Tel: 7676775624 | Mail: info@yellowandred.in

Language: EN KAN

    Follow us :


ಸದ್ಯದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅತ್ಯವಶ್ಯ. ಲಾಕ್ ಡೌನ್ ಕ್ರಮ ಹೀಗಿರಲಿ

Posted date: 05 Aug, 2020

Powered by:     Yellow and Red

ಸದ್ಯದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅತ್ಯವಶ್ಯ. ಲಾಕ್ ಡೌನ್ ಕ್ರಮ ಹೀಗಿರಲಿ

ಕೊರೊನಾ (ಕೋವಿಡ್-೧೯) ರಾಜ್ಯಾದ್ಯಂತ ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮಕ್ಕಳು, ಯುವಕರು, ಮುದುಕರೆನ್ನದೆ ಬಲಿ ಪಡೆಯುತ್ತಿರುವುದು ದಿನ ನಿತ್ಯವೂ ವರದಿಯಾಗುತ್ತಲೇ ಇವೆ. ಮುದ್ರಣ ಮಾಧ್ಯಮ ಹೊರತುಪಡಿಸಿದರೆ ದೃಶ್ಯ ಮಾಧ್ಯಮಗಳಲ್ಲಂತೂ ರೋಗ ಮತ್ತು ಸಾವಿನ ದೃಶ್ಯಗಳನ್ನು ದೊಡ್ಡ ಗಂಟಲಿನಿಂದ ಕಿರುಚಿ, ಚಿತ್ರವಿಚಿತ್ರವಾಗಿ ತೋರಿಸುವುದರ ಮೂಲಕ ಮನೆಮಂದಿಯನ್ನು ಭಯದಿಂದಲೇ ಸಾಯುವಂತೆ ಮಾಡುತ್ತಿರುವುದು ಮತ್ತೊಂದು ದುರಂತವೇ ಸರಿ.


ಲಾಕ್ಡೌನ್ ಎಂದಾಕ್ಷಣ ಜೀವನವೇ ಮುಗಿದು ಹೋಯಿತೇನೋ ಎನ್ನುವುದು ಜನರ ಕಣ್ಮುಂದೆ ಬರುವಂತೆ ಈ ದೃಶ್ಯ ಮಾಧ್ಯಮಗಳು ಬಿಂಬಿಸುತ್ತಿರುವುದು ಅಬಾಲ ವೃದ್ಧರನ್ನು ಅರ್ಧ ಜೀವಕ್ಕೆ ಇಳಿಸುತ್ತಿವೆ. ಇನ್ನೂ ಸರ್ಕಾರ ಘೋಷಿಸುವ ಲಾಕ್ಡೌನ್ ಮಾತ್ರ ಹಾಸ್ಯಾಸ್ಪದ ಎನಿಸುತ್ತಿದೆ.


ಅಗತ್ಯ ವಸ್ತುಗಳು ಪ್ರತಿ ಮನೆಗೂ, ಪ್ರತಿ ವ್ಯಕ್ತಿಗೂ ಅವಶ್ಯವಾಗಿ ಬೇಕಾಗಿರುವುದೇನೋ ನಿಜ. ಅದರಲ್ಲೂ ದಿನಗೂಲಿ ಕಾರ್ಮಿಕರು, ಕೆಲ ವಲಸಿಗರು‌ ಬಿಟ್ಟರೆ ಬೇರೆಯವರಿಗೆ ಜೀವನ ಅಂತಹ ಕಷ್ಟವೇನೂ ಆಗುವುದಿಲ್ಲ. ಮಧ್ಯಮ ವರ್ಗದವರು ಮಿಸುಕಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಹೇಗೋ ಸಂಭಾಳಿಸಿ ಬಿಡುತ್ತಾರೆ. ಇನ್ನೂ ಶ್ರೀಮಂತ ವರ್ಗದವರಿಗೆ ಈ ಲಾಕ್ಡೌನ್ ಏನೇನೂ ಅಲ್ಲ. ಇಲ್ಲ ನಮಗೂ ಕಷ್ಟ ಆಗುತ್ತೇ ಎನ್ನುವುದಾದರೆ ಆಗಲಿ‌ ಬಿಡಿ ಬಡವನ ಕಷ್ಟ ಅವನಿಗೂ ಗೊತ್ತಾಗಲಿ ಅಲ್ಲವೇ ! ಜೀವ ಇದ್ದರೆ ಜೀವನವಲ್ಲವೇ ? ದಿನಕ್ಕೊಪ್ಪತ್ತು‌ ಉಪವಾಸವಿದ್ದರೆ ಆರೋಗ್ಯದ ಜೊತೆಗೆ ಆಡಳಿತಗರ ಸಂಪತ್ತು ವೃದ್ಧಿಯಾಗುತ್ತದೆ ಅಲ್ಲವೇ.


ಕಳೆದ ತಿಂಗಳ ಮೊದಲು ಎರಡು ತಿಂಗಳ ಕಾಲ ಲಾಕ್ಡೌನ್ ಆದಾಗ ಯಾರಿಗೂ‌ ಅಂತಹ ಸಮಸ್ಯೆ ಆಗಲಿಲ್ಲ. ಉಳ್ಳವರ ಜೊತೆಗೆ ಅನೇಕ ಯುವ ಉತ್ಸಾಹಿಗಳು ಬಡವರ ನೆರವಿಗೆ ಧಾವಿಸಿ ಬಡವರ ಹಸಿವನ್ನು ನೀಗಿಸುವುದರ ಜೊತೆಗೆ ನಿಮ್ಮೊಡನೆ ನಾವಿದ್ದೇವೆ ಎಂದು ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದರು. ಇನ್ನೊಂದು ಬಾರಿ ಲಾಕ್ಡೌನ್ ಆದರೆ ಹಿಂದೆ ಸಹಾಯ ಮಾಡಿದವರು ಸ್ಪಂದಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುವ ಮೂಲಕ ಸ್ಪಂದಿಸುವುದರಿಂದ ಜೀವನ ಕಷ್ಟವೇನು ಆಗುವುದಿಲ್ಲ.


*ಲಾಕ್ಡೌನ್ ಕ್ರಮ ಹೀಗಿರಲಿ;*


ನಮಗೂ ಸೋಂಕು ತಗುಲಬಹುದು ಎಂಬ ಮುನ್ನೆಚ್ಚರಿಕೆಯಿಂದ ಸಣ್ಣ ಪುಟ್ಟ ಕ್ಲಿನಿಕ್ ಗಳು‌ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಎಷ್ಟೋ ಕಡೆ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಸಹ ಆಗಾಗ್ಗೆ ಸೀಲ್ಡೌನ್ ಆಗುತ್ತಲೇ ಇವೆ. ಇಂತಹ ಸಮಯದಲ್ಲಿ ಗಂಭೀರ ಖಾಯಿಲೆ ಹಾಗೂ ತುರ್ತು ಚಿಕಿತ್ಸೆ ಹೊರತುಪಡಿಸಿದರೆ ಬೇರೆ ಮದ್ದು ನೀಡುತ್ತಿಲ್ಲ.


ಹಾಗಾಗಿ ತಾಲ್ಲೂಕಿನ ಜನಗಣತಿಯ ಪ್ರಕಾರವಾಗಿ ದಿನನಿತ್ಯದ ಸಾಮಾನು ಸರಂಜಾಮುಗಳಿಗಾಗಿ ಕನಿಷ್ಠ ಒಂದರಿಂದ ಎರಡು ಗಂಟೆಗಳ ಕಾಲ ಕೊಂಡುಕೊಳ್ಳಲು ಸಮಯ ನಿಗದಿ ಮಾಡಬೇಕು. ಇದನ್ನು ಗ್ರಾಮ ಪಂಚಾಯತಿ ಹಾಗೂ ಪ್ರತಿ ಗ್ರಾಮಗಳಿಗೂ ಸಹ ಕಡ್ಡಾಯಗೊಳಿಸಬೇಕು. ಜೊತೆಗೆ ಇಲ್ಲೂ ಸಹ ಮಾಸ್ಕ್, ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಸ್ಥಳೀಯ ಆಡಳಿತ, ಟಾಸ್ಕ್ ಫೋರ್ಸ್ ಸಮಿತಿ ಖುದ್ದು ಹಾಜರಿದ್ದು ನಿರ್ವಹಣೆ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.


ತುರ್ತು ಚಿಕಿತ್ಸೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹಾಗೂ ನಗರದ ಜನಗಣತಿಗನುಗುಣವಾಗಿ ಒಂದು ಅಥವಾ ಎರಡು ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಬೇಕು. ಗ್ರಾಮ ಪಂಚಾಯತಿಗೊಂದರಂತೆ ಮೆಡಿಕಲ್ ಬಾಗಿಲು ತೆಗೆಯಬೇಕು. ಇನ್ನೂ ಪೆಟ್ರೋಲ್ ಬಂಕ್ ಗಳನ್ನು ನಗರದಲ್ಲಿ ಮಾತ್ರ ಪ್ರತಿ ದಿನ ಒಂದರಂತೆ ಮಾತ್ರ ತೆರೆಯಬೇಕು. ಸರ್ಕಾರದ ವಾಹನಗಳು, ಅಗತ್ಯ ವಸ್ತುಗಳ ಪೂರೈಕೆದಾರರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮದ ವರದಿಗಾರರಿಗೆ ಜಿಲ್ಲಾ ಅಥವಾ ತಾಲ್ಲೂಕು ಆಡಳಿತ ಪಾಸ್ ನೀಡುವ ಮೂಲಕ ನಿರ್ವಹಿಸಬೇಕು. ಈ ರೀತಿಯ ಲಾಕ್ಡೌನ್ ಮಾಡಿದಾಗ ಮಾತ್ರ ಕೊರೊನಾ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.


ಅಗತ್ಯ ವಸ್ತುಗಳು ಮತ್ತು ವಾರಿಯರ್ಸ್ (Essential) ಎಂಬ ಹೆಸರಿನ ಅಡಿಯಲ್ಲಿ ಶೇಕಡಾ ೭೦ ಕ್ಕೂ ಹೆಚ್ಚು ಮಂದಿಗೆ ಓಡಾಡಲು ರಹದಾರಿ ಕೊಟ್ಟು, ಸೋಂಕಿತರನ್ನು ಹೆಚ್ಚು ಮಾಡಿ ಬೊಬ್ಬೆ ಹೊಡೆಯುವ ಆಡಳಿತವು ಕನಿಷ್ಠ ಎರಡು ವಾರ ಅಥವಾ ಒಂದು ತಿಂಗಳು ಕಟ್ಟುನಿಟ್ಟಿನ ಲಾಕ್ಡೌನ್ ಮಾಡಿದರೆ ಸೋಂಕಿತರು ಕಡಿಮೆಯಾಗುವರು. ಮುಂದಿನ ದಿನಗಳಲ್ಲಿ ಆಡಳಿತವು ಚುರುಕಾಗುವುದರಲ್ಲಿ ಅನುಮಾನವಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.


ಲಕ್ಷ್ಮಿ ಗೋ ರಾ ಶ್ರೀನಿವಾಸ...

ಜಿ ಜಿ ದೊಡ್ಡಿ. ಚನ್ನಪಟ್ಟಣ.

ಸಾಂಸ್ಕೃತಿಕ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರು.

ಮೊ:9740001666.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑