Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ

Posted date: 24 Feb, 2021

Powered by:     Yellow and Red

ರಾಮನಗರ ನೂತನ ರೇಷ್ಮೆ ಮಾರುಕಟ್ಟೆ ಬಗ್ಗೆ ವಿರೋಧ ಸರಿಯಲ್ಲ: ಹೆಚ್ಡಿಕೆ ಬೆನ್ನಿಗೆ ನಿಂತ ಉಪ ಮುಖ್ಯಮಂತ್ರಿ

ರಾಮನಗರ: ಜಿಲ್ಲಾ ಕೇಂದ್ರದಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಅಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗಿಯೇ ಹೊರತು ದಲ್ಲಾಳಿಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು. 


ರಾಮನಗರದಲ್ಲಿಂದು ಕನ್ನಿಕಾ ಪರಮೇಶ್ವರಿ ದೇವಾಲಯದ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; ರಾಮನಗರದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲು ಕೆಲ ಅಡ್ಡಿಗಳಿದ್ದವು. ಈಗಿನ ಮಾರುಕಟ್ಟೆ ಪಕ್ಕದ ಜಮೀನು ಬಿಕ್ಕಟ್ಟು ನ್ಯಾಯಾಲಯದಲ್ಲಿದೆ. ಎಲ್ಲರಿಗೂ ತಿಳಿದಂತೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಜಗತ್ತಿನಲ್ಲಿಯೇ ಪ್ರಸಿದ್ಧವಾದದ್ದು, ಹೀಗಾಗಿ ಇದನ್ನು ವಿಸ್ತರಿಸಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶ ಸರಕಾರಕ್ಕೆ ಇತ್ತು.  ಆದರೆ ಕೆಲ ಅಡ್ಡಿಗಳು ಎದುರಾದ ಕಾರಣ ಚನ್ನಪಟ್ಟಣ ಬಳಿ ವಿಶಾಲ ಜಾಗದಲ್ಲಿ ಮಾರುಕಟ್ಟೆ ಬರುತ್ತಿದೆ ಎಂದರು.


ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರು ಈ ಬಗ್ಗೆ ಹೇಳಿಕೆ ನೀಡಿದ್ದು, ರಾಮನಗರ ಕೆಲವರು ವಿರೋಧಿಸಿದ್ದರು. ಉಪಮುಖ್ಯಮಂತ್ರಿ ಹೇಳಿಕೆಯು ಹೆಚ್ಡಿಕೆ ಮಾತಿಗೆ ಬೆಂಬಲ ಸೂಚಿಸಿದ್ದಂತಾಗಿದೆ. 


*ಮೀಸಲು ಬಗ್ಗೆ ಸಾರ್ವಜನಿಕ ಚರ್ಚೆ ಬೇಡ:* 


ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಸರಕಾರ ಎಲ್ಲ ರೀತಿಯಲ್ಲೂ ಪರಿಶೀಲನೆ ಮಾಡುತ್ತಿದೆ. ಎಲ್ಲರ ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಸಮ್ಮತವಾದ ರೀತಿಯಲ್ಲಿ ಸರಕಾರ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಬೇಡ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು. 


ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನಾಳೆ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಪುಟ್ಟಣ್ಣ ಅವರ ಪ್ರತಿಭಟನೆ ಸರಕಾರದ ವಿರುದ್ಧ ಎಂದು ಅರ್ಥೈಸಬಾರದು. ಅವರು ತಮ್ಮ ಮತದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತಿದ್ದಾರೆ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑