Tel: 7676775624 | Mail: info@yellowandred.in

Language: EN KAN

    Follow us :


ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ 35 ವರ್ಷ. ಬಿಟಿಜೆ, ಸಿಪು ಮತ್ತು ರೋಹಿತ್ ಆರೋಪ

Posted date: 01 Mar, 2021

Powered by:     Yellow and Red

ತಾಲ್ಲೂಕಿನ ಬಂಡೂರ ವಳಗೆರೆ ಹಳ್ಳಿ (ಬಿ ವಿ ಹಳ್ಳಿ) ಗ್ರಾಮ ಮತ್ತು ಸಂತೇಮೊಗೇನಹಳ್ಳಿ (ಎಸ್ ಎಂ ಹಳ್ಳಿ) ಗ್ರಾಮಗಳಲ್ಲಿ ಮಾರ್ಚಿ 02 ನೇ ತಾರೀಖಿನ ಮಂಗಳವಾರದಂದು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂತ್ರಿ ಮಹೋದಯರು ಉದ್ಘಾಟಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಆದರೆ ಆರೋಗ್ಯ ಕೇಂದ್ರಗಳು 35 ವರ್ಷಗಳ ಹಿಂದೆ ಅಂದರೆ 1986 ರಲ್ಲೇ ಉದ್ಘಾಟನೆಯಾಗಿದ್ದು, ಈಗ ಹೊಸ ಕಟ್ಟಡ ಮಾತ್ರ ಉದ್ಘಾಟನೆ ಆಗಬೇಕಾಗಿದೆ. ಸಂಬಂಧಿಸಿದ ಇಲಾಖೆಗಳು ಆಹ್ವಾನ ಪತ್ರಿಕೆಯನ್ನು ವಾಪಸ್ ಪಡೆದು ಹೊಸ ಆಹ್ವಾನ ಪತ್ರಿಕೆ ಮುದ್ರಿಸಬೇಕು ಹಾಗೂ ಸ್ಥಳೀಯ ಮುಖಂಡರನ್ನು ಆಹ್ವಾನಿಸಬೇಕು ಎಂದು ಹಿರಿಯ ಮುತ್ಸದ್ದಿ ಬಿ ಟಿ ಜಯಮುದ್ದಪ್ಪ, ರೈತ ಮುಖಂಡರ ಸಿ ಪುಟ್ಟಸ್ವಾಮಿ ಮತ್ತು ಮೊಗಳ್ಳಿದೊಡ್ಡಿ ಗ್ರಾಮದ ರೋಹಿತ್ ಆಗ್ರಹಿಸಿದ್ದಾರೆ.


1983 ರಲ್ಲಿನ ರಾಜ್ಯ ಸರ್ಕಾರವು ರಾಜ್ಯದಾದ್ಯಂತ 59 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಆದೇಶ ಹೊರಡಿಸಿತ್ತು. ಚನ್ನಪಟ್ಟಣ ತಾಲ್ಲೂಕಿನಲ್ಲಿ ಬಿವಿ ಹಳ್ಳಿ ಮತ್ತು ಹೊಂಗನೂರು ಗ್ರಾಮಕ್ಕೆ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲಾಗಿತ್ತು. ಅಂದಿನ ಆರೋಗ್ಯ ಮತ್ತು ಅಬಕಾರಿ ಸಚಿವರಾದ ಕೃಷ್ಣಪ್ಪ ನವರು ಉದ್ಘಾಟಿಸಿದ್ದರು. ಆಗ ಹೊಸ ಕಟ್ಟಡವೂ ಇಲ್ಲದೆ ಗ್ರಾಮ ಪಂಚಾಯತಿ ಕಛೇರಿಯಲ್ಲೇ ಆಸ್ಪತ್ರೆಯನ್ನು ತೆರೆಯಲಾಗಿತ್ತು.

ಅಂದಿನ ಸಾತನೂರು ಕ್ಷೇತ್ರದ ಶಾಸಕರಾಗಿದ್ದ ಶಿವಲಿಂಗೇಗೌಡರು ಅಧ್ಯಕ್ಷತೆ ವಹಿಸಿದ್ದರು ಎಂದು ಅವರು ದಾಖಲೆಯನ್ನು ನೀಡುವ ಮೂಲಕ ಜ್ಞಾಪಿಸಿಕೊಂಡರು.


ಕಟ್ಟಡ ಆಗುವವರೆಗೂ ಆರೋಗ್ಯ ಕೇಂದ್ರ ಮಂಜೂರು ಮಾಡುವುದು ಬೇಡ ಎಂಬುದು ಸರ್ಕಾರದ ನಿಲುವಾಗಿತ್ತು. ಅಂದು ವಾಹನ ಸೌಕರ್ಯ ತುಂಬಾ ಕಡಿಮೆ ಇದ್ದಿದ್ದರಿಂದ ರೋಗಿಗಳು ಪಟ್ಟಣ ತಲುಪಲು ಬಹಳ ಕಷ್ಟ ಪಡಬೇಕಾಗಿತ್ತು. ಇದನ್ನೆಲ್ಲಾ ಗಮನಿಸಿ ಅಂದಿನ ಶಾಸಕ ಶಿವಲಿಂಗೇಗೌಡರ ಬೆನ್ನುಬಿದ್ದು ಶೀಘ್ರವಾಗಿ ನಾನು ಉದ್ಘಾಟನೆ ಮಾಡಿಸಿದ್ದೆ. *ಅದಕ್ಕಿಂತ ಹೆಚ್ಚಾಗಿ ಮಂಗಯ್ಯ ನಿಂಗಮ್ಮ ಚಾರಿಟೇಬಲ್ ಟ್ರಸ್ಟ್ ನ ಮಂಡ್ಯ ಜಿಲ್ಲೆಯ ಬೂದನೂರು ಗ್ರಾಮದ ರುದ್ರಪ್ಪ ನವರು ಆಸ್ಪತ್ರೆಯ ಜಾಗವನ್ನು ಕೊಂಡು ದಾನ ಮಾಡಿದರು* ಅಂದಿನ ಇತಿಹಾಸವನ್ನು ತಿಳಿದುಕೊಂಡು ಹಿರಿಯರನ್ನು ಗೌರವಿಸಬೇಕಾದ್ದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯ ಎಂದು ಅಂದಿನ ಪತ್ರಿಕಾ ವರದಿಗಳು, ವಾರ್ತಾ ಇಲಾಖೆಯ ಸಚಿವರ ಪ್ರವಾಸ ಕಾರ್ಯಕ್ರಮದ ವರದಿಗಳನ್ನು ಮುಂದಿಟ್ಟರು.


ಈ ಭಾಗಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬರಲು ಅಂದಿನ ಶಾಸಕರಾದ ಶಿವಲಿಂಗೇಗೌಡರು ಮತ್ತು ಬಿ ಟಿ ಜಯಮುದ್ದಪ್ಪ ಸೇರಿದಂತೆ ಅನೇಕರ ಹೋರಾಟ ಇದೆ. ಅದರಲ್ಲೂ ಆರೋಗ್ಯ ಕೇಂದ್ರದ ಉದ್ಘಾಟನೆ  ಎಂಬುದು ಮುಗಿದ ಅಧ್ಯಾಯ. ಮತ್ತೊಮ್ಮೆ ಉದ್ಘಾಟನೆ ಎಂಬುದು ಸಹ ಅಷ್ಟೇ ಹಾಸ್ಯಾಸದ. ಹಾಗಾಗಿ ಸಂಬಂಧಿಸಿದ ಇಲಾಖೆಗಳು ಆಹ್ವಾನ ಪತ್ರಿಕೆಯನ್ನು ಸರಿಪಡಿಸಿ, ಮರುಮುದ್ರಣ ಮಾಡಬೇಕು ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.


ಸಂತೆಮೊಗೇನಹಳ್ಳಿ (ಎಸ್ಎಂ ಹಳ್ಳಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಹ ಕಳೆದ ಮೂವತ್ತು ವರ್ಷಗಳಷ್ಟು ಹಳೆಯ ಕೇಂದ್ರವಾಗಿದೆ. ಇದನ್ನು ಉದ್ಘಾಟನೆ ಎಂದು ಮುದ್ರಿಸಿರುವುದು ಇಲಾಖೆಯ ನೆನಪಿನ ಬುತ್ತಿಗೆ ಹಿಡಿದ ಕೈಗನ್ನಡಿ. ಆಹ್ವಾನ ಪತ್ರಿಕೆಯನ್ನು ಮರುಮುದ್ರಿಸಿ ನೂತನ ಕಟ್ಟಡ ಉದ್ಘಾಟನೆ ಎಂದು ತಿದ್ದಬೇಕು ಎಂದು ಯುವ ಮುಖಂಡ ಮೊಗಳ್ಳಿದೊಡ್ಡಿ ರೋಹಿತ್ ತಿಳಿಸಿದರು.


ಈ ಸಂಬಂಧ ತಾಲ್ಲೂಕು ವೈದ್ಯಾಧಿಕಾರಿ ರಾಜು ರವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಪ್ರಶ್ನಿಸಿದಾಗ ಆಹ್ವಾನ ಪತ್ರಿಕೆಯನ್ನು ಸಂಪೂರ್ಣವಾಗಿ ಅಪರ ಜಿಲ್ಲಾಧಿಕಾರಿಗಳ (ಎಡಿಸಿ) ನೇತೃತ್ವದಲ್ಲಿ ಮುದ್ರಿಸಲಾಗಿದೆ. ಇದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑