Tel: 7676775624 | Mail: info@yellowandred.in

Language: EN KAN

    Follow us :


ಕುಮಾರಸ್ವಾಮಿ ಯವರೇ ನಿಮ್ಮ ಚಿತ್ತವಿರಲಿ ಇತ್ತ ನಗರದ ಸಾರ್ವಜನಿಕ ಇಲಾಖೆಗಳ ಕಛೇರಿಗಳಲಿಲ್ಲ ಮೂಲಭೂತ ಸೌಕರ್ಯಗಳು. ಮೂರು ಮಂದಿ ಸ್ಥಳೀಯ ಶಾಸಕರಿದ್ದರೂ ಬಂದ ಪ

Posted date: 19 Nov, 2020

Powered by:     Yellow and Red

ಕುಮಾರಸ್ವಾಮಿ ಯವರೇ ನಿಮ್ಮ ಚಿತ್ತವಿರಲಿ ಇತ್ತ  ನಗರದ ಸಾರ್ವಜನಿಕ ಇಲಾಖೆಗಳ ಕಛೇರಿಗಳಲಿಲ್ಲ ಮೂಲಭೂತ ಸೌಕರ್ಯಗಳು. ಮೂರು ಮಂದಿ ಸ್ಥಳೀಯ ಶಾಸಕರಿದ್ದರೂ ಬಂದ ಪ

ಚನ್ನಪಟ್ಟಣ:ನ/18/20/ಮಂಗಳವಾರ.


*ದೊಡ್ಡಮಟ್ಟದ, ಕೋಟಿಲೆಕ್ಕದ ಕೆಲಸಗಳು, ಅದಕ್ಕೆ ಗೆಜ್ಜೆ (ಗುದ್ದಲಿ) ಪೂಜೆ ಮಾಡುವುದು,  ಉದ್ಘಾಟನೆ ಮಾಡುವುದು ಎಷ್ಟು ಅವಶ್ಯಕತೆಯೋ ಹಾಗೆ ಸಾರ್ವಜನಿಕರಿಗಾಗಿ ಸಣ್ಣಸಣ್ಣ ಮೂಲಭೂತ ಸೌಕರ್ಯಗಳೂ ಅಷ್ಟೇ ಮುಖ್ಯ. ನಗರದ ಸ್ವಚ್ಛತೆ ಕಾಪಾಡುವುದೇ ಇವುಗಳು. ಅಲ್ಲಲ್ಲಿ, ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೇ ಮಾತ್ರ ! ದಯವಿಟ್ಟು ಇವುಗಳ ಬಗ್ಗೆ ಗಮನಹರಿಸ

ತಾಲೂಕಿನಲ್ಲಿ ಒಟ್ಟು ಮೂವತ್ತೆರಡು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಎಲ್ಲಾ ಇಲಾಖೆಗಳು ನಗರದಲ್ಲಿಯೇ ಇವೆ. ಅರ್ಧಕ್ಕೂ ಹೆಚ್ಚು ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿವೆ. ರೈತರು ಮತ್ತು ಸಾರ್ವಜನಿಕರು ಪ್ರತಿದಿನ ಎಡತಾಕುವ ಮುಖ್ಯ ಇಲಾಖೆಗಳ ಕಛೇರಿಗಳಲ್ಲಿ ದಿನಗಟ್ಟಲೇ ಕಾಯುವ ಸಾರ್ವಜನಿಕರಿಗಾಗಿ ಕನಿಷ್ಠ ಶೌಚಾಲಯಗಳಿಲ್ಲದಿರುವುದು ತಾಲ್ಲೂಕಿನ ಅಭಿವೃದ್ಧಿಯು ಎಷ್ಟರಮಟ್ಟಿಗಿದೆ ಎಂಬುದನ್ನು ಬಿಂಬಿಸುತ್ತಿದೆ.


*ಮೂರು ಮಂದಿ ಶಾಸಕರು ನಪಾಸು
ತಾಲ್ಲೂಕಿನಲ್ಲಿ ಸದ್ಯ ಮೂರು ಮಂದಿ ಶಾಸಕರಿದ್ದಾರೆ. ಜನಪ್ರತಿನಿಧಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕಲಾವಿದರ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಇತ್ತೀಚೆಗೆ ಗೆದ್ದು ಬಂದ ಸ್ಥಳೀಯರೇ ಆದ ಮಾಜಿ ಉಪ ಸಭಾಪತಿ ಪುಟ್ಟಣ್ಣ ನವರೇ ಈ ತ್ರಿಮೂರ್ತಿಗಳು. ಇವರಲ್ಲದೇ ಲೋಕಸಭಾ ಸದಸ್ಯರಾಗಿ ಡಿ ಕೆ ಸುರೇಶ್, ಇನ್ನಿತರ ವಿಧಾನ ಪರಿಷತ್ ಸದಸ್ಯರಾದ ಸಿ ಎಂ ಲಿಂಗಪ್ಪ ಮತ್ತು ಅ ದೇವೇಗೌಡರು ಸ್ಥಳೀಯರೇ ಹೌದಾದರೂ ಮೂಲ ಸೌಕರ್ಯಗಳ ಕಡೆ ಕಣ್ಣೆತ್ತಿ ನೋಡದಿರುವುದರಿಂದ ತಾಲ್ಲೂಕಿನ ಜನರು ಭ್ರಮನಿರಸನಗೊಂಡಿದ್ದಾರೆ.

*ಮೇಟಿಯ ಬಳಿಯೇ ಇಲ್ಲ
ಬಹುತೇಕ ಎಲ್ಲಾ ಇಲಾಖೆಗಳು ತಾಲೂಕಿನ ದಂಡಾಧಿಕಾರಿ ಗಳ ಅಡಿಯಲ್ಲಿ ಬರುತ್ತವೆ. ಇಡೀ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇದ್ದೊಂದು ಪಾಯಖಾನೆಯೂ ಗಬ್ಬೆದ್ದು ನಾರುತ್ತಿದ್ದು, ಪಾಯಖಾನೆಗೆ ಹೋಗುವುದಿರಲಿ, ಓಡಾಡಲಾಗದೆ ಜನರು ಮೂಗು ಬಾಯಿ ಮುಚ್ಚಿಕೊಂಡು ತಾಲ್ಲೂಕು ಕಛೇರಿಗೆ ಬರುವಂತಾಗಿದೆ. ತಾಲ್ಲೂಕು ಕಛೇರಿಯ ಒಂದು ಭಾಗ ಮತ್ತು ಹಿಂಭಾಗದ ಗೋಡೆಗಳೇ ಗಂಡಸರ ಶೌಚಾಲಯವಾಗಿದ್ದು, ಹೆಂಗಸರ ಪಾಡು ಹೇಳತೀರದಾಗಿದೆ.


*ತಾಲ್ಲೂಕು ಪಂಚಾಯತಿ ಕಛೇರಿಯಲ್ಲೂ ಇಲ್ಲ
ತಾಲ್ಲೂಕು ಕಛೇರಿಯ ಪಕ್ಕದಲ್ಲೇ ಹೊಂದಿಕೊಂಡಿರುವ ತಾಲ್ಲೂಕು ಪಂಚಾಯತಿ ಕಛೇರಿಯೂ ಸಹ ಇದಕ್ಕೆ ಹೊರತಾಗಿಲ್ಲ. ಸಾರ್ವಜನಿಕ ಶೌಚಾಲಯ ಒಂದಿದ್ದು ಆತುರ ತಡೆಯಲಾರದೆ ಒಮ್ಮೆ ಕಣ್ಣು, ಮೂಗು ಮತ್ತು ಬಾಯಿ ಮುಚ್ಚಿಕೊಂಡು ಒಮ್ಮೆ ಹೋಗಿಬರಬಹುದೇ ವಿನಹ ಮತ್ತೇ ಹೋಗಲಾಗದು. ರೇಷ್ಮೆ ಗೂಡಿನ ಮಾರುಕಟ್ಟೆ ಮತ್ತು ಪಂಚಾಯತಿ ನಡುವೆ ಇರುವ ಚರಂಡಿಯೇ ಶೌಚಾಲಯವಾಗಿ ಮಾರ್ಪಟ್ಟಿದೆ. ಪಂಚಾಯತಿ ಪಕ್ಕದಲ್ಲೇ ಇರುವ ಕೃಷಿ ಇಲಾಖೆಯೂ ಸಹ ಹತ್ತರಲ್ಲಿ ಹನ್ನೊಂದರಂತಿದೆ.

*ಅಬ್ಬಾ ಇದು ನಗರಸಭೆಯೋ ಅಥವಾ ನರರಾಕ್ಷರ ಸಭೆಯೋ !?
ನಗರಕ್ಕೂ ಶೋಭೆ ತರುವಂತಹ ಇಲಾಖೆಯೊಂದಿದೆ ಎನ್ನುವುದಾದರೇ ಅದು ನಗರಸಭೆ. ನಗರಸಭೆ ಎಂದು ಯಾವ ಪುಣ್ಯಾತ್ಮ ಹೆಸರಿಸಿದರೋ ಗೊತ್ತಿಲ್ಲ. ಚನ್ನಪಟ್ಟಣ ನಗರಸಭೆ ಎಂಬ ನಾಮದ ಬದಲು ಗಬ್ಬು ನಾರಿಸುವ ಅಧಿಕಾರಿಗಳ ಕಛೇರಿ ಎಂದೇ ಹೆಸರಿಸಿದರೇ ಒಗ್ಗುತ್ತಿತ್ತು. ಅಕ್ರಮ ಇ-ಖಾತೆ ಗಳಿಗೆ ಸಂಬಂಧಿಸಿದ ಕೆಲಸಗಳು ಎಷ್ಟು ತ್ವರಿತವಾಗಿ ನಡೆಯುತ್ತವೆಯೋ ಅದರಲ್ಲಿ ಶೇಕಡಾ ಹತ್ತರಷ್ಟು ಕೆಲಸ ಕಸ ಎತ್ತುವುದು, ವಿಂಗಡಿಸುವುದು ಮತ್ತು ಮೇಲಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ನಿರಂತರವಾಗಿ ಸಂಪರ್ಕಿಸಿ, ಕಸ ಹಾಕಲು ನೀಡಿರುವ ಜಾಗವನ್ನು ವಶಪಡಿಸಿಕೊಳ್ಳಲು ಅಕ್ರಮ ಖಾತೆಗಳಿಗೆ ಮತ್ತು ಲಂಚದ ಆಸೆಗಾಗಿ ನೀಡುವ ಸಮಯವನ್ನು ಜಾಗ ವಶಪಡಿಸಿಕೊಳ್ಳಲು ನೀಡಿದರೇ ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯಲ್ಲಿ ಬೇಡ. ಕನಿಷ್ಠ ಅವರಿಗೆ ಅವರೇ ಬೆನ್ನು ತಟ್ಟಿಕೊಳ್ಳುವಷ್ಟಾದರೂ ಕಸ ಎತ್ತುವ ಮೂಲಕ ಕನಿಷ್ಠ ಸ್ವಚ್ಛ ನಗರಿ ಎಂದಾದರೂ ಬಿಂಬಿಸಲು ಪ್ರಯತ್ನ ಮಾಡಬಹುದಿತ್ತು.

ಇನ್ನು ಸಾರ್ವಜನಿಕ ಶೌಚಾಲಯಗಳ ವಿಷಯಕ್ಕೇ ಬಂದರೆ ಅವಸರವಾಗಿದ್ದರೂ ಮಲಮೂತ್ರ ಬಂದ್ ಆಗಿಬಿಡುವಷ್ಟು ಕೊಳಕಾಗಿವೆ. ನಗರಸಭೆಯ ವ್ಯಾಪ್ತಿಗೆ ಏಳು ಸಾರ್ವಜನಿಕ ಶೌಚಾಲಯ ಬರುತ್ತಾವಾದರೂ ಸಾರಿಗೆ ಸಂಸ್ಥೆಯ ಆವರಣದಲ್ಲಿರುವ ಶೌಚಾಲಯಗಳನ್ನು ಹೊರತುಪಡಿಸಿ ಯಾವ ಶೌಚಾಲಯಗಳು ಚಾಲ್ತಿಯಲ್ಲಿಲ್ಲ. ನಗರಸಭೆಯ ಆವರಣದಲ್ಲೇ ಶೌಚಾಲಯ ಇಲ್ಲವೆಂದರೆ ಮತ್ತೆಲ್ಲಿ ಕೇಳುವುದು.?

*ಯಾರ ಮುಲಾಜಿಗಾಗಿ ಸಬ್ ರಿಜಿಸ್ಟ್ರಾರ್ ಕಛೇರಿ ಇಲ್ಲಿದೆ ?
ಸರ್ಕಾರಕ್ಕೆ ಪತ್ರಗಾರರಿಂದ ಹಿಡಿದು ಸಬ್ ರಿಜಿಸ್ಟ್ರಾರ್ ರವರೆಗೆ ಯಥೇಚ್ಛವಾಗಿ, (ಅಧಿಕಾರಿಗಳಿ ಅಧಿಕೃತ ಮತ್ತು ಅನಧಿಕೃತವಾಗಿ) ಹೆಚ್ಚು ದುಡ್ಡು ಬಟಾವಡೆಯಾಗುವುದೇ ಸಬ್ ರಿಜಿಸ್ಟ್ರಾರ್ ಅಂದರೆ ನೋಂದಣಿ ಇಲಾಖೆಯಲ್ಲಿ. ಈ ಇಲಾಖೆಯವರು ಯಾರ ಮುಲಾಜಿಗೆ ಒಳಗಾಗಿ ಇಲ್ಲಿರುವರೋ ಆ ಮನೆಯ ಮಾಲೀಕ ಮತ್ತು ಇಲಾಖೆಯ ಮುಖ್ಯಸ್ಥ ರಿಗೆ ಗೊತ್ತು. ಮೊದಲೇ ಇಕ್ಕಟ್ಟಿನ ರಸ್ತೆ, ಅದೇ ಕಿರಿದಾದ ರಸ್ತೆಯಲ್ಲಿ ಮೂರು ವಾಣಿಜ್ಯ ಬ್ಯಾಂಕುಗಳು, ಭಾರತ ಸಂಚಾರ ನಿಗಮದ ಕಛೇರಿ, ಆಸ್ಪತ್ರೆ, ಮಾಲ್, ಮುದ್ರಣ, ಜಿಮ್, ಇನ್ನಿತರ ಕಛೇರಿಗಳು ಸೇರಿದಂತೆ ಸಹಸ್ರಾರು ಮಂದಿ ಸೇರುತ್ತಾರೆ. ಅವೆಲ್ಲವನ್ನೂ ಒಂದು ಕಡೆ ಇಟ್ಟರೂ ನೋಂದಣಿಗಾಗಿಯೇ ಬರುವವರ ಸಂಖ್ಯೆ ಶತಕ ದಾಟುತ್ತದೆ. ಹಲವು ನೋಂದಣಿಗಳಿಗೆ ಸಣ್ಣ ಮಕ್ಕಳನ್ನು ಎತ್ತಿಕೊಂಡು ಇಂದೋ ನಾಳೆಯೋ ಸಾಯುವ ಮುದುಕರವರೆಗೂ ಇಲ್ಲಿಗೆ ಬರುತ್ತಾರೆ. ಸಾರ್ವಜನಿಕ ಶೌಚಾಲಯವಿಲ್ಲದೇ ಮಹಿಳೆಯರು ಮತ್ತು ವೃದ್ದರು ಜಲ-ಮಲ ತಡೆಯಲಾರದೆ ನೋವಿನ ಜೊತೆಗೆ ಖಾಯಿಲೆಗಳನ್ನೂ ಪಡೆದುಕೊಂಡು ಹೋಗುವಂತಾಗಿದೆ.



*ಸುಶಿಕ್ಷಿತ ಕಛೇರಿ ಬಿಇಓ ಕಛೇರಿ
ಸುಶಿಕ್ಷಿತರೇ ತುಂಬಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಛೇರಿಯೂ ಸಹ ಇದಕ್ಕೆ ಹೊರತಾಗಿಲ್ಲ. ಬಿಇಓ ಕಛೇರಿಗೆ ಎಡತಾಕುವ ಶಿಕ್ಷಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕನಿಷ್ಠ ಜ್ಞಾನ ಇಲ್ಲದಿರುವುದು ದುರ್ದೈವದ ಸಂಗತಿ. ಅಥವಾ ಇದರ ಉಸಾಬರಿ ನನಗೇಕೆ ಎಂಬ ಉಡಾಫೆಯೋ ಗೊತ್ತಿಲ್ಲ. ಬಿಇಓ ಕುಳಿತು ಕೊಳ್ಳುವ ಕೊಠಡಿ ಬಳಿಯ ಕಾಂಪೌಂಡ್ ಗೋಡೆಯೇ ಉಚ್ಚೆಕೊಚ್ಚೆಯಾಗಿದ್ದು ಹೇಗೆ ಸಹಿಸಿಕೊಂಡಿದ್ದಾರೋ ಅವರೇ ಬಲ್ಲರು.

*ಎರಡು ಹೆಣ ಮಲಗಿಸಲು ಶವಾಗಾರವೂ ಇಲ್ಲ. ಹೆರಿಗೆ ಆಸ್ಪತ್ರೆಯೂ ಇಲ್ಲ
ನಗರದಲ್ಲಿ ಹೆಸರಿಗೊಂದು ಸಾರ್ವಜನಿಕ ಆಸ್ಪತ್ರೆ ಇದೆ. ಆದರೆ ವೈದ್ಯರು ಮತ್ತು ಇನ್ನಿತರ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಹೆರಿಗೆಗೆ ಬರುವ ಗರ್ಭಿಣಿಯರಿಗೆ ತನ್ನ ನೋವು ಹೆಚ್ಚಾಗಿರುತ್ತದೆ. ಪೋಷಕರಿಗೆ ಆತಂಕ ಹೆಚ್ಚಾಗಿರುತ್ತದೆ. ಅವರಿಗೆ ದಾದಿ (ನರ್ಸ್) ಯಾರೂ ಡಾಕ್ಟರ್ ಯಾರೂ ಎಂದು ಗೊತ್ತಾಗುವುದಿಲ್ಲ. ಅದೆಷ್ಟೋ ಬಾರಿ ಹೆರಿಗೆ ವೈದ್ಯರಿದ್ದಾಗಲೂ, ಇಲ್ಲದಿದ್ದಾಗಲೂ ದಾದಿಯರೇ ಹೆರಿಗೆ ಮಾಡಿಸುತ್ತಾರೆ ಎಂಬುದು ಅನೇಕರ ದೂರಾಗಿದೆ.

ಹೈವೇ ರಸ್ತೆಗೆ ಹೊಂದಿಕೊಂಡಿರುವ ನಗರವಾದ್ದರಿಂದ ಅಪಘಾತಗಳು ಆಗುತ್ತಲೇ ಇರುತ್ತವೇ, ಅಪಘಾತಗಳ ಜೊತೆಗೆ ಇನ್ನಿತರ ರೀತಿಯ ಆತ್ಮಹತ್ಯೆ ಹಾಗೂ ಆಗಾಗ ಕೊಲೆ ಪ್ರಕರಣಗಳು ಆಸ್ಪತ್ರೆಗೆ ಬರುತ್ತವೆ. ಇರುವುದೊಂದೇ ಶವಾಗಾರ ಕೊಠಡಿ. ಎರಡು ಮೂರು ಶವಗಳು ಬಂದರೆ ಅನಾಥ ಶವಗಳನ್ನು ಬಿಸಾಕಿದ ಹಾಗೆ ಎಲ್ಲೆಂದರಲ್ಲಿ ಮಲಗಿಸುತ್ತಾರೆ. ಪೋಷಕರು ಶವ ಮಲಗಿಸಿರುವುದನ್ನು ನೋಡಿಯೇ ಆಘಾತಕ್ಕೊಳಗಾಗುತ್ತಾರೆ. ದಯಮಾಡಿ ಇತ್ತ ಗಮನ ಹರಿಸಿ.


*ಕೋಟಿ ಚಲಾವಣೆಯ ಪಿಡಬ್ಲ್ಯೂಇ ಕಛೇರಿಗಳು
ಪಿಡಬ್ಲ್ಯೂಇ ಗೆ ಸಂಬಂಧಿಸಿದಂತೆ ಮೂರು ಕಛೇರಿಗಳಿವೆ. ಅತಿ ಹೆಚ್ಚು ಹಣದ ಹೊಳೆ ಮತ್ತು ಅಕ್ರಮಗಳು ನಡೆಯುವುದೇ ಇಲ್ಲಿ. ಇಲ್ಲಿ ಮೂರಂಕಿ, ನಾಲ್ಕಂಕಿ ಮತ್ತು ಐದಂಕಿಯ ಹಣ ತೃಣ ಸಮಾನ. ಇಲ್ಲಿ ಮಾತನಾಡುವುದೇನಿದ್ದರೂ ಲಕ್ಷ ಕೋಟಿಗಳೇ ! ಇಂತಹ ಕಛೇರಿಗಳಲ್ಲೂ ಮೂಲಭೂತ ಅಂದ್ರೇನು ಅನ್ನುವಂತಾಗಿದೆ. ಕೋಟಿ ಲೂಟಿ ಹೊಡೆದ ಗುತ್ತಿಗೆದಾರರು ಅಥವಾ ಕಮಿಷನ್ ಎಣಿಸುವ ಇಂಜಿನಿಯರ್ ಗಳೋ ತಮ್ಮ ಪಾಪ ತೊಳೆದುಕೊಳ್ಳುವುದಕ್ಕಾದರೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಮನಸ್ಸು ಮಾಡಲಿ.

*ಪೋಲಿಸ್, ರೇಷ್ಮೆ ಮತ್ತು ಬಾಡಿಗೆ ಕಟ್ಟಡದ ಕಛೇರಿಗಳಲ್ಲೂ ಇಲ್ಲ
ನಗರದಲ್ಲಿ ಇರುವ ಮೂರು ಪೋಲಿಸ್ ಠಾಣೆಗಳಾಗಲಿ, ರೇಷ್ಮೆ ಗೂಡಿನ ಮಾರುಕಟ್ಟಯಲ್ಲಾಗಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಇದ್ದರೂ ಹೋಗಲಾಗದಷ್ಟೂ ಗಬ್ಬುನಾರುತ್ತಿವೆ.
ಇನ್ನೂ ಬಾಡಿಗೆ ಕರಾರಿನಲ್ಲಿರುವ ಕಛೇರಿಗಳಲ್ಲಿ ಶೌಚಾಲಯ ಎಂದರೇನೆಂದು ಕೇಳಿಬಿಟ್ಟಾರೇನೋ ಎಂಬ ಸ್ಥಿತಿ ಇದೆ.
ಇಷ್ಟೆಲ್ಲಾ ಜನಪ್ರತಿನಿಧಿಗಳು, ಮೂವತ್ತೆರಡು ಮಂದಿ ಅಧಿಕಾರಿಗಳು, ಪ್ರತಿ ಇಲಾಖೆಗಳಲ್ಲೂ ಸಂಘ(ಗ)ಳು, ಅದಕ್ಕೊಂದಷ್ಟು ಪದಾಧಿಕಾರಿಗಳು. ಅಧೀನ ಅಧಿಕಾರಿಗಳು, ಸ್ವಕಾರ್ಯಕ್ಕಾಗಿಯೇ ಪ್ರತಿದಿನ ಎಡತಾಕುವ, ಗಂಟೆಗಟ್ಟಲೆ ಕೂರುವ ಸಂಘ (ಗ) ಸಂಸ್ಥೆಗಳ ರೂವಾರಿಗಳು, ಜೈಕಾರ ಧಿಕ್ಕಾರ ಕೂಗುವವರೇನಕರಿದ್ದೂ ಸಹ ಸಾರ್ವಜನಿಕರ ಮೂಲ ಸೌಕರ್ಯಗಳಿಗಾಗಿ ಒಂದಿನಿತು ಚಕಾರವೆತ್ತದಿರುವುದು ತಾಲ್ಲೂಕಿನ ಜನತೆಯ ದೌರ್ಭಾಗ್ಯ ಎನ್ನುವುದು.



*ಇರುವ ಕಟ್ಟಗಳನ್ನು ಸದುಪಯೋಗ ಪಡಿಸಿಕೊಳ್ಳಿ
ತಾಲ್ಲೂಕು ಕಛೇರಿಯ ಬಳಿಯ ಜಾಗ ಹಾಗೂ ನೆಲಹಂತಸ್ತಿನಲ್ಲಿ ಜಾಗ ಖಾಲಿ ಇದೆ. ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವೂ ಖಾಲಿ ಇದೆ, ತಹಶಿಲ್ದಾರವರ ವಾಸದ ಮನೆಯೂ ಖಾಲಿ ಇದೆ. ಇಂತಹ ಕಡೆ ನೋಂದಣಿ ಇಲಾಖೆಯಂತಹ ಕಛೇರಿಗಳು ಹಾಗೂ ಬಾಡಿಗೆಗಿರುವ ಕಛೇರಿಗಳನ್ನು ತಾತ್ಕಾಲಿಕವಾಗಿಯಾದರೂ ಸ್ಥಳಾಂತರ ಮಾಡುವ ಮೂಲಕ ತೆರಿಗೆದಾರರಾದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಮಾಡಿ ತಮಗೆ ಮತ ನೀಡಿ ಗೆಲ್ಲಿಸಿದವರಿಗೆ ಸಹಾಯ ಹಸ್ತ ನೀಡಿ.

*ಒತ್ತುವರಿ ತೆರವುಗೊಳಿಸಿ, ಸರ್ಕಾರದ ಆಸ್ತಿ ಉಳಿಸಿ ಗೇಣಿದಾರರಿಗೆ ನ್ಯಾಯ ಒದಗಿಸಿ
ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಕೆರೆ, ಕುಂಟೆ, ರಸ್ತೆ, ಗುಡ್ಡ, ಅರಣ್ಯ ಮತ್ತು ನದಿ ಪಾತ್ರ ಸೇರಿದಂತೆ (ಮರಳುಗಣಿಗಾರಿಕೆಯೂ ಸೇರಿ) ಎಲ್ಲವೂ ಒತ್ತುವರಿಯಾಗಿವೆ. ಒತ್ತುವರಿ ಮಾಡಿರುವವರೆಲ್ಲರೂ ಪಕ್ಷಗಳ ಮುಖಂಡರೂ ಮತ್ತು ಇನ್ನಿತರ (ಅ)ಗಣ್ಯ ವ್ಯಕ್ತಿಗಳೇ. ಈ ಕೆಲಸ ಶೀಘ್ರವಾಗಿ ಆಗಬೇಕಿದೆ. ಒತ್ತುವರಿ ತೆರವುಗೊಳಿಸದಾಗಲೇ ಸರ್ಕಾರಿ ಜಾಗ ಉಳಿಯಲು, ಸೂಕ್ಷ್ಮ ಜೀವಿಗಳು ಬದುಕಲು, ಕಲುಷಿತಗೊಂಡಿರುವ ವಾತಾವರಣ ಶುದ್ಧಿಯಾಗಲೂ ಸಾಧ್ಯವಾಗುತ್ತದೆ.
ಸಾಗುವಳಿ ಚೀಟಿ ಮೂರು ವರ್ಷಗಳೇ ಕಳೆದಿದ್ದರೂ ಅವರಿಗಿನ್ನೂ ಪಹಣಿ ಬರುತ್ತಿಲ್ಲ. ತಾಲೂಕಿನ ಗಡಿಗ್ರಾಮದ ಕೆರೆಗಳಿಗೆ ನೀರು ತುಂಬಿಸುತ್ತಲ್ಲಾ ಎಂಬ ದೂರುಗಳಿಗೆ ಸ್ಪಂದಿಸಿ.

*ಇಂದಿನಿಂದ ನಿಮ್ಮ ಭೇಟಿ, ಶುರುವಾಗಲಿ ಸಾರ್ವಜನಿಕರ ಬೇಡಿಕೆಗಳ ಬೇಟೆ
ಹೆಚ್ ಡಿ ಕುಮಾರಸ್ವಾಮಿ ಯವರು ಇಂದಿನಿಂದ ಮೂರು ದಿನಗಳ ಕಾಲ ತಾಲ್ಲೂಕಿಗೆ ಭೇಟಿ ನೀಡುವ ಮಾಹಿತಿ ಬಂದಿದ್ದು, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಿ. ಮಿಕ್ಕ ಜನಪ್ರತಿನಿಧಿಗಳು ಸಹ ಕೈಜೋಡಿಸಲಿ. ಸಂಬಂಧಿಸಿದ ಅಧಿಕಾರಿಗಳು ಕೆಲಸ ಮಾಡುವ ಮೂಲಕ ಸ್ವಚ್ಛ ಚನ್ನಪಟ್ಟಣಕ್ಕಾಗಿ ದುಡಿಯಲಿ. ಇಲ್ಲ ಆಗಲ್ಲ ಎಂಬ ಧೋರಣೆ ಇದ್ದರೆ ಸಾರ್ವಜನಿಕವಾಗಿ ತಿಳಿಸಲಿ. ಸಾರ್ವಜನಿಕರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ನೀವು, ಅದೇ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ತಮಗೇ ತಾವೇ ಹಾಕಿಕೊಂಡರೇ ಅಥವಾ ತಂತಮ್ಮ ಕಛೇರಿಗಳಲ್ಲಿ ತಾವು ಉಪಯೋಗಿಸಲು ಶೌಚಾಲಯಗಳೇ ಇಲ್ಲದಿದ್ದರೆ, ಎಂಬುದನ್ನು ಒಂದರೆ ಕ್ಷಣ ಊಹಿಸಿ ನೋಡಿ. ಸಾಧ್ಯ ಎನ್ನುವುದಾದರೆ ಹೀಗೆ ಮುಂದುವರೆಸಿ; ಸಾಧ್ಯವಿಲ್ಲವೆಂದಾದರೆ ಶೀಘ್ರವಾಗಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಂದೇ ಕಾಮಗಾರಿ ಆರಂಭಿಸಿ.

ಗೋ ರಾ ಶ್ರೀನಿವಾಸ...
ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑