Tel: 7676775624 | Mail: info@yellowandred.in

Language: EN KAN

    Follow us :


ಗಬ್ಬೆದ್ದು ನಾರುತ್ತಿದೆ ಹೊಂಗನೂರು ಗ್ರಾಮದ ಮಾದರಿ ಪಾಠಶಾಲೆಯ ಹಳೆಯ ಕಟ್ಟಡ

Posted date: 06 Feb, 2021

Powered by:     Yellow and Red

ಗಬ್ಬೆದ್ದು ನಾರುತ್ತಿದೆ ಹೊಂಗನೂರು ಗ್ರಾಮದ ಮಾದರಿ ಪಾಠಶಾಲೆಯ ಹಳೆಯ ಕಟ್ಟಡ

ಚನ್ನಪಟ್ಟಣ:ಫೆ:02/21/ಮಂಗಳವಾರ. ತಾಲ್ಲೂಕಿನ ಹೊಂಗನೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಮಾದರಿ ಮಾಧ್ಯಮಿಕ ಶಾಲೆ ಈ ಮೊದಲು ಅಸ್ತಿತ್ವದಲ್ಲಿತ್ತು. ಊರ ಹೊರಗಿನ ದೊಡ್ಡ ಜಾಗದಲ್ಲಿ ಹೊಸದಾಗಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಶಾಲೆಯು ಸ್ಥಳಾಂತರಗೊಂಡು ನಡೆಯುತ್ತಿದೆ. ಆದರೆ ಹಳೆಯ ಕಟ್ಟಡ ಮಾತ್ರ ಹಾಳು ಕೊಂಪೆಯಾಗಿ, ಭೂತಬಂಗಲೆಯಾಗಿ ಪರಿವರ್ತಿತವಾಗಿದೆ.


ಸುಮಾರು ಎಂಟಕ್ಕೂ ಹೆಚ್ಚು ಕೊಠಡಿಗಳಿದ್ದು ತಾರಸಿ ಮತ್ತು ಮಂಗಳೂರು ಹೆಂಚನ್ನು ಹೊದ್ದು ಮಲಗಿದ ಈ ಶಾಲೆಯ ಮುಂಭಾಗದ ಛಾವಣಿ ಕುಸಿದು ಬಿದ್ದಿದೆ. ಶಾಲೆಗೆ ಕಾಂಪೌಂಡ್ ಸಹ ಇದ್ದು ಗಿಡಗಂಟಿಗಳು ಬೆಳೆದು ನಿಂತಿವೆ. ಮುಂಭಾಗದಿಂದ ಒಳಹೋಗಲು ಸರೀಸೃಪಗಳ ಭಯ ಕಾಡುವಷ್ಟು ಗಿಡಗಂಟಿಗಳು ಹಬ್ಬಿವೆ.


ಶಾಲೆಯ ಒಂದು ಭಾಗದಲ್ಲಿ ಸ್ಥಳೀಯರು ಎಮ್ಮೆಗಳನ್ನು ಕಟ್ಟಿಕೊಂಡಿದ್ದಾರೆ. ಶಾಲೆಯೊಳಗೆ ತಿಪ್ಪೆಯನ್ನು ಸಹ ಮಾಡಿಕೊಂಡಿದ್ದು ಜಾನುವಾರುಗಳ ಕಸದ ರಾಶಿಯೆಲ್ಲವೂ ಅಲ್ಲೇ ಗುಡ್ಡೆ ಹಾಕಲಾಗಿದೆ. ರಾಸುಗಳಲ್ಲದೇ ರಾಸುಗಳಿಗೆ ಬೇಕಾದ ಮೇವನ್ನು ಕೊಠಡಿಗಳಲ್ಲಿ ತುಂಬಿಸಿ, ನಿತ್ಯ ಬಳಕೆಯ ಸೌದೆಗಳನ್ನೂ ಸಹ ಸ್ಥಳೀಯರು ಪೇರಿಸಿಟ್ಟುಕೊಂಡಿದ್ದಾರೆ.


ನೆಲಮಾಳಿಗೆಯಲ್ಲಿರುವ ತೊಟ್ಟಿಯಲ್ಲಿ ನೀರು ಗಬ್ಬು ನಾರುತ್ತಿದೆ. ಎಲ್ಲೆಂದರಲ್ಲಿ ಶೌಚ ಮಾಡಲಾಗಿದೆ. ಹಲವು ಕಡೆ ಹೆಂಡ ಸಾರಾಯಿಗಳ ಖಾಲಿ ಬಾಟಲುಗಳು ರಾರಾಜಿಸುವ ಮೂಲಕ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದಕ್ಕೆ ಸಾಕ್ಷಿಭೂತವಾಗಿ ನಿಂತಿವೆ. ಶಿಕ್ಷಣ ಇಲಾಖೆ ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ತಣ್ಣನೆ ಕುಳಿತಿದೆ.


ಮಂಗಳೂರು ಹೆಂಚು ಇರುವ ಕೊಠಡಿಗಳಲ್ಲಿ ಬೆಲೆ ಬಾಳುವ ಟೀಕ್ ಮರಗಳ ಛಾವಣಿ ಇದೆ. ವಾರ್ಷಿಕ ಸಹಸ್ರಾರು ಫಸಲು ನೀಡುವ ಬೃಹತ್ ತೆಂಗಿನ ಮರಗಳಿವೆ. ಇವುಗಳನ್ನು ಮಾರಾಟ ಮಾಡಿದರೂ ಲಕ್ಷಾಂತರ ರೂಪಾಯಿ ಶಿಕ್ಷಣ ಸಂಸ್ಥೆಗೆ ಬರುತ್ತದೆ. ಅದೇ ಹಣದಲ್ಲಿ ಕಟ್ಟಡವನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಿ ಗ್ರಾಮಕ್ಕೆ ಅನುಕೂಲ ಕಲ್ಪಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕಾಗಿದೆ.


ಈ ಶಾಲೆಯು ಸ್ಥಳಾಂತರಗೊಂಡ ನಂತರ ಇದು ಪಾಳು ಬಂಗಲೆಯಾಗಿವೆ. ಗ್ರಾಮದಲ್ಲಿ ಇರುವ ಎಲ್ಲಾ ಧರ್ಮ ಮತ್ತು ಸಮುದಾಯಗಳಿಗೆ ಸರ್ಕಾರದಿಂದ ಜಾಗ ನೀಡಿದ್ದು, ಒಕ್ಕಲಿಗ ಸಮುದಾಯಕ್ಕೆ ಜಾಗವಿಲ್ಲ. ಈ ಜಾಗವನ್ನು ಒಕ್ಕಲಿಗ ಜನಾಂಗಕ್ಕೆ ನೀಡಿದರೆ ಗ್ರಾಮದ ಎಲ್ಲಾ ಸಮುದಾಯದವರಿಗೂ ಅನುಕೂಲವಾಗುವಂತಹ ಸಮುದಾಯ ಭವನ ಕಟ್ಟುತ್ತೇವೆ ಎಂದು ಸ್ಥಳೀಯ ಯುವ ಮುಖಂಡರು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.


ಶಾಲೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜುರವರನ್ನು ಪ್ರಶ್ನಿಸಿದಾಗ ಅವರಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಆದರೂ ಅವರು ಶಿಕ್ಷಣ ಸಂಸ್ಥೆಗೆ ಸೇರಿದ ಜಾಗವನ್ನು ಸಂಘಸಂಸ್ಥೆಗಳಿಗಿರಲಿ, ಅಂಗನವಾಡಿ ಹೊರತುಪಡಿಸಿ ಸರ್ಕಾರದ ಯಾವ ಇಲಾಖೆಗೂ ನೀಡಲು ಅವಕಾಶವಿಲ್ಲ. ಶೀಘ್ರವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑