Tel: 7676775624 | Mail: info@yellowandred.in

Language: EN KAN

    Follow us :


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ ವಿರುದ್ದ ಹರಿಹಾಯ್ದ ಸ್ಥಳೀಯ ದಳದ ಮುಖಂಡರು

Posted date: 26 May, 2020

Powered by:     Yellow and Red

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ ವಿರುದ್ದ ಹರಿಹಾಯ್ದ ಸ್ಥಳೀಯ ದಳದ ಮುಖಂಡರು

ಚನ್ನಪಟ್ಟಣ:ಮೇ/೨೬/೨೦/ಮಂಗಳವಾರ. ಇತ್ತೀಚಿಗೆ ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅಕ್ಕೂರು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಗಂಗಾಧರ್ ಪತ್ರಿಕಾ ಗೋಷ್ಠಿ ನಡೆಸಿ ನಮ್ಮ ನಾಯಕರಾದ ಎಚ್.ಡಿ ಕುಮಾರಸ್ವಾಮಿಯವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಅವರು ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದುದರ ವಿರುದ್ಧ ತಾಲ್ಲೂಕು ಜನತಾದಳ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಹಿಗ್ಗಾಮುಗ್ಗಾ ಜಾಡಿಸಿದ ಪ್ರಸಂಗ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿರುವ ಶಾಸಕರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಜರುಗಿತು.


ಗಂಗಾಧರ್ ಯಾರು ? ಅವರ ಹಣೆಬರಹವೇನೂ ಎಂಬುದು ಗೊತ್ತಿದೆ. ಅವರನ್ನು ತಾಲೂಕಿಗೆ ಕರೆತಂದವರೂ ನಾವೇ ! ಅವರಿಗೆ ಅಧಿಕಾರ ಮತ್ತು ಕಮಿಷನ್ ಬಿಟ್ಟು ಬೇರೇನೂ ಗೊತ್ತಿಲ್ಲ. ರಾಜ್ಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅಂತಹವರೇ ಕುಮಾರಸ್ವಾಮಿ ಯವರನ್ನು ಗೌರವದಿಂದ ಕಾಣುತ್ತಾರೆ. ಅಂತಹದರಲ್ಲಿ ಗಂಗಾಧರ್ ಮಾತನಾಡಲು ಯಾವ ನೈತಿಕತೆ ಇದೆ. ತಾಲೂಕಿಗೆ ಇವರ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಒಕ್ಕೊರಲಿನಿಂದ ತರಾಟೆಗೆ ತೆಗೆದುಕೊಂಡರು.


ಅವರ ಆರೋಪದಲ್ಲಿ ಯಾವ ಹುರುಳಿಲ್ಲ. ಅವರಿಗೆ ಮಾಹಿತಿಯ ಕೊರತೆಯಿಂದ ಹೀಗೆ ಹೇಳಿರಬಹುದು ಎಂದು ಅನ್ನಿಸುತ್ತದೆ ಎಂದು ತಾಲ್ಲೂಕು ಜೆಡಿಎಸ್ ಪ್ರಮುಖರು ಲೇವಡಿ ಮಾಡಿದರು.

ಹಿಂದಿನ ಸಮಿಶ್ರ ಸರ್ಕಾರದಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ೪೬ ಸಾವಿರ ಕೋಟಿ ರೂಗಳ ಸಾಲ ಮನ್ನಾ ಯೋಜನೆ ಜಾರಿಗೆ ತಂದು ಅವರು ಅಧಿಕಾರದಲ್ಲಿ ಇರುವವರೆಗೆ ೨೬ ಸಾವಿರ ಕೋಟಿ ರೂಗಳವರೆಗೆ ಸಾಲ ಮನ್ನಾ ಆಗಿದೆ. ಈ ಯೋಜನೆಯಲ್ಲಿ ತಾಲ್ಲೂ ಕಿನ ರೈತರಿಗೆ ೬೦-೭೦ ಕೋಟಿ ರೂ ಸಾಲ ಮನ್ನಾ ಆಗಿದೆ.


ಈ ಕ್ಷೇತ್ರ ಮತ್ತು ಜಿಲ್ಲೆಗೆ ಸತ್ತೆಗಾಲ ನೀರಾವರಿ ಯೋಜನೆಗೆ ೫೪೦ ಕೋಟಿ ರೂಗೆ ಮಂಜೂರಾತಿ ನೀಡಿ ಶಾಶ್ವತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಅದರ ಕಾಮಗಾರಿ ಪ್ರಗತಿಯಲ್ಲಿದೆ. ಇದು ನಿಮಗೆ ಗೊತ್ತಿಲ್ಲವೇ ಎಂದು ಛೇಡಿಸಿದರು.

ಶಾಲಾ ಕಾಲೇಜು ಅಭಿವೃದ್ಧಿ ಯೋಜನೆಯಡಿ ಚನ್ನಪಟ್ಟಣ ಬಾಲಕಿಯರ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿಗೆ ೧೮ ಕೋಟಿ ರೂ, ಮೈಲನಾಯಕನ ಹೊಸಹಳ್ಳಿ ಹಾಗೂ ಮಾಕಳಿ ಗ್ರಾಮಗಳಲ್ಲಿ ಕಿರಿಯ ಕಾಲೇಜು ಕಟ್ಟಡಗಳಿಗಾಗಿ ತಲಾ ೪ ಕೋಟಿ ರೂಗಳನ್ನು ಕೊಡಲಾಗಿದೆ.


ತಾಲ್ಲೂಕಿನ ಬಿ.ವಿ ಹಳ್ಳಿ, ಎಸ್‌ಎಂ ಹಳ್ಳಿ, ಅಕ್ಕೂರು ಹೊಸಹಳ್ಳಿ, ಹೊಂಗನೂರು ಹಾಗೂ ಕೋಡಂಬಳ್ಳಿ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ೧೦ ಕೋಟಿ ರೂಗೂ ಹೆಚ್ಚು ಹಣವನ್ನು ಮಂಜೂರು ಮಾಡಿದ್ದು, ಹಲವು ಕಾಮ ಗಾರಿಗಳು ಮುಕ್ತಾಯ ಹಂತದಲ್ಲಿ ಇವೆ.

ತಾಲ್ಲೂಕಿನ ರಸ್ತೆಗಳ ಡಾಂಬರೀಕರಣಕ್ಕೆ ೨೫೦ ಕೋಟಿ ರೂ ಮಂಜೂರಾತಿ ಕೊಡಿಸಿದ್ದು, ಹಲವು ಕಾಮಗಾರಿಗಳು ಮುಗಿದಿವೆ. ಅವರು ಅಧಿಕಾರಿದಲ್ಲಿ ಇದ್ದಾಗ ಅವರು ಕ್ಷೇತ್ರಕ್ಕೆ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಒಂದು ಬಾರಿ ಮಾತ್ರ ಬಂದಿಲ್ಲ, ಅದನ್ನು ಹೊರತುಪಡಿಸಿ ಹಲವು ಸಂದರ್ಭಗಳಲ್ಲಿ ಅವರು ಜನಸ್ಪಂದನಾ ಕಾರ್ಯಕ್ರಮ ನಡೆಸಿ ಜನರ ಜೊತೆಯಲ್ಲಿ ಸಂವಾದ ನಡೆಸಿ ಸಮಸ್ಯೆ ಅರಿತಿದ್ದಾರೆ.


ನಗರ ಪ್ರದೇಶದ ನಗರೋತ್ಥಾನ ಯೋಜನೆಯಡಿ ೨೫ ಕೋಟಿ ರೂಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಪಸಂಖ್ಯಾತರ ವಾರ್ಡ್ಗಳಿಗೆ ರೂ ೧೦ ಕೋಟಿ, ಎಸ್‌ಎಫ್‌ಸಿ ಯೋಜನೆ ಯಡಿ ೧೦ ಕೋಟಿ ಮಂಜೂರಾತಿ ಆಗಿ ಅವು ಪ್ರಗತಿಯಲ್ಲಿವೆ.

ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ವಲಸೆ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ದಲಿತರು ಹಾಗೂ ಬಡವರಿಗೆ ಸುಮಾರು ೩೫ ದಿನಗಳ ಕಾಲ ಪ್ರತಿನಿತ್ಯ ೫,೦೦೦ ಸಂಖ್ಯೆವರೆಗೆ ಆಹಾರ ವಿತರಿಸಲಾಗಿದೆ. ತಾಲ್ಲೂಕಿನ ೬೫ ಸಾವಿರ ಕುಟುಂಬ ಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ಇವೆಲ್ಲಾ ತಾಲ್ಲೂಕಿನ ಪ್ರಗತಿಗೆ ಮಾಡಿದ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.


ಚನ್ನಪಟ್ಟಣ ಕಬ್ಬಾಳು ಸಾತನೂರು ರಸ್ತೆಯಲ್ಲಿ ಸೇತುವೆ ಅಗಲೀಕರಣಕ್ಕೆ ಹಣ ಮಂಜೂರಾತಿ, ಶಿಂಷಾ ಕಣ್ವ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸಿ, ಕಾವೇರಿ ನೀರಾವರಿ ನಿಗಮಕ್ಕೆ ಹಣ ಮಂಜುರಾತಿ ಕೊಡಿಸಿದ್ದು ಗೊತ್ತಿಲ್ಲವೇ.

ಇತ್ತೀಚಿಗೆ ಬಿದ್ದ ಭಾರೀ ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ಬಾಳೆ ಹಾಗೂ ತೆಂಗು ಬೆಳೆ ಕಳೆದುಕೊಂಡವರಿಗೆ ವೈಯಕ್ತಿಕ ಪರಿಹಾರ ನೀಡಿಲ್ಲವೇ ಇವೆಲ್ಲವೂ ಆಗಿವೆ. ಆದರೆ ಇಡೀ ರಾಜ್ಯದ ಜವಾಬ್ದಾರಿ ಇರುವುದರಿಂದ ಕ್ಷೇತ್ರದಲ್ಲಿ ಹೆಚ್ಚು ಕಾಲವ್ಯಯ ಮಾಡದಿರಲು ಸಾಧ್ಯವಾಗದಿರಬಹುದು. ಅದನ್ನೇ ದೊಡ್ಡದು ಮಾಡಿ ಮಾತನಾಡುವುದು ಬಿಟ್ಟು, ನಿಮಗೆ ಸಾರ್ವಜನಿಕ ಹಿತಾಸಕ್ತಿ ಇದ್ದರೆ ಸಲಹೆ ಸಹಕಾರ ಕೊಡಬಹುದಾಗಿತ್ತು ಎಂದು ಗಂಗಾಧರ್ ಟೀಕೆಗೆ ಪ್ರತಿಕ್ರಿಯಿಸಿದರು.


ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನಿಸಿ, ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ಹೆಚ್ಚು ಬರಲು ಆಗದಿರಬಹುದು, ಆದರೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನೀವು ಆಗಿಂದಾಗ್ಗೆ ಯಾಕೆ ಬೆಳಕು ಚೆಲ್ಲಲು ಪ್ರಯತ್ನಿಸಲಿಲ್ಲ, ನಿಮ್ಮದೂ ದೋಷವಿದೆ ಎಂದಾಗ ಅವರು ಅವಕ್ಕಾದರು.

ಈ ಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಪ್ರಮುಖರಾದ ಹಾಪ್‌ಕಾಮ್ಸ್ ದೇವರಾಜ್, ವಕೀಲ ಹನುಮಂತು, ಪಕ್ಷದ ಕಾರ್ಯದರ್ಶಿ ರವೀಶ್, ಕರಿಯಪ್ಪ, ಎಂಜಿಕೆ ಪ್ರಕಾಶ್, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದಹಳ್ಳಿ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑