ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್

ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್ರಾಣಿಗಳಾದ ಎಮ್ಮೆ ಮತ್ತು ಹಸುಗಳೂ ಸಹ ಸಂಗೀತ ಆಲಿಸುವಾಗ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ ಎಂದು ಸಾಬೀತು ಪಡಿಸಿದೆ. ಬಹುಶಃ ಮನುಷ್ಯ ಸಂಗೀತ ಕಲಿತಿದ್ದೂ ಸಹ ಪಕ್ಷಿಗಳ ಕಲರವದಿಂದಲೇ. ಇಂತಹ ಸಂಗೀತವು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಚನ್ನಪಟ್ಟಣ ಉಪ ಪೊಲೀಸ್ ವಿಭಾಗಾಧಿಕಾರಿ ಕೆ.ಎನ್ ರಮೇಶ್ ಅಭಿಪ್ರಾಯ ಪಟ್ಟರು.
ಅವರು ಗೋವಿಂದೇಗೌಡನದೊಡ್ಡಿ ಗ್ರಾಮದ ಕನ್ನಡ ಜಾನಪದ ಕಲಾ ಕುಟೀರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಅಕ್ಕ ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಸಾಧನೆಯಲ್ಲಿ ತಾನ್ಸೇನ್ ಮತ್ತು ಗುರು ಹಾಗೂ ದೊರೆ ಅಕ್ಬರ್ ಅವರ ಕಥೆ ಹೇಳುವ ಮೂಲಕ ಕಲಾವಿದರಲ್ಲಿ ಆಸಕ್ತಿ ಮೂಡಿಸಿದರು. ನಾನೂ ಸಹ ಒಬ್ಬ ಕಲಾವಿದ ಹೌದು, ನನ್ನಲ್ಲೂ ಕವಿತೆ ಕಟ್ಟುವ, ಉಲ್ಲಸ ಭರಿತವಾಗಿ ಹಾಡುವ ಒಬ್ಬ ಕಲಾವಿದ ಇದ್ದಾನೆ ಎಂದು ಹೇಳಿ, ಒಂದು ಗೀತೆಯನ್ನು ಹಾಡುವ ಮೂಲಕ ಕಲಾವಿದರನ್ನು ಅಚ್ಚರಿಗೊಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಯೋಗ ಶಿಕ್ಷಕಿ ರಾಧಿಕಾ ರವಿಕುಮಾರ್ ಮಾತನಾಡಿ, ಕಲೆ ಎಲ್ಲರಲ್ಲೂ ಬರುವುದಿಲ್ಲ, ಎಳವೆಯಿಂದ ಕಲಿತರಷ್ಟೇ ಉತ್ತಮ ಕಲಾವಿದನಾಗಲು ಸಾಧ್ಯ. ನಂತರ ಕಲಾವಿದನಾದರೆ ಅದು ಅಭ್ಯಾಸಕಷ್ಟೇ ಸೀಮಿತವಾಗುತ್ತದೆ, ಹಾಗೆಂದು ಕಲೆಯನ್ನು ಬಿಡಬಾರದು, ತಿಳಿದವರು ತಿಳಿಯದವರಿಗೆ ಕಲಿಸುವುದೇ ಕಲೆಯಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ, ಲಕ್ಷ್ಮಿ ಗೋರಾಶ್ರೀನಿವಾಸ್ ಅವರು, ಜಾನಪದ ಕಲೆ ಎಷ್ಟೇ ಪ್ರಯತ್ನ ಪಟ್ಟರು ನಶಿಸಿಹೋಗುತ್ತಿದೆ, ಇಂತಹ ಕಲೆಯನ್ನು ಉಳಿಸಬೇಕಾದ ಧರ್ಮ ಯುವಕರ ಕೈಯಲ್ಲಿದೆ, ಇದಕ್ಕೆ ಕಲಿತು, ಉನ್ನತ ಸ್ಥಾನಕ್ಕೇರಿರುವವರು ಹಮ್ಮು ಬಿಟ್ಟು ಕಲಿಸುವ ಔದಾರ್ಯ ತೋರಬೇಕಾಗಿದೆ. ಕಲೆಯನ್ನೇ ನಂಬಿ ಆರ್ಥಿಕವಾಗಿ ಸಬಲರಾಗಲು ಕಷ್ಟವಿದೆ, ಆದ್ದರಿಂದ ಯುವಕರು ತಮ್ಮ ಉದ್ಯೋಗದ ಜೊತೆಗೆ ಕಲೆಯನ್ನು ಕಲಿತು ಸಾದರಪಡಿಸಿ, ತಮ್ಮ ಮುಂದಿನ ಪೀಳಿಗೆಗೂ ಕಲಿಸಿದರಷ್ಟೇ ಕಲೆ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜನಪದ ಗಾಯನ, ತತ್ವ ಪದ ಗಾಯನ ಮತ್ತು ಜಾಗೃತಿ ಗೀತೆಗಳನ್ನು ನಮನ ಶಿವಕುಮಾರ್, ಎಂ.ಬಿ ಮಹದೇವ್ ಮತ್ತು ತಂಡ, ರಾಂಪುರ ಸಿದ್ದರಾಜು ಮತ್ತು ತಂಡ, ಎನ್ ಶೇಖರ್ ಹನಿಯಂಬಾಡಿ, ಚಂದನ ಚೆಲುವರಾಜು ನಡೆಸಿಕೊಟ್ಟರು. ಸೋಬಾನೆ ಗಾಯನವನ್ನು ಗೌರಮ್ಮ ಮತ್ತು ತಂಡ ಕನಕಪುರ , ಚಂದ್ರಮ್ಮ ಮತ್ತು ತಂಡ ಹೊಡಿಕೆಹೊಸಹಳ್ಳಿ ನಡೆಸಿಕೊಟ್ಟರು.
ವೇದಿಕೆಯಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಿರ್ಮಲಾ, ಕಲಾವಿದೆ ರೋಜ್ ಮೇರಿ, ಸಂಗೀತ ಶಿಕ್ಷಕರಾದ ಚಂದ್ರಿಕಾ, ಚೌಡೇಶ್ವರಿ ಚಾರಿಟೇಬಲ್ ಟ್ರಸ್ಟ್ನ ಪುಷ್ಪ, ತಿಟ್ಟಮಾರನಹಳ್ಳಿ ಪ್ರೇಮ, ಅಕ್ಕಾ ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷೆ ಮರಿಯಮ್ಮ, ಕಾರ್ಯದರ್ಶಿ ಮಂಜುಳಾ ಮತ್ತು ಕಲಾವಿದ ಸಿದ್ದರಾಜು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು