Tel: 7676775624 | Mail: info@yellowandred.in

Language: EN KAN

    Follow us :


ನಿಜವಾದ ಕೊರೊನಾ ವಾರಿಯರ್ಸ್‌ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.

Posted date: 06 Mar, 2021

Powered by:     Yellow and Red

ನಿಜವಾದ ಕೊರೊನಾ ವಾರಿಯರ್ಸ್‌ ಎಂದರೆ ಅದು ಪತ್ರಕರ್ತರು ಮಾತ್ರ. ಶಿವಾನಂದ ತಗಡೂರು.

ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಮನಗರ ದ ರಾಮ್ ಗಢ್ ಹೋಟೆಲ್ ನ ಸಭಾಂಗಣದಲ್ಲಿ ಪತ್ರಕರ್ತರ ಕಾರ್ಯಾಗಾರ ನಡೆಯಿತು.


ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾದ ಚಲುವರಾಜು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅವರು ಶೀಘ್ರವಾಗಿ ರಾಮನಗರ ಜಿಲ್ಲೆಯಲ್ಲಿ ಪತ್ರಕರ್ತರ ಭವನ ನಿರ್ಮಿಸಲು ಯೋಜಿಸಲಾಗಿದೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರು, ಸಂಘಟನೆ ಎಂದಾಗ ಹಲವು ಗೋಜಲುಗಳಿರುತ್ತವೆ. ಸಂಸಾರ ತೂಗಿಸಿಕೊಂಡು ಹೋಗುವಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಾಗಿದೆ. ೧೯೩೮ ರಲ್ಲಿ ಡಿ ವಿ ಗುಂಡಪ್ಪ ನವರಿಂದ ಪ್ರಾರಂಭವಾದ ಈ ಸಂಘಟನೆಯು ೭,೫೦೦ ಕ್ಕೂ ಸದಸ್ಯರನ್ನು ಹೊಂದಿದೆ. ಇತ್ತೀಚಿಗೆ ನಮ್ಮ ಕರ್ನಾಟಕ ಗಡಿಯನ್ನು ದಾಟಿ ಹೋಗುವ ಹಂತದಲ್ಲಿದೆ. ನಮ್ಮಲ್ಲಿನ ಅನೇಕ ಮಿತ್ರರು ಹೊರಗುಳಿದಿದ್ದಾರೆ. ಅವರು ತಮ್ಮ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಂಡು ಸಂಗಡ ಬರಲಿ ಎಂದು ತಿಳಿಸಿದರು.


ಸರ್ಕಾರ ಪ್ರತಿಯೊಬ್ಬರಿಗೂ ಮನೆಯಲ್ಲಿರಿ, ಹೊರಗೆ ಬರಬೇಡಿ ಎಂದು ಹೇಳುತ್ತಿತ್ತು. ಆದರೆ ಪತ್ರಕರ್ತರಿಗೆ ಸರ್ಕಾರವಾಗಲಿ ಮತ್ತಿತರ ಸಂಘಟನೆ ಅಥವಾ ಅಧಿಕಾರಿಗಳಾಗಲಿ‌ ಹೇಳಲಿಲ್ಲ. ನಮ್ಮ ಪತ್ರಕರ್ತರು ಸಹ ತಮ್ಮ ಪ್ರಾಣದ ಹಂಗನ್ನು ತೊರೆದು, ಪತ್ರಿಕೆಯನ್ನು ತರುವ ಮೂಲಕ ತಮ್ಮ ಬದ್ಧತೆಯನ್ನು ಮೆರೆದರು. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿಯನ್ನು ಪತ್ರಿಕೆಯ ಮೂಲಕ ನೀಡಿದರು. ಯಾವುದೇ ಹೆಚ್ಚಿನ ಲಾಭವಿಲ್ಲದೆ ದುಡಿದ ನಿಜವಾದ ಕೊರೊನಾ ವಾರಿಯರ್ಸ್‌ ಎಂದರೆ ಅದು ಪತ್ರಕರ್ತರು ಮಾತ್ರ ಎಂದು ಅಭಿಪ್ರಾಯ ಪಟ್ಟರು.


ರಾಮನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೆಚ್ ಎನ್ ಅಶೋಕ ಮಾತನಾಡಿ, ಪ್ರತಿ ಕ್ಷಣದ ಆಗುಹೋಗುಗಳನ್ನು ನೀಡುವ, ರಾಜಕಾರಣ ಮತ್ತು ಸಮಾಜವನ್ನು ತಿದ್ದುವ ಪತ್ರಕರ್ತರ ಭವಿಷ್ಯಕ್ಕೆ ಯಾವುದೇ ಭದ್ರತೆ ಇಲ್ಲ. ಕನಿಷ್ಠ ಪಕ್ಷ ಅವರ ಆರೋಗ್ಯ ದೃಷ್ಟಿಯಿಂದಲಾದರೂ ಅವರಿಗೆ ಸ್ಥಳೀಯ ಸಂಸ್ಥೆಗಳು ನೆರವಾಗಬೇಕು. ಜಿಲ್ಲಾ ಪಂಚಾಯತಿ ವತಿಯಿಂದ ಪತ್ರಕರ್ತರಿಗೆ ಏನು ನೆರವು ನೀಡಲು ಸಾಧ್ಯವಿದೆಯೋ ಅದನ್ನು ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ನೆರವು ನೀಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.


ಜೆಡಿಎಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯ ಒಳ್ಳೆಯದು, ಕೆಟ್ಟದ್ದನ್ನು ಎತ್ತಿ ತೋರಿಸುವುದರಿಂದ, ಆತ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರ ಜೊತೆ ನಾನು ಸದಾ ಇರುತ್ತೇನೆ ಎಂದು ಅಭಯ ನೀಡಿದರು.


ಹಲೋ ಮೈಸೂರು ಪತ್ರಿಕೆಯ ಸಂಪಾದಕರಾದ ಗುರುರಾಜು ರವರು ಮಾತನಾಡಿ, ಪತ್ರಕರ್ತ ಎಂದರೆ ಅದೊಂದು ಗೌರವ.‌ ಅದನ್ನು ಶಾಪವನ್ನಾಗಿ ನಾವು ಮಾಡಿಕೊಳ್ಳುತ್ತಿದ್ದೇವೆ. ಈಗ ನಮ್ಮ ಹಿಂದೆ ಮಾತನಾಡುತ್ತಿದ್ದಾರೆ. ಪತ್ರಕರ್ತ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಏನೂ ಅಲ್ಲದವನೂ ಸಹ ಮುಂದೆಯೇ ಥೂ ಛೀ ಎನ್ನುವ ಕಾಲ ದೂರವಿಲ್ಲ. ಹಾಗಾಗಿ ಆತ ತನ್ನ ವೃತ್ತಿಯನ್ನು ಎಚ್ಚೆತ್ತುಕೊಂಡು ಗೌರವಿಸಿಕೊಳ್ಳಬೇಕು.

ನಾನು ಗರಿಷ್ಠ ಎಂಬುದನ್ನು ತೋರಿಸಿಕೊಳ್ಳುವ ಭರದಲ್ಲಿ ಜವಾಬ್ದಾರಿ ಮರೆತು ಕನಿಷ್ಠನಾಗುತ್ತಿರುವುದು ನಮ್ಮೆಲ್ಲರ ದುರ್ದೈವ. ಸಮಾಜದ ಋಣ ತೀರಿಸುವ ಸುದೈವ ಪತ್ರಕರ್ತರಿಗೆ ದೊರೆತಿದೆ. ಅದನ್ನು ನಾವು ಮೊದಲು ಅರಿಯಬೇಕು ಎಂದರು.


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಎನ್ ಆರ್ ನಂಜುಂಡೇಗೌಡರು ಮಾತನಾಡಿ, ಒಂದು ಪತ್ರಿಕೆ ಒಬ್ಬ ವ್ಯಕ್ತಿಯ ಜೊತೆ ಅಥವಾ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳಬಾರದು. ಆಗ ಓದುಗರನ್ನು ಆ ಪತ್ರಿಕೆ ಕಳೆದುಕೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಅಪನಂಬಿಕೆಗೆ ಪಾತ್ರ ವಾಗುತ್ತದೆ. ಕಾರ್ಯಾಗಾರ ಎಂದರೆ ನಮ್ಮೊಳಗಿನ ಚಿತ್ರವಿಚಿತ್ರ ತೊಳಲಾಟವನ್ನು ತೆರೆದಿಡುವುದೇ ಕಾರ್ಯಾಗಾರ. ಪತ್ರಿಕೆ ತಲೆ ಬರಹಗಳು, ವಿಷಯಗಳು, ಲೇಔಟ್ ನಲ್ಲಿ ಎಲ್ಲಿ ಬರಬೇಕು, ಹೇಗೆ ಬರಬೇಕು ಎಷ್ಟು ಬರಬೇಕು ಎಂಬುದನ್ನು ಅರಿತಿರಬೇಕು. ಸುದ್ದಿ ಅರ್ಹತೆಯನ್ನು ಅರಿಯಬೇಕು. ಅದು ಸಾಮಾಜಿಕ ಜವಾಬ್ದಾರಿ ಇದ್ದರೆ ಮಾತ್ರ ಪತ್ರಿಕೆ ಉಳಿಯಲು ಸಾಧ್ಯ ಎಂಬುದು ಬಹಳ ಮುಖ್ಯ ಎಂದು ಅಭಿಪ್ರಾಯಿಸಿದರು.


ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ಮಾತನಾಡಿ ಗ್ರಾಮೀಣ ಪ್ರದೇಶದ ಪತ್ರಕರ್ತರ ಮಕ್ಕಳಿಗೆ ಸರ್ಕಾರವು ಶೈಕ್ಷಣಿಕ ಮೀಸಲಾತಿ ನೀಡಬೇಕು. ಸಣ್ಣ ಪತ್ರಿಕೆಗಳಲ್ಲಿ ದುಡಿಯುವ ಪತ್ರಿಕಾ ವರದಿಗಾರರಿಗೆ ಕನಿಷ್ಠ ಕೂಲಿ ಕಾರ್ಮಿಕರು ಪಡೆಯುವ ವೇತನವನ್ನಾದರೂ ಸರ್ಕಾರ ನೀಡುವಂತಾದರೆ, ಆತ ಮತ್ತಷ್ಟು ಪ್ರಬುದ್ಧನಾಗಿ ಸಮಾಜದ ಅಂಕುಡೊಂಕುಗಳನ್ನು ಬರೆಯಲು ಸಾಧ್ಯ ಎಂದು ವೇದಿಕೆಯ ಗಣ್ಯರಿಗೆ ಸೂಚಿಸಿದರು.


ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು ರವರು ಮಾತನಾಡಿ, ಹಸಿದವನಿಗಿಂತ ಉಂಡವರೇ ಹೆಚ್ಚು ಮಂದಿ ಸಾಯುತ್ತಾರೆ. ಹೆಚ್ಚು ಉಂಡವನು ಬೇಗ ಸತ್ತರೆ, ಹಸಿದವನು ಹೆಚ್ಚು ಆರೋಗ್ಯವಂತನಾಗಿರುತ್ತಾನೆ. ಗಾಂಧೀಜಿಯವರೂ ಸಹ ಪತ್ರಕರ್ತರಾಗಿದ್ದರು. ಅಂದಿಗೂ ಇಂದಿಗೂ ಪತ್ರಕರ್ತರ ಮನಸ್ಥಿತಿ ಬದಲಾಗಿದೆ. ಅನೇಕ ದೇಶಗಳಿಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಮಾಧ್ಯಮ. ಬಡವರಿಗೆ, ಸಂತ್ರಸ್ತರಿಗೆ, ಅಬಲೆಯರಿಗೆ ಬದುಕು ಕಟ್ಟಿಕೊಟ್ಟಿದ್ದು ಮಾಧ್ಯಮ. ಮಾಧ್ಯಮ ಎನ್ನುವುದು ನಮ್ಮ ಆತ್ಮ. ನಮ್ಮ ಆತ್ಮವನ್ನು ಗೌರವಿಸಿದಂತೆ ಮಾಧ್ಯಮವನ್ನು ಗೌರವಿಸಿದರೆ ಮಾತ್ರ ಸಮಾಜವನ್ನು ಮಾಧ್ಯಮಗಳು ಸಮಾಜವನ್ನು ತಿದ್ದಲು ಸಾಧ್ಯ ಎಂದರು.


ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ, ಮತ್ತಿತರ ದುರಾಡಳಿತವನ್ನು ಪತ್ರಕರ್ತರು, ಸಾರ್ವಜನಿಕರು ಟೀಕೆ ಮಾಡಬಹುದು. ಅದರಿಂದ ಸರ್ಕಾರಗಳು ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ. ಟೀಕೆ ಟಿಪ್ಪಣಿಗಳು ರಾಜದ್ರೋಹದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. ಮಾಧ್ಯಮದವರು ಇಂತಹ ವಿಷಯಗಳಲ್ಲಿ ಮೌನ ವಹಿಸಬಾರದು. ಮಾಧ್ಯಮಗಳು ಮೌನ ವಹಿಸಿದರೆ ಅದು ಷಂಡತನ ಎಂದು ಅವರು ಕರೆದರು. ಸಂವಿಧಾನವನ್ನು ನಾವು ಉಳಿಸಿದರೆ, ಸಂವಿಧಾನವು ನಮ್ಮನ್ನು ಉಳಿಸುತ್ತದೆ. ಈಗಾಗಲೇ ೧೨೪ ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಮುಂದೆ ತಿದ್ದುಪಡಿ ಆಗದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಅವರು ತಮ್ಮ ಉಪನ್ಯಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಉಪದೇಶಿಸಿದರು.


ಬಯಲುಸೀಮೆ ಪತ್ರಿಕೆಯ ಸಂಪಾದಕರಾದ ಸು ತ ರಾಮೇಗೌಡ ರವರು ಮಾತನಾಡಿ, ಸಂಘಟನೆ ಮತ್ತಷ್ಟು ಪ್ರಬಲವಾಗಿ ಬೆಳೆಯಲಿ, ಮಾಧ್ಯಮ ವೃತ್ತಿಗೆ ಬರುವ, ಬಂದಿರುವ ಚೂಪು ಮನಸ್ಥಿತಿ ಉಳ್ಳವರಾಗಿರಲಿ. ಶೀಘ್ರವಾಗಿ ಚುನಾವಣೆ ಬರಲಿದೆ. ಸಾವಕಾಶವಾಗಿ ಚುನಾವಣೆ ನಡೆದು, ಸಂಘಟನೆ ಬಲಯುತವಾಗಲಿ ಎಂದು ಆಶಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸೂರ್ಯಪ್ರಕಾಶ್ ಮಾತನಾಡಿ, ಇದೊಂದು ಉತ್ತಮ ಕಾರ್ಯಗಾರವಾಗಿದ್ದು, ಈ ಕಾರ್ಯಗಾರಕ್ಕೆ ಅನೇಕ ನಮ್ಮ ನಿಮ್ಮೆಲ್ಲರ ಸ್ನೇಹಿತರೇ ಆಗಿದ್ದಾರೆ. ಮುಂದೊಂದು ದಿನ ಎಲ್ಲರೂ ನಮ್ಮ ಜೊತೆ ಬರುವ ವಿಶ್ವಾಸವಿದೆ. ಹೃದಯದಲ್ಲಿನ ಪತ್ರಕರ್ತನಿಗೆ ಈ ಕಾರ್ಯಾಗಾರದ ವಿಚಾರ ತಲುಪುತ್ತದೆ. ಕಿಸೆಯಲ್ಲಿನ ಪತ್ರಕರ್ತರಿಗಲ್ಲಾ ಎಂದು ಮಾರ್ಮಿಕವಾಗಿ ನುಡಿದರು.


ಪತ್ರಕರ್ತ ಶಿವರಾಜು ಸ್ವಾಗತಿಸಿದರು, ಸು ನಾ ನಂದಕುಮಾರ್ ನಿರೂಪಿಸಿದರೆ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಮು ವಂದಾನಾರ್ಪಣೆ ಮಾಡಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ನಾಲ್ಕು ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑