Tel: 7676775624 | Mail: info@yellowandred.in

Language: EN KAN

    Follow us :


ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;

Posted date: 25 Jan, 2021

Powered by:     Yellow and Red

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ;

ರಾಮನಗರ:ಜ/25/21/ಸೋಮವಾರ. ರೈತರನ್ನು ಇನ್ನೂ ದುಃಸ್ಥಿತಿಗೆ ತಳ್ಳಲು ಷಡ್ಯಂತ್ರ ಎಂದು ದೂರಿದ ಡಿಸಿಎಂ*


*12 ಕೋಟಿ ರೂ. ವೆಚ್ಚದ ಟಯೋಟ-ಕಿರ್ಲೋಸ್ಕರ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ*

ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದ್ದಾರೆ.


ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಟಯೋಟ ಕಿರ್ಲೋಸ್ಕರ್‌ ಕಂಪನಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮಾದರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ 73 ವರ್ಷಗಳಲ್ಲಿ ಮಾಡಲಾಗದ್ದನ್ನು ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಸಹಿಸಲಾಗದೆ ಕೆಲವರು ಅಪಪ್ರಚಾರ ನಡೆಸುತ್ತ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.


*ಇದು ರೈತ ವಿರೋಧಿ ಷಡ್ಯಂತ್ರ:*

ರೈತ ವಿರೋಧಿ ಕೆಲಸಗಳಲ್ಲಿ ತೊಡಗಿರುವ ಕೆಲವರು ಈ ಎಲ್ಲಾ ಷಡ್ಯಂತ್ರಗಳ ಹಿಂದೆ ಇದ್ದಾರೆ. ದೇಶ ಮುನ್ನಡೆಯುವುದನ್ನು ವ್ಯವಸ್ಥಿತವಾಗಿ ತಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆರ್ಥಿಕವಾಗಿ ಪ್ರಬಲರಾಗುವುದು ಅವರಿಗೆ ಇಷ್ಟವಿಲ್ಲ. ಯಾವತ್ತಿಗೂ ಅವರು ಮತಬ್ಯಾಂಕ್‌ನ ಬಲಿಪಶುಗಳಾಗಿಯೇ ಇರಬೇಕು ಎಂಬುದು ಅವರ ದುರದ್ದೇಶ ಎಂದು ಡಿಸಿಎಂ ದೂರಿದರು.


ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದ್ದ ರೈತರು ಬೆಳೆದ ಬೆಳೆಗಳನ್ನು ಈಗ ಎಲ್ಲಿ ಬೇಕಾದರೂ ಮಾರಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಇದ್ದರೆ ಅನ್ನದಾತನಿಗೆ ಉತ್ತಮ ಬೆಲೆ ಸಿಗುತ್ತದೆ. ದಲ್ಲಾಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ರೈತರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 


ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಮಾರಕವಾದ ಒಂದು ಅಂಶವೂ ಇಲ್ಲ. ಸ್ವತಃ ಪ್ರಧಾನಮಂತ್ರಿಗಳೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇಷ್ಟಾದರೂ ಹಠಕ್ಕೆ ಬಿದ್ದು ರೈತರನ್ನು ಹಾದಿ ತಪ್ಪಿಸುತ್ತಾರೆಂದರೆ ಇದರ ಹಿಂದೆ ಯಾವುದೋ ದುರುದ್ದೇಶ ಅಡಗಿದೆ ಎಂಬ ಅನುಮಾನ ಬರುವುದು ಸಹಜ. ಇಂಥ ಜನಪರ ಕಾರ್ಯಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಡಿಸಿಎಂ ಸ್ಪಷ್ಟ ಮಾತುಗಳಲ್ಲಿ ಹೇಳಿದರು.


*ಕೃಷಿ ಕೇಂದ್ರಗಳ ಲೋಪ ಸರಿಮಾಡುತ್ತೇವೆ:*

ರಾಮನಗರ ಜಿಲ್ಲೆಯ ಕೃಷಿ ಸೇವಾ ಕೇಂದ್ರಗಳಲ್ಲಿ ಲೋಪಗಳಿವೆ ಎಂದು ಸುದ್ದಿಗಾರರು ಗಮನ ಸೆಳೆದಿದ್ದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ; ಲೋಪಗಳನ್ನು ಖಂಡಿತಾ ಸರಿಪಡಿಸಲಾಗುವುದು. ಯಾವ ಉದ್ದೇಶಕ್ಕೆ ಆ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯೋ ಅದು ಈಡೇರಲೇಬೇಕು. ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಕೇಂದ್ರಗಳಲ್ಲಿನ ಯಂತ್ರೋಪಕರಣಗಳನ್ನು ಕೂಡಲೇ ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಆದೇಶ ನೀಡಲಾಗುವುದು ಎಂದರು.


*ಆರೋಗ್ಯ ಕೇಂದ್ರದಿಂದ ಅನುಕೂಲ:*

ಬಿಡದಿಯಲ್ಲಿ ಟಯೋಟ ಕಿರ್ಲೋಸ್ಕರ್‌ ಸಂಸ್ಥೆ ನಿರ್ಮಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರದಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಈ ಭಾಗದ ಜನರ ಆರೋಗ್ಯಕ್ಕೆ ವರದಾನವಾಗಲಿದೆ. ಅವರೇ ಇದನ್ನು ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಅವರೂ ಒಪ್ಪಿದ್ದಾರೆ. ಇದಕ್ಕಾಗಿ ಕಂಪನಿಗೆ ಕೃತಜ್ಞನಾಗಿದ್ದೇನೆ ಎಂದು ಡಿಸಿಎಂ ಹೇಳಿದರು.


ಈ ಸಂದರ್ಭದಲ್ಲಿ ಮಾಗಡಿ ಶಾಸಕ‌ ಮಂಜುನಾಥ, ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಒ ಇಕ್ರಮ್, ಎಸ್ಪಿ ಗಿರೀಶ್, ಡಿಎಚ್ಒ ಡಾ.ನಿರಂಜನ ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑