Tel: 7676775624 | Mail: info@yellowandred.in

Language: EN KAN

    Follow us :


ನ್ಯೂಟ್ರಿಷಿಯನ್ ಕ್ಲಬ್ ಗಳು ಹಗಲು ದರೋಡೆ, ತನಿಖೆಗೆ ಇಳಿಯದ ಅಧಿಕಾರಿಗಳು, ಸಾರ್ವಜನಿಕರ ಆರೋಗ್ಯಕ್ಕೆ ಯಾರೂ ಹೊಣೆ ?

Posted date: 08 Jan, 2020

Powered by:     Yellow and Red

ನ್ಯೂಟ್ರಿಷಿಯನ್ ಕ್ಲಬ್ ಗಳು ಹಗಲು ದರೋಡೆ, ತನಿಖೆಗೆ ಇಳಿಯದ ಅಧಿಕಾರಿಗಳು, ಸಾರ್ವಜನಿಕರ ಆರೋಗ್ಯಕ್ಕೆ ಯಾರೂ ಹೊಣೆ ?

ಚನ್ನಪಟ್ಟಣ:   ತನಿಖಾ ವರದಿ

ನಗರದಾದ್ಯಂತ ನ್ಯೂಟ್ರಿಷಿಯನ್  ನಾಯಿಕೊಡೆಗಳಂತೆ ಹರಡಿ ಮುಗ್ಧಜನರ ಆರೋಗ್ಯದ ಜೊತೆಗೆ ಹಣ ಕೀಳುವ ದಂಧೆಯಾಗಿ ಬೆಳೆದುನಿಂತಿವೆ. *ಎರಡು ವರ್ಷಗಳಿಂದೀಚೆಗೆ ಹದಿನೈದಕ್ಕೂ ಹೆಚ್ಚು ನ್ಯೂಟ್ರಿಷಿಯನ್ ಕ್ಲಬ್ ಗಳು* ಒಂದರ ಹಿಂದೆ ಒಂದು ತಲೆಯೆತ್ತಿ ಮೂಲೆ-ಮೂಲೆಗಳಲ್ಲಿ ಹಣ ಕೀಳುತ್ತಿರುವುದು ದುರದೃಷ್ಟಕರ ಸಂಗತಿ. *ಬಿಸಿನೀರಿಗೆ ಕಸಾಯ ಸೇರಿಸಿ ಒಂದು ಲೋಟ ರಾಗಿ ಗಂಜಿ ಯಂತ ಒಂದು ಗಟ್ಟಿ ಪದಾರ್ಥದ ಪೇಯ (ಇದೆ ನ್ಯೂಟ್ರಿಸಿಯನ್) ಹಾಗೂ ಪ್ರತಿನಿತ್ಯ ಒಂದು ತಾಸು ನೀಡುವ ಉಪನ್ಯಾಸಕ್ಕಾಗಿ ೧೦ ದಿನಕ್ಕೆ ೧,೪00 ರೂಪಾಯಿಗಳಿಂದ ಎರಡೂವರೆ ಸಾವಿರ ರೂಪಾಯಿಗಳು ತಿಂಗಳ ಪ್ಯಾಕೇಜ್ ೫,೪೦೦ ರೂಪಾಯಿ* ತನಕ ಹಣ ಕೀಳುತ್ತಿದ್ದರೂ ಸಹ ಸಂಬಂಧಿಸಿದ ಯಾವುದೇ ಇಲಾಖೆಯ ಅಧಿಕಾರಿಗಳು ಇದುವರೆಗೂ ಕ್ರಮವಹಿಸದಿರುವುದು ಅನುಮಾನಕ್ಕೆಡೆ ಮಾಡಿದೆ.


*ನಾವು ಕೊಡುವ ಜ್ಯೂಸ್ ನಿಂದ ಯಾವುದೇ ರೀತಿಯ ಕಾಯಿಲೆಗಳು ವಾಸಿಯಾಗುವುದಿಲ್ಲ, ಎಂದು ಬೋರ್ಡ್ ತಗುಲಿ ಹಾಕಿಕೊಂಡಿರುವ ಇವರು ಉಪನ್ಯಾಸ ನೀಡುವಾಗ ಮಾತ್ರ ನಿಮ್ಮ ದೇಹದಲ್ಲಿರುವ ಪ್ರತಿಯೊಂದು ರೋಗವನ್ನು ಗುಣಪಡಿಸಲಾಗುತ್ತದೆ ಎಂದು ಬೊಗಳೆ ಬಿಡುತ್ತಾರೆ*. ಹಾಗಾದರೆ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿರುವ *ಆಸ್ಪತ್ರೆಯಾಗಲಿ, ಸಂಬಂಧಿಸಿದ ತಜ್ಞ ವೈದ್ಯರ ಅವಶ್ಯಕತೆಯೇ ಇಲ್ಲಾ ಅಲ್ಲವೇ !.*


ಶ್ವಾಸಕೋಶದ ತೊಂದರೆ, ಹೃದಯದ ತೊಂದರೆ, ಮೆದುಳಿನ ತೊಂದರೆ, ಶ್ವಾಸಕೋಶದಲ್ಲಿ ಕಲ್ಲು, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಇನ್ನಿತರ ಮನುಷ್ಯನ ಎಲ್ಲಾ ರೋಗರುಜಿನಗಳಿಗೆ ನಮ್ಮಲ್ಲಿ ಔಷಧಿ ದೊರೆಯುತ್ತದೆಂದು ನೇರವಾಗಿ ಹೇಳುತ್ತಾರೆ.

ಕೇವಲ ಈ ಜ್ಯೂಸ್ ಕುಡಿದರೆ ಸಾಕು ನಿಮ್ಮ ಆರೋಗ್ಯ ಒಂದು ಹಂತಕ್ಕೆ ಬರುತ್ತದೆ. ಬಹಳ ಮುಖ್ಯವಾಗಿ ತೂಕ ಕಡಿಮೆ ಇರುವವರು ಅತಿ ಹೆಚ್ಚು ತೂಕ ಹೊಂದುತ್ತಾರೆ. ಹಾಗೂ *ಅತಿ ಹೆಚ್ಚು ತೂಕವಿರುವವರು ಒಂದು ತಿಂಗಳೊಳಗಾಗಿ ಕಡಿಮೆ-ತೂಕ ಗೊಳ್ಳುತ್ತಾರೆ ಎಂದು ಹಸಿ ಸುಳ್ಳುಗಳನ್ನು ಹೇಳಿ ಹಣ ಗಳಿಸುತ್ತಿದ್ದಾರೆ. ಮೊಬೈಲ್ ಆಪ್ ನ ಮೂಲಕ ತನ್ನ ದೇಹದ ತೂಕವನ್ನು ದಪ್ಪಗಾಗುವಂತೆ ಮಾಡಿಸಿಕೊಂಡು ಬಂದ ಗ್ರಾಹಕರು ಅಥವಾ ರೋಗಿಗಳಿಗೆ ನಾನು ೧೩0 ಕೆಜಿ ಇದ್ದೆ, ೧೦0 ಕೆಜಿ ಇದೆ ೧00 ಕೆಜಿ ಇದ್ದೆ, ಈಗ ೮0 ಕಿಜಿ ಇದ್ದೇನೆ ಎಂದು ಫೋಟೋ ತೋರಿಸಿ ಸುಳ್ಳು ಸುಳ್ಳುಗಳನ್ನು ಹೇಳುತ್ತಾರೆ. ಇದನ್ನು ನಂಬಿದ  ನರಪೇತಲ ನಾರಾಯಣರು ಹಾಗೂ ದಢೂತಿ ಮನುಷ್ಯರು ಇದರ ಲಾಭ ಪಡೆದುಕೊಳ್ಳಲು ಮುಗಿಬಿದ್ದಿದ್ದಾರೆ.*


ಮೊದಲಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳುವವರು ೧0 ದಿನ ಕಳೆದ ನಂತರ ಅವರಿಗೆ ಅರಿವು ಮೂಡಿಸುತ್ತಾರೆ. *ಇದು ಔಷಧಿಯಲ್ಲ ಇದರಿಂದ ಯಾವುದೇ ಖಾಯಿಲೆ ವಾಸಿಯಾಗುವುದಿಲ್ಲ ನೀವು ಇನ್ನು ಮುಂದೆ ಎಷ್ಟು ಜನರನ್ನು ನಮ್ಮ ಕ್ಲಬ್ ಗೆ  ಸೇರಿಸುತ್ತಿರೋ ಅವರು ಕೊಡುವ ಹಣದಲ್ಲಿ ಕಮಿಷನ್ ಮುಖಾಂತರ ನಿಮ್ಮ ಖಾತೆಗೆ ಹಣ ಬರುತ್ತದೆ. ಎರಡರಿಂದ ಮೂರು ತಿಂಗಳು ನೀವು ಇಲ್ಲಿ ಕಾಯಂ ಗಿರಾಕಿಗಳಾದರೆ ತದನಂತರ ನಾವೇ ನಿಮಗೆ ಇದರ ಬಗ್ಗೆ ಮಾಹಿತಿ (ಟ್ರೈನಿಂಗ್) ಕೊಟ್ಟು ನೀವು ಸಹ ಒಂದು ಕ್ಲಬ್ ಅನ್ನು ತೆರೆದು ಹಣ ಗಳಿಸಬಹುದು ಎಂದು ಮನದಟ್ಟು ಮಾಡುತ್ತಾರೆ.* ಇದರ ಆಸೆಗೆ ಬಿದ್ದ ಅನೇಕ ಮಂದಿ  ಹಣದಾಸೆಗೆ ಬಿದ್ದು ಎಲ್ಲೆಲ್ಲಿಯೋ ದಪ್ಪ ಮತ್ತು ಸಣ್ಣಗಿರುವವರನ್ನು ಕಾಡಿಬೇಡಿ ಬೇರೆ ರೀತಿಯ ಸಬೂಬುಗಳನ್ನು ಹೇಳಿ ತಂದು ಹಿಡಿದಿಟ್ಟುಕೊಂಡು ಅವರಿಂದ ಹಣ ಕೀಳುವುದರಲ್ಲಿ ನಿಸ್ಸೀಮರಾಗಿದ್ದಾರೆ.

ಈ ನ್ಯೂಟ್ರಿಷಿಯನ್ ಕ್ಲಬ್ ನಡೆಸುತ್ತಿರುವ ವ್ಯಕ್ತಿಗಳಿಗೆ ಒಬ್ಬರಿಂದೊಬ್ಬರು ಉರು ಹೊಡೆದ ಸಂಗತಿಗಳಷ್ಟೇ ಗೊತ್ತಿದ್ದು, ಖಾಯಿಲೆ ಇರುವವರ ದುರ್ಬಲ ಮನಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಮಾತಿನ ಮನೆಯನ್ನು ಕಟ್ಟಿ ದಂಧೆಗಿಳಿದಿರಿವುದು ಸತ್ಯ. ಈ ವ್ಯಕ್ತಿಗಳಿಗೆ, ಸಕ್ಕರೆ ಖಾಯಿಲೆ, ಹೈಬಿಪಿ, ಲೋಬಿಪಿ, ಕಿಡ್ನಿಯಲ್ಲಿ ಕಲ್ಲು, ಹೃದಯಘಾತ, ರಕ್ತನಾಳ ಸೇರಿದಂತೆ ಯಾವುದರ ಬಗ್ಗೆಯೂ ಕೊಂಚವೂ ವೈಜ್ಞಾನಿಕ ಮಾಹಿತಿ ಇಲ್ಲ. ಇವರು ಹೇಗೆ ಮನುಷ್ಯನ ಎಲ್ಲಾ ಖಾಯಿಲೆಗಳನ್ನೂ ವಾಸಿ ಮಾಡುತ್ತಾರೆ ? ಸಂಬಂಧಿಸಿದ ಅಧಿಕಾರಿಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಾದೀತು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಪರವಾನಗಿ ಪಡೆದ ಮಾತ್ರಕ್ಕೆ ಇವರು ತಜ್ಞರೇ ? ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ, ಎಷ್ಟೆಂದರೆ ಅಷ್ಟು ಪ್ರೋಟೀನ್ ಗಳನ್ನು ದೇಹಕ್ಕೆ ಕೊಡುವುದು ಯಾವ ರೀತಿ ಸೂಕ್ತ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕಾಗಿದೆ.*

ನಾನು ಸತತವಾಗಿ ಬೆಳಿಗ್ಗೆ ೪ ದಿನಗಳು ಸತತವಾಗಿ ೬ ಕ್ಲಬ್ ಗಳಿಗೆ ಭೇಟಿ  ಕೊಟ್ಟು ದಾಖಲೆಗಳನ್ನು ಕಲೆಹಾಕಿದಾಗಲೇ ಇದರ ಕರಾಳ ಮುಖ ಅರಿವಾದದ್ದು. ಕೆಲ ನ್ಯೂಟ್ರಿಷಿಯನ್ ನ ಮಾಲೀಕರು ಮತ್ತು ಗ್ರಾಹಕರನ್ನು ಭೇಟಿ ಮಾಡಿದಾಗ ಪ್ರತಿಯೊಬ್ಬರೂ ಸಹ ನನ್ನನ್ನು ಹೊರಗಡೆಯೇ ನಿಲ್ಲಿಸುವುದರ ಜೊತೆಗೆ ನೀವು ಬೇರೆ ಯಾರದಾದರೂ ಐಡಿ ಮೂಲಕ ಬರಬೇಕು ! ಬಂದ ತಕ್ಷಣ ನೀವು ೨೧0 ರೂಪಾಯಿಗಳನ್ನು ಕೊಟ್ಟು ಒಳಬರಬೇಕು, ಮೊದಲ ದಿನ ನಿಮಗೆ ಸಂಪೂರ್ಣ ಉಚಿತ ವಿರುತ್ತದೆ ೧0 ದಿನಗಳಿಗೆ ನೀವು ₹೧000 ಕೊಟ್ಟು  ಔಷಧ ಪಡೆದುಕೊಳ್ಳಬೇಕೆಂದು ತಾಕೀತು ಮಾಡಿದರು. ನಂತರ ನಾನು ಮೊದಲಿಗೆ ನೋಡುತ್ತೇನೆ ನಂತರ ಬರುತ್ತೇನೆ ಎಂದು ಸಬೂಬು ಹೇಳಿ ಅವರ ಜೊತೆ ಸಂಭಾಷಣೆ ನಡೆಸಿ ಅವರಿಗೆ ಗೊತ್ತಾಗದಂತೆ ಫೋಟೋ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಅವರ ಸಂಪೂರ್ಣ ಮಾಹಿತಿಯನ್ನು ಪಡೆದು ನಕಲಿ ಎಂದು ಸಾಬೀತುಪಡಿಸಲು ಈ ಕೆಳಗಿನ ಅಧಿಕಾರಿಗಳ ಹಾಗೂ ಯೋಜನೆಯಿಂದ ಹೊರಬಂದ ರೋಗಿಗಳ ಜೊತೆ ಸಮಾಲೋಚನೆ  ನಡೆಸಿದಾಗಲೇ ಸಂಪೂರ್ಣವಾಗಿ ಇದು ಹಣ ಮಾಡುವ ದಂಧೆಯೇ ಹೊರತು ಖಾಯಿಲೆಗಳಿಗೆ ಮದ್ದಲ್ಲ ಎಂಬುದು ಸಾಬೀತಾಯಿತು.


*ಈ ಹಿಂದೆ ಮಂಗಳೂರು ಮತ್ತು ಕೆ ಆರ್ ನಗರಗಳಲ್ಲಿ ಕೆಲ ಖಾಯಿಲೆಗಳಿಗೆ ಜನರು ಮುಗಿಬಿದ್ದು ಔಷಧ ಪಡೆಯುತ್ತಿದ್ದರು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗಲೇ ಗೊತ್ತಾಗಿದ್ದು ಅವರು ಕೊಡುವ ಪಾನೀಯಗಳು ಹಾಗೂ ಪುಡಿಯ ಜೊತೆಗೆ ಆ ಖಾಯಿಲೆಗಳಿಗೆ ಸಂಬಂಧಿಸಿದ ಇಂಗ್ಲಿಷ್ ಔಷಧಗಳನ್ನು ಹೆಚ್ಚಾಗಿ ಬೆರೆಸಿ ಕೊಡುತ್ತಿದ್ದರೆಂಬ ಮಾಹಿತಿಯನ್ನು ಹೊರ ಹಾಕಿದರು. ಇಲ್ಲೂ ಸಹ ಆಯಾಯ ಖಾಯಿಲೆಗಳಿಗೆ ಅಂದರೆ, ಸಕ್ಕರೆ ಖಾಯಿಲೆ, ಬಿಪಿ ಮುಂತಾದವುಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸಿ ಕೊಡುತ್ತಿರಬಹುದು ಎಂಬ ಗುಮಾನಿ ಇದೆ, ಇದು ರೋಗಿಗಳಿಗೆ ತಕ್ಷಣ ಗುಣ ಆದಂತೆ ಕಂಡುಬಂದರೂ ಸಹ ನಂತರ ಸುಧಾರಿಸಿಕೊಳ್ಳಲಾಗದು ಎಂದು ಹೆಸರೇಳಲಿಚ್ಚಿಸಿದ ಅಧಿಕಾರಿಗಳೊಬ್ಬರು ಆತಂಕ ವ್ಯಕ್ತಪಡಿಸಿದರು.*


*ಇದು ಸಂಪೂರ್ಣವಾಗಿ ನಮ್ಮ ಗಮನಕ್ಕೆ ಬಂದಿಲ್ಲ, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವವರನ್ನು ಕ್ಷಮಿಸಲಾಗದು, ಶೀಘ್ರವಾಗಿ ವರದಿ ತರಿಸಿಕೊಂಡು ಕ್ರಮಕೈಗೊಳ್ಳಲಾಗುವುದು.*

*ಡಾ ನಿರಂಜನ್, ಜಿಲ್ಲಾ ವೈದ್ಯಾಧಿಕಾರಿ.*


*ನಮಗೆ ಇದುವರೆಗೂ ಸಾರ್ವಜನಿಕರಿಂದ ದೂರು ಬಂದಿಲ್ಲ, ಲಿಖಿತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.*

*ಡಾ ರಾಜು. ತಾಲ್ಲೂಕು ವೈದ್ಯಾಧಿಕಾರಿ.*


*ಯಾವುದೇ ಡ್ರಗ್ಸ್ ಅಂದರೆ ಪ್ರೊಟೀನ್ಯುಕ್ತ ಪೌಡರ್ ಗಳನ್ನು ಎನರ್ಜಿ ಡ್ರಿಂಕ್ಸ್ ಗಳನ್ನು ಸಹ ಪರವಾನಗಿ ಪಡೆದ ಮೆಡಿಕಲ್ ಗಳಲ್ಲಿ ಮಾತ್ರ ಇರಬೇಕು ಎಂಬ ಕಾನೂನು ಇನ್ನು ಮುಂದೆ ಬರಲಿದೆ, ಸದ್ಯಕ್ಕೆ ಇದು ಆಹಾರ ಮತ್ತು ಸುರಕ್ಷತಾ ಇಲಾಖೆಗೆ ಬರುತ್ತದೆ.*

*ಸುರೇಶ್, ಡ್ರಗ್ ಕಂಟ್ರೋಲರ್.*


*ಚನ್ನಪಟ್ಟಣ ದಿಂದ ಎರಡು ನ್ಯೂಟ್ರಿಸಿಯಲ್ ಕ್ಲಬ್ ಗಳ ಅನುಮತಿಗಾಗಿ ಅರ್ಜಿಗಳು ಬಂದಿದ್ದು ಇನ್ನೂ ನೀಡಿಲ್ಲ, ಪರೀಕ್ಷಿಸಿದ ನಂತರ ನೀಡಲಾಗುವುದು.*

*ಅನುಸೂಯ, ಆಹಾರ ಸುರಕ್ಷತಾ ಜಿಲ್ಲಾ ಅಧಿಕಾರಿ.*


*ಇದುವರೆಗೂ ವೈಯುಕ್ತಿಕವಾಗಿ ೧೨೭ ಮಂದಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವುದು ಬಿಟ್ಟರೆ ಮಾಲೀಕರು ಅನುಮತಿ ಪಡೆದಿಲ್ಲ.*

*ಕೆಂಪರಾಜು. ತಾಲ್ಲೂಕು ಆರೋಗ್ಯಾಧಿಕಾರಿ.*


*ಟ್ರೇಡಿಂಗ್ ಲೈಸೆನ್ಸ್ ಗೆ ಮೂರು ಅರ್ಜಿಗಳು ಬಂದಿದ್ದು ಒಂದು ಉದ್ದಿಮೆಗೆ ಮಾತ್ರ ಅನುಮತಿ ನೀಡಲಾಗಿದೆ, ಒಂದು ತಿರಸ್ಕೃತಗೊಂಡಿದ್ದು ಮತ್ತೊಂದು ಅರ್ಜಿಯನ್ನು ಕಾಯ್ದಿರಿಸಲಾಗಿದೆ.*

*ವರಲಕ್ಷ್ಮಿ, ಆರೋಗ್ಯಾಧಿಕಾರಿ ನಗರಸಭೆ.*


*ಇದೊಂದು ದಂಧೆಯಾಗಿದ್ದು ಭವಿಷ್ಯದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವ ಹೆಚ್ಚಿರುತ್ತದೆ. ದೂರು ಬರುವ ತನಕ ಕಾಯದೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡು ದಂಧೆಗೆ ಕಡಿವಾಣ ಹಾಕಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾಗಿದೆ.*

*ಹರೂರು ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷರು.*


*ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.*

*ಸುದರ್ಶನ್, ತಹಶಿಲ್ದಾರ್.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑