Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

Posted date: 05 Jul, 2020

Powered by:     Yellow and Red

ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.


ಕಳೆದ ವರ್ಷ 9 ಕರಗಗಳು ನಡೆದಿದ್ದವು. ಈ ಬಾರಿ ಚಾಮುಂಡೇಶ್ವರಿ, ಆದಿಶಕ್ತಿ ಐಜೂರು, ಆದಿಶಕ್ತಿ ಶೆಟ್ಟಿಹಳ್ಳಿಬೀದಿ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ, ತೋಪ್ ಖಾನ್ ಮೊಹಲ್ಲಾದ ಮುತ್ತುಮಾರಮ್ಮ ಕರಗಗಳು ನಡೆಯಲಿವೆ. ಆದಿಶಕ್ತಿ ಕೊಂಕಾಣಿದೊಡ್ಡಿ, ಟ್ರೂಪ್ ಲೇನ್ ಚೌಡೇಶ್ವರಿ ಕರಗ ಬಾರಿ ನಡೆಯುತ್ತಿಲ್ಲ. ಎಲ್ಲಾ ದೇವಾಲಯಗಳಲ್ಲೂ ಭರದ ಸಿದ್ದತೆ ನಡೆದಿದ್ದು, ತಳಿರು ತೋರಣಗಳಿಂದ ಕಂಗೊಳಿಸಲಾರಂಭಿಸಿವೆ.

ಚಾಮುಂಡೇಶ್ವರಿ ಕರಗ : ಇಲ್ಲಿನ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲು ಕೋಟೆಯ ಪ್ರತಾಪ್ ಸಿಂಗ್ ಎಂಬುವರ ಸ್ಥಾಪಿಸಿದರು ಎನ್ನುವ ಇತಿಹಾಸವಿದೆ. ಪ್ರತಾಪ್ ಸಿಂಗ್ ಅವರು ಮೈಸೂರು ಮಹಾರಾಜರ ಕಾಲದಲ್ಲಿ ಪೆÇಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರಿಗೆ ಮಕ್ಕಳಿರಲಿಲ್ಲ. ಒಮ್ಮೆ ಇವರ ಕನಸಿನಲ್ಲಿ ಚಾಮುಂಡೇಶ್ವರಿಯು ಬಂದು ನಗರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ನನ್ನನ್ನು ಕಳ್ಳಕಾಕರು ಬಂದಿಸಿ ಪೂಜಿಸುತ್ತಿದ್ದಾರೆ. ಇದನ್ನು ತಂದು ದೇವರ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನ್ನ ಇಷ್ಟಾರ್ಥ ಪೂರೈಸುತ್ತದೆ ಎಂದು ಹೇಳಿದರಂತೆ.


ಇದರಂತೆ ಪ್ರತಾಪ್ ಸಿಂಗ್ ಬುಡಬುಡಕೆ ದಾಸಯ್ಯನ ವೇಷದಲ್ಲಿ ಕಾಡಿಗೆ ಹೋಗಿ ಗುಹೆಯಲ್ಲಿದ್ದ ಕಳ್ಳರನ್ನು ಹಿಡಿದು ಅಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹವನ್ನು ತಂದು ನಗರದಲ್ಲಿ ಗುಡಿ ಕಟ್ಟಿಸಿ ಪ್ರತಿಷ್ಠಾಪನೆ ಮಾಡಿದರು. ನಂತರ ಇವರಿಗೆ ಗುಂಡು ಮಕ್ಕಳು ಜನಿಸಿದವು. ಕಳ್ಳರನ್ನು ಹಿಡಿದ ಕಾರಣಕ್ಕೆ ಪ್ರತಾಪ್ ಸಿಂಗ್ ಅವರಿಗೆ ಮೈಸೂರು ಮಹಾರಾಜರು ಬಹುಮಾನವನ್ನು ನೀಡಿ ಗೌರವಿಸಿದರು. ಅಂದಿನಿಂದ ಇವರ ಕುಟುಂಬ ಚಾಮುಂಡೇಶ್ವರಿ ಅಮ್ಮನವರನ್ನು ಪೂಜಿಸುತ್ತಾ ಬಂದಿದ್ದಾರೆ.

ಪ್ರತಾಪ್ ಸಿಂಗ್ ಅವರ ನಂತರ ಇವರ ಮಗ ಗಿರಿಧರ್ ಸಿಂಗ್, ಇವರ ನಂತರ ಪದ್ಮನಾಭ ಸಿಂಗ್, ಇವರ ನಂತರ ಪಿ. ದೇವಿ ಪ್ರಸಾದ್ ಸಿಂಗ್ (ಬಾಬು) 20 ನೇ ಬಾರಿಗೆ ಕರಗಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಪುರಾತನವಾದುದಾಗಿದೆ. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ನಮ್ಮ ಕುಟುಂಬ ಐದನೆ ತಲೆಮಾರಿನಿಂದ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದೆ ಎಂದು ಕರಗಧಾರಕ ಪಿ. ದೇವಿಪ್ರಸಾದ್ ಸಿಂಗ್ ಮಾಹಿತಿ ನೀಡಿದರು.

ಐಜೂರು ಆದಿಶಕ್ತಿ ಕರಗ : ಇಲ್ಲಿನ ಐಜೂರಿನ ಮಾಗಡಿ ರಸ್ತೆಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಆದಿಶಕ್ತಿ ದೇವಾಲಯವು ಪುರಾತನ ದೇವಾಲಯವಾಗಿದ್ದು, ಸುಮಾರು 76 ವರ್ಷಗಳಿಂದ ಇಲ್ಲಿ ಕರಗ ನಡೆಯುತ್ತಿದೆ. ವಿ. ವಿಜಯ್ ಅವರು 12 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.


ಬಿಸಿಲು ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಬಿಸಿಲು ಮಾರಮ್ಮ ಅಮ್ಮನವರ ಕರಗ ಸರಳವಾಗಿ ದೇವಾಸ್ಥಾನದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದ್ದು, ಪಿ. ಮಹೇಂದ್ರ ಅವರು 14 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.


ಮಗ್ಗದ ಕೇರಿ ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಮಗ್ಗದ ಕೇರಿ ಮಾರಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಪಿ. ಚೇತನ್‍ಕುಮಾರ್ ಅವರು 22ನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.


ಭಂಡಾರಮ್ಮ ದೇವಿ ಕರಗ : ನಗರದ ಬಾಲಗೇರಿಯಲ್ಲಿ ಭಂಡಾರಮ್ಮ ದೇವಿಯವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಎನ್. ಸಾಗರ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.


ಮುತ್ತುಮಾರಮ್ಮ ಕರಗ : ನಗರದ ತೋಪ್ ಖಾನ್ ಮೊಹಲ್ಲಾದಲ್ಲಿರುವ ಮುತ್ತುಮಾರಮ್ಮ ಅಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದೆ. ಎನ್. ಪ್ರಶಾಂತ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.


ಶೆಟ್ಟಿಹಳ್ಳಿ ಆದಿಶಕ್ತಿ ಕರಗ : ನಗರದ ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿ ಕರಗ ಹಾಗೂ ಪ್ಲೇಗ್ ಮಾರಮ್ಮನವರ ಗಿಂಡಿ ಉತ್ಸವ ಸರಳವಾಗಿ ನಡೆಯಲಿದೆ. ಕೆ. ಅನಿಲ್‍ಕುಮಾರ್ ಅವರು 11ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ. ಆರ್. ಮಹೇಶ್ ಅವರು 18ನೇ ಬಾರಿಗೆ ಗಿಂಡಿ ಉತ್ಸವವನ್ನು ನಡೆಸಿಕೊಡಲಿದ್ದಾರೆ.


ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ : ನಗರದ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ರಾಮನಗರದಲ್ಲಿ ಮೊದಲು ಇಲ್ಲಿ ಆದಿಶಕ್ತಿ ಪ್ರತಿಷ್ಠಾಪನೆಯಾಗಿದ್ದು, ನಂತರ ನಗರದ ಇತರೆ ಭಾಗಗಳಲ್ಲಿ ಆದಿಶಕ್ತಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಎಚ್. ಮುನೀಂದ್ರ ಅವರು ಕರಗಧಾರಣೆ ಮಾಡುತ್ತಿದ್ದರು.


ಚೌಡೇಶ್ವರಿ ಅಮ್ಮನವರ ಕರಗ : ಇಲ್ಲಿನ ಅರ್ಕೇಶ್ವರ ಕಾಲೋನಿಯಲ್ಲಿರುವ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ವಿ. ಸುರೇಶ್ ಅವರು ಕರಗಧಾರಣೆ ಮಾಡುತ್ತಿದ್ದರು.


ಏಳುಮಂದಮ್ಮ ದೇವಸ್ಥಾನ : ಚಾಮುಂಡೇಶ್ವರಿ ದೇವಸ್ಥಾನವನ್ನು ಮೊದಲು ಏಳುಮಂದಮ್ಮನ ದೇವಸ್ಥಾನವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ಆದರೆ ಈಚಿನ ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ ಎಂದು ಗೃಹಿಣಿ ಜಿ. ಉಮಾಮಹೇಶ್ವರಿ ತಿಳಿಸಿದರು.


ಬಾಲಗೇರಿಯಲ್ಲಿ ಕೊಲ್ಲಾಪುರದಮ್ಮ ಕರಗವು ನಡೆಯುತ್ತಿತ್ತು. ಕೆಲವು ವರ್ಷಗಳಿಂದ ನಡೆಯುತ್ತಿಲ್ಲ. ಕಳೆದ ವಾರ ಬನ್ನಿಮಹಾಂಕಾಳಿ ಕರಗ, ಇದೇ 7 ರಂದು 7 ಕರಗಗಳು ನಡೆಯಲಿವೆ.


ಚಿತ್ರ-ಲೇಖನ :

ಎಸ್. ರುದ್ರೇಶ್ವರ

ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑