Tel: 7676775624 | Mail: info@yellowandred.in

Language: EN KAN

    Follow us :


ದಂಡಾಧಿಕಾರಿ ಸುದರ್ಶನ್ ವರ್ಗಾವಣೆ: ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ಸಮಾನ ಮನಸ್ಕರಿಂದ ವೇದಿಕೆ ಸಿದ್ದ

Posted date: 31 Jul, 2020

Powered by:     Yellow and Red

ದಂಡಾಧಿಕಾರಿ ಸುದರ್ಶನ್ ವರ್ಗಾವಣೆ: ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ಸಮಾನ ಮನಸ್ಕರಿಂದ ವೇದಿಕೆ ಸಿದ್ದ

ಚನ್ನಪಟ್ಟಣ:ಜು/31/20/ಶುಕ್ರವಾರ. ತಾಲ್ಲೂಕಿನ ನಿಷ್ಠಾವಂತ ಅಧಿಕಾರಿ ಎನಿಸಿಕೊಂಡಿದ್ದ ದಂಡಾಧಿಕಾರಿ ಬಿ‌ ಕೆ ಸುದರ್ಶನ್ ರವರನ್ನು ವರ್ಷ ತುಂಬಿದ ಬೆನ್ನಲ್ಲೇ ಏಕಾಏಕಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ತಾಲ್ಲೂಕಿನ ಸಮಾನ ಮನಸ್ಕರ ವೇದಿಕೆಯಿಂದ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿಗೆ ಬೀಗ ಜಡಿಯಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.


ನಗರದ ಕೋಟೆ ಯಲ್ಲಿರುವ ಹಿಂದೂ ಜಾಗರಣೆ ವೇದಿಕೆಯ ಕಛೇರಿಯಲ್ಲಿ ಸಭೆ ನಡೆಸಿ, ಚರ್ಚಿಸಿದ ನಂತರ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಕಳೆದ 16 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರದ ಒತ್ತುವರಿ ಜಾಗಗಳಾದ ಕೆರೆ, ಕುಂಟೆ, ಕಾಲುವೆ, ಗೋಮಾಳ, ರಸ್ತೆ ಮುಂತಾದವುಗಳನ್ನು ಸರ್ವೇ ನಡೆಸುವ ಮೂಲಕ ಒತ್ತುವರಿ ತೆರವು ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸಿದ್ದರು. ಹಲವಾರು ಒತ್ತುವರಿಗಳಲ್ಲಿ ಸ್ಥಳೀಯ ರಾಜಕೀಯ ಮುಖಂಡರ ಪಾತ್ರವಿದ್ದು, ಅವರೆಲ್ಲರೂ ತಮ್ಮ ಸ್ವಾರ್ಥಕ್ಕಾಗಿ ತಹಶಿಲ್ದಾರ್ ರವರನ್ನು ವಿರೋಧಿಸುತ್ತಲೆ ಬರುತ್ತಿದ್ದು, ಅವರೇ ವರ್ಗಾವಣೆಯ ಹಿಂದಿದ್ದಾರೆ ಎಂಬುದು ಸಾರ್ವಜನಿಕ ಸತ್ಯವಾಗಿದೆ ಎಂದು ಅವರು ದೂರಿದ್ದಾರೆ.


ಇಂತಹ ದಕ್ಷ ಕೆಎಎಸ್ ಅಧಿಕಾರಿಯನ್ನು ಭ್ರಷ್ಟರ ಮಾತು ಕೇಳಿ ಸರ್ಕಾರ ವರ್ಗಾವಣೆ ಮಾಡಿರುವುದು ಅಕ್ಷಮ್ಯವಾಗಿದ್ದು, ಶೀಘ್ರವಾಗಿ ಸುದರ್ಶನ್ ರವರನ್ನು ಚನ್ನಪಟ್ಟಣ ತಾಲೂಕಿಗೆ ನಿಯೋಜಿಸಲೋಸುಗ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯಲು, ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತ ಕಛೇರಿಗೆ ಬೀಗ ಜಡಿಯಲಾಗುವುದು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆಗಳು, ಜಯ ಕರ್ನಾಟಕ ಸಂಘಟನೆಯ ಜೊತೆಗೆ ತಾಲೂಕಿನ ಕನ್ನಡ ಪರ, ಜನಪರ ಸಂಘಟನೆಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ರಾಜ್ಯ ಉಪಾಧ್ಯಕ್ಷ ಎಂ ರಾಮು, ಜಿಲ್ಲಾಧ್ಯಕ್ಷ ಎಂ ಮಲ್ಲಯ್ಯ, ಜಯ ಕರ್ನಾಟಕ ಸಂಘಟನೆಯ ರೇವಣ್ಣ, ನರಸಿಂಹ, ಹಿಂದೂ ಜಾಗರಣಾ ವೇದಿಕೆಯ ಗಜೇಂದ್ರ ಸಿಂಗ್, ವಕೀಲ ಸುರೇಶ್, ಸ್ವರಾಜ್ ಸಂಘಟನೆಯ ಸುಕನ್ಯಾ, ಅಭಿಲಾಷ್, ಆನಂದಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑