Tel: 7676775624 | Mail: info@yellowandred.in

Language: EN KAN

    Follow us :


ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

Posted date: 08 Apr, 2021

Powered by:     Yellow and Red

ಟೊಯೋಟಾ ಕಿರ್ಲೋಸ್ಕರ್‌ ನೆರವಿನಿಂದ ಹೈಟೆಕ್‌ ಆಯಿತು ಸರಕಾರಿ ಪ್ರಾಥಮಿಕ ಶಾಲೆ; 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

ರಾಮನಗರದಲ್ಲಿ ಸರಕಾರಿ ಶಾಲೆ & ಪ್ರಥಮ ದರ್ಜೆ ಕಾಲೇಜ್ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಡಿಸಿಎಂ.


ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಮರು ನಿರ್ಮಾಣ ಮಾಡಿರುವ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು. 


*ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ;*


ಸುಮಾರು 4.28 ಕೋಟಿ ರೂ. ವೆಚ್ಚದಲ್ಲಿ 22 ಕೊಠಡಿಗಳನ್ನು ‌ನಿರ್ಮಾಣ ಮಾಡಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಇಡೀ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಜಾಗತಿಕ ಗುಣಮಟ್ಟದ ಸ್ಪರ್ಶ ನೀಡಿದೆ. ಖಾಸಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಯಾವ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ. 


ಸುಸಜ್ಜಿತ ಲ್ಯಾಬ್, ಅಡುಗೆ ಮನೆ, ಹೈಟೆಕ್‌ ಗ್ರಂಥಾಲಯ, ಅಂಗನವಾಡಿ ಮಕ್ಕಳಿಗೂ ಒಂದು ಕೊಠಡಿ, ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಡೀ ಜಿಲ್ಲೆಯಲ್ಲಿ ಅತ್ಯುತ್ತಮ ಸೌಲಭ್ಯಗಳುಳ್ಳ ಸರಕಾರಿ ಶಾಲೆ ಇದಾಗಿದೆ. ಕಂಪನಿಯ ಆಡಳಿತ ಮಂಡಳಿ ತನ್ನ ಸಿಎಸ್‌ಆರ್ ನಿಧಿಯಿಂದ ಈ ಶಾಲೆ ಆಧುನೀಕರಣಗೊಳಿಸಿದೆ. 


ಬಳಿಕ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು; ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್‌ ಕಂಪನಿ ನೆರವು ನೀಡಿರುವುದು ಸಂತಸ ಉಂಟು ಮಾಡಿದೆ. ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. 


ಸರಕಾರಿ ಶಾಲೆ- ಕಾಲೇಜುಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನೂ ಸರಕಾರ ಮಾಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಈ ವರ್ಷದಿಂದಲೇ ಜಾರಿ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. 


*ಪ್ರಥಮ ದರ್ಜೆ ಕಾಲೇಜನ ನೂತನ ಕಟ್ಟಡ:*


ಇದೇ ವೇಳೆ ಡಿಸಿಎಂ ಅವರು ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. 


1982-83ರಲ್ಲಿ ಆರಂಭವಾದ ಈ ಕಾಲೇಜು ರಾಮನಗರದ ಮಟ್ಟಿಗೆ ಒಂದು ಪ್ರಮುಖ ಲ್ಯಾಂಡ್‌ಮಾರ್ಕ್‌ ಆಗಿದ್ದು, ಇದೀಗ ಡಿಸಿಎಂ ಒತ್ತಾಸೆಯಿಂದ ಅತ್ಯಾಧುನಿಕ ಕಟ್ಟಡವೊಂದು ತಲೆಎತ್ತಿದೆ. ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, 648 ಚ.ಮೀ ವಿಸ್ತೀರ್ಣವುಳ್ಳ ಕಟ್ಟಡದಲ್ಲಿ ಎನ್‌ಎನ್‌ಎಸ್‌ಎಸ್‌, ಎನ್‌ಸಿಸಿ, ಪ್ರಯೋಗಾಲಯ ಹಾಗೂ ಕ್ಲಾಸ್‌ ರೂಮ್‌ಗಳಿವೆ. 


ಈ ಕಾಲೇಜಿನಲ್ಲಿರುವ ಒಟ್ಟು 29 ತರಗತಿ ಕೊಠಡಿಗಳ ಪೈಕಿ, 8 ತರಗತಿ ಕೊಠಡಿಗಳನ್ನು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್‌ ರೂಮುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಗಳಲ್ಲಿ ಪ್ರೊಜೆಕ್ಟರ್, ಯುಪಿಎಸ್, ಆಕ್ಸೆಸ್ ಪಾಯಿಂಟುಗಳು, ಆಂಡ್ರಾಯ್ಡ್ ಬಾಕ್ಸ್ʼಗಳು, ವೈಟ್ ಬೋರ್ಡುಗಳಿವೆ. ಆಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಡಿಜಿಟಲ್ ಕಲಿಕೆಯ ಸೌಕರ್ಯ ದೊರೆಯಬೇಕು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿದೆ ಎಂದು ಡಿಸಿಎಂ ಹೇಳಿದರು. 


*ಖಾಸಿಗಿ ಸಹಭಾಗಿತ್ವ ಬೇಕು ಎಂದ ಡಿಸಿಎಂ*


*ಕಾಲೇಜು ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ಅಶ್ವತ್ಥನಾರಾಯಣ;*

ರಾಜ್ಯವು ಶೈಕ್ಷಣಿಕವಾಗಿ ಉತ್ತಮ ವಾತಾವರಣ ಹೊಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಆಧುನೀಕರಣಗೊಳಿಸಲು ಖಾಸಗಿಯರ ನೆರವು ಬೇಕು ಎಂದು ಮನವಿ ಮಾಡಿದರು. 


ಈಗಾಗಲೇ ರಾಜ್ಯ ಸರಕಾರ Help Educate ಉಪಕ್ರಮವನ್ನು ಶುರು ಮಾಡಿದ್ದು, ಇದರ ಅಡಿಯಲ್ಲಿ ಖಾಸಗಿ ವಲಯದ ಅನೇಕ ಧಾತರು ನೆರವಿಗೆ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಸರಕಾರದ ಉದ್ದೇಶಕ್ಕೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಉಪಕ್ರಮದಡಿ ಕಾಗ್ನಿಸೆಂಟ್ ಸಂಸ್ಥೆ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 12,000  ಡೀಬಾಂಡೆಡ್ ಕಂಪ್ಯೂಟರ್ʼಗಳನ್ನು ನೀಡಿದ್ದು, ಅವುಗಳಲ್ಲಿ 40 ಕಂಪ್ಯೂಟರ್‌ಗಳನ್ನು ಈ ಕಾಲೇಜಿಗೆ ಒದಗಿಸಲು ಒಂದು ಕಂಪ್ಯೂಟರ್ ಪ್ರಯೋಗಾಲಯವನ್ನೂ ರೂಪಿಸಲಾಗಿದೆ. ಈಗ ಈ ಪ್ರಯೋಗಾಲಯವನ್ನೂ ಲೋಕಾರ್ಪಣೆ ಮಾಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 


ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ ಮುಂತಾದವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑