Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ

Posted date: 25 Sep, 2020

Powered by:     Yellow and Red

ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ

ಚನ್ನಪಟ್ಟಣ/ಬೆಂಗಳೂರು:ಸೆ/24/20/ಗುರುವಾರ.

ಚನ್ನಪಟ್ಟಣ ನಗರದ ಡಿ ಟಿ ರಾಮು ವೃತ್ತದ ಬಳಿಯ ಈಡಿಗರ ಬೀದಿಯ ಗಿರೀಶ್ ರವರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅವರಿಗೆ 2018-19 ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ದೊರೆತಿದೆ.


ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಕೆಲ ಆಸ್ಪತ್ರೆಗಳಿಗೆ ರೋಗಿಗಳು ಸಹ ಹೋಗಲು ಹಿಂಜರಿಯುತ್ತಾರೆ. ಒಂದಿದ್ದರೆ ಮತ್ತೊಂದಿಲ್ಲ ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿದೆ. 46 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್ತಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಂತಹ ಸೌಲಭ್ಯಗಳನ್ನು ಪಡೆಯಲು ರೋಗಿಗಳು ಮತ್ತು ಆಸ್ಪತ್ರೆಯ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುವವರೇ ಸಾರ್ವಜನಿಕ ಸಂಪರ್ಕಾಧಿಕಾರಿ. (ಪಿ ಆರ್ ಓ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಇವರಿಗೆ ಕಾಯಕಲ್ಪ ಪ್ರಶಸ್ತಿ ಸಂದಿರುವುದು ಚನ್ನಪಟ್ಟಣಕ್ಕೆ ಸಂದ ಹಿರಿಮೆಯಾಗಿದೆ.


ಸರ್ಕಾರಿ ಅಸ್ಪತ್ರೆಗಳ ಸಮಗ್ರ ನಿರ್ವಹಣೆ, ಸ್ವಚ್ಛತೆ, ಔಷಧಗಳ ಲಭ್ಯತೆ, ಗುಣಮಟ್ಟದ ಚಿಕಿತ್ಸಾ ವಿಧಾನ, ರೋಗಿಗಳೊಂದಿಗಿನ ಸಂವಹನ ಸಂಬಂಧ ಹಾಗೂ ನಗುಮೊಗದ ಸೇವೆ, ಸಕಾಲಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯತೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯಲ್ಲಿನ ಎಲ್ಲಾ ಕಾರ್ಯಕ್ಷಮತೆಯನ್ನು ಸದರಿ ಆಸ್ಪತ್ರೆಗಳಿಗೆ ಗೊತ್ತಾಗದ ರೀತಿಯಲ್ಲಿ ಸಮೀಕ್ಷೆ ನಡೆಸಿ, ನೂರಾರು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ತುಲನೆ ಮಾಡಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ಗಿರೀಶ್ ರವರಿಗೆ ವೈಯುಕ್ತಿಕವಾಗಿ ಹೆಚ್ಚಿನ ಲಾಭವಿಲ್ಲವಾದರೂ ಸರ್ಕಾರದಿಂದ ಆಸ್ಪತ್ರೆಗೆ ಹೆಚ್ಚು ಅನುದಾನ ದೊರೆತು, ಮತ್ತಷ್ಟು ಬೆಳವಣಿಗೆಗೆ ಕಾರಣವಾಗಲಿದೆ.


ಈ ಸಂಬಂಧ ನಮ್ಮ ಪತ್ರಿಕೆಗೆ ಸಂತಸ ಹಂಚಿಕೊಂಡಿರುವ ಗಿರೀಶ್, ಕಳೆದ ಹತ್ತು ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಕಾಯಕಲ್ಪ ಪ್ರಶಸ್ತಿ ಸಂದಿದೆ. ಆಸ್ಪತ್ರೆಯ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯೇತರ ಸಿಬ್ಬಂದಿ, ಆಸ್ಪತ್ರೆ ನಿರ್ವಹಣಾ ಸಿಬ್ಬಂದಿ ಹಾಗೂ ವಿಶೇಷವಾಗಿ ನನ್ನ ಸಹೋದ್ಯೋಗಿಗಳ ಸಂಯಮ ಹಾಗೂ ರೋಗಿಗಳ ಸಹಕಾರದಿಂದಾಗಿ ಈ ಒಂದು ಕಾಯಕಲ್ಪ ಪ್ರಶಸ್ತಿ ನಮ್ಮ ಆಸ್ಪತ್ರೆಯ ಮುಡಿಗೇರಲು ಕಾರಣವಾಗಿದೆ ಎನ್ನುತ್ತಾರೆ.


ಇನ್ನೂ ಹೆಚ್ಚಿನ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಈ ಪ್ರಶಸ್ತಿ ಯು ಒಂದು ರೀತಿಯಲ್ಲಿ ಪುಷ್ಟಿ ನೀಡಿದೆ. ನಮ್ಮದೇ ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಟಾನಿಕ್ ರೂಪದಲ್ಲಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸ್ಫೂರ್ತಿಯಾಗಿದೆ ಎಂಬುದು ಅವರ ಮನದಾಳದ ಮಾತಾಗಿದೆ. ಇವರಿಗೆ ನಮ್ಮ ರಾಮನಗರ ಜಿಲ್ಲೆಯ ಹಾಗೂ ವಿಶೇಷವಾಗಿ ಚನ್ನಪಟ್ಟಣದ ಜನತೆಯ ಪರವಾಗಿ ನಮ್ಮ ಪತ್ರಿಕೆಯು ಶುಭ ಕೋರುತ್ತದೆ.


*ಗಿರೀಶ್ ಬಗ್ಗೆ ಒಂದಿಷ್ಟು;*

ಗಿರೀಶ್ ಪ್ರಾಥಮಿಕ ಶಾಲೆಯಿಂದ ಪದವಿಯವರೆಗೂ ಓದಿದ್ದು ಸಂಪೂರ್ಣ ಸರ್ಕಾರಿ ಶಾಲಾಕಾಲೇಜುಗಳಲ್ಲೆ, ಡಿ ಟಿ ರಾಮು ವೃತ್ತದಲ್ಲಿ ಇರುವ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಜಿಕೆಬಿಎಂಎಸ್ ಶಾಲೆಯಲ್ಲಿ ಮಾಧ್ಯಮಿಕ ಮತ್ತು ಪ್ರೌಢ, ಪಿಯುಸಿ ಕುವೆಂಪು ಕಾಲೇಜಿನಲ್ಲಿ, ಬಿಎ ಪದವಿಯನ್ನು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ, ಎಂಎ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ, ಕನ್ನಡ ಸಂವಹನ ಡಿಪ್ಲೊಮಾ ವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಾಗೂ ಪತ್ರಿಕೋದ್ಯಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕೆಓಸಿ ಯಲ್ಲಿ ಅಂಚೆ ತೆರಪಿನ ಮೂಲಕ ಪಡೆದಿದ್ದಾರೆ. ಇವರ ತಂದೆ ಸಿ ವಿ ಗೋಪಾಲ್ ರವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, ನಂತರ ನಗರದ ಡಿಗ್ರಿ ಕಾಲೇಜಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.


ಈ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನ ಡಾ ಜಯಂತಿ, ವೈದ್ಯಕೀಯ ಅಧೀಕ್ಷಕ ಡಾ ರಾಮಕೃಷ್ಣ, ಡಾ ಶ್ರೀನಿವಾಸ, ಡಾ ನಾಗಮೂರ್ತಿ, ಡಾ ಜಗದೀಶ್, ಡಾ ನರಸಿಂಹಮೂರ್ತಿ, ಡಾ ರವಿ, ಡಾ ಸತೀಶ್, ಡಾ ಅಂಬಿಕಾ, ಡಾ ರಾಜಾರೆಡ್ಡಿ, ಡಾ ರಮೇಶ್, ಡಾ ಶಿವಕುಮಾರ್, ಡಾ ಮನೋರಂಜನ್, ಪುಷ್ಪವಾಣಿ, ದಯಾಶಂಕರ್ ಮತ್ತಿತರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑