Tel: 7676775624 | Mail: info@yellowandred.in

Language: EN KAN

    Follow us :


ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ

Posted date: 27 Mar, 2021

Powered by:     Yellow and Red

ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ

"ಚನ್ನಪಟ್ಟಣದಲ್ಲಿ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುವ ಕಾಮ ದಹನ ಮತ್ತು ರತಿಮನ್ಮಥ ರ ಹಬ್ಬದ ಬಗ್ಗೆ ತಮ್ಮ ಲೇಖನದ ಮೂಲಕ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ಮಂಜುಳಾ ಸಿ ಎಸ್ ರವರು. ಮೂಲತಃ ಚನ್ನಪಟ್ಟಣದವರಾದ ಮಂಜುಳಾ ರವರು ಸದ್ಯ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿತೆ, ಅಂಕಣ, ಲಘು ಬರಹಗಾರರಾದ ಇವರು ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಲೇಖನವನ್ನು  ಫ್ಯಾಕ್ಯವಲ್ ಯೂಟ್ಯೂಬ್ ಚಾನೆಲ್ ಮತ್ತು ಚನ್ನಪಟ್ಟಣದ ಕಾಮನ ಹಬ್ಬ ಉತ್ಸವ ಸಮಿತಿಯಿಂದ ಮಾಹಿತಿಯನ್ನು ಪಡೆದುಕೊಂಡು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ."ಸನಾತನ ಹಿಂದೂ ಧರ್ಮದಲ್ಲಿ ಹಲವಾರು ಧಾರ್ಮಿಕ ಆಚರಣೆಗಳು, ಉತ್ಸವಗಳು ಹಬ್ಬ ಹರಿದಿನಗಳನ್ನು ಸಾಂಪ್ರದಾಯಿಕವಾಗಿ ಶತ -ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗಿದೆ. ಅತಿ ವಿಜೃಂಬಣೆಯಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳ ಪೈಕಿ ಹೋಳಿ ಹಬ್ಬ ಬಹಳ ಪ್ರಮುಖವಾದುದು. ರಂಗು ರಂಗಿನ ವಿವಿಧ ಬಣ್ಣಗಳ ಓಕುಳಿ ಹರಿಸಿ ನಮ್ಮ ಬದುಕು ವರ್ಣಮಯವಾಗಿರಲಿ ಎಂದು ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬವು ಮುಖ್ಯವಾಗಿದೆ.

ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬವು ತನ್ನದೇ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಕರ್ನಾಟಕದ ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆಯುವಕಾಮನ ಹಬ್ಬವೂ ಪ್ರಮುಖವಾದ ಹಬ್ಬ.


ಚನ್ನಪಟ್ಟಣವು ಬೊಂಬೆ ನಗರಿ ಎಂದೇ ಬಲು ಪ್ರಸಿದ್ಧಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಐವತ್ತಾರು ಕಿಲೋ ಮೀಟರ್ ದೂರದಲ್ಲಿರುವ ಚೆಂದದ ನಗರಿ ಚನ್ನಪಟ್ಟಣ. ವಿವಿಧ ರೀತಿಯ ಸಾಂಪ್ರದಾಯಿಕ ಬೊಂಬೆಗಳನ್ನು ತಯಾರಿಸಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಬಹುತೇಕ ಜನರಿಗೆ ಬೊಂಬೆನಗರಿಯಲ್ಲಿ ಆಚರಿಸಲ್ಪಡುವ ಕಾಮನಹಬ್ಬದ ಬಗ್ಗೆ ತಿಳಿದಿಲ್ಲ. ಚನ್ನಪಟ್ಟಣವು ಕೇವಲ ಬೊಂಬೆಗಳ ತಯಾರಿಕೆ ಅಷ್ಟೇ ಅಲ್ಲದೆ ಕುಸ್ತಿ, ಜಾನಪದ ಕಲೆ ಹಾಗೂ ಹಲವಾರು ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿದೆ. ಹೋರಾಟದಲ್ಲಂತೂ ಸದಾ ಮುಂದಿದೆ.


ಕಾಮನ ಹಬ್ಬಕ್ಕೆ ಅದರದ್ದೇ ಆದ ಪೌರಾಣಿಕ ಐತಿಹ್ಯವಿದೆ. ಸೃಷ್ಟಿಕರ್ತನಾದ ಬ್ರಹ್ಮನು ಪ್ರೀತಿ, ಪ್ರೇಮವನ್ನು ಪ್ರಪಂಚಕ್ಕೆಲ್ಲಾ ಪ್ರಸರಿಸಲು ಮನ್ಮಥನನ್ನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಸುರಸುಂದರಿಯಾದ ರತಿದೇವಿಯು ಮನ್ಮಥನನ್ನು ವರಿಸಿ ಆತನ ಧರ್ಮಪತ್ನಿ ಆಗುತ್ತಾಳೆ. ರತಿ ಮನ್ಮಥರು ಪ್ರೀತಿ ಪ್ರೇಮವನ್ನು ಪ್ರಪಂಚದೆಲ್ಲೆಡೆ ಪ್ರಸರಿಸುತ್ತಿರುತ್ತಾರೆ. ಪ್ರಜಾಪತಿಯ ಪುತ್ರಿಯಾದ ದಾಕ್ಷಾಯಿಣಿಯು ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಕೈಲಾಸಪತಿಯಾದ ಶಿವನನ್ನು ವರಿಸುತ್ತಾಳೆ. ಕೆಲಕಾಲದ ನಂತರ ಕೈಲಾಸದಲ್ಲಿ ಶಿವನೊಟ್ಟಿಗೆ ಸಂತೋಷದಿಂದ ಸಮಯ ಕಳೆಯುತ್ತಿರುವಾಗ ತನ್ನ ತಂದೆಯಾದ ದಕ್ಷನು ಲೋಕ ಕಲ್ಯಾಣಕ್ಕಾಗಿ ಯಾಗವನ್ನು ಆಯೋಜಿಸುತ್ತಾನೆ. ಆ ಯಾಗಕ್ಕೆ ದಾಕ್ಷಾಯಿಣಿಯನ್ನು, ಆಕೆಯ ಪತಿಯಾದ ಶಿವನನ್ನು ಆಹ್ವಾನಿಸಿರುವುದಿಲ್ಲ. ಆದರೂ ಆ ಯಜ್ಞದಲ್ಲಿ ಪಾಲ್ಗೊಳ್ಳಲು ದಾಕ್ಷಾಯಿಣಿ ಇಚ್ಛಿಸುತ್ತಾಳೆ. ಆಹ್ವಾನವಿಲ್ಲದೆ ಯಜ್ಞಕ್ಕೆ  ಬಂದ ಮಗಳನ್ನು ಕಂಡು ಕುಪಿತಗೊಂಡ ದಕ್ಷ ಮಗಳನ್ನು ಹಾಗೂ ಆತನ ಅಳಿಯನಾದ ಶಿವನನ್ನು ಅವಮಾನಿಸುತ್ತಾನೆ. ಈ ಅವಮಾನವನ್ನು ತಾಳಲಾರದೆ ಸತಿಯು ಅಲ್ಲಿಯೇ ಇದ್ದ ಯಜ್ಞಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಇದರಿಂದ ವಿಚಲಿತನಾದ ಶಿವನು ಉಗ್ರನಾಗಿ ವೀರಭದ್ರನ ಅವತಾರವನ್ನು ತಾಳಿ ಪತಿಯ ಸಾವಿಗೆ ಪರೋಕ್ಷವಾಗಿ ಕಾರಣನಾದ ದಕ್ಷನನ್ನು ಸಂಹರಿಸುತ್ತಾನೆ.


ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಆಚರಿಸುವ ಕಾಮನಹಬ್ಬವು  ಶತಮಾನಗಳ ಇತಿಹಾಸವನ್ನು ಹೊಂದಿದ್ದು, ಈಗಲೂ ಸಹ ಕಾಮನ ಹಬ್ಬವನ್ನು ಅದ್ದೂರಿಯಾಗಿ ಇಲ್ಲಿಯ ಪೇಟೆಬೀದಿಯ ಅಂಗಡಿಗಳ ಭಕ್ತರು ಹಾಗೂ ಸ್ಥಳೀಯರೆಲ್ಲರೂ ಸೇರಿ ಆಚರಿಸುತ್ತಾ ಬಂದಿದ್ದಾರೆ. ಹಬ್ಬದ ಪ್ರಾರಂಭದ ದಿನ ಅಂದರೆ ಶಿವರಾತ್ರಿಯ ಹಬ್ಬದ ನಂತರ  ಬರುವ ಅಮಾವಾಸ್ಯೆಯ ದಿನದಿಂದ ಪ್ರಾರಂಭವಾಗಿ ಮುಂದೆ ಬರುವ ಹೋಳಿ ಹುಣ್ಣಿಮೆಯ ವರೆಗೆ ಸಾಂಪ್ರದಾಯಿಕವಾಗಿ ಕಾಮನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ . ಶಿವರಾತ್ರಿ ಅಮವಾಸ್ಯೆಯಂದು ಹೊರಗೆ ಕಾಮಣ್ಣನ ಪ್ರತಿಷ್ಠಾಪನೆಯ ಮೂಲಕ ಆರಂಭಗೊಳ್ಳುವ ಕಾಮನ ಹಬ್ಬವೇ ಸಂಕೇತ. ಈ ಕಾಮಣ್ಣನ ಮೂರ್ತಿಯನ್ನು ಪೊರಕೆ ಕಾಮಣ್ಣ ನೆಂದೂ ಕರೆಯಲಾಗುವುದು. ಏಕೆಂದರೆ ಈ ಕಾಮಣ್ಣನ ಮೂರ್ತಿಯು ಪೊರಕೆ, ಬಿದಿರಿನ ಮೊರ, ಪುರಿ ಉಂಡೆ, ಬೆರಣಿ ಮತ್ತು ಹೂವಿನ ಹಾರದಿಂದ ಅಲಂಕಾರ ಮಾಡಿ ಅದನ್ನು ಕಾಮನ ದಹನ ಮಾಡುವ ಸ್ಥಳದಲ್ಲಿ ಅದನ್ನು ತಂದು ಕಟ್ಟಿ ಹಾಕಲಾಗುತ್ತದೆ. ಪೊರಕೆ ಕಾಮಣ್ಣನ ಪ್ರತಿಷ್ಠಾಪನೆಯ ನಂತರದ ದಿನದಿಂದ ಹೋಳಿ ಹುಣ್ಣಿಮೆಯ ವರೆಗೆ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಜನರ ಅಭಿಷ್ಠೆಗಾಗಿ ಪ್ರತಿ ದಿನವೂ ಆರತಿ ಹಾಗೂ ರತಿ ಮನ್ಮಥರ ಪುತ್ಥಳಿಗಳಿಗೆ ದಿನಕ್ಕೊಂದು ವೇಷ ಭೂಷಣಗಳಿಂದ ಅಲಂಕಾರಗೊಳಿಸಿ ಸಂಪ್ರದಾಯ ಬದ್ಧವಾಗಿ ಆಚರಣೆಗಳನ್ನು ಹಾಗೂ ಪೂಜೆ ಪುನಸ್ಕಾರಗಳನ್ನು  ನಡೆಸಲಾಗುತ್ತದೆ. ಜೊತೆಗೆ ಜನರ ಕಣ್ಮನ ಸೆಳೆಯುವಂತೆ ವೇದಿಕೆ ಸಿದ್ಧಗೊಳಿಸಿ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ವಿದ್ಯುತ್ ಅಲಂಕಾರಮಾಡಿ ಉತ್ಸವದ ಪ್ರತಿದಿನವೂ ಹಬ್ಬದ ಕಳೆ ರಂಗೇರುವಂತೆ ಇಲ್ಲಿನ ಆಯೋಜಕರು ಹಾಗೂ ಸ್ಥಳೀಯರು ಹಬ್ಬಕ್ಕೆ ಜೀವಕಳೆ ತುಂಬುತ್ತಾರೆ. ಪ್ರತಿದಿನವೂ ರತಿ ಮನ್ಮಥರ ವೈಭೋಗವನ್ನು ಪ್ರಖರಗೊಳಿಸುವ ಅಲಂಕಾರ ಉತ್ಸವಗಳು ಜರುಗುತ್ತವೆ. ಈ ಉತ್ಸವದ ವಿಶೇಷ ರತಿ ಮನ್ಮಥರ ಪುತ್ಥಳಿಗಳು ದಿನಕ್ಕೊಂದು ಅಲಂಕಾರ ಹಾಗೂ ವೈಭವದ ಪ್ರದರ್ಶನ. ಇದು ದೂರದಿಂದ ಬರುವ ಪ್ರೇಕ್ಷಕರು ಮತ್ತು ಭಕ್ತಾದಿಗಳಿಗೆ ಕುತೂಹಲವೂ ಮತ್ತು ಆಕರ್ಷಣೆಯ ಕೇಂದ್ರವೂ ಆಗಿದೆ. ಚನ್ನಪಟ್ಟಣದ ಈ ಉತ್ಸವದ ರತಿ ಮನ್ಮಥರ ಪುತ್ಥಳಿಗಳು ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಇದು ಅತಿ ವಿಶೇಷವಾದುದ್ದಾಗಿದೆ ಹಾಗೂ ಇಲ್ಲಿನ ಸ್ಥಳೀಯರ ನಂಬಿಕೆಗೆ ಅರ್ಹವಾಗಿದೆ.


ರತಿ ಮನ್ಮಥರ ಸ್ತಬ್ಧ ಮೂರ್ತಿಗಳ ಅಲಂಕಾರವನ್ನು ಒಂದೊಂದು ದಿನವೂ ಒಂದೊಂದು ಬಗೆಯಲ್ಲಿ ಪ್ರದರ್ಶಿಸುವುದು ಹಾಗೂ ಅಲಂಕಾರ ಮಾಡುವುದು ಒಂದು ಕಲೆ. ಈ ಮೂರ್ತಿಗಳ ಅಲಂಕಾರವನ್ನು ದಿನಕ್ಕೊಂದು ರೀತಿಯಲ್ಲಿ ವರನಿಗೆ ಕಚ್ಚೆ ಪಂಚೆ, ಕೋಟು ಸೀರೆ ತೋಳುಬಂದಿ, ಬೈತಲೆಬೊಟ್ಟು, ಸರ ಕಿವಿಯೋಲೆ, ನಡುವಿನ ಡಾಬು ಒಡವೆ  ಮೊಗ್ಗಿನ ಜಡೆ ಮುಂತಾದವುಗಳಿಂದ ವಧುವರರ ಅಲಂಕಾರವನ್ನು ಮಾಡಿ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಹೀಗೆ ಪ್ರತಿದಿನವೂ ಸಂಜೆ ವಿವಿಧ ರೀತಿಯ ಆಚರಣೆ ಜರುಗುತ್ತದೆ. ಉದಾಹರಣೆಗೆ ನಿಶ್ಚಿತಾರ್ಥ ಪ್ರಸಂಗ, ವೈವಾಹಿಕ ಪ್ರಸಂಗ, ವಿವಾಹದ ನಂತರ ಸತ್ಯನಾರಾಯಣ ಪೂಜೆಯ ಸನ್ನಿವೇಶ. ಹಲವಾರು ಸ್ತಬ್ದ ಚಿತ್ರಗಳ ಪ್ರದರ್ಶನದ ಜತೆಗೆ ರತಿ ಮನ್ಮಥರ ವಿವಾಹ ಮಹೋತ್ಸವದ ಸನ್ನಿವೇಶವನ್ನು ಮರು ಸೃಷ್ಟಿಸಲಾಗುತ್ತದೆ. ಇವುಗಳಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆಯುವ ಪ್ರಸಂಗಗಳೆಂದರೆ ನಿಶ್ಚಿತಾರ್ಥ ಮಯ ಮದುವೆಯ ಸಂಭ್ರಮಗಳು. ಈ ಸಂಭ್ರಮಗಳಲ್ಲಿ ನಿಜವಾದ ನಿಶ್ಚಿತಾರ್ಥ ಹಾಗೂ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ವಿಧಿವತ್ತಾಗಿ ನಾದಸ್ವರ ಮತ್ತು ಮಂಗಳ ವಾದ್ಯಗಳೊಂದಿಗೆ ವೇದಿಕೆ ಮಂಟಪಕ್ಕೆ ಬರುವುದು. ಹೀಗೆ ಕಾಮನ ಹಬ್ಬದ ಅಷ್ಟೂ ದಿನಗಳಲ್ಲಿ ರತಿ ಮನ್ಮಥರ ಪುರಾಣ ಕಥೆಯನ್ನು ಈಗಿನ ಕಾಲಕ್ಕೆ ಅನುಗುಣ ಮಾರ್ಪಡಿಸಿ ಆಚರಿಸುವುದು ವಿಶೇಷ. ಇದನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾದು ನೋಡಿ ಅನುಭವಿಸಿ ಇದರ ಸಂಭ್ರಮವನ್ನು ಎಲ್ಲೆಡೆಯೂ ಕೊಂಡಾಡುತ್ತಾರೆ. ವಿಶೇಷವಾಗಿ ಈ ರತಿ ಮನ್ಮಥರ ಪುತ್ಥಳಿಗಳನ್ನು ಕೂರಿಸುವ ವೇದಿಕೆಯು ಅತ್ಯಂತ ವೈಭವದಿಂದ ಅಲಂಕಾರಗೊಳ್ಳುತ್ತದೆ. ಈ ವೇದಿಕೆಯನ್ನು  ಅಲಂಕರಿಸುವುದರಲ್ಲಿ ವಿಶೇಷತೆಯಿದೆ. ಪ್ರತಿದಿನವೂ ವಿವಿಧ ರೀತಿಯ ಅಲಂಕಾರವನ್ನು ವೇದಿಕೆಗೂ ಕೂಡ ಮಾಡಲಾಗುತ್ತದೆ. ಹದಿನೈದು ದಿನಗಳು ನಡೆಯುವ ಈ ಉತ್ಸವಕ್ಕೆ ಒಂದೂವರೆ ತಿಂಗಳಿನಿಂದಲೇ ಸಿದ್ಧತೆಗಳು ಪ್ರಾರಂಭವಾಗತ್ತವೆ. ವೇದಿಕೆ ಸಿದ್ಧಗೊಂಡ ನಂತರ ರತಿ ಮನ್ಮಥರ ಪುತ್ಥಳಿಗಳ ಜೊತೆ ವಿದ್ಯುತ್ ದೀಪಾಲಂಕಾರವು ಬಹಳ ಗಮನ ಸೆಳೆಯುತ್ತದೆ. ಈ ಅಲಂಕಾರವೂ ಕೂಡ ಒಂದು ತಿಂಗಳ ಮುಂಚೆ ಸಿದ್ಧತೆಗೊಳ್ಳಲು ಪ್ರಾರಂಭವಾಗುತ್ತದೆ. ಜತೆಗೆ ಪ್ರತಿ ದಿನವೂ ದೂರ ದೂರದಿಂದ ಬರುವ ಭಕ್ತಾದಿಗಳಿಗೆ ಆಯೋಜಕರ ತಂಡವು ವಿವಿಧ ರೀತಿಯ  ಪ್ರಸಾದ ವಿನಿಯೋಗವನ್ನು ಕೂಡ ಏರ್ಪಡಿಸಲಾಗುತ್ತದೆ. ಹೀಗೆ ಹಬ್ಬದ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೂ ಸ್ಥಳೀಯರು ಹಾಗೂ ಆಯೋಜಕರು ಪ್ರತಿಯೊಂದು ಕೆಲಸವನ್ನು ಸಂಭ್ರಮದಿಂದ ಅಚ್ಚುಕಟ್ಟಾಗಿ ಆಯೋಜಿಸುತ್ತಾ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ  ಹಬ್ಬದ ಕಳೆ ರಂಗೇರುವಂತೆ ಮಾಡುತ್ತಾರೆ.


ಅಲ್ಲದೆ ಇಲ್ಲಿನ ಸ್ಥಳಿಯರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾ ಪೂಜೆ ಪುನಸ್ಕಾರಗಳ ಜತೆ ಕಾಮದೇವನಲ್ಲಿ ತಮ್ಮ ಇಚ್ಛೆ ಆಕಾಂಕ್ಷೆಗಳನ್ನು ಬೇಡಿಕೊಳ್ಳುತ್ತಾ ಹರಕೆ ಕಟ್ಟಿ, ಸಲ್ಲಿಸುತ್ತಾ ನೆರೆದಿರುವ ಭಕ್ತಾದಿಗಳಿಗೆ ಸಿಹಿ ತಿಂಡಿಗಳನ್ನು ಹಂಚುವುದರಿಂದ ಚಿಕ್ಕ ಮಕ್ಕಳ ದೃಷ್ಟಿ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆಯೂ ಹೌದು. ಹಾಗೆಯೇ ಕಾಮದೇವನನ್ನು ಭಕ್ತಿಯಿಂದ ಪೂಜಿಸುವುದರೇ ವಿವಾಹ ಭಾಗ್ಯ ಸಂತಾನ ಭಾಗ್ಯದ ಜತೆ ಕುಟುಂಬದಲ್ಲಿ ಶಾಂತಿ ಸೌಖ್ಯ ನೆಲೆಗಾಣುವುದು ಎಂಬುದು ಇಲ್ಲಿನ ಸ್ಥಳೀಯರ ನಂಬುಗೆ. ಹರಕೆ ನೆರವೇರಿದ ನಂತರ ರತಿ ಮನ್ಮಥರಿಗೆ ವಸ್ತ್ರ ಗಳನ್ನು ಸಲ್ಲಿಸುವುದು ಇಲ್ಲಿನ ಜನರ ವಾಡಿಕೆ. ಪ್ರತಿದಿನ ಸಂಜೆ ರತಿ ಮನ್ಮಥರ ವಸ್ತ್ರಾಲಂಕಾರ ಪೂಜಾ ವೈಭವವನ್ನು ನೋಡಲು ಜನ ಸಮೂಹವೇ ನೆರೆಯುವುದು ವಾಡಿಕೆ. ಆದರೆ ಈ ವರ್ಷದ ಕೊರೊನಾ ಸಂಕಷ್ಟದಿಂದ ಭಕ್ತಾದಿಗಳು ಮಾಸ್ಕ್ ಧರಿಸುವುದು, ಅಂತರ ಕಾಪಾಡಿ ಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿ ವರ್ಷವೂ ಕಾಮನ ಹಬ್ಬವನ್ನು ಆಚರಿಸುವ ಸಮಿತಿಯೂ ಸ್ಯಾನಿಟೈಸ್ ಮಾಡಿಕೊಳ್ಳುವುದರ ಬಗ್ಗೆ ನಿಗಾ ವಹಿಸಲಾಗಿದೆ.


ಇಲ್ಲಿನ ಜನರ ನಂಬಿಕೆಗೆ ಪಾತ್ರವಾಗಿರುವ ರತಿ ಮನ್ಮಥರ ಆಶೀರ್ವಾದ ಪಡೆದು, ಹಬ್ಬದ ಅಷ್ಟೂ ದಿನಗಳು ಹರ್ಷೋಲ್ಲಾಸದಿಂದ ಭಾಗವಹಿಸಿ ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಮುಂತಾದುವುಗಳಲ್ಲಿ ಭಾಗವಹಿಸಿ ಮನೋರಂಜನೆಯನ್ನು ಕೂಡ ಪಡೆದುಕೊಳ್ಳುತ್ತಾರೆ. ಇದರಿಂದ ಹಬ್ಬಕ್ಕೆ ಮೆರುಗು ಕಳೆಗಟ್ಟುವುದರ ಜತೆಗೆ ಸಾರ್ಥಕ ಭಾವ ಹುಟ್ಟುತ್ತದೆ. ಅಷ್ಟೇ ಅಲ್ಲದೆ ಭಕ್ತಾದಿಗಳು ತಮ್ಮ ಶಕ್ತಾನುಸಾರ ತನು ಮನ ಧನ ಸಹಾಯವನ್ನು ವಂತಿಗೆ ರೂಪದಲ್ಲಿ ಕೊಡುಗೆಯಾಗಿ ನೀಡುತ್ತಾರೆ. ಹುಣ್ಣಿಮೆ ದಿನದ ಹಿಂದಿನ ಸಂಜೆ ಕಾಮದೇವನು ಶಿವನಿಗೆ ಹೂಬಾಣ ಬಿಡುವ ಸ್ತಬ್ಧಚಿತ್ರವನ್ನು ವೇದಿಕೆಯಲ್ಲಿ ಸಿದ್ಧಪಡಿಸಿ ಪುರಾಣದ ಸನ್ನಿವೇಶವನ್ನು ಮರುಕಳಿಸುವಂತೆ ಪ್ರತಿವರ್ಷವೂ ಸೃಷ್ಟಿಸುವುದು ವಿಶೇಷ. ಅದೇ ದಿನ ಸಂಜೆ ಮೈಸೂರಿನ ದಸರಾ ಜಂಬೂಸವಾರಿ ಹೋಲುವ ರೀತಿಯಲ್ಲಿ ದೇಶಿಯ ಜಂಬೂಸವಾರಿಯನ್ನು ಕಾಮದೇವನ ಮೂರ್ತಿಯೊಂದಿಗೆ ಮಾಡಲಾಗುತ್ತದೆ.  ಜತೆಗೆ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕರಗ, ಪೌರಾಣಿಕ ವೇಷ ಭೂಷಣಗಳು, ಕತ್ತಿವರಸೆ, ದೊಣ್ಣೆ ವರಸೆ, ವಾದ್ಯ ತಮಟೆ ಹಾಗೂ ಹಲವಾರು ರೀತಿಯ ಸಾಂಸ್ಕೃತಿಕ ಕಲಾ ಚಟುವಟಿಕೆಗಳು, ಕೇರಳದ ಚೆಂಡೆ ವಾದ್ಯ, ಡೊಳ್ಳು ಕುಣಿತದೊಂದಿಗೆ ಚನ್ನಪಟ್ಟಣದ ನಗರದಾದ್ಯಂತ ತಮಟೆ ಕೇರಳದ ಚಂಡಿವಾದ್ಯವು, ಚನ್ನಪಟ್ಟಣದ ನಗರದಾದ್ಯಂತ ವರ್ಣರಂಜಿತ ಬೆಳಕಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ.


ಈ ಸಂಭ್ರಮದಲ್ಲಿ ಭಾಗವಹಿಸುವ ಉತ್ತಮ ಸ್ತಬ್ದಚಿತ್ರಗಳು ಬಹುಮಾನ ಗಳಿಸುತ್ತವೆ.  ಈ ಮೆರವಣಿಗೆಯಲ್ಲಿ ಚಾಮುಂಡಿಯ ಕರಗ ಉತ್ಸವವು ಬಹಳ ಪ್ರಮುಖವಾಗಿರುತ್ತದೆ. ಕರಗವು ಉತ್ಸವದ ಪ್ರಾರಂಭದಿಂದಲೇ ನಡೆಯುತ್ತವೆ. ಕರಗವು ನಗರದ ಮೇದರ ಬೀದಿಯಿಂದ ಕಾಮದೇವನನ್ನು ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಲಾಗುತ್ತದೆ. ಇದರ ಮಧ್ಯೆ ನಮ್ಮ ದೇಶಿ ಕಲೆಯಾದ ಕತ್ತಿವರಸೆ, ದೊಣ್ಣೆವರಸೆ ಪ್ರದರ್ಶನವು ಮೆರವಣಿಗೆಯಲ್ಲಿ ಭಾಗಿಯಾಗಿರುವವರ ಕುತೂಹಲ ಹೆಚ್ಚಿಸುತ್ತದೆ.  ಪುರಾಣ ಕಥೆಗಳಲ್ಲಿ ಬರುವ ಪೌರಾಣಿಕ ಐತಿಹಾಸಿಕ ಪಾತ್ರಗಳ ವೇಷ ಸಕ್ಕರೆ ಸೈನಿಕರ ಹಾಗೆ ಚಿಕ್ಕಮಕ್ಕಳು ವೇಷ ಧರಿಸಿವುದು ಮೆರವಣಿಗೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ.  ಹೀಗೆ ಮೆರವಣಿಗೆಯು ಸಂಜೆಯಿಂದ ಆರಂಭಗೊಂಡು ರಾತ್ರಿಯೆಲ್ಲಾ ನಡೆಯುವುದರಿಂದ ನೋಡುವುದಕ್ಕೆ ವರ್ಣರಂಜಿತವಾಗಿರುತ್ತದೆ. ಇಲ್ಲಿನ ಜನರಿಗೆ ಅಂದಿನ ದಿನ ರಸ್ತೆ ಬದಿಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿರುತ್ತಾರೆ.  ಅದರಲ್ಲೂ ಇಲ್ಲಿನ ಯುವ ಸಮುದಾಯವು ಮೋಹ, ತಮಟೆ ಮತ್ತು ಡಿಜೆ ಹಾಡುಗಳ ಶಬ್ದಕ್ಕೆ ಕುಣಿದು ಕುಪ್ಪಳಿಸಿ ಮೆರೆವಣಿಗೆ ಸೇರ್ಪಡೆಗೊಳ್ಳುತ್ತಾರೆ. ಹಾಗೆ ಮೆರವಣಿಗೆಯು ನಗರಾದ್ಯಂತ ಸಂಚರಿಸಿದ ನಂತರ ಕಾಮನ ಗುಡಿಯ ಪ್ರತಿಷ್ಠಾಪನ ಜಾಗಕ್ಕೆ ಬಂದು ಕೊನೆಗೊಳ್ಳುತ್ತದೆ. ಮತ್ತೆ ಪೂಜೆ ಸಲ್ಲಿಸಿ ನಾಡು ಸುಭಿಕ್ಷವಾಗಿರಲಿ ಎಂದು ಬೇಡಿಕೊಳ್ಳಲಾಗುತ್ತದೆ. ಕಾಮದೇವನನ್ನು ಪ್ರಾರ್ಥಿಸುತ್ತಾ ಅವರ ಮನೆಗೆ ರಾಜ್ಯಕಳೆಯಲ್ಲಿ ತೆರಳುತ್ತಾರೆ.


ಹಬ್ಬದಲ್ಲಿ ಹೋಳಿ ಹುಣ್ಣಿಮೆಯ ದಿನವು ಅತೀ ಮುಖ್ಯವಾದುದು. ಅಂದಿನ ದಿನ ಕಾಮನ ರತಿಯಾ ಮೆರವಣಿಗೆ, ಕಾಮನ ದಹನ ಹಾಗೂ ಪ್ರತಿ ಮೆರವಣಿಗೆಯ ಕಾರ್ಯಕಾರ್ಯಕ್ರಮಗಳು ನಡೆಯುತ್ತವೆ. ಈ ಹಬ್ಬದಲ್ಲಿ ಗಮನಿಸಬೇಕಾದ ಮುಖ್ಯಅಂಶವೆಂದರೆ ಇಲ್ಲಿನ ಆಚರಣೆ ಸಂಪ್ರದಾಯಗಳು ಕೆಲ ಸ್ಥಳೀಯ ಮನೆತನದವರಿಂದಲೇ ನೆರವೇರಿಸುವುದು ಇಲ್ಲಿನ ಪದ್ಧತಿ. ಅದೇ ರೀತಿಯಾಗಿ ಹೋಳಿಹುಣ್ಣಿಮೆಯ ಬೆಳಿಗ್ಗೆ ಕಾಮರತಿಯ ಉತ್ಸವ ಮಂಟಪ ಸಿದ್ಧವಾಗಿ ಮೆರವಣಿಗೆ ಹೊರಡುವ ಮುನ್ನಾ ಪಟಾವಳಿ ಕಾಮಣ್ಣ ಎಂಬ ಚಿತ್ರಪಟವನ್ನು ಸ್ಥಳೀಯ ಮನೆತನದವರು ಸಿದ್ಧಪಡಿಸಿ ಅದಕ್ಕೆ ಪಟಾವಳಿ ಕಬ್ಬು ಹಾಗೂ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಕಾಮನಹಬ್ಬದ ಆಯೋಜಕರು ಆ ಚಿತ್ರಪಟವನ್ನು ಸ್ಥಳೀಯರ ಮನೆಯಿಂದ ತಮಟೆ ಸದ್ದಿನ ಜತೆಗೆ ಹೊತ್ತು ತಂದು ಮಂಟಪಕ್ಕೆ ಕಟ್ಟುತ್ತಾರೆ. ಇದಾದ ನಂತರವೇ ಮೆರವಣಿಗೆ ಮುಂದಕ್ಕೆ ಸಾಗುವ ಆಚರಣೆ. ಮೆರವಣಿಗೆ ಮುಂದಕ್ಕೆ ಸಾಗಿದ ಹಾಗೆ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸುತ್ತದೆ. ನಂತರ ಇಲ್ಲಿನ ಜನರು ದಾರಿ ಉದ್ದಕ್ಕೂ ಹಣ್ಣುಕಾಯಿ ಪೂಜೆ ಗಳನ್ನು ಕೊಟ್ಟು ಹರಕೆ ಹೊತ್ತಿರುವ ಭಕ್ತಾದಿಗಳು ಅವರವರ ಶಕ್ತಾನುಸಾರ ಹರಕೆಗಳನ್ನು ತೀರಿಸುವುದು, ಬಣ್ಣವನ್ನು ಹಚ್ಚುವುದು ಉದ್ದಕ್ಕೂ ದೇವರಿಗೆ ನಮಸ್ಕರಿಸುವುದು ಇಲ್ಲಿನ ಆಚರಣೆ. ಮಕ್ಕಳ ದೃಷ್ಟಿ ದೋಷ ನಿವಾರಣೆಗೆ ಮಕ್ಕಳನ್ನು ಉತ್ಸವ ಮಂಟಪಕ್ಕೆ ಹತ್ತಿಸಿ ಕಾಮಣ್ಣನ ಆಶೀರ್ವಾದ ಪಡಿಸುವುದು ವಿಶೇಷ. ಈ ಹೋಳಿ ಹುಣ್ಣಿಮೆಯ ದಿನ ಕಾಮನಹಬ್ಬಕ್ಕೆ ಬೇರೆ ಊರುಗಳಲ್ಲಿ ನೆಲೆಸಿರುವ ಸ್ಥಳೀಯರೆಲ್ಲರೂ ಸಪ್ತಪದಿ ಭಾಗಿಯಾಗಿರುತ್ತಾರೆ. ಹೀಗೆ ಉತ್ಸವ ಸಾಗುತ್ತ ಮುಂದೆ ಹೋದಂತೆ ರಸ್ತೆಯುದ್ದಕ್ಕೂ ಮಜ್ಜಿಗೆ ಪಾನಕ ಸಿಹಿತಿಂಡಿ ಪ್ರಸಾದಗಳನ್ನು ತಮ್ಮ ತಮ್ಮ ಮನೆಗಳ ಮುಂದೆ ವಿತರಿಸಿ ಉತ್ಸವದಲ್ಲಿ ಭಾಗಿಯಾಗಿರುವ ಭಕ್ತಾದಿಗಳ ದಣಿವನ್ನು ತೀರಿಸುವ ಮೂಲಕ ಈ ರೀತಿಯಾಗಿ ತಮ್ಮ ಸೇವೆಯನ್ನು ಕಾಮದೇವನಿಗೆ ನೆರವೇರಿಸುತ್ತಾರೆ.


ಹೀಗೆ ಕಾಮರತಿಯ ಉತ್ಸವದ ಮೆರವಣಿಗೆ ಮುಗಿಸಿ ಸ್ಥಳಕ್ಕೆ ಬಂದ ನಂತರ ದಹನ ಮಾಡುವ ಜಾಗದಲ್ಲಿ ಪೊರಕಿ ಕಾಮಣ್ಣನನ್ನು ನಿಲ್ಲಿಸಿ ಅದಕ್ಕೆ ಕಟ್ಟಿಗೆ ಸೌದೆ ಬೆರಣಿ ಹಳೆ ಚಾಪೆ ಒಣಗರಿಗಳನ್ನು ಹಾಕಿ ಕಾಮದಹನಕ್ಕೆ ಜಾಗ ಸಿದ್ಧಪಡಿಸುತ್ತಾರೆ. ನಂತರ ಕಾಮನ ಉತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಿ ಕಾಮನ ಸ್ತಬ್ದಗೊಂಡಿರುವ ಶಿರವನ್ನು ತಕ್ಷಣ ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಅನಂತರ ಪಟಾವಳಿ ಕಾಮಣ್ಣನ ಚಿತ್ರವನ್ನು ಉತ್ಸವ ಮಂಟಪದಿಂದ ತೆಗೆದು ದಹನಕ್ಕೆ ಸಿದ್ಧಪಡಿಸಿರುವ ಜಾಗದ ಸುತ್ತ ಸುತ್ತು ಹಾಕಿ ಅದನ್ನು ದಹನದ ಜಾಗಕ್ಕೆ ಸೇರಿಸುತ್ತಾರೆ. ಅದೇ ಸಮಯಕ್ಕೆ ಕಾಮನ ಅಣುಕು ಶವಯಾತ್ರೆ ಮಾಡಿ ದಹನ ಮಾಡುವ ಮುನ್ನ ಶಾಸ್ತ್ರಾನುಸಾರ ಚಟ್ಟ ಸಿದ್ಧಪಡಿಸಿ ಅದರಲ್ಲಿ ಒಬ್ಬ ವ್ಯಕ್ತಿ ಸತ್ತ ಶವವನ್ನು ಮಲಗಿಸುತ್ತಾರೆ. ಈ ಕಾಮನ ದಹನ ಕ್ರಿಯೆ ಮತ್ತು ಅಣಕು ಶವದ ಪಾದಯಾತ್ರೆ ನೋಡಲು ಸಾವಿರಾರು ಜನ ಸಮೂಹವೇ ಪ್ರತಿವರ್ಷವೂ ಇಲ್ಲಿ ಸೇರುತ್ತದೆ ಹಾಗೂ ನೋಡುಗರಿಗೆ ಆಕರ್ಷಣೀಯವಾಗಿರುತ್ತದೆ. ಹೀಗೆ ದಹನದ ಜಾಗದಲ್ಲಿ ಪೊರಕೆ ಕಾಮಣ್ಣ ಹಾಗೂ ಪಟಾವಳಿ ಕಾಮಣ್ಣನ ಚಿತ್ರಪಟವನ್ನು ಕಾಮನ ಪ್ರತಿರೂಪವಾಗಿ ಇಟ್ಟು ಅದಕ್ಕೆ ಬೆಂಕಿಯನ್ನು ಹಚ್ಚಿ ಅದನ್ನು ದಹಿಸುತ್ತಾರೆ. ಇದು ಕಾಮದಹನದ ಸಂಕೇತ. ಇದು  ಪುರಾಣ ಕತೆಯಲ್ಲಿ ಬರುವ ಹಾಗೆ ಕಾಮನು ಶಿವನ ತಪಸ್ಸನ್ನು ಭಂಗ ಬಡಿಸುವಾಗ ಶಿವನು ಉಗ್ರನಾಗಿ ತನ್ನ ಮೂರನೇ ಕಣ್ಣನ್ನು ತೆಗೆದು ಕಾಮನನ್ನು ದಹಿಸುವ ಕತೆಯ ಸಂಕೇತವಾಗಿದೆ. ಕಾಮನ ದಹನದ ನಂತರ ಗುಡಿಯನ್ನು ಸ್ಥಳೀಯರು ಭಕ್ತಾದಿಗಳು ಕಾಮಣ್ಣ ವಿಭೂತಿ ಎಂದು ಭಾವಿಸಿ ಅದನ್ನು ಭಕ್ತಿಯಿಂದ ಹಣೆಗೆ ಹಚ್ಚಿಕೊಂಡು ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗುವುದು ಇಲ್ಲಿನ ನಂಬಿಕೆಯ ಪ್ರತೀಕ. ಇಲ್ಲಿ ನಾವು ಮುಖ್ಯವಾಗಿ ನೋಡುವುದಾದರೆ ಪೊರಕಿ ಕಾಮಣ್ಣನ ಹಬ್ಬದ ಆರಂಭಿಕ ಸಂಕೇತವಾಗಿದ್ದು ಹಾಗೂ ಪಟಾವಳಿ ಕಾಮನಹಬ್ಬದ ಅಂತ್ಯಗೊಳ್ಳುವ ಸಂಕೇತವಾಗಿದೆ. ಈ ಹುಣ್ಣಿಮೆ ಚಂದ್ರನ ಬೆಳಕಲ್ಲಿ ರತಿ ತನ್ನ ಪತಿ ಕಾಮದೇವನನ್ನು ಕಳೆದುಕೊಂಡು ದುಃಖಭರಿತರಾಗಿ ತನ್ನ ಪತಿಗೆ ಮರುಜನ್ಮ ನೀಡಿ ಎಂದು ಶಿವನಲ್ಲಿ ಬೇಡುವಹಾಗೆ ಬಿಳಿ ಸೀರೆ ಉಡಿಸಿ, ತಮಟೆ ಬ್ಯಾಂಡ್ ಭಜಂತ್ರಿಗಳ ಸದ್ದಿನ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಮೆರವಣಿಗೆ ಕಾರ್ಯಕ್ರಮಗಳು ಹುಣ್ಣಿಮೆ ದಿನ ಮುಗಿದ ನಂತರ ಕಾಮನೆಯಲ್ಲಿ ಜನರ ನಂಬಿಕೆ ಬರೀ ಮೂರು ಮುಕ್ಕಾಲು ಗಳಿಕೆ ಮಾತ್ರ ಪ್ರಾಣ ಕಳೆದುಕೊಂಡಿದ್ದಾನೆ. ನಂತರ ಶಿವನ ಅನುಗ್ರಹ ಪಡೆದು ಕಾಮದೇವನು ಮರು ಜನ್ಮ ತಾಳಿ ಲೋಕ ಕಲ್ಯಾಣವಾಗುವ ಕಾರಣ ಹೋಳಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವವನ್ನು ಆಚರಿಸುವ ಪದ್ಧತಿ ಇಲ್ಲಿದೆ.


ವಿಜಯೋತ್ಸವದ ಈ ದಿನ ಕಾಮರತಿಯು ಸೇರುವ ಸಂಕೇತವೂ ಲೋಕ ಸುಭಿಕ್ಷೆಗಾಗಿ ಜನರಲ್ಲಿ ನೆಮ್ಮದಿ ನೆಲೆ ಕಾಣುವ ಅಂದಿನ ದಿನ ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಅದ್ದೂರಿಯಾಗಿ ಉತ್ಸವವನ್ನು ಆಚರಿಸುತ್ತಾರೆ. ಕಾಮದೇವನಲ್ಲಿ ಆ ದಿನದ ವೈಭವದ ಮೆರವಣಿಗೆ ವಿಜಯೋತ್ಸವ ದಿನದಲ್ಲಿ ಅತಿ ಆಕರ್ಷಣೀಯವಾಗಿರುತ್ತದೆ. ಇದರ ಜೊತೆ ನಾದಸ್ವರ ವಾದ್ಯಗಾರರು ನುಡಿಸುವ ಸ್ವರವೂ ವಿಜಯದ ಮೆರವಣಿಗೆಯಲ್ಲಿ ಕಳೆಯನ್ನು ತುಂಬುತ್ತದೆ. ರತಿಯು ತನ್ನ ಪತಿ ಕಾಮನ ಜೊತೆ ಬೆರೆಯುವ ಆ ದಿನ ಅಭೂತ ಪೂರ್ವವಾಗಿರುತ್ತದೆ. ಹಾಗೆ ಇಲ್ಲಿನ ಸ್ಥಳೀಯ ಮನೆ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ಮಾಡುವುದು ಈ ಉತ್ಸವದ ಮೆರುಗನ್ನು ಹೆಚ್ಚಿಸುತ್ತದೆ ಕಾಮರತಿಯ ಮೆರವಣಿಗೆ ಸಂತರ ದರ್ಶನ ಪಡೆದು ಧನ್ಯರಾಗುತ್ತಾರೆ. ಹೀಗೆ ಕಾಮನ ಹಬ್ಬದ ಆಚರಣೆಯು ಮನುಕುಲದ ಒಳಿತಿಗಾಗಿ ಪ್ರಕೃತಿಯ ಉಳಿವಿಗಾಗಿ, ಒಳಿತಿಗಾಗಿ, ಮಳೆ ಬೆಳೆ ಚೆನ್ನಾಗಿ ಆಗುವ ಉದ್ದೇಶದಿಂದ ಪ್ರಾರ್ಥಿಸುವ ಕೈಂಕರ್ಯವೂ ಹೌದು. ಕಾಲಕಳೆಯುವ ಉದ್ದೇಶಕ್ಕೆ ಈ ಆಚರಣೆಯನ್ನು ಆಚರಿಸುತ್ತಾರೆ. ಹೀಗೆ ಕಾಮನ ಹಬ್ಬವನ್ನು ಪ್ರತಿವರ್ ಸತತ ಎರಡು ವಾರಗಳಿಗಿಂತ ಹೆಚ್ಚು ಕಾಲ ಸ್ಥಳೀಯ ಆಯೋಜಕರಿಂದ ಹುಟ್ಟು ಹಬ್ಬವನ್ನು ಆಚರಿಸಿ ಹಬ್ಬದ ಯಶಸ್ಸಿಗೆ ಕಾರಣರಾಗಿ ರತಿ ಮನ್ಮಥರ ಕೃಪೆಗೆ ಪಾತ್ರರಾಗುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑