Tel: 7676775624 | Mail: info@yellowandred.in

Language: EN KAN

    Follow us :


ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು

Posted date: 28 Jul, 2020

Powered by:     Yellow and Red

ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ, ಅಶ್ವಮೇಧ ಕುದುರೆಯಂತೆ ಬಲಿಯು ಆಗುವುದಿಲ್ಲ. ಅವರು ರನ್ನಿಂಗ್ ಹಾರ್ಸ್ ಎಂದ ಬಿಜೆಪಿ ಮುಖಂಡರು

ಚನ್ನಪಟ್ಟಣ:ಜು/28/20/ಮಂಗಳವಾರ. ಸ್ಥಳೀಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳಿದಂತೆ ನಮ್ಮ ನಾಯಕ ಯೋಗೇಶ್ವರ್ ಸತ್ತ ಕುದುರೆಯೂ ಅಲ್ಲ. ಅಶ್ವಮೇಧ ಕುದುರೆಯಂತೆ ಬಲಿಯಾಗಲು ಅವರು ಬಯಸುವುದಿಲ್ಲ ಅವರೇನಿದ್ದರೂ ರನ್ನಿಂಗ್ ಹಾರ್ಸ್ (ಓಡುವ ಕುದುರೆ) ಎಂದು ತಾಲ್ಲೂಕು ಬಿಜೆಪಿ ಮುಖಂಡರು ಇಂದು ಯೋಗೇಶ್ವರ್ ರವರ ಹೇಳಿಕೆಯನ್ನು ಸಮರ್ಥಿಸಿಕೊಂಡರು, ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ನ ಸ್ಥಳೀಯ ನಾಯಕರು ಅಸಂವಿಧಾನಕವಾಗಿ ಶಬ್ದಗಳನ್ನು ಬಳಸಿರುವುದು ತಪ್ಪು ಎಂದು ತಿರುಗೇಟು ನೀಡಿದರು.

ಅವರು ಇಂದು ನಗರದ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.


ಎಂಎಲ್ಸಿ ಯಾಕೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಿಗೆ ಗೊತ್ತಿಲ್ಲವೇ ? ಅವರ ಬಗ್ಗೆ ಕೀಳು ಭಾಷೆ ಬಳಸುವ ತಾಲ್ಲೂಕಿನ ಇತರೆ ಪಕ್ಷದ ಮುಖಂಡರ ಘನತೆಗೆ ಇದು ಕುಂದು ತರುತ್ತದೆ. ಮಲ್ಲಿಕಾರ್ಜುನ ಖರ್ಗೆ ಯವರಿಗೆ ಯಾವ ಸ್ಥಾನ ನೀಡಿದ್ದಾರೆ. ಅವರನ್ನು ಸಹ ಜರಿದಂತಾಗಲಿಲ್ಲವೇ ಎಂದು ಜಿಲ್ಲಾ ವಕೀಲರ ಸಂಘದ ಸಂಚಾಲಕ ಎಂ ‌ಕೆ ನಿಂಗಪ್ಪ ಪ್ರಶ್ನಿಸಿದರು.


ಅವರು ಪಕ್ಷಾಂತರ ಮಾಡಿದ್ದಾರೆ ಎಂದು ವಿರೋಧ ಪಕ್ಷದವರು ದೂರುತ್ತಾರೆ. ಅವರು ಪಕ್ಷಾಂತರ ಮಾಡಿದ್ದಾರೆಂದಾದರೆ ಅದು ಅವರ ವೈಯಕ್ತಿಕ ಅಭಿವೃದ್ಧಿಗಲ್ಲ. ತಾಲ್ಲೂಕಿನ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದಾರೆ. ಇವತ್ತು ತಾಲ್ಲೂಕಿನ ಜನತೆ ಗುಳೆ ಹೋಗಬೇಕಾಗಿತ್ತು. ಅವರು ದೂರದೃಷ್ಟಿಯ ಶಾಶ್ವತ ನೀರಾವರಿ ಮಾಡಲಾಗಿ, ವ್ಯವಸಾಯಕ್ಕೆ ಪೂರಕವಾದ ನೀರು ದೊರಕಿದೆ. ಇದು ಅವರ ಕಣ್ಣಿಗೆ ಕಾಣುತ್ತಿಲ್ಲವೆ ? ಅವರು ವನವಾಸ, ಅಜ್ಞಾತವಾಸ ಎಂದು ಹೇಳಿಲ್ಲ. ಅಧಿಕಾರ ಇಲ್ಲದ್ದರಿಂದ ಸೇವೆ ಮಾಡಲು ಆಗಲ್ಲ ಎಂದು ಅವರು ಬರುತ್ತಿರಲಿಲ್ಲ. ಹಾಗಂತ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದರು.


ಕಳೆದ ಇಪ್ಪತ್ತು ವರ್ಷಗಳಿಂದ ಎರಡು ಪಕ್ಷದ ಧುರೀಣರು ತಾಲ್ಲೂಕಿಗೆ ಏನು ಕೊಡುಗೆ ನೀಡಿದ್ದಾರೆ.? ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದೇ ಮುಖ್ಯವಲ್ಲ. ಎಷ್ಟು ಕಾಮಗಾರಿ ಪೂರ್ಣಗೊಳಿಸಿದ್ದಾರೆ‌ ಎಂಬುದನ್ನು ತಾಲ್ಲೂಕಿನ ಜನತೆಯ ಮುಂದಿಡಲಿ.

ಕಾಂಗ್ರೆಸ್ ಅಶ್ವಮೇಧ ಯಾಗ ಮಾಡ್ತಿನಿ ಅಂತಾರೆ, ಮೊದಲು ಅವರಿಗೆ ತಾಲ್ಲೂಕಿನಲ್ಲಿ ಅವರ ಪಕ್ಷಕ್ಕೆ ಸ್ವಂತ ಕುದುರೆಯೇ ಇಲ್ಲ, ಯಾಗ ಎಲ್ಲಿ ಮಾಡ್ತಾರೆ. ಎಂಎಲ್ಸಿ ಸ್ಥಾನವನ್ನು ಕಾಡಿಬೇಡಿ ತಗೊಂಡಿಲ್ಲ. ಹಳೆಯ ಮೈಸೂರು ಭಾಗದ ನಾಯಕರಿವರು. ಸಂಘಟನೆಯ ಚತುರ ಎಂದು ಅವರಿಗೆ ಸರ್ಕಾರ ಸ್ಥಾನ ನೀಡಿದೆ ಎಂದು ಅವರು ಸಮರ್ಥಿಸಿಕೊಂಡರು.


ಬಿಜೆಪಿ ಪಕ್ಷದ ತಾಲ್ಲೂಕು ಮಾಜಿ ಅಧ್ಯಕ್ಷ ಆನಂದಸ್ವಾಮಿ ಮಾತನಾಡಿ ಅಶ್ವಮೇಧ ಯಾಗ ದ ಅರ್ಥ ಅವರಿಗೆ ತಿಳಿದಿಲ್ಲ. ಯಾಗದ ನಂತರ ಆ ಅಶ್ವವನ್ನು ಬಲಿ ಕೊಡುತ್ತಾರೆ. ನಮ್ಮ ನಾಯಕರು ಬಲಿಯಾಗುವವರಲ್ಲ. ಅವರ ನಾಯಕರಿಗೆ ಅವರು ಹಾಗೇ ಹೇಳಿರಬಹುದೇನೋ ಅನ್ನಿಸುತ್ತಿದೆ.

ಅನೇಕ ಜನ ನಾಯಕರನ್ನು ಕೊಟ್ಟ ನಮ್ಮ ತಾಲ್ಲೂಕಿನ ಜನತೆ, ಯಾರನ್ನೂ ರಾಜಕೀಯ ಸಮಾಧಿ ಮಾಡಿಲ್ಲ. ಮುಂದೆ ಅವರಿಗೆ ಗೊತ್ತಾಗುತ್ತದೆ ಯಾರು ರಾಜಕೀಯ ಸಮಾಧಿ ಆಗುತ್ತಾರೆ ಎಂದು ಕಾದು ನೋಡಲಿ ಎಂದರು. ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಆರ್ ಎಸ್ ಎಸ್ ಸಂಘಟನೆಯು ಎಲ್ಲಾ ವರ್ಗದ ಜನಸಾಮಾನ್ಯರನ್ನು ಜನನಾಯಕರನ್ನಾಗಿ ಮಾಡುತ್ತದೆಯೇ ವಿನಹ ಕಾಸಿದ್ದವರಿಗೆ ಮಣೆ ಹಾಕುವುದಿಲ್ಲ. ನೈತಿಕತೆಯ ಬಗ್ಗೆ ಮಾತನಾಡುವ ನಾಯಕರೊಬ್ಬರು ಒಂದೇ ಅವಧಿಯಲ್ಲಿ ಎರಡು ಸರ್ಕಾರಿ ಕೆಲಸ ತೆಗೆದುಕೊಂಡು, ಒಂದರಲ್ಲಿ ಸಸ್ಪೆಂಡ್ ಆಗಿ ಮತ್ತೊಂದು ಕೆಲಸದಲ್ಲಿ ಎರಡು ವರ್ಷಗಳಲ್ಲಿ ಮೂರು ಬಡ್ತಿ ತಗೊತಾರೆ. ಇಂತಹ ವ್ಯಕ್ತಿ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕೆಂದರು.


ಯೋಗೇಶ್ವರ್ ಬಗ್ಗೆ ಮಾತನಾಡುವ ಹಕ್ಕು ತಾಲ್ಲೂಕಿನ ಇತರೆ ಪಕ್ಷದ ಮುಖಂಡರಿಗಿಲ್ಲ. ಹೆಚ್ಡಿಕೆ, ಡಿಕೆಶಿ ಬೇಕಾದರೆ ಮಾತನಾಡಲಿ. ನೀರಾವರಿ ಯೋಜನೆಯನ್ನು ತಿಳಿದುಕೊಂಡರೆ ಗೊತ್ತಾಗುತ್ತೆ. ನಮ್ಮ ಮತ್ತು ಅವರ ಕೊಡುಗೆ ಏನು ಎಂದು ತಿಳಿಯುತ್ತದೆ ಎಂದು ಮುಖಂಡ ಆರ್ ಎನ್ ಮಲವೇಗೌಡ ಹೇಳಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ನ ಪಕ್ಷಗಳಲ್ಲೇ ಗುಂಪುಗಾರಿಕೆ ಇದೆ, ಅವರು ನಮ್ಮ ಪಕ್ಷದ ಬಗ್ಗೆ ಹೇಗೆ ಮಾತನಾಡುತ್ತಾರೆ. ನೀರಾವರಿ, ಲಿಪ್ಟ್ ಇರ್ರಿಗೇಷನ್, ಅಂಬೇಡ್ಕರ್ ಭವನ, ಬಸ್ ನಿಲ್ದಾಣ ದಂತಹ ಶಾಶ್ವತ ಕಾಮಗಾರಿ ಇದೆ. ಇವರ ಶಾಶ್ವತ ಕಾಮಗಾರಿಗಳ ಬಗ್ಗೆ ಸಾಕ್ಷಿ ಗುಡ್ಡೆ ತೋರಿಸಲಿ ಎಂದರು.


ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ಸತ್ತಾಗ ಐದು ಸಾವಿರ, ನಾಲ್ಕು ದಿನದ ಆಹಾರ ಕಿಟ್ ಕೊಡುವುದೇ ಸಾಧನೆಯಲ್ಲ. ತಾಲ್ಲೂಕಿನ ಜನತೆ ಶಾಶ್ವತವಾಗಿ ಜೀವನ ರೂಪಿಸಿಕೊಳ್ಳುವಂತೆ ಕೆಲಸ ಮಾಡಿದ್ದಾರೆ. ಈ ನಡುವೆ ನನ್ನ ಅಧ್ಯಕ್ಷ ಸ್ಥಾನದ ರಾಜಿನಾಮೆ ಕೇಳುವ ಹಕ್ಕು ರಾಜಕೀಯ ಮುಖಂಡರಿಗಿಲ್ಲ. ನನ್ನನ್ನು ಹದಿನೆಂಟು ಮಂದಿ ತಾಲ್ಲೂಕು ಪಂಚಾಯತಿ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅವರು ನನ್ನ ರಾಜಿನಾಮೆ ಕೇಳಲಿ. ನಾನು ಕಾಂಗ್ರೆಸ್ ಚಿಹ್ನೆಯಡಿ ಗೆದ್ದಿದ್ದೇನೆ ನಿಜ, ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿಲ್ಲ. ಅವರು ಕಾನೂನಾತ್ಮಕವಾಗಿ ಸಮರ ಸಾರಿ ಪಕ್ಷ ವಿರೋಧಿ ಚಟುವಟಿಕೆ ಯಡಿಯಲ್ಲಿ ತೊಡಗಿದ್ದಾರೆ ಎಂದು ಬೇಕಾದರೆ ಕಾನೂನಾತ್ಮಕವಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲಿ, ಅದು ಬಿಟ್ಟು ರಾಜೀನಾಮೆ ಕೇಳಲು ಅವರು ಯಾರು ಎಂದರು.


ಯೋಗೇಶ್ವರ್ ತಾಲ್ಲೂಕಿನ ಜನರ ಮನಸ್ಸಿನಲ್ಲಿ ರಾಮಾಂಜನೆಯರಂತೆ ಹಾಸುಹೊಕ್ಕಾಗಿದ್ದಾರೆ. ಯೋಗೇಶ್ವರ್ ಸತ್ತ ಕುದುರೆಯಲ್ಲ, ಅವರು ರನ್ನಿಂಗ್ ಹಾರ್ಸ್, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮಾತ್ರ ಕಾಡಿಬೇಡುವ ಸಂಸ್ಕತಿ ಇದೆ, ಬಿಜೆಪಿಯಲ್ಲಿ ವ್ಯಕ್ತಿ ಮತ್ತು ಸಂಘಟನಾ ಚಟುವಟಿಕೆ ನೋಡಿ ನಾಯಕರನ್ನು ಗುರುತಿಸಿ ಅಧಿಕಾರ ನೀಡುತ್ತಾರೆ. ಅಂತಹ ನಾಯಕರು ನಮ್ಮ ಯೋಗೇಶ್ವರ್ ಎಂದು ತಾಲ್ಲೂಕು ಅಧ್ಯಕ್ಷ ಕೆ ಟಿ ಜಯರಾಮು‌ ಸಮರ್ಥನೆ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಎಲೆಕೇರಿ ರವೀಶ್, ನಗರ ಅಧ್ಯಕ್ಷ ಶಿವು, ಶಿವಲಿಂಗಯ್ಯ, ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑