Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ಪುನರಾರಂಭವಾಯಿತೇ ಮರಳು ದಂಧೆ !? ಪುಷ್ಟೀಕರಿಸುತ್ತಿದೆ ಅಪ್ಪಗೆರೆ ಬಳಿಯ ಸಾಕ್ಷಿಗುಡ್ಡೆ

Posted date: 05 Aug, 2020

Powered by:     Yellow and Red

ತಾಲ್ಲೂಕಿನಲ್ಲಿ ಪುನರಾರಂಭವಾಯಿತೇ ಮರಳು ದಂಧೆ !? ಪುಷ್ಟೀಕರಿಸುತ್ತಿದೆ ಅಪ್ಪಗೆರೆ ಬಳಿಯ ಸಾಕ್ಷಿಗುಡ್ಡೆ

ಚನ್ನಪಟ್ಟಣ:ಆ/05/20/ಬುಧವಾರ. ಕಳೆದ ವರ್ಷದಿಂದ ಮರಳು ಅಥವಾ ಮರಳು ‌ದಂಧೆ ಎಂಬ ಹೆಸರೇ ಮರೆತು ಹೋಗಿದ್ದ ತಾಲ್ಲೂಕಿನ ಮಂದಿಗೆ ನಿನ್ನೆ ರಾತ್ರಿ ಎಡೆಬಿಡದೆ ಓಡಾಡಿದ ಲಾರಿಗಳು ಮತ್ತು ಟ್ರ್ಯಾಕ್ಟರ್ ಗಳ ಗಡಚಿಕ್ಕುವ ಸದ್ದಿನ ಜೊತೆಗೆ ಅಪ್ಪಗೆರೆ ಮತ್ತು ನೀಲಕಂಠನಹಳ್ಳಿ ನಡುವಿನ ಖಾಲಿ ಜಮೀನಿನಲ್ಲಿ ಗುಡ್ಡೆ ಹಾಕಿರುವ ಮರಳುಗುಡ್ಡೆಯು, ದಂಧೆ ಪುನಾರಾರಂಭಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.


ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಆದೇಶ ಹೊರಡಿಸಿ ನದಿ ಪಾತ್ರದಲ್ಲಿ ಮರಳು ಎತ್ತಬಾರದೆಂದು, ನಿಯಮ ಮೀರಿ ಮರಳು ಎತ್ತಿದರೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕಟ್ಟುನಿಟ್ಟಿನ ಆದೇಶದ ನಂತರ ಎಚ್ವೆತ್ತ ಸಂಬಂಧಿಸಿದ ಅಧಿಕಾರಿಗಳು ಮರಳು ದಂಧೆಯನ್ನು ತಡೆಯಲು ಯಶಸ್ವಿಯಾಗಿದ್ದರು. ಆದರೆ ಕಳೆದ ಮೂರು ದಿವಸಗಳಿಂದ ಸಣ್ಣದಾಗಿ ಆರಂಭವಾದ ದಂಧೆ ನಿನ್ನೆ ರಾತ್ರಿ ಭರ್ಜರಿಯಾಗೆ ನಡೆದಿದೆ.


ಈಗಾಗಲೇ ನದಿ ಪಾತ್ರಗಳಲ್ಲಿ ಮರಳು ತೆಗೆದಿರುವುದರಿಂದ ಗ್ರಾಮದಿಂದ ಗ್ರಾಮಕ್ಕೆ ಸೇರುವ ಸೇತುವೆಗಳು ಶಿಥಿಲವಾಗಿವೆ. ಎರಡೂ ಬದಿಯ ದಂಡೆಗಳು ಕೊಚ್ಚಿಹೋಗಿದ್ದು, ಕೆಲ ಗ್ರಾಮಗಳ ಮನೆಗಳು ಕುಸಿಯುವ ಹಂತ ತಲುಪಿವೆ. ಮರಳನ್ನೇ ನಂಬಿ ಜೀವಿಸುವ ಕೆಲ ಅಪರೂಪದ ಜಲಚರಗಳು ನಾಶ ಹೊಂದುತ್ತಿರುವುದು ಕಣ್ಣ ಮುಂದಿನ ಸತ್ಯವಾಗಿದ್ದರೂ ಸಹ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳದಿರುವುದು ಅನುಮಾನ ಮೂಡಿಸಿದೆ.


ರಾಮನಗರ ಜಿಲ್ಲೆಯಾಗುವ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಸಂದರ್ಭದಲ್ಲಿ, ಅಂದಿನ ಜಿಲ್ಲಾಡಳಿತವು ಕಣ್ವ ನದಿ ಪಾತ್ರವಾದ ಎಲೆಹೊಸಹಳ್ಳಿ ಗ್ರಾಮದಿಂದ ಸರಗೂರು ಗ್ರಾಮದವರೆಗೂ ಮರಳನ್ನು ಎತ್ತಬಾರದೆಂಬ ನಿಯಮವನ್ನು ರೂಪಿಸಿತ್ತು. ಇದನ್ನೆಲ್ಲಾ ಗಮನದಲ್ಲಿರುಸಿಕೊಂಡು ಅಧಿಕಾರಿಗಳು ದಂಧೆಕೋರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮುಂದಡಿಯಿಡಬೇಕಾಗಿದೆ.


ಕಳೆದ ಸಾಲಿನಲ್ಲಿ ಮರಳುದಂಧೆ ಎನ್ನುವುದು ಅಲ್ಲೊಂದು, ಇಲ್ಲೊಂದು ಎಂಬಂತೆ ಕದ್ದುಮುಚ್ಚಿ ನಡೆಯುತ್ತಿದ್ದವು. ನಗರಕ್ಕೆ ಮರಳು ಕನಸಿನ ಮಾತಾಗಿತ್ತು. ಆದರೆ ನಗರದ ಸಮೀಪವೇ ಮರಳನ್ನು ರಾಶಿರಾಶಿ ಗುಡ್ಡೆ ಹಾಕಿರುವುದರಿಂದ ಮರಳು ದಂಧೆ ಪುನರಾರಂಭವಾಗಿರುವುದಕ್ಕೆ ಸಾಕ್ಷಿಯಾಗಿದೆ. ಅಂದಿನ ತಹಶಿಲ್ದಾರ್ ಸುದರ್ಶನ್ ಇದ್ದಾಗ ನಡೆಯದ ದಂಧೆ ಈಗ ನಡೆಯುತ್ತಿದೆ ಎಂದರೆ ಅನುಮಾನ ಮೂಡುವುದು ಸಹಜ. ನೂತನ ತಹಶಿಲ್ದಾರ್ ನಾಗೇಶ್ ರವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ.

*ಪಿ ಜೆ ಗೋವಿಂದರಾಜು. ಸಾಮಾಜಿಕ ಹೋರಾಟಗಾರ.*


ನಾನು ತಾಲ್ಲೂಕಿನ ಆಡಳಿತದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದೇನೆ. ಹಲವಾರು ಮಾಹಿತಿಗಳನ್ನು ಈಗಾಗಲೇ ಕಲೆ ಹಾಕಿದ್ದೇನೆ. ಸಂಬಂಧಿಸಿದ ಎಲ್ಲಾ ಅಧಿಕಾರಗಳ ಸಭೆ ನಡೆಸಿ ಮರಳನ್ನು ತೆಗೆಯಲು, ತೆಗೆಯದಿರಲು ಎಲ್ಲೆಲ್ಲಿ ಅವಕಾಶವಿದೆ ಹಾಗೂ ಇಲ್ಲಾ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.

*ನಾಗೇಶ್ ತಹಶಿಲ್ದಾರ್.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑