Tel: 7676775624 | Mail: info@yellowandred.in

Language: EN KAN

    Follow us :


ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ

Posted date: 02 Apr, 2020

Powered by:     Yellow and Red

ಇಂದಿನಿಂದ ವಹಿವಾಟು ಪುನಾರಾರಂಭಿಸಿದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆ

ರಾಮನಗರ:ಏ/೦೨/೨೦/ಗುರುವಾರ. ಕೊರೊನಾ ವೈರಸ್ ನಿಂದ ಇಡೀ ಕರ್ನಾಟಕವೇ ಲಾಕ್ ಡೌನ್ ಆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸದುದ್ದೇಶದಿಂದ ಏಷ್ಯಾದ ಬಹುದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಮೊನ್ನೆ ನಡೆದ ಸಭೆಯಲ್ಲಿ, ಮುಖ್ಯಮಂತ್ರಿಗಳ ಆದೇಶದಂತೆ ಜಿಲ್ಲಾಡಳಿತವು ತೀರ್ಮಾನವನ್ನು ತೆಗೆದುಕೊಂಡು  ಗೂಡಿನ ಮಾರುಕಟ್ಟೆಯನ್ನು ತೆರೆಯಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ಇಂದು ವಿದ್ಯುಕ್ತವಾಗಿ ಗೂಡಿನ ಮಾರುಕಟ್ಟೆಯು ತನ್ನ ವಹಿವಾಟನ್ನು ಪ್ರಾರಂಭಿಸಿದೆ.


ಸಾಗಾಣಿಕೆಯ ಸಮಸ್ಯೆ, ಮಾರುಕಟ್ಟೆಗೆ ಬಂದರೆ ಬೆಲೆ ಸಿಗುವುದಿಲ್ಲ ಎಂಬ ಅಪ ನಂಬಿಕೆ, ಅಲ್ಲಿಗೆ ಹೋದಮೇಲೆ ಯಾವ ಯಾವ ರೀತಿಯ ಸಮಸ್ಯೆ ಗಳು ಹುಟ್ಟುತ್ತವೋ ಎಂಬ ಆತಂಕದಿಂದ ಇಂದು ನಿರೀಕ್ಷಿತ ರೀತಿಯಲ್ಲಿ ಗೂಡು ಮಾರುಕಟ್ಟೆಗೆ ಬಂದಿರಲಿಲ್ಲ. ಆದರೆ ಬಂದಿರುವ ಗೂಡಿಗೆ ನಿರೀಕ್ಷಿತ ರೀತಿಯಲ್ಲಿ ಉತ್ತಮ ಬೆಲೆ ಬಂದಿದೆ. ಈಗ ತಾನೇ ಹರಾಜು ಪ್ರಾರಂಭವಾಗಿದ್ದು ಬೈವೋಲ್ಟನ್ ಗೂಡು ಬೆಲೆ ೩೮೦ ರೂ ರವರೆಗೂ ಕೂಗಲಾಗಿದೆ. ದೇಶೀಯ ತಳಿಯೂ ಸಹ ಉತ್ತಮ ಬೆಲೆಗೆ  ಹರಾಜು ಆಗುತ್ತಿದೆ ಎಂದು ತಿಳಿದು ಬಂದಿದೆ.


ಈ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗದೆ ನೆಮ್ಮದಿಯಾಗಿದ್ದ ರೇಷ್ಮೆನಗರಿಗೆ ಮುಂದಿನ ದಿನಗಳಲ್ಲಿ ರೇಷ್ಮೆ ಮಾರುಕಟ್ಟೆಯೇ ಕಂಟಕವಾಗಲಿದೆಯೇ ಎಂಬ ಆತಂಕ ಜಿಲ್ಲಾಡಳಿತಕ್ಕೆ ಇದೀಗ ಎದುರಾಗಿದೆ.

ಸಾವಿರಾರು ಜನರು ಒಟ್ಟಿಗೆ ಸೇರುವ ಮಾರು ಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಚಿಂತೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ಇತ್ತ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು. ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.


ಈ ರೇಷ್ಮೆ ಮಾರುಕಟ್ಟೆಯ ಒಂದು ದಿನದ ಆದಾಯ ಸರಾಸರಿ ೨ ಕೋಟಿ ರೂ.ಗಳಷ್ಟಿದೆ. ಆದರೆ ಇಲ್ಲಿ ರೈತರು, ಮಾರುಕಟ್ಟೆ ಅಧಿಕಾರಿಗಳು, ರೀಲರ್ಸ್ ಸೇರಿ ಕನಿಷ್ಟ ಮೂರು ಸಾವಿರ ಮಂದಿ ಏಕಕಾಲದಲ್ಲಿ ಜಮಾವಣೆ ಆಗುತ್ತಾರೆ. ತೀರಾ ಕಿಷ್ಕಿಂದೆಯಾದ ಈ ಮಾರುಕಟ್ಟೆಯಲ್ಲಿ ಉಸಿರಾಟಕ್ಕೂ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ರೇಷ್ಮೆ ಮಾರುಕಟ್ಟೆ ತೆರೆದರೆ, ಮಾರುಕಟ್ಟೆಗೆ ಬರುವ ವಾಹನಗಳಿಗೆ ಮುಕ್ತ ಪ್ರವೇಶ ನೀಡಬೇಕಾಗುತ್ತದೆ. ದೂರದ ಜಿಲ್ಲೆಗಳಿಂದ ಬರುವವರು ಸಹ ಇದೇ ಕಾರಣ ಕೊಟ್ಟು ಗಡಿ ದಾಟಬಹುದು. ಮಾತ್ರವಲ್ಲದೆ ಚಾಲಕರಿಗೆ, ಬೆಳೆಗಾರರಿಗೆ ಊಟ, ವಿಶ್ರಾಂತಿ, ಟೀ-ಕಾಫಿ ಎಲ್ಲ ವ್ಯವಸ್ಥೆಗಳಿಗಾಗಿ ಹೋಟೆಲ್‌ಗಳನ್ನು ಸಹ ತೆರೆಯ ಬೇಕಾಗುತ್ತದೆ.


ದಿಗ್ಬಂಧನ ಆಗಿರುವ ಹಿನ್ನೆಲೆಯಲ್ಲಿ ನಗದು ಕೊರತೆ ನೆಪದಿಂದಾಗಿ ಚೆಕ್ ವ್ಯವಹಾರ ಮತ್ತೆ ಶುರುವಾದರೂ ಅಚ್ಚರಿ ಪಡಬೇಕಿಲ್ಲ. ಸುರಕ್ಷತೆ, ಸ್ವಚ್ಛತೆ, ಮುಂಜಾಗೃತಾ ಕ್ರಮವಾಗಿ ಹ್ಯಾಂಡ್ ವಾಶ್, ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೆ ಥರ್ಮಲ್ ಸ್ಕ್ಯಾನರ್ ನೀಡುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದು, ಥರ್ಮಲ್ ಸ್ಕ್ಯಾನರ್ ಬಂದ ಬಳಿಕ ರೈತರು, ಅಧಿಕಾರಿಗಳನ್ನೆಲ್ಲ ತಪಾಸಣೆ ನಡೆಸಿ ಒಳಗೆ ಬಿಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಮಾರುಕಟ್ಟೆ ತೆರೆಯದಿದ್ದರೆ, ರೈತರ ಸ್ಥಿತಿ ಚಿಂತಾನಜನಕವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯವರಿಗೆ ಮನವಿ ಯೊಂದನ್ನು ಸಲ್ಲಿಸಿ, ಮಾರುಕಟ್ಟೆಯನ್ನು ತೆರೆಯುವಂತೆ ಆಗ್ರಹಪಡಿಸಿದ್ದರು. ಅವರ ಕೋರಿಕೆಯನ್ನು ಮನ್ನಿಸಿ ಗೂಡಿನ ಮಾರುಕಟ್ಟೆ ತೆರೆಯಲು ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.


ಸರ್ಕಾರ ಇದನ್ನು ಸವಾಲಾಗಿ ತೆಗೆದುಕೊಂಡು ಮಾರುಕಟ್ಟೆಯನ್ನು ಪ್ರಾರಂಭ ಮಾಡಿದೆ. ಮುಂದೆ ಬರುವ ಸಮಸ್ಯೆಗಳನ್ನು ಸಮಚಿತ್ತದಿಂದ ಸರಿದೂಗಿಸಬೇಕಾಗಿದೆ.

ಅಂತೂ ಈಗ ರೇಷ್ಮೆ ಮಾರುಕಟ್ಟೆ ಪ್ರಾರಂಭ ವಾಗಿದೆ. ಇದು ಸುಲಲಿತವಾಗಿ ಸುರಕ್ಷಿತವಾಗಿ ನಡೆಯುವಂತೆ ಆಗಲಿ ಎಂದು ಸಮಾಜದ ಎಲ್ಲಾ ಜನರು ಆಶಿಸಬೇಕಾಗಿದೆ. ಇಲ್ಲದಿದ್ದರೆ ರೇಷ್ಮೆ ಗೂಡು ಬೆಳೆಯುವ ರೈತರ ಗೋಳು ಹೇಳತೀರದಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑