Tel: 7676775624 | Mail: info@yellowandred.in

Language: EN KAN

    Follow us :


ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ.

Posted date: 28 Feb, 2018

Powered by:     Yellow and Red

ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ.

ಇಂತಹ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ. ಇವತ್ತಿಗೆ ನಮ್ಮ ಅಜ್ಜಿಯನ್ನು ಕಳೆದುಕೊಂಡು ಆರು ವರ್ಷವಾಯಿತು. ಅಜ್ಜಿ ತಾತಾ ಅವರನ್ನು ಪ್ರತಿ ವರ್ಷ ನೆನೆಸಿಕೊಳ್ಳುವ ಜೊತೆಗೆ ಏನಾದರೂ ಮಾಡಬೇಕು ಎಂದು ಕಳೆದ ಆರು ವರ್ಷಗಳಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದೇನೆ.
ಪ್ರಸ್ತುತ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರಿಗೆ ಶಕ್ತಿ ತುಂಬಲು ಸರ್ಕಾರದ ವತಿಯಿಂದ ಕಾನೂನುಗಳು ಜಾರಿಯಾದರೂ ಪ್ರಯೋಜನವಾಗುತ್ತಿಲ್ಲ. ತಮ್ಮ ಮಕ್ಕಳು ಏನೇ ಮಾಡಿದರೂ ಪೋಷಕರಿಗೆ ಒಲವು, ಅಭಿಮಾನ ಹೆಚ್ಚು.
ನಮ್ಮ ಅಜ್ಜಿ ಪಾರ್ವತಮ್ಮ, ತಾತಾ, ಸಿದ್ದವೀರಯ್ಯ(ಕೂನಮುದ್ದನಹಳ್ಳಿ, ನಮ್ಮ ತಂದೆ ಕೆ.ಎಸ್. ಶಿವಮೂರ್ತಿ ಅವರ ತಂದೆತಾಯಿ), ಅಜ್ಜಿ ಜಯಮ್ಮ, ತಾತಾ ಶಾಂತಯ್ಯ (ಕೆಂಚನಕುಪ್ಪೆ, ನಮ್ಮ ತಾಯಿ ಸುಮಿತ್ರ ಅವರ ತಂದೆತಾಯಿ).
ನಮ್ಮ ಅಜ್ಜಿ ತಾತಾ ಅವರನ್ನು ಕಳೆದುಕೊಂಡ ನೋವು ಇಂದಿಗೂ ನನ್ನನ್ನು ಕಾಡುತ್ತದೆ. ಕೆಲಸ ಮುಗಿಸಿ ಮನೆಗೆ ಹೋದಾಗ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹಿರಿಯರೊಂದಿಗೆ ಮಾತನಾಡುವುದೆ ಒಂದು ಸಂತೋಷದ ಸಂಗತಿ ಎಂಬುದು ಹಲವರಿಗೆ ಗೊತ್ತಿಲ್ಲ. ನಮ್ಮ ಅಜ್ಜಿ ಪ್ರತಿದಿನವೂ ಕತೆ ಹೇಳುತ್ತಿದ್ದರು, ಜೀವನದ ಬಗ್ಗೆ ಅಗಾಧವಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಇಂದಿನ ಜನರಿಗೆ ಹಿರಿಯರು ಸಮಾಜದ ಆಸ್ತಿ ಎಂಬ ಭಾವನೆ ಬರಬೇಕಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಮಹಿಳೆಯರದು ಒಬ್ಬೊಬ್ಬರದು ಒಂದೊಂದು ಕತೆ. ಅಬಲೆಯರನ್ನು ಸಬಲೆಯರನ್ನಾಗಿ ಮಾಡುವ ಸರ್ಕಾರದ ಯೋಜನೆಗಳು ಇವರನ್ನು ತಲುಪುವುದೇ ಇಲ್ಲ. ಇಂತವರಿಗೆ ನನ್ನ ದುಡಿಮೆಯ ಹಣದಲ್ಲಿ ಪ್ರತಿ ತಿಂಗಳು ಇಂತಹ ಕೆಲಸಕ್ಕೆಂದು ಮೀಸಲಾಗಿಡುತ್ತೇನೆ. ಈ ಬಾರಿ ಈ ಮಹಿಳೆಯರೊಂದಿಗೆ ನನ್ನ ಅಜ್ಜಿ, ತಾತಾ ಅವರನ್ನು ನೆನಪು ಮಾಡಿಕೊಂಡದ್ದು, ನನಗೆ ತುಂಬಾ ಸಂತೋಷ ನೀಡಿತು.
ಸ್ವಚ್ಛತಾ ಕೆಲಸ ಮಾಡುವ ಮಹಿಳೆಯರಿಗೆ ಜಿಲ್ಲಾಧಿಕಾರಿ ಡಾ.ಬಿ.ಆರ್. ಮಮತಾ ಅವರು ಸ್ವೆಟರ್‌ಗಳನ್ನು ವಿತರಿಸಿದ್ದು ನನಗೆ ಅತೀವ ಸಂತಸವನ್ನು ಉಂಟು ಮಾಡಿತು. ಇಂತಹ ಕೆಲಸಗಳನ್ನು ಮತ್ತಷ್ಟು ಮಾಡಲು ಪ್ರೇರಣೆ ನೀಡಿತು. ಯಲ್ಲೊ ಅಂಡ್ ರೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್‌ಶಿವ, ಶಿಕ್ಷಕ ಶಿವಸ್ವಾಮಿ, ನನ್ನ ಪತ್ನಿ ಡಿ.ಆರ್. ನೀಲಾಂಬಿಕಾ, ಮಗಳು ಆರ್. ಯಶಿಕಾ, ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಾದ ಡಾ.ಎಸ್.ವಿ. ನಾರಾಯಣಸ್ವಾಮಿ, ಡಾ.ಶಶಿಧರ್, ಡಾ.ಪಿ. ಉಮಾಮಹೇಶ್ವರಿ, ಗಾಯಕ ಕೆಂಗಲ್‌ ವಿನಯ್‌ಕುಮಾರ್‌ ಮುಂತಾದವರು ಜೊತೆಗಿದ್ದರು.
ಇದು ಗೇಣುದ್ದದ ಹೊಟ್ಟೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛ ಮಾಡುವ ಮಹಿಳೆಯರ ಕಥೆ. ದಿಡೀರ್ ಬಂದ ಸಂಕಷ್ಟ, ವಿಧಿಯಾಟಕ್ಕೆ ಸಡ್ಡ ಹೊಡೆಯುವ ಛಲ, ಸ್ವಾಭಿಮಾನ ಮತ್ತು ಇತರರಿಗೆ ಮಾದರಿಯಾಗುವ ಹಂಬಲದಿಂದ ಪೊರಕೆ ಹಿಡಿದು ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿಕೊಂಡ ಈ ಮಹಿಳೆಯರು ಆಸ್ಪತ್ರೆಗೆ ಬರುವವರಿಗೆ ಅಚ್ಚುಮೆಚ್ಚಿನ ಸ್ನೇಹಿತೆಯರಾಗಿದ್ದಾರೆ.
ಒಬ್ಬೊಬ್ಬರದು ಒಂದೊಂದು ಕತೆ : ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ರಾಮಮ್ಮ, ಮರಿಯಮ್ಮ, ಮಹದೇವಮ್ಮ, ಗೌರಮ್ಮ ಹಾಗೂ ಸರೋಜ ಇವರದು ವಿಭಿನ್ನ ಜೀವನ ಕತೆಗಳು.
ಕೆಲವರಿಗೆ ಗಂಡ ತೀರಿಕೊಂಡು, ಮನೆಯ ಜವಾಬ್ದಾರಿ ನೋಡಿಕೊಳ್ಳಬೇಕು. ಇನ್ನು ಕೆಲವರಿಗೆ ಗಂಡ, ಮಕ್ಕಳಿದ್ದರೂ ಇವರೆ ದುಡಿದು ಜೀವನ ನಡೆಸಬೇಕು. ಇವರು ಅಕ್ಷರ ಕಲಿತವರಲ್ಲ, ಆದರೆ ಅಕ್ಷರ ಕಲಿತು ಜೀವನದಲ್ಲಿ ನಿರಾಸೆ ಹೊಂದಿದವರಿಗೆ ಮಾದರಿಯಾಗಿ ನಿಲ್ಲಬಲ್ಲವರು.
ಹಲವು ಮಹಿಳೆಯರು ಗಂಡ ತೀರಿಕೊಂಡ ಕೂಡಲೆ ದೃತಿಗೆಡುತ್ತಾರೆ. ಇದಲ್ಲದೆ ಜೀವನ ನಡೆಸಲು ಕೆಲವರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಇಲ್ಲಿ ಕೆಲವರು ಗಂಡ ತೀರಿಕೊಂಡರೂ ಧೈರ್ಯಗೆಡದೆ ಕಳೆದ 20 ವರ್ಷಗಳಿಂದ ಆಸ್ಪತ್ರೆ ಸ್ವಚ್ಛ ಮಾಡುವ ಮೂಲಕ ಬದುಕನ್ನು ಮೆಟ್ಟಿ ನಿಂತಿದ್ದಾರೆ.
ಈ ಮಹಿಳಾ ಕಾರ್ಮಿಕರ ಬದುಕಿನಲ್ಲಿ ಅನಾರೋಗ್ಯ ಸಹಿತ ನಾನಾ ಬವಣೆಗಳು ಕಾಡುತ್ತಿವೆ. ಆಸ್ಪತ್ರೆಗೆ ಹೋಗುವ ಅವಕಾಶ ದೊರೆತಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಶುಚಿಗೊಳಿಸಲು ದುಡಿಯುವ ಮಹಿಳಾ ಕಾರ್ಮಿಕರು ಎದುರಾದಲ್ಲಿ ಮತ್ತೇನನ್ನೂ ಮಾಡುವುದು ಬೇಡ. ಸುಮ್ಮನೆ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ನಂತರ ಮುಷ್ಟಿಯಂತೆ ಹಿಡಿದುಕೊಂಡಿರುವ ಅವರ ಹಸ್ತಗಳನ್ನು ತೆರೆಸಿ ಅದರತ್ತ ಕಣ್ಣು ಹಾಯಿಸಿ. ಹೂವಿನಷ್ಟು ಮೃದುವಾಗಿರಬೇಕಾದ ಕೈಗಳು ಪೊರಕೆ ಹಿಡಿದು ಗುಡಿಸಿಗುಡಿಸಿ ಸಿಮೆಂಟು ಪುಡಿಯಂತೆ ಒರಟಾಗಿರುವುದು ಕಂಡು ನಿಮ್ಮ ಕಣ್ಣಂಚಿನಿಂದ ನೀರು ಬಾರದಿದ್ದರೆ ಕೇಳಿ. 
ಬೆಳಗಿನ ಜಾವ ಎದ್ದೇಳಲು ಆಗುವುದಿಲ್ಲ ಎಂಬ ಕಾರಣ ನೀಡಿ ಎಷ್ಟೊ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಾರೆ. ಆದರೆ ಜಿಲ್ಲಾ ಆಸ್ಪತ್ರೆಯ ಮಹಿಳಾ ಕಾರ್ಮಿಕರ ಜೀವನ ಶೈಲಿಯತ್ತ ಕಣ್ಣು ಹಾಯಿಸಬೇಕು. ಬೆಳಿಗ್ಗೆ 6 ಗಂಟೆಯಿಂದಲೆ ಆಸ್ಪತ್ರೆಯ ಮೂಲೆಮೂಲೆಯನ್ನು ಸ್ಚಚ್ಛಗೊಳಿಸಲು ಸಿದ್ದರಾಗುತ್ತಾರೆ. ಇವರ ಕೆಲಸ ಮುಗಿಯುವುದೇ ಸಂಜೆ 6ಕ್ಕೆ.
ಸೌಲಭ್ಯ ವಂಚಿತರು : ಈ ಕಾರ್ಮಿಕರನ್ನು ಕಾಡುತ್ತಿರುವ ಅನಾರೋಗ್ಯ ಸಮಸ್ಯೆ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ಯಾವ ಕ್ರಮವನ್ನು ಕೈಗೊಂಡಿಲ್ಲ. ಬಳಲಿದವರಿಗೆ ವೇತನ ಸಹಿತ ರಜೆ, ಚಿಕಿತ್ಸೆ ವೆಚ್ಚ ಪಾವತಿಸುವ ವ್ಯವಸ್ಥೆಯೂ ಇಲ್ಲ. ಇಲ್ಲಿ ಕೆಲಸ ನಿರ್ವಹಿಸುತ್ತಿರುವವರೆಲ್ಲ ಅಸಂಘಟಿತ ಕಾರ್ಮಿಕರಾಗಿದ್ದಾರೆ. ಇವರಿಗೆ ಆರೋಗ್ಯ ವಿಮೆ, ಭವಿಷ್ಯ ನಿಧಿ ಸಹಿತ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಯೇ ಇಲ್ಲ.
ಇಲ್ಲಿಗೆ ಆಗಾಗ್ಗೆ ಭೇಟಿ ನೀಡಿ, ಅಲ್ಲಿ ಕಾರ್ಮಿಕರಿಗೆ ಒದಗಿಸಿರುವ ಸೌಲಭ್ಯಗಳು, ಅವರ ಸ್ಥಿತಿಗತಿ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತಪಾಸಣೆ ಗೋಜಿಗೆ ಹೋಗಿಲ್ಲ.
ಕಡಿಮೆ ವೇತನ : ಇಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರ್ಕಾರವು ನರೇಗಾ ಯೋಜನೆಯಡಿ ನಿಗದಿಪಡಿಸಿದಷ್ಟೂ ದಿನಗೂಲಿ ಸಿಗುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದ್ದರೂ ಹೇಳೋರು ಕೇಳೋರಿಲ್ಲದಂತಾಗಿದೆ.
ಕಾರ್ಮಿಕರ ಅಳಲು : ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನಮಗೆ ಇಎಸ್ಐ, ಪಿಎಫ್ ಇಲ್ಲ. ನಮಗೂ ಅನೇಕ ರೋಗಗಳಿವೆ, ನಮ್ಮ ಸಮಸ್ಯೆ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಕೆಲವರು ನಮ್ಮನ್ನು ಕಂಡರೆ ಕ್ರೂರ ಪ್ರಾಣಿಗಳನ್ನು ಕಂಡಂತೆ ದೂರ ಹೋಗುತ್ತಾರೆ, ಯಾವಾಗಲೂ ನಮ್ಮ ಮೇಲೆ ದೂರು ಹೇಳುತ್ತಿರುತ್ತಾರೆ ಎಂದು ಮಹಿಳಾ ಕಾರ್ಮಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ನಮಗೂ ವಯಸ್ಸಾಗಿದೆ : ‘ಈಗ ನಾವು ದುಡಿದು ಕಡಿಮೆ ಸಂಬಳದಲ್ಲಿ ಹೇಗೊ ಜೀವನ ನಡೆಸುತ್ತಿದ್ದೇವೆ. ನಮಗೆ ವಯಸ್ಸಾಗಿ ಅಶಕ್ತರಾದ ಮೇಲೆ ಬದುಕು ನಡೆಸುವುದು ಹೇಗೆ ಎಂದು ಪ್ರಶ್ನಿಸುವ ಇವರು ನಮಗೆ ಪ್ರತಿತಿಂಗಳು ಮಾಸಾಶನ ಬರುವಂತೆ ಸರ್ಕಾರ ಮಾಡಬೇಕು’ ಎಂದು ಮನವಿ ಮಾಡುತ್ತಾರೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑