Tel: 7676775624 | Mail: info@yellowandred.in

Language: EN KAN

    Follow us :


ಅವಶ್ಯಕತೆ ಇರುವ ಕಡೆ ಹೆಚ್ಚಿನ ಕೋವಿಡ್ ಪರೀಕ್ಷೆ ನಡೆಸಿ : ಡಿಸಿಎಂ

Posted date: 11 Aug, 2020

Powered by:     Yellow and Red

ಅವಶ್ಯಕತೆ ಇರುವ ಕಡೆ ಹೆಚ್ಚಿನ ಕೋವಿಡ್ ಪರೀಕ್ಷೆ ನಡೆಸಿ : ಡಿಸಿಎಂ

ರಾಮನಗರ:ಆ/10/20/ಸೋಮವಾರ. ಜಿಲ್ಲೆಗೆ ನಿಗದಿಯಾಗಿರುವ ಗುರಿಗೆ ಮಾತ್ರ ಕೋವಿಡ್ ಪರೀಕ್ಷೆಗೆ ಸೀಮಿತಗೊಳಿಸದೆ ಅವಶ್ಯಕತೆ ಇರುವ ಕಡೆ ಹೆಚ್ಚಿನ ಕೋವಿಡ್-19 ಪರೀಕ್ಷೆ ನಡೆಸುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ತಿಳಿಸಿದರು.


ಅವರು ಇಂದು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಜಿಲ್ಲೆಯಲ್ಲಿ ಐ.ಎಲ್.ಐ ಹಾಗೂ ಎಸ್.ಎ.ಆರ್.ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ. ಜಿಲ್ಲೆಯಲ್ಲಿ ಮಧುಮೇಹ, ರಕ್ತದ ಒತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಪ್ರಾಥಮಿಕ ಹಂತದಲ್ಲೇ ಕೋವಿಡ್ ಕಾಯಿಲೆಯನ್ನು ಪತ್ತೆ ಹಚ್ಚಿ  ಚಿಕಿತ್ಸೆಗೆ ಒಳಪಡಿಸಿ ಎಂದರು.


*ಸಹಾಯವಾಣಿ:* ಕೋವಿಡ್ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಲು ತೆರೆಯಲಾಗಿರುವ ಸಹಾಯವಾಣಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಆಶಾಕಾರ್ಯಕರ್ತೆಯರು  ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರ್ವಜನಿಕರು ಹೆಚ್ಚು ಸಂಪರ್ಕಿಸುತ್ತಾರೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ  ಆರೋಗ್ಯ ಇಲಾಖೆಯಲ್ಲಿ ನರ್ಸ್ಗಳ ಕೊರತೆ ಇದ್ದರೆ ಬೇರೆ ಸ್ಥಳದಿಂದ 15 ನರ್ಸ್ ಗಳ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಿಕೊಡಬೇಕು ಎಂದರು.


*ಆ್ಯಂಟಿಜೆನ್ ಕಿಟ್:* ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ 19,480  ಸ್ಯಾಂಪಲ್‌ಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1670 ಪಾಸಿಟಿವ್ ಕಂಡುಬಂದಿರುತ್ತದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 6,000 ಆ್ಯಂಟಿಜೆನ್ ಕಿಟ್ ನೀಡಲಾಗಿದ್ದು 5462  ಬಳಸಿಕೊಳ್ಳಲಾಗಿದೆ ಇದರಲ್ಲಿ 469 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ ಎಂದರು.


*40 ಲಕ್ಷ ಮಾನವ ದಿನ:* ಜಿಲ್ಲೆಯಲ್ಲಿರುವ 122 ಗ್ರಾಮ ಪಂಚಾಯಿತಿಗಳಿಂದ 2020ರ ಆಗಸ್ಟ್ 10ರ ಅಂತ್ಯಕ್ಕೆ ದಾಖಲೆಯಾದ 40 ಲಕ್ಷ ಮಾನವ ದಿನಗಳನ್ನು ನರೇಗಾ ಯೋಜನೆಯಡಿ ಸೃಜಿಸಲಾಗಿದೆ. ವಾರ್ಷಿಕವಾಗಿ ನೀಡಲಾಗಿರುವ 50 ಲಕ್ಷ ಮಾನವ ದಿನಗಳ ಗುರಿಯ ಪೈಕಿ ಈಗಾಗಲೇ 21 ಲಕ್ಷ ಮಾನವ ದಿನಗಳಿಗಿಂತ ಅಧಿಕ ಸಾಧನೆಯನ್ನು ಜಿಲ್ಲೆಯಲ್ಲಿ ಮಾಡಲಾಗಿದೆ. ಒಟ್ಟಾರೆಯಾಗಿ ಶೇ. 172 ಸಾಧನೆ ಮಾಡುವ ಮೂಲಕ ಜಿಲ್ಲೆಯ ಜನತೆಗೆ ಕರೋನಾದಿಂದ ಉದ್ಯೋಗ ಸಿಗದಿದ್ದವರಿಗೆ ಜಿಲ್ಲಾ ಪಂಚಾಯಿತಿ ನೆರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ಉಪಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.


*ಆಟದ ಮೈದಾನ*: ಜಿಲ್ಲೆಯಲ್ಲಿ 1,400 ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢ ಮತ್ತು ಹೈಸ್ಕೂಲ್ ಗಳಿವೆ. ಈ ಪೈಕಿ ಆಯ್ದ 500 ಶಾಲೆಗಳನ್ನು ಗುರುತಿಸಿ ಅಲ್ಲಿ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಸುಮಾರು ಒಂದು ಎಕರೆಯಷ್ಟು ಕನಿಷ್ಠ ಜಾಗವನ್ನು ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ, ಓಟ ಟ್ರ‍್ಯಾಕ್, ಕಬ್ಬಡಿ, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಕೋರ್ಟ್, ಹೈಜಂಪ್ ಮತ್ತು ಲಾಂಗ್ ಜಂಪ್ ಗೆ ಅನುಕೂಲವಾಗುವಂತೆ ಮರಳು ಗುಂಡಿಗಳ ನಿರ್ಮಾಣ ಸೇರಿದಂತೆ ಐದು ಇಲ್ಲವೆ ಆರು ಬಗೆಯ ಆಟಗಳನ್ನು ಮಕ್ಕಳು ಆಡಲು ಅನುವಾಗುವಂತೆ ಮೈದಾನವನ್ನು ನಿರ್ಮಿಸಲಾಗುವುದು ಎಂದು ಸಿಇಒ ಇಕ್ರಂ ಅವರು ಉಪಮುಖ್ಯಮಂತ್ರಿಗಳಿಗೆ ವಿವರಿಸಿದರು.


*ಅಭಿನಂದನೆ:* ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ನೂತನವಾಗಿ ರೂಪಿಸಿರುವ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆಯಲ್ಲಿ ರಾಮನಗರ ಜಿಲ್ಲೆ 'ಎ'  ಗ್ರೇಡ್ ಸಾಧನೆ ಮಾಡಿದೆ. ಇದಕ್ಕಾಗಿ ಜಿಲ್ಲೆಗೆ ಹೆಸರು ತಂದುಕೊಟ್ಟ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಶಿಕ್ಷಕರನ್ನು ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಅಭಿನಂದಿಸಿದರು.


*ಕೋವಿಡ್ ಕೇರ್:* ರಾಮನಗರದಲ್ಲಿರುವ ಕೋವಿಡ್-19 ಆಸ್ಪತ್ರೆಯು ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ದೊಡ್ಡ ಮರಳವಾಡಿಯಲ್ಲಿ 118 ಹಾಸಿಗೆಗಳ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಇನ್ನು ಮುಂದೆ ಈ ಭಾಗದಲ್ಲಿನ ಕೋವಿಡ್ ಸೋಂಕಿತರಿಗೆ ಇಲ್ಲೇ ಚಿಕಿತ್ಸೆ ನೀಡಲಾಗುವುದು. ಅದೇ ರೀತಿ ಮಾಗಡಿಯಲ್ಲೂ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಅನ್ನು ಇನ್ನೆರಡು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.


 ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑