Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಆರನೇ ಜಿಲ್ಲಾ ಸಮ್ಮೇಳನ ಸಾಹಿತ್ಯಾಸಕ್ತರ ಕೊರತೆಯ ನಡುವೆಯೂ ಯಶಸ್ವಿ

Posted date: 23 Jan, 2020

Powered by:     Yellow and Red

ರಾಮನಗರ ಆರನೇ ಜಿಲ್ಲಾ ಸಮ್ಮೇಳನ ಸಾಹಿತ್ಯಾಸಕ್ತರ ಕೊರತೆಯ ನಡುವೆಯೂ ಯಶಸ್ವಿ

ರಾಮನಗರ: ಅಲಂಕಾರಿಕ ವಾಹನ ಇದ್ದರೂ ನಡಿಗೆಯಲ್ಲಿ ಬಂದ ಸಮ್ಮೇಳನಾಧ್ಯಕ್ಷ ಪ್ರೊ ಶಿವನಂಜಯ್ಯ ನವರು, ಕಲಾತಂಡಗಳ ಜೊತೆಗೆ ಬೆರಳೆಣಿಕೆಯ ಸಾಹಿತ್ಯಾಸಕ್ತರು, ನೂರಾರು ವಿದ್ಯಾರ್ಥಿಗಳು ಒಟ್ಟಿಗೆ ಮೆರವಣಿಗೆಯಲ್ಲಿ ಭಾಗಿ, ವಿದ್ಯಾರ್ಥಿಗಳಿಂದ ತುಂಬಿ ತುಳುಕಿದ ಸಭಾಂಗಣ, ಸಮ್ಮೇಳನಾಧ್ಯಕ್ಷರ ಭಾಷಣ ಶುರುವಾದ ನಂತರ ಬಣಗುಡುತ್ತಿದ್ದ ಸಭಾಂಗಣ, ಕಾರಣ ವಿದ್ಯಾರ್ಥಿಗಳ ಭೋಜನಕ್ಕೆ ನಿರ್ಗಮನ, ಖಾಲಿ ಕುರ್ಚಿಗಳಿಗೆ ಸಮ್ಮೇಳನಾಧ್ಯಕ್ಷರ ಭಾಷಣ, ಸಮ್ಮೇಳನಾಧ್ಯಕ್ಷರ ಭಾಷಣದ ಮುಗಿಯುವ ಮೊದಲೇ ಎದ್ದು ಹೋದ ಉದ್ಘಾಟಕ ಸಿಎಂ ಲಿಂಗಪ್ಪ ಮತ್ತು ಮಾಗಡಿ ಶಾಸಕ ಎ ಮಂಜು. ಪಾಯಸ ಬೂಂದಿ ಸಿಹಿಯೊಟ್ಟಿಗೆ ಚಿತುಕಿದ ಅವರೆಕಾಳಿನ ಸಾಂಬಾರಿನ ಬಿಸಿ ಮುದ್ದೆ ಸಾರು. ಓದುಗರಿಗೆ ಹಿತವಾದ ಪುಸ್ತಕಗಳ ಮಳಿಗೆಗಳು ಇದು ಇಂದಿನ ಆರನೇ ಜಿಲ್ಲಾ ಕನ್ನಡದ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯಾಂಶಗಳು*


ನಗರದ ಮಾಗಡಿ ರಸ್ತೆಯ ಆರ್ ವಿ ಸಿ ಎಸ್ ಸಮುದಾಯ ಭವನದಲ್ಲಿ ರಾಮನಗರ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಬೆಳಿಗ್ಗೆ ೦೮:೦೦ ಗಂಟೆಗೆ ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಅರ್ಚನಾ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.


ಹೆದ್ದಾರಿಯ ಕನಕಪುರ ವೃತ್ತದಿಂದ ಮೆರವಣಿಗೆ ಹೊರಟ ಸಮ್ಮೇಳನಾಧ್ಯಕ್ಷರು ಹಲವಾರು ಕಲಾತಂಡಗಳೊಟ್ಟಿಗೆ ಬೆರಳೆಣಿಕೆಯ ಸಾಹಿತ್ಯಾಸಕ್ತರ ಜೊತೆಗೆ ನೂರಾರು ವಿದ್ಯಾರ್ಥಿಗಳ ಜೊತೆ ಒಡಗೂಡಿ ಅಲಂಕೃತ ವಾಹನವಿದ್ದರೂ ಕಾಲ ನಡಿಗೆಯಲ್ಲೇ ಬಂದು ತಮ್ಮ ಸರಳತೆಯನ್ನು ಮೆರೆದರು. ಸಭೆಗೆ ಆಗಮಿಸಿದ ಗಣ್ಯರನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜುರವರು ಸ್ವಾಗತಿಸಿದರು.


ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪುಟ್ಟ ಸೋಮಾರಾಧ್ಯರು ಇಂದಿನ ಸಮ್ಮೇಳನಾಧ್ಯಕ್ಷ ಪ್ರೊಫೆಸರ್ ಶಿವನಂಜಯ್ಯ ನವರಿಗೆ ಸಮ್ಮೇಳನದ ಧ್ವಜ ಹಸ್ತಾಂತರಿಸಿದರು. *ನಿರೂಪಕರಾದ ಶಿಕ್ಷಕ ಶಿವಸ್ವಾಮಿಯವರು ನಾಡಗೀತೆಗೆ ಎದ್ದು ನಿಲ್ಲಿ ಎಂದು ಸಭಿಕರಿಗೆ ಸೂಚಿಸಿದರು. ರೈತಗೀತೆ ಹಾಡುವಾಗ ಆಸೀನರಾಗಿ ಎಂದು ಹೇಳಿದರು. ಇದರಿಂದ ಕೆರಳಿದ ರೈತ ನಾಯಕರು, ರೈತಗೀತೆಯ ನಂತರ ವೇದಿಕೆಗೆ ರೈತ ಮುಖಂಡರಾದ ಎನ್ ರಾಮು ಹಾಗೂ ಸಂಗಡಿಗರ ಜೊತೆಗೆ ವೇದಿಕೆಕೆಗೆ ನುಗ್ಗಿ ರೈತಗೀತೆ ಮತ್ತು ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಕೂಗು ಹಾಕಿದರು.* ಸ್ಥಳದಲ್ಲಿದ್ದ ಮುಖಂಡರು ಸಮಾಧಾನಿಸಿ ಅವರನ್ನು ಸಭಿಕರ ಸ್ಥಳಕ್ಕೆ ಕಳುಹಿಸಿದರು.


ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಲಿಂಗಪ್ಪನವರು ಎಲ್ಲವೂ ಕನ್ನಡಮಯ ಎಂಬುದನ್ನು ಒಪ್ಪಿಕೊಳ್ಳೋಣ, ಆದರೆ ವಿದ್ಯಾರ್ಥಿ ಯಾವ ಭಾಷೆಯನ್ನು ಬೇಕಾದರೂ ಆಯ್ಕೆಮಾಡಿಕೊಳ್ಳುವ ಹಕ್ಕು ಮೂಲಭೂತ ಹಕ್ಕುಗಳೇ ಆಗಿರುವುದರಿಂದ ಆತ ಸರ್ವಸ್ವತಂತ್ರ. ಆಂಗ್ಲಭಾಷೆ ಇಂದಿನ ಅಗತ್ಯ‌ ಆದರೆ ಮಾತೃ ಭಾಷೆಗೆ ಮಹತ್ವ ನೀಡಬೇಕಾಗಿದೆ ಎಂದರು.

*ಕನ್ನಡದ ಅಮ್ಮ ಎಂಬ ಪದಕ್ಕೆ ಆಂಗ್ಲ ಭಾಷೆಯ ಸಾವಿರ ಮಮ್ಮಿಗೆ ಸಮನಾಗಿದ್ದು* ನೀವು ಯಾವುದೇ ಭಾಷೆ ಕಲಿಯಿರಿ ಮನೆಯಲ್ಲಿ ಕನ್ನಡವನ್ನೇ ಮಾತನಾಡಿ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಅ ದೇವೇಗೌಡರು ಮಾತನಾಡಿ ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕಾದರೆ ನಮ್ಮೆಲ್ಲಾ ಸಾಹಿತಿಗಳ ಜೊತೆಗೆ ಕನ್ನಡ ಸಂಘಟನೆಗಳ ಹೋರಾಟ ಬಹಳ ಮುಖ್ಯ ಪಾತ್ರವಹಿಸಿದೆ. ಹಾಗಾಗಿ ಬೆಂಗಳೂರಿನಲ್ಲಿ ಇನ್ನು ಕನ್ನಡ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಪ್ರತಿಪಾದಿದಿದರು. *ಹೊರಗಿನಿಂದ ಬಂದವರೊಂದಿಗೆ ಸಂಪರ್ಕ ಸಾಧಿಸಲು ತಮ್ಮ ಭಾಷೆಯನ್ನು ಅವರಿಗೆ ಕಲಿಸದೆ ಅವರ ಭಾಷೆಯಲ್ಲಿಯೇ ನಾವು ಉತ್ತರಿಸುತ್ತಿದ್ದು ಇಂತಹ ಕನ್ನಡಿಗರಿಂದಲೇ ಕನ್ನಡ ಮೂಲೆಗುಂಪಾಗುತ್ತಿದೆ* ಎಂದು ಅಭಿಪ್ರಾಯಪಟ್ಟರು. ಎಲ್ಲಾ ತಂದೆ ತಾಯಿಯರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರಲ್ಲದೆ ಪರಭಾಷಿಗರನ್ನು ಕನ್ನಡ ಕಲಿಯಲು ಮನವಿ ಮಾಡಿದರು.


ಮಾಗಡಿ ಶಾಸಕ ಮಂಜುನಾಥ್ ಮಾತನಾಡಿ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳು ಮುಂದಿನ ದಿನಗಳಲ್ಲಿ ನೆರವೇರಲಿ ಎಂದು ಆಶಿಸಿದರು. *ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹುಟ್ಟುಹಾಕಿದ ಈ ಸಂಸ್ಥೆಯ ಮೂಲಕ ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳು ಹೆಚ್ಚಾಗಿ ಮೂಡಿಬರಲಿ. ಜಿ ಪಿ ರಾಜರತ್ನಂ, ಪೂಜ್ಯ ಕರಿಯಪ್ಪ, ವೆಂಕಟಗಿರಿಗೌಡ ಅವರಂಥವರನ್ನು ನೆನಪಿಸಿಕೊಳ್ಳಬೇಕು.* ಎಂದು ಜಿಲ್ಲೆಯ ಮಹನೀಯರನ್ನು ಕೊಂಡಾಡಿದರು.


ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊಫೆಸರ್ ಶಿವನಂಜಯ್ಯ ನವರು ಮಾತನಾಡಿ *ರಾಮನಗರ ಜಿಲ್ಲೆ ಸಪ್ತ ಬೆಟ್ಟಗಳ ಜಿಲ್ಲೆ, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು  ಬೆಟ್ಟಗಳೇ ಆವರಿಸಿಕೊಂಡಿವೆ,* ಹೊಳೆ ಹೊಳೆದಂಡೆ ಕೆರೆ ನದಿಗಳು ಇಂದು ಮಾಯವಾಗಿವೆ. ಇರುವ ಕೆರೆ ಮತ್ತು ನದಿಗಳು  ಕೊಳಚೆಯಾಗಿವೆ. *ಬೆಂಗಳೂರಿನ ನಿವಾಸಿಗಳು ನಮ್ಮಿಂದ ಉತ್ತಮವಾದ ಎಲ್ಲವನ್ನೂ ಪಡೆದು ನಮಗೆ ಮತ್ತು ನಮ್ಮ ಭೂಮಿಗೆ ವಿಷವನ್ನು ನೀಡುತ್ತಿದ್ದಾರೆ.* ಇದಕ್ಕೆ ಎಲ್ಲರೂ ಸೇರಿ ಕಡಿವಾಣ ಹಾಕಬೇಕು ಎಂದರು.


ಗೌಜಲಹಕ್ಕಿ, ಗುಬ್ಬಚ್ಚಿ ಅಂತಹ ಹಕ್ಕಿಗಳು ಮತ್ತು ಮೊಲದಂತಹ ಸಣ್ಣ ಪ್ರಾಣಿಗಳು ಮಾಯವಾಗಲು ಆಧುನಿಕತೆಯೇ ಕಾರಣ ಎಂದರು. ಸಾಹಿತ್ಯ-ಸಾಂಸ್ಕೃತಿಕ ದ ಜೊತೆಗೆ ಮಾಧ್ಯಮವೂ ಸಹ ನಮ್ಮ ಜಿಲ್ಲೆಯ ಹೆಮ್ಮೆ ಎಂದು ಪ್ರತಿಪಾದಿಸಿದರು. *ಜಿಲ್ಲೆಯ ಬಹುತೇಕ ರಾಜಕಾರಣಿಗಳನ್ನು ಹೊಗಳುವ ಮೂಲಕ ಸಭಿಕರ ನಗೆಪಾಟಲಿಗೆ ಗುರಿಯಾದರು.* ಭಾರತದ ಬಡತನ ಹೋಗಲಾಡಿಸಬೇಕಾದರೆ ಹಾಗೂ ಉತ್ತಮ ಭವಿಷ್ಯದ ದೇಶ ಕಟ್ಟಬೇಕಾದರೇ ಮತದಾರರು ಜಾಗೃತಗೊಳ್ಳಬೇಕು, ಯುವಜನರು ವಿವೇಕಾನಂದ ಮತ್ತು ಕುವೆಂಪುರವರನ್ನು ಓದಬೇಕು. ರೈತನ ಫಸಲು ದಲ್ಲಾಳಿಗಳ ಪಾಲಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇದಿನೆ ಹೆಚ್ಚಾಗಿದೆ. ಅನ್ನದ ಭಾಷೆಯಾಗಿ ಆಂಗ್ಲಭಾಷೆ ಬೇಕಾಗಿದೆಯಾದರೂ ಕನ್ನಡ ನಮ್ಮ ಧ್ವನಿ ಆಗಬೇಕಾಗಿದೆ ಎಂದರು.


ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಗಾಣಕಲ್ ನಟರಾಜ್, ಕಾಂತರಾಜ್ ಪಟೇಲ್, ನಾಲ್ಕು ತಾಲೂಕಿನ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು.

ನಾಡಗೀತೆ ಮತ್ತು ರೈತಗೀತೆಯನ್ನು ಶಾರದಾ ನಾಗೇಶ್, ಬಿ ವಿಜಯಕುಮಾರ್, ಶೈಲಾ ಶ್ರೀನಿವಾಸ, ಚೌಪು ಸ್ವಾಮಿ, ರಮಣಿ ಮುಂತಾದವರು ಹಾಡಿದರೇ ನಿರೂಪಣೆಯನ್ನು ಶಿಕ್ಷಕ ಶಿವಸ್ವಾಮಿ ನಡೆಸಿಕೊಟ್ಟರು.


ಮಧ್ಯಾಹ್ನದ ಗೋಷ್ಠಿಯಲ್ಲಿ ರೈತ ಗೋಷ್ಠಿ ಸೇರಿದಂತೆ ಗೋಷ್ಠಿಗಳು ನಡೆದು ನಿರ್ಣಯ ಕೈಗೊಳ್ಳಲಾಯಿತು. ಕೊನೆಯಲ್ಲಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಭಾಗವಹಿಸಿದ್ದು ವಿಶೇಷವೆನಿಸಿತು. ಶಾಸಕಿ ಅನಿತಾ ಕುಮಾರಸ್ವಾಮಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑