ಎಲ್ಲಾ ವರ್ಗದವರು ಒಂದಾದರೆ ಮಾತ್ರ ಸಾಧ್ಯ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ  ಅಖಂಡ ಕರ್ನಾಟಕವನ್ನು ನಿರ್ಮಾಣ ಮಾಡಲು ಸಾಹಿತಿಗಳು, ಕೆಲ ಮುತ್ಸದ್ದಿ ರಾಜಕಾರಣಿಗಳು, ಕನ್ನಡದ ಕಟ್ಟಾಳುಗಳ ಪರಿಶ್ರಮದಿಂದಾಗಿ ನಾವು ಸಮೃದ್ಧ ಕರ್ನಾಟಕದಲ್ಲಿ ಇದ್ದೇವೆ. ಅಂದಿನ ಹೋರಾಟಕ್ಕೂ ಇಂದಿನ ಹೋರಾಟಕ್ಕೂ ಸಾಮ್ಯವೇ ಇಲ್ಲದಾಗಿದೆ, ನಾಡು ನುಡಿಯ ವಿಷಯ ಬಂದಾಗ ನಾಡಿನವರೆಲ್ಲರೂ ಒಂದಾಗಬೇಕು. ಇಂಗ್ಲಿಷ್ ಭಾಷೆಯನ್ನು ವ್ಯವಹಾರಿಕವಾಗಿ ಬಳಸಿಕೊಂಡು ಮಾತೃಭಾಷೆಯನ್ನು ಹೃದಯಲ್ಲಿಟ್ಟು ಪೂಜಿಸಬೇಕು. ಪ್ರತಿಯೊಬ್ಬ ಕನ್ನಡಿಗನೂ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ದಂಡಾಧಿಕಾರಿ ಸುದರ್ಶನ್ ರವರು ಕನ್ನಡ ನಮ್ಮ ಜನ್ಮದಾತೆ ಇದ್ದಂತೆ, ಆಕೆಗೆ ಸಣ್ಣ ಪೆಟ್ಟಾದರೂ ಮಕ್ಕಳು ಹೇಗೆ  ನೊಂದುಕೊಳ್ಳುತ್ತಾರೋ ಹಾಗೆ ನಮ್ಮ ಭಾಷೆ ಗೆ ಕೊಂಚ ನೋವಾದರೂ ಸಹಿಸದೇ ನಾಡು ನುಡಿಯ ರಕ್ಷಣೆಗೆ ಬದ್ದರಾಗಿರಬೇಕೆಂದರು.


ಇದೇ ವೇಳೆ ತಾಲ್ಲೂಕಿನ ಹಲವು ಸ್ತರಗಳಲ್ಲಿ ದುಡಿದ ಸಮಾಜ ಸೇವಕರಾದ ದೊಡ್ಡಯ್ಯ, ಕೆಂಚಮ್ಮ, ತ್ರಿಪುರಸುಂದರ ಮತ್ತು ಪೂರ್ಣಿಮಾ ರವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ಶಾಲಾ ಮಕ್ಕಳನ್ನು ಅಭಿನಂದಿಸಲಾಯಿತು. ಹಲವಾರು ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ಕುಕ್ಕುಟ ಮಹಾಮಂಡಳಿಯ ಅಧ್ಯಕ್ಷ ಡಿ ಕೆ ಕಾಂತರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ ಲಿಂ ನಾಗರಾಜು, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಳ್ಳಿ‌ ನಾಗರಾಜು, ಎಪಿಎಂಸಿ ಅಧ್ಯಕ್ಷ ಯಾಲಕ್ಕೀಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್ ಎಸ್ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಪೌರಾಯುಕ್ತ ಶಿವಾಂಕರಿಗೌಡ, ರಂಗನಾಥ ಸೇರಿದಂತೆ ಅನೇಕ ಗಣ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑