Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ

Posted date: 22 Mar, 2020

Powered by:     Yellow and Red

ರಾಮನಗರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ: ಡಾ. ಅಶ್ವತ್ಥನಾರಾಯಣ

ಬೆಂಗಳೂರು:ಮಾ/೨೧/೨೦/ಶನಿವಾರ.ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳು,  ಸೋಂಕಿತರ ಪತ್ತೆ, ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಪೂರಕ ವ್ಯವಸ್ಥೆ ಕಲ್ಪಿಸುವ ಸಂಬಂಧ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. 


ರಾಮನಗರ ಜಿಲ್ಲಾಧಿಕಾರಿ ಡಾ. ಎಂ.ಎಸ್. ಅರ್ಚನಾ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಹಾಗೂ ಇತರ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು. 


ಮೇಕ್‌ಶಿಫ್ಟ್‌ ಆಸ್ಪತ್ರೆ


"ರಾಮನಗರ- ಬೆಂಗಳೂರು ನಡುವೆ ಓಡಾಡುವರ ಸಂಖ್ಯೆ ಹೆಚ್ಚು. ಅಲ್ಲದೆ, ಇದು ಪ್ರವಾಸಿ ಸ್ಥಳ. ಹಾಗಾಗಿ, ಜಿಲ್ಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಇಲ್ಲಿ ೫೦ ಹಾಸಿಗೆಯ ಆಸ್ಪತ್ರೆ ಇದ್ದು, ೨೫೦ ಹಾಸಿಗೆಯ ಆಸ್ಪತ್ರೆ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಟ್ಟಡವನ್ನು ಉಪಯೋಗಿಸಲು ಅನುಕೂಲವಾಗುವಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದನ್ನು ಐಸೋಲೇಷನ್‌ ಆಸ್ಪತ್ರೆಯನ್ನಾಗಿ ಬಳಸಲು ವೆಂಟಿಲೇಟರ್‌, ಆಕ್ಸಿಜನ್‌ ವ್ಯವಸ್ಥೆ ಮಾಡಲಾಗುತ್ತದೆ. ಇದಲ್ಲದೇ, ತಾತ್ಕಲಿಕವಾಗಿ ಹಾಸ್ಟೆಲ್‌ಗಳನ್ನು ಕ್ವಾರಂಟೈನ್‌ ಹಾಗೂ ಐಸೋಲೇಷನ್‌ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಚಿಸಿದ್ದೇನೆ. ಈ ಹಾಸ್ಟೆಲ್‌ಗಳನ್ನು ಮೇಕ್‌ಶಿಫ್ಟ್‌ ಆಸ್ಪತ್ರೆಗಳನ್ನಾಗಿಸಲು ಎಲ್ಲ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ, ಎಂದು ಅವರು ವಿವರಿಸಿದರು.


"ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ಮುಂದಾಗಿರುವ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜ್‌ ಜಿಲ್ಲೆಗೆ ಅಗತ್ಯ ವೆಂಟಿಲೇಟರ್ ವ್ಯವಸ್ಥೆ ಒದಗಿಸಲು ಒಪ್ಪಿದೆ. ಪರಿಸ್ಥಿತಿ ಗಂಭೀರವಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸುವ ಜತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ, ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಉಪಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.


"ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೨೯ ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ ಕೆಲವರು ಅವಧಿ ಮುಗಿಸಿ ಯಾವುದೇ ಸಮಸ್ಯೆ ಇಲ್ಲದೆ ಹೊರಬಂದಿದ್ದಾರೆ. ಜಿಲ್ಲೆಯಲ್ಲಿ (ಗೌರಿಬಿದನೂರು) ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ನಮ್ಮ ಆಶಾ ಕಾರ್ಯಕರ್ತೆಯರೇ ಇದನ್ನು ಪತ್ತೆಹಚ್ಚಿದ್ದಾರೆ, ಎಂದು ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

"ಕೊರೊನಾ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕೊರೊನಾ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ. ಜನ ಒಟ್ಟು ಸೇರದಂತೆ ತಡೆಯುವ ಮೂಲಕ ಆರೋಗ್ಯ ಕಾಪಾಡುಕೊಳ್ಳಲಾಗುತ್ತಿದೆ,"ಎಂದು ಹೇಳಿದರು.


"ಕೊರೊನಾ ತಡೆ ಕ್ರಮಗಳ ಜತೆಗೆ ಸೋಂಕು ಪತ್ತೆಯಾದಂಥಹ ಸಂದರ್ಭದಲ್ಲಿ ಅದನ್ನು ಎದುರಿಸಲು ಯಾವ ರೀತಿ ತಯಾರಿ ಆಗಿದೆ ಎಂಬುದನ್ನು ಪರಿಶೀಲಿಸಲಾಗಿದೆ.  ಚಿಕ್ಕಬಳ್ಳಾಪುರದಲ್ಲಿ ೧೦೦ ಹಾಸಿಗೆಯ ಐಸೊಲೇಷನ್‌ ಆಸ್ಪತ್ರೆ ನಿರ್ಮಿಸಲು ಜಿಲ್ಲಾಡಳಿತ ತಯಾರಾಗಿದ್ದು, ೨೫ ವೆಂಟಿಲೇಟರ್ಸ್‌ ಹಾಗೂ ಆಕ್ಸಿಜನ್‌ ಸೌಲಭ್ಯ ಇರುವ ೫೦ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ, ಎಂದು ಸಚಿವರು ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑