Tel: 7676775624 | Mail: info@yellowandred.in

Language: EN KAN

    Follow us :


ಅಧಿಕಾರ ಕೊಟ್ಟ ನಾಯಕರನ್ನೇ ನೆನೆಯದ ಲಿಂಗೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಆತನನ್ನು ಶೀಘ್ರವೇ ಉಚ್ಛಾಟನೆ ಮಾಡಬೇಕು. ಸಿಂಲಿಂ ನಾಗರಾ

Posted date: 13 Nov, 2020

Powered by:     Yellow and Red

ಅಧಿಕಾರ ಕೊಟ್ಟ ನಾಯಕರನ್ನೇ ನೆನೆಯದ ಲಿಂಗೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಆತನನ್ನು ಶೀಘ್ರವೇ ಉಚ್ಛಾಟನೆ ಮಾಡಬೇಕು. ಸಿಂಲಿಂ ನಾಗರಾ

ಚನ್ನಪಟ್ಟಣ:ನ/12/20/ಗುರುವಾರ. ೨೦೦೪ ನೇ ಇಸವಿಯಿಂದಲೂ ಅವರಿಗೆ ಅನುಕೂಲವಾಗುವ ಚುನಾವಣೆ ಹೊರತುಪಡಿಸಿ, ಮಿಕ್ಕೆಲ್ಲಾ ಚುನಾವಣೆಗಳಲ್ಲೂ  ಪಕ್ಷ ವಿರೋಧಿ ಚುಟುವಟಿಕೆಯಲ್ಲಿ ನಿರತರಾಗಿರುವ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಿಂಗೇಶ್‍ಕುಮಾರ್ ಮತ್ತು ಮುಖಂಡ ಲಿಂಗರಾಜೇಗೌಡ ( ರಾಜಣ್ಣ)ರನ್ನು ಈ ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ಆಗ್ರಹಿಸಿದರು.

ಅವರು ಇಂದು ಲಿಂಗೇಶ್ ಕುಮಾರ್ ವಿರುದ್ದ ಸ್ವಗ್ರಾಮ ಸಿಂಗರಾಜಪುರದ ತಮ್ಮ ಮನೆಯಲ್ಲಿ ಕರೆದಿದ್ದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಲಿಂಗೇಶ್ ಕುಮಾರ್ ಮತ್ತು ಲಿಂಗರಾಜೇಗೌಡ (ರಾಜಣ್ಣ) ನಿರಂತರವಾಗಿ ಪಕ್ಷ ವಿರೋಧಿ ರಾಜಕಾರಣ ನಡೆಸಿಕೊಂಡು ಬರುತ್ತಿದ್ದಾರೆ. ೨೦೦೪ ರಿಂದ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದು, ಜೆಡಿಎಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಇವರ ಚಿತಾವಣೆಯ ಕಾರಣದಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದ್ದು, ಈ ಕೂಡಲೇ ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.


ತಮ್ಮ ಸ್ವಾರ್ಥ, ಅಧಿಕಾರ ಲಾಲಸೆಯಿಂದಾಗಿ ಇವರು ಪಕ್ಷಕ್ಕೆ ಹಾನಿ ಮಾಡುತಿದ್ದಾರೆ. ೨೦೦೪ ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಸಿ.ಅಶ್ವತ್ಥ್, ೨೦೦೯ ರಲ್ಲಿ ಸ್ಪರ್ಧಿಸಿದ್ದ ನಾನು ಮತ್ತು ೨೦೧೩ರಲ್ಲಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರ ಸೋಲಿಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗೆ ಸತತ ಹದಿನಾರು ವರ್ಷಗಳ ಕಾಲ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿರುವವರಿಗೆ ಪಕ್ಷದಲ್ಲಿ ಉಳಿಯುವ ನೈತಿಕ ಹಕ್ಕಿಲ್ಲ. ಉಚ್ಛಾಟನೆಗೂ ಮುಂಚೆ ಅವರೇ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಹೋಗಬೇಕು ಎಂದು ತಾಕೀತು ಮಾಡಿದರು.


ಇತ್ತೀಚಿಗೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲೂ ಸಹ ಪಕ್ಷದ ಅಧಿಕೃತ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ಕೆಲಸ ಮಾಡದ ಲಿಂಗೇಶ್‍ಕುಮಾರ್, ಬಿಜೆಪಿ ಅಭ್ಯರ್ಥಿ ಪುಟ್ಟಣ ಪರ ಕೆಲಸ ಮಾಡಿರುವುದು ಅವರ ಪಕ್ಷ ವಿರೋಧಿ ಚಟುವಟಿಕೆಗೆ ಕಣ್ಣೆದುರಿನ ಉದಾಹರಣೆಯಾಗಿದೆ. ಇಂಥವರನ್ನು ಪಕ್ಷ ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ. ಹಾಗಾಗಿ ಶೀಘ್ರದಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.


ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಇಂಥವರ ವಿರುದ್ಧ ಲಿಂಗೇಶ್‍ಕುಮಾರ್ ಮತ್ತವರ ಬಣ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ಜಯಮುತ್ತು ರಾಜೀನಾಮೆ ಕೇಳಲು ಲಿಂಗೇಶ್ ಕುಮಾರ್ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಪ್ರತಿನಿತ್ಯ ಮೂರು ಸಾವಿರ ಮಂದಿಗೆ ಆಹಾರ ವಿತರಿಸಿದ್ದು ಜಯಮುತ್ತು. ಪಕ್ಷ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಜಯಮುತ್ತು. ಜಯಮುತ್ತು ನಿಷ್ಠಾವಂತ ಜೆಡಿಎಸ್ ಬಣದ ಪ್ರಶ್ನಾತೀತ ನಾಯಕರಾಗಿದ್ದು, ಇವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಲಿಂಗೇಶ್ ಕುಮಾರ್ ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಪಕ್ಷದಿಂದ ಹೊರಹೋಗಬೇಕು ಎಂದು ಅವರು ಆಗ್ರಹಿಸಿದರು.


ಸಿಂಗರಾಜಪುರ ಪಿಎಸಿಎಸ್ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, ಲಿಂಗೇಶ್ ಕುಮಾರ್ ಜೆಡಿಎಸ್ ಪಕ್ಷದ ಭಕ್ಷಕನೇ ಹೊರತು ರಕ್ಷಕನಲ್ಲ.ಇಂತಹ ಲಿಂಗೇಶ್ ಕುಮಾರ್ ಮತ್ತವರ ಬಣ ತಮ್ಮ ಅಧಿಕಾರ ದಾಹಕ್ಕಾಗಿ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿದೆ. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ನಿರ್ಲಕ್ಷಿಸಿ ಸಿಂಗರಾಜಪುರ ಪಿಎಸಿಎಸ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರನ್ನು ಸೇರಿಸಿಕೊಂಡು ಚುನಾವಣೆ ನಡೆಸಿದ್ದಾರೆ. ಲಿಂಗೇಶ್‍ಕುಮಾರ್ ಬಣದಿಂದ ಗೆದ್ದಿರುವವರಲ್ಲಿ ಐದು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರು ಎಂದು ಆರೋಪಿಸಿದರು.

ನಾವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಚಿಹ್ನೆ ಇಟ್ಟುಕೊಂಡು ಪ್ರಚಾರ ಮಾಡಿದೆವು. ಆದರೆ, ಅವರ ಬಣದವರು ಕೇವಲ ತಮ್ಮ ಭಾವಚಿತ್ರ ಹಾಕಿಕೊಂಡು ಪಾಂಪ್ಲೆಟ್ ಮುದ್ರಿಸಿ ಪ್ರಚಾರ ಮಾಡಿತು. ಇದರಿಂದಲೇ ಜೆಡಿಎಸ್‍ನ ನಿಷ್ಠಾವಂತ ಕಾರ್ಯಕರ್ತರು ಯಾರು ಎಂದು ತಿಳಿಯುತ್ತದೆ ಎಂದು ಕಿಡಿಕಾರಿದರು.

ಸಿಂಗರಾಜಪುರ ಪಿಎಸಿಎಸ್‍ನ ನಿರ್ದೇಶಕರನ್ನು ಕಡೆಗಣಿಸಲಾಗುತ್ತಿತ್ತು, ಅವರ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ. ಹೆಸರಿಗೆ ಮಾತ್ರ ಅವರು ನಿರ್ದೇಶಕರಾಗಿದ್ದರು. ಎಲ್ಲ ತೀರ್ಮಾನಗಳು ಲಿಂಗೇಶ್ ಕುಮಾರ್ ಮತ್ತು ರಾಜಣ್ಣ ಬಣ ತೆಗೆದುಕೊಳ್ಳುತ್ತಿತ್ತು. ಇದರಿಂದ ಬೇಸತ್ತು ನಿರ್ದೇಶಕರು ರಾಜೀನಾಮೆ ನೀಡಿದರೆ ಹೊರತು ಯಾವುದೇ ಆಮಿಷಕ್ಕೆ ಬಲಿಯಾಗಿ ರಾಜೀನಾಮೆ ನೀಡಿಲ್ಲ. ಲಿಂಗೇಶ್ ಮತ್ತವರ ಬಣ ರಾಜೀನಾಮೆ ನೀಡಿದ ನಿರ್ದೇಶಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಸಹಕಾರ ಕ್ಷೇತ್ರಕ್ಕೆ ನಡೆದ ಸಾಕಷ್ಟು ಚುನಾವಣೆಗಳಲ್ಲಿ ಲಿಂಗೇಶ್ ಕುಮಾರ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿ ೨೧ ವಿಎಸ್‍ಎಸ್‍ಎನ್‍ಗಳಿದ್ದು, ಎಷ್ಟು ವಿಎಸ್‍ಎಸ್‍ಎನ್‍ಗಳಲ್ಲಿ ಲಿಂಗೇಶ್‍ಕುಮಾರ್ ಜೆಡಿಎಸ್ ಭಾವುಟ ಆರಿಸಿದ್ದಾರೆ ಎಂದು ಪ್ರಶ್ನಿಸಿದರು.


ಜೆಡಿಎಸ್ ಮುಖಂಡ ಪುಟ್ಟಚಂದ್ರು ಮಾತನಾಡಿ, ಸಿಂಗರಾಜಪುರ ಸಿಎಪಿಸಿಎಸ್‍ಗೆ ಚುನಾವಣೆ ಘೋಷಣೆಯಾದ ನಂತರ ಲಿಂಗೇಶ್ ಕುಮಾರ್ ಮತ್ತು ಸಿಂಗರಾಜಪುರ ರಾಜಣ್ಣ ಬಂದು ನಮ್ಮನ್ನು ಸಂಪರ್ಕಿಸಲಿಲ್ಲ. ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವ ಕುರಿತು ನಮ್ಮೊಂದಿಗೆ ಚರ್ಚಿಸಲಿಲ್ಲ. ತಮಗೆ ಬೇಕಾದ ಅಭ್ಯರ್ಥಿಗಳನ್ನು ನಿಲ್ಲಿಸಿಕೊಂಡು ಚುನಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಭಾಗದ ಮುಖಂಡರು ಮತ್ತು ಕಾರ್ಯಕರ್ತರು ಅತಂತ್ರರಾದ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷರಾದ ಜಯಮುತ್ತು ಪಕ್ಷವನ್ನು ಉಳಿಸುವ ಸಲುವಾಗಿ ಬಂದು ನಮ್ಮ ಬೆಂಬಲಕ್ಕೆ ನಿಂತರು. ಪಕ್ಷದ ಮುಖಂಡರ ಜತೆ ಚರ್ಚಿಸಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಜಯಮುತ್ತು ಪಕ್ಷ ನಿಷ್ಠೆಯನ್ನು ಪ್ರಶ್ನಿಸುವ ನೈತಿಕತೆ ಲಿಂಗೇಶ್‍ಕುಮಾರ್ ಗೆ ಇಲ್ಲ. ಇನ್ನಾದರೂ ಪಕ್ಷದ ವಿರುದ್ಧ ಕೆಲಸ ಮಾಡುವುದನ್ನು ಲಿಂಗೇಶ್ ಕುಮಾರ್ ಬಿಡಬೇಕು. ಇಲ್ಲದಿದ್ದಲ್ಲಿ ಪಕ್ಷದಿಂದ ಹೊರನಡೆಯಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಭೂಹಳ್ಳಿ ವೆಂಕಟಪ್ಪ, ಹಿರಿಯ ಮುಖಂಡ ಅರಳಾಳು ಶಿವಪ್ಪ, ಭೂಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಸಿಎಪಿಸಿಎಸ್ ನ ನೂತನ ಸದಸ್ಯ ಉಜ್ಜನಹಳ್ಳಿ ಪ್ರಭು ಲಿಂಗೇಶ್ ಕುಮಾರ್ ವಿರುದ್ದ ಹರಿಹಾಯ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑