Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ

Posted date: 23 May, 2020

Powered by:     Yellow and Red

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ

ರಾಮನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರನ್ನು ಸನ್ಮಾನಿಸಲಾಯಿತು.

ರಾಮನಗರ : ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತ ಹೇಳಿದರು.

ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ವಿಜ್ಞಾನ, ಕ್ರೀಡೆ, ಶೈಕ್ಷಣಿಕ ವಲಯ, ಆರೋಗ್ಯ ಸಂಬಂಧಿ ವಲಯಗಳಲ್ಲಿ ಉತ್ತಮ ಮಟ್ಟದಲ್ಲಿ ವಿಶ್ವದಾದ್ಯಂತ ತನ್ನ ಛಾಪನ್ನು ಮೂಡಿಸುತ್ತಿದೆ. ಅದರಲ್ಲೂ ಕ್ರೀಡಾ ರಂಗದಲ್ಲಿ ಖೇಲೋ ಇಂಡಿಯಾ ಎಂಬ ಯೋಜನೆಯಿಂದ ಎಲೆಮರೆಕಾಯಿಯಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂದು ತಿಳಿಸಿದರು. 


ಹಲವು ವರ್ಷಗಳಿಂದ ಕಂಬಳ ಸ್ಪರ್ಧೆ ನಡೆಯುತ್ತಿದ್ದರೂ ಸಹ ಆ ಪ್ರತಿಭೆಗಳನ್ನು ಗುರುತಿಸಿರಲಿಲ್ಲ. ಆದರೆ  ಖೇಲೋ ಇಂಡಿಯಾ ಯೋಜನೆಯಿಂದ ಅಂತವರನ್ನು ಗುರುತಿಸಿ ಒಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು. 

ಹಿಂದಿನ ವರ್ಷಗಳಲ್ಲಿ ಕ್ರೀಡೆ ಎಂದರೆ ಸೋಮಾರಿಗಳು, ಓದಲು ಇಷ್ಟವಿಲ್ಲದ ಮಕ್ಕಳು ಮಾತ್ರ ಆಡುವರು ಎಂಬ ಭಾವನೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪೋಷಕರೆ ಮಕ್ಕಳನ್ನು ಕ್ರೀಡಾ ತರಬೇತಿಗಳಿಗೆ ಸೇರಿಸುತ್ತಿದ್ದಾರೆ. ಆದರೂ ಸಹ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಕಡಿಮೆ ಎಂದು ತಿಳಿಸಿದರು. 

ಕ್ರಿಕೆಟ್ ನಂತಹ ಅಬ್ಬರದ ಆಟದ ಮುಂದೆ ದೇಶಿಯ ಕ್ರೀಡೆಗಳು ಪ್ರೋತ್ಸಾಹವಿಲ್ಲದೆ ಅಳಿವಿನ ಅಂಚಿನಲ್ಲಿವೆ. ಒಳಂಗಣ ಆಟಗಳನ್ನು ಪ್ರೋತ್ಸಾಹಿಸುವ ತುರ್ತು ಇಂದಿದೆ. ಆಟಗಳು ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಭಾರತದ ಸಾಹಸ ಕಲೆಗಳಾದ ಕತ್ತಿವರಸೆ, ಕುಸ್ತಿ, ಬಿಲ್ಲುಬಾಣ, ನೆಗೆತಗಳು, ಎಸೆತಗಳು ಇಂದು ಒಲಂಪಿಕ್ ಕ್ರೀಡೆಗಳಾಗಿ ಖ್ಯಾತಿ ಪಡೆದಿವೆ ಎಂದರು. 

ರೂಬಿಕ್ ಕ್ಯೂಬ್ ಒಂದು ಮೂರು ಆಯಾಮದ ಆರು ಬಣ್ಣಗಳ ಸಮಸ್ಯೆಯನ್ನು ಒಡ್ಡುವ ಆಟದ ಘನ. ಇದನ್ನು ಹಂಗೇರಿಯನ್ ಶಿಲ್ಪಿ ಮತ್ತು ವಾಸ್ತುಶಿಲ್ಪ ಪ್ರಾಧ್ಯಾಪಕ ಎನ್ ರೋ ರೂಬಿಕ್ 1974ರಲ್ಲಿ ಶೋಧಿಸಿದ. ಈ ಸ್ಪರ್ಧೆಯನ್ನು 1981 ರಲ್ಲಿ ಗಿನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ಮೊದಲ ಸ್ಪರ್ಧೆಯನ್ನು ನಡೆಸಿತು. ಇದು 2009ರ ಜನವರಿ ವರೆಗೆ ವಿಶ್ವದಾದ್ಯಂತ 350 ಮಿಲಿಯನ್ ಆಟಿಕೆಗಳು ಮಾರಾಟವಾಗಿವೆ. ಇದು ವಿಶ್ವದ ಅತಿ ಹೆಚ್ಚು ಮಾರಾಟವಾದ ಒಗಟು ಆಟಿಕೆಯಾಗಿದೆ ಎಂದರು. 

ವರ್ಡ್ ರೆಕಾರ್ಡ್ 4.37 ಸೆಕೆಂಡ್, ಭಾರತದ್ದು 6.23 ಸೆಕೆಂಡ್ ಇದೆ. ರಾಮನಗರದ ಎಸ್. ವಿಶ್ವವಿಧಾತ ರವರು 20 ಸೆಕೆಂಡ್ ಗಳಲ್ಲಿ ಈ ಆಟಿಕೆಯ ಸಮಸ್ಯೆಯನ್ನು ಬಿಡಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ, ಇದು ರಾಮನಗರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ ಅವರ ಕಾರ್ಯ ಶ್ಲಾಘನೀಯ ಎಂದರು. 

ನಗರಸಭಾ ಮಾಜಿ ಸದಸ್ಯ ಆರ್.ಎ. ಮಂಜುನಾಥ್ ಮಾತನಾಡಿ ಇಂತಹ ಆಟಗಳಿಗೂ ಸರ್ಕಾರದ ಮಾನ್ಯತೆ ಸಿಕ್ಕಿ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ಶ್ರೀ ಶಂಕರ ಸೇವಾ ಟ್ರಸ್ಟಿನ ಕೆ.ಎಲ್. ಶೇಷಗಿರಿರಾವ್, ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಕ್ರೀಡಾಪಟು ಎಸ್. ವಿಶ್ವವಿಧಾತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ವಿ. ಶೇಷಾದ್ರಿ ಅಯ್ಯರ್, ಯೂತ್ ರೆಡ್ ಕ್ರಾಸ್ ಉಪಾಧ್ಯಕ್ಷೆ ಲಾವಣ್ಯ ಅಶ್ವಿನ್, ವಕೀಲ ವಿನೋದ್ ಭಗತ್, ಯಲ್ಲೊ ಅಂಡ್ ರೆಡ್ ಫೌಂಡೇಷನ್ ವ್ಯವಸ್ಥಾಪಕ ಆನಂದಶಿವ, ಶ್ರೀರಾಮ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ನಾಗರಾಜು, ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ಸಪ್ನಾ ರಮೇಶ್, ಟಿಟಿಐಡಿ ಯ ಕೆ.ಎಸ್. ಶಿವಕುಮಾರ್, ಕೃಷ್ಣಜೋಶಿ, ಅರ್ಚಕ ಶ್ರೀನಿವಾಸಬಾಬು ಇತರರು ಉಪಸ್ಥಿತರಿದ್ದರು. 



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑