Tel: 7676775624 | Mail: info@yellowandred.in

Language: EN KAN

    Follow us :


ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು

Posted date: 05 Apr, 2021

Powered by:     Yellow and Red

ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು

ತಾಲ್ಲೂಕಿನ ಐಷಾರಾಮಿ ಶಾಲೆ ಎಂಬ ಹಣೆಪಟ್ಟಿಹೊತ್ತ, ನಮ್ಮ ಮಕ್ಕಳನ್ನು ಓದಿಸಿದರೆ ಇಂತಹ ಶಾಲೆಯಲ್ಲೇ ಓದಿಸಬೇಕೆಂಬ ಇರಾದೆ ಹೊಂದಿ, ಬೇರೆ ಶಾಲೆ ಬಿಡಿಸಿ ಇಲ್ಲಿಗೆ ದಾಖಲಿಸಿದ ಪೋಷಕರ, ಅತಿ ಹೆಚ್ಚು ಸಂಬಳ ನೀಡುವ ಶಾಲೆ ಎಂದು ಇರುವ ಶಾಲೆಗೆ ರಾಜಿನಾಮೆ ಕೊಟ್ಟು ಬಂದ ಶಿಕ್ಷಕರ ಹಾಗೂ ಬಹಳ ಮುಖ್ಯವಾಗಿ ಸಿಬಿಎಸ್ಸಿ ಸಿಲೆಬಸ್ ಅಂತೆ ಎಂದು ಸೇರಿ(ಸಿ)ಕೊಂಡ ವಿದ್ಯಾರ್ಥಿಗಳು ಇಂದು ಕಂಗಾಲುಗುವ ಪರಿಸ್ಥಿತಿ ಎದುರಾಗಿದೆ.


ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೃಹತ್ ಕಟ್ಟಡಗಳನ್ನು ಹೊಂದಿದ, ಸಿಬಿಎಸ್ಸಿ ಪಠ್ಯಕ್ರ ಮದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಂಬ ಹೆಸರಿನ ಈ ಶಾಲೆಯನ್ನು 2021/22 ಸಾಲಿಗೆ ಮುಂಚಿನ ಮೂರು ತಿಂಗಳು ಮೊದಲೇ ಮುಚ್ಚಲು ಅನುಮತಿ ನೀಡಬೇಕು ಎಂದು ಶಾಲೆಯ ಆಡಳಿತ ಮಂಡಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಓ) ಲಿಖಿತ ಮನವಿ ಸಲ್ಲಿಸಿದ್ದಾರೆ.


ಮನವಿಯಲ್ಲಿ ಅವರೇ ಹೇಳಿಕೊಂಡಿರುವಂತೆ ಕೊರೊನಾ ಮಹಾಮಾರಿಯಿಂದ ಶಾಲೆಯು ನಷ್ಟದಲ್ಲಿ ನಡೆಯುತ್ತಿದೆ. ಈಗಾಗಲೇ ಈ ಸಾಲಿನ ಶೇಕಡಾ 70 ರಷ್ಟು ಪಠ್ಯವನ್ನು ಮುಗಿಸಿದ್ದು, ಆನ್ಲೈನ್ ಮೂಲಕ ಪರೀಕ್ಷೆಯನ್ನು ಮುಗಿಸಿದ್ದೇವೆ. ಕೊರೊನಾ ಭಯದಿಂದ ಪೋಷಕರು ಹೊಸ ನೋಂದಣಿಗೆ ಮುಂದಾಗದಿರುವುದರ ಜೊತೆಗೆ ಇರುವ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


*ಶಿಕ್ಷಕರು ಮತ್ತು ಪೋಷಕರ ತಳಮಳ*

ಹೊಸ, ಐಷಾರಾಮಿ ಹಾಗೂ ಸಿಬಿಎಸ್ಸಿ ಪಠ್ಯಕ್ರಮ ಶಾಲೆಯೆಂದು ಉಳ್ಳವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರೆ, ಕೋಗಿಲೆ ನೋಡಿ ಕೆಂಬೂತ ಪುಕ್ಕ ಕಿತ್ತಾಕಿತು ಎಂಬ ಗಾದೆಯಂತೆ ಹಲವು ಪೋಷಕರು ಸಾಲ ಮಾಡಿ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದರು. ಆಕರ್ಷಕ ಹಾಗೂ ಹೆಚ್ಚಿನ ಸಂಬಳ ಎಂದು ಇರುವ ಶಾಲೆಯನ್ನು ಬಿಟ್ಟು ಶಿಕ್ಷಕರು ಸಹ ಈ ಶಾಲೆಗೆ ಜಿಗಿದಿದ್ದರು. ನಗರದಲ್ಲಿನ ಒಂದು ಶಾಲೆ ಹೊರತುಪಡಿಸಿದರೆ ಸಿಬಿಎಸ್ಸಿ ಶಾಲೆಗಳಿಲ್ಲವಾದ್ದರಿಂದ ಶಿಕ್ಷಕರು, ಪೋಷಕರಿಂದ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿರುವುದು ದುರದೃಷ್ಟಕರ.


*ಮಾರಾಟವಾಗಿದೆಯಂತೆ !?*

ಈ ಶಾಲೆಯು ಉಪ ಮುಖ್ಯಮಂತ್ರಿಯೊಬ್ಬರಿಗೆ, ಬೃಹತ್ ಶಿಕ್ಷಣ ಸಂಸ್ಥೆ ಹೊಂದಿರುವ ಮಠವೊಂದಕ್ಕೆ ಮಾರಾಟವಾಗಿದೆಯಂತೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ನಂಬಲರ್ಹ ಮೂಲಗಳು ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಮಾರಾಟವಾಗಿದೆ ಎಂದು ತಿಳಿಸಿವೆ. ಇದಕ್ಕೆ ಪುಷ್ಟಿ ನೀಡುವಂತೆ ಅವರು ಸಲ್ಲಿಸಿರುವ ಮನವಿಯೇ ಸಾಕ್ಷಿಯಾಗಿ ನಿಂತಿದೆ.


*ತಟಸ್ಥ ಬಿಇಓ*

ಮನವಿ ಬಂದಿದೆ. ಈ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಉತ್ತರ ಪಡೆದು ನಂತರ ತೀರ್ಮಾನಿಸುತ್ತೇನೆ. ಹಾಲಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಮುದುಗೆರೆ ಗ್ರಾಮದ ಸರ್ಕಾರಿ ಶಾಲೆಗೆ ಸೂಚಿಸುತ್ತೇನೆ ಎಂದು ಬಿಇಓ ನಾಗರಾಜು ತಿಳಿಸಿದ್ದಾರೆ. ಜೊತೆಗೆ ಖಾಸಗಿ ಶಾಲೆಯವರು ಯಾವಾಗ ಬೇಕಾದರೂ ಮುಚ್ಚಬಹುದು.ಅವರೇ ಸುಪ್ರೀಂ ಎಂಬ ಹೇಳಿಕೆಯನ್ನು ನೀಡಿರುವುದು ನಮ್ಮ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಕಾಳಜಿ ಎಂತಹುದು ಎಂಬುದು ಸರ್ವರಿಗೂ ವೇದ್ಯವಾಗುತ್ತದೆ.

ಒಟ್ಟಾರೆ ನಿರ್ಧಿಷ್ಟ ಗುರಿ ಇಲ್ಲದ ಶಾಲೆ ಹಾಗೂ ಖಾಸಗಿಯವರ ತಾಳಕ್ಕೆ ಕುಣಿಯುವ ಸಂಸ್ಥೆಯಿಂದ ಎಳೆಯ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದಂತು ಸತ್ಯ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑