Tel: 7676775624 | Mail: info@yellowandred.in

Language: EN KAN

    Follow us :


ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

Posted date: 20 Apr, 2020

Powered by:     Yellow and Red

ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

ಬೆಂಗಳೂರು:ಏ/೧೯/೨೦/ಭಾನುವಾರ. ಕಾರ್ಮಿಕರದ್ದಾಗಲೀ ಅಥವಾ ಇತರೆ ಯಾವುದೇ ಕಾರ್ಮಿಕರದ್ದಾಗಲೀ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅವರು ಇಲ್ಲಿ ಇಂದು ಪ್ರಕಟಿಸಿದರಲ್ಲದೆ, ಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಎಲ್ಲಾ ಕಾರ್ಮಿಕರಿಗೂ ಮುಖಗವಸು ಹಾಗೂ ಸ್ಯಾನಿಟೈಜರ್‍ಗಳನ್ನು ಒದಗಿಸುವುದರ ಜೊತೆಗೆ ಕಾರ್ಮಿಕ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಪ್ರತಿ ದಿನ ಎರಡು ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಮಿಕರ ಯೋಗ ಕ್ಷೇಮವನ್ನು ವಿಚಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಆದೇಶಿಸಿದರು. 


ನಗರದ ವಿವಿಧೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳ ಬಳಿ ತೆರಳಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಕಷ್ಟ-ಸಂಕಷ್ಟಗಳನ್ನು ಖುದ್ದು ಆಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ತಮ್ಮ ಈ ಭೇಟಿಯ ಮೂಲ ಉದ್ದೇಶ ಕಾರ್ಮಿಕರ ಸ್ಥಿತಿ-ಗತಿಗಳನ್ನು ಅರಿತು ಸೂಕ್ತ ನೆರವು ಕಲ್ಪಿಸುವುದು, ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಹಾಗೂ ಕಟ್ಟಡ ಕಾರ್ಮಿಕರಲ್ಲಿ ಸರ್ಕಾರ ತಮ್ಮ ಜೊತೆಗಿದೆ ಎಂಬ ವಿಶ್ವಾಸ ಮೂರಿಸುವುದಾಗಿದೆ ಎಂದರು. 


*ಊಟಕ್ಕೆ ಕೊರತೆ ಇಲ್ಲ. ಆದರೆ, ಊರಿಗೆ ಹೋಗಬೇಕೆನಿಸುತ್ತದೆ !!*


ನಗರದ ಶಾಸಕ ಭವನದಿಂದ ಭಾನುವಾರ ಸಂಜೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರ ಸ್ಥಿತಿ-ಗತಿಗಳನ್ನು ಸ್ವತಃ ಅರಿಯಲು ಹೊರಟ ಸಚಿವರು ಮೊದಲು ಭೇಟಿ ನೀಡಿದ್ದು ಮಾಧವ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಟ್ಟಡಕ್ಕೆ. ಜೆ ಎಂ ಸಿ ಪ್ರಾಜೆಕ್ಟ್ ( ಇಂಡಿಯಾ ) ಲಿಮಿಟೆಡ್ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ೧೪೯ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಭೇಟಿ ಮಾಡಿ ತಮಗೇನಾದರೂ ಸಮಸ್ಯೆಗಳಿದ್ದರೆ ತಿಳಿಸಿ ಎಂದಾಗ  ಮೊದ-ಮೊದಲು ಮಾತನಾಡಲು ಹಿಂಜರಿದ ಕಾರ್ಮಿಕರು ಸಧ್ಯಕ್ಕೆ ತಮಗೆ ಊಟಕ್ಕೆ ಕೊರತೆ ಇಲ್ಲ ನಿಜ. ಆದರೆ, ಊರಿಗೆ ಹೋಗಬೇಕೆನಿಸುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 


ಲಾಕ್ ಡೌನ್ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಇಡೀ ಭಾರತಕ್ಕೇ ಇದೆ. ಕೋವಿಡ್-೧೯ ಎಂಬ ಮಹಾಮಾರಿ  ವಿಶ್ವವನ್ನೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಲಾಕ್‍ಡೌನ್ ಘೋಷಿಸಲಾಗಿದೆ ಎಂಬುದನ್ನು ತಾವು ಮನಗಾಣಬೇಕು. ಲಾಕ್ ಡೌನ್ ನಿಂದಾಗಿ ಉಧ್ಭವಿಸುವ ಅಲ್ಪ-ಸ್ವಲ್ಪ ಸಮಸ್ಯೆಗಳನ್ನು ತಾವು ಸಹಿಸಿಕೊಳ್ಳಬೇಕು ಎಂದು ಅವರಲ್ಲಿ ಮನವಿ ಮಾಡಿದರು. ಅಲ್ಲದೆ, ತಮಗೆ ಊಟಕ್ಕೆ ಸಮಸ್ಯೆಯಾದರೆ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿ ಕಾರ್ಮಿಕ ಇಲಾಖೆಯ ಹಂಗರ್ ಹೆಲ್ಪ್ ಲೈನ್ ೧೫೫೨೧೪ ಶುಲ್ಕ-ರಹಿತ ದೂರವಾಣಿ ಸಂಖ್ಯೆ ಕುರಿತು ಮಾಹಿತಿ ನೀಡಿದರು. ಅಲ್ಲದೆ, ದಿನಸಿ ಸಾಮಗ್ರಿಗಳ ಕಿಟ್ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. 


*ಕಾರ್ಮಿಕರಿಗೆ ಬೇಡದ ಮುಖಗವಸು ತಮಗೇಕೆ ಬೇಕು ?*


ನಂತರ, ಹೆಬ್ಬಾಳದ ಎಲ್ ಅಂಡ್ ಟಿ ಯ ರೇನ್ ಟ್ರೀ ಬುಲೇವಾರ್ಡ್ ಮೆರಾಕಿ ಟವರ್ಸ್‍ಗೆ ಭೇಟಿ ನೀಡಿದ ಸಚಿವರು ಅಲ್ಲಿನ ಸುಮಾರು ೬೦೦ ಕಟ್ಟಡ ಕಾರ್ಮಿಕರೊಂದಿಗೆ ಮಾತನಾಡಲು ಮುಂದಾದರು. ಅಲ್ಲಿನ ಯಾವುದೇ ಕಾರ್ಮಿಕರು ಮುಖಗವಸು ( ಮಾಸ್ಕ್ ) ಧರಿಸಿರಲಿಲ್ಲ ಎಂಬುದನ್ನು ಗಮನಿಸಿದ ಸಚಿವರು ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಯನ್ನು ಕರೆಸಿದರು. ಆತ ಮುಖಗವಸು ತೊಟ್ಟು ಬಂದದ್ದನ್ನು ಕಂಡು ಕೆಂಡಾಮಂಡಲವಾದ ಸಚಿವರು ತಾವೇಕೆ ಮುಖಗವಸು ತೊಟ್ಟಿದ್ದೀರಿ ? ಕಾರ್ಮಿಕರಿಗೆ ಬೇಡದ ಮುಖಗವಸು ತಮಗೇಕೆ ಬೇಕು ? ತಮ್ಮ ಆರೋಗ್ಯದಷ್ಟೇ ಕಾರ್ಮಿಕರ ಆರೋಗ್ಯದ ರಕ್ಷಣೆಯೂ ಮುಖ್ಯವಲ್ಲವೇ ? ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು. 


ಅಷ್ಟರಲ್ಲೊಬ್ಬ ಕಾರ್ಮಿಕ ನಮ್ಮ ಹಣದಿಂದಲೇ ನಾವು ಊಟ ಮಾಡುತ್ತಿದ್ದೇವೆ. ಸಂಸ್ಥೆಯಿಂದ ನಮಗೇನೂ ದೊರೆತಿಲ್ಲ ಎಂದು ಹೇಳಿದ್ದನ್ನು ಕೇಳಿದ ಸಚಿವರು ಈ ಎಲ್ಲಾ ಕಾರ್ಮಿಕರಿಗೆ ನಾಲ್ಕು ದಿನಗಳೊಳಗೆ ದಿನಸಿ ಪದಾರ್ಥಗಳ ( ಗ್ರಾಸರಿ ಕಿಟ್ ) ಕಿಟ್ ಒದಗಿಸುವಂತೆ ಅದರ ಜೊತೆಯಲ್ಲಿಯೇ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಪೂರಕ ವಾತಾವರಣ ಸೃಷ್ಠಿಸುವ ಮುಖಗವಸನ್ನೂ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 


ತದನಂತರ, ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿದ ಸಚಿವರು ನಿರ್ಮಾಣ ಹಂತದಲ್ಲಿರುವ ಅಲ್ಲಿನ ಟರ್ಮಿನಲ್-೨ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೂಲದ ೩,೨೬೮ ಕಟ್ಟಡದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವನಾಗಿರುವ ನಾನು ತಮ್ಮ ಪ್ರತಿನಿಧಿಯಾಗಿದ್ದೇನೆ. ಯಾರೂ ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಸರ್ಕಾರದ ಸದಾಶಯವಾಗಿದೆ. ತಮಗೆ ಊಟದ ಅವಶ್ಯಕತೆ ಇದ್ದರೆ ತಿಳಿಸಿ ಎಂದು ಪ್ರಶ್ನಿಸಿದರು. ಆ ಸಂದರ್ಭದಲ್ಲಿ ಮೌನ ಮುರಿದ ಕಟ್ಟಡ ಕಾರ್ಮಿಕರೊಬ್ಬರು, ತಮಗೆ ಇಲ್ಲಿ ಹೇಗೋ ಊಟ ದೊರೆಯುತ್ತಿದೆ. ಆದರೆ, ತಮಗೆ ಉದ್ಯೋಗವಿಲ್ಲದಿರುವ ಹಿನ್ನೆಲೆಯಲ್ಲಿ ವೇತನ ದೊರೆಯುವುದಿಲ್ಲ. ವೇತನ ದೊರೆಯದಿದ್ದಲ್ಲಿ,  ತಮ್ಮ ಸ್ವಂತ ಊರಿನಲ್ಲಿರುವ ಮನೆ-ಮಂದಿಗೆ ಊಟ ಕೊಡುವವರಾರು ? ಎಂದು ಮರುಪ್ರಶ್ನೆ ಹಾಕಿದರು. ಇದು ಸಂಕಷ್ಟದ ಸಮಯ ಎಂಬುದು ಎಲ್ಲರಿಗೂ ಗೊತ್ತು. ಕಾರ್ಮಿಕರ ವೇತನದಲ್ಲಿ ಯಾವುದೇ ರೀತಿಯ ಮೊತ್ತವನ್ನೂ ಕಡಿತಮಾಡಬಾರದು ಎಂದು ಎಲ್ಲಾ ಕಾರ್ಖಾನೆಗಳಿಗೂ ಹಾಗೂ ಗುತ್ತಿಗೆದಾರ ಸಂಸ್ಥೆಗಳಿಗೂ ಈಗಾಗಲೇ ಕಟ್ಟುನಿಟ್ಟಿನ ಸೂಚಿಸಲಾಗಿದೆ. ರಾಜ್ಯ ಕಾರ್ಮಿಕ ಇಲಾಖೆ ತಮ್ಮ ಜೊತೆಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ನಿಗಾ ವಹಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಎಲ್ ಆಂಡ್ ಟಿ ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿ ಕಾರ್ಮಿಕರ ವೇತನವನ್ನು ಕಡಿತ ಮಾಡುವುದಿಲ್ಲ ಎಂದು ಸಚಿವರ ಸಮ್ಮುಖದಲ್ಲಿ ಪ್ರಕಟಿಸಿದಾಗ ಏಕ ಕಾಲದಲ್ಲಿ ಒಂದೆಡೆ ಹರ್ಷೋದ್ಗಾರ ಮೊಳಗಿದರೆ ಮತ್ತೊಂದೆಡೆ ಚಪ್ಪಾಳೆಯ ಶಬ್ದ ಮುಗಿಲು ಮುಟ್ಟಿತು. 


ಕಾರ್ಮಿಕ ಇಲಾಖಾ ಆಯುಕ್ತ ಕೆ ಜಿ ಶಾಂತಾರಾಮ್ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಜ್ಯೋತ್ಸ್ನಾ ಅವರೂ ಸಚಿವರ ಜೊತೆಯಲ್ಲಿ ಕಟ್ಟಡ ಪ್ರದೇಶಗಳ 

ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑