Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಹಿನ್ನೆಲೆಯಲ್ಲಿ ಕರ್ಫ್ಯೂ, ಸಂಪೂರ್ಣ ಸ್ತಬ್ಧವಾದ ನಗರ

Posted date: 24 Apr, 2021

Powered by:     Yellow and Red

ಕೊರೊನಾ ಹಿನ್ನೆಲೆಯಲ್ಲಿ ಕರ್ಫ್ಯೂ, ಸಂಪೂರ್ಣ ಸ್ತಬ್ಧವಾದ ನಗರ

ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವೂ ಶುಕ್ರವಾರ ರಾತ್ರಿಯಿಂದ, ಸೋಮವಾರ ಬೆಳಿಗ್ಗೆ ತನಕ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಚನ್ನಪಟ್ಟಣ ನಗರವೂ ಸಂಪೂರ್ಣ ಸ್ತಬ್ಧವಾಗಿದೆ.


ಚನ್ನಪಟ್ಟಣ ನಗರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಹ ಅತ್ಯಗತ್ಯ ವಾಹನಗಳ ಸಂಚಾರ ಹೊರತುಪಡಿಸಿ ಶೇ 98 ರಷ್ಟು ವಾಹನಗಳ ಸಂಚಾರ ನಿಂತುಹೋಗಿದೆ. ಸಾರಿಗೆ ಬಸ್ಸುಗಳು ಮತ್ತು ನಗರ ಸಂಚಾರಕ್ಕೆ ಇರುವ ಆಟೋಗಳು ಸಹ ಬೆರಳೆಣಿಕೆಯಷ್ಟು ಮಾತ್ರ ಸಂಚರಿಸುತ್ತಿವೆ. ಸರ್ಕಾರಿ ಮತ್ತು ಖಾಸಗಿ ಕಛೇರಿಗಳಂತೂ ಬಾಗಿಲು ಬಡಿದು ನಿಂತಿವೆ.


ಹೆದ್ದಾರಿ ಬದಿಯಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಅಂಗಡಿಗಳು, ಮಾಲ್ ಗಳು, ಬ್ಯಾಂಕುಗಳು, ನಗರದ ಅತ್ಯಂತ ಜನದಟ್ಟಣೆಯ ವ್ಯಾಪಾರ ಪ್ರದೇಶಗಳಾದ ಅಂಚೆ ಕಛೇರಿ ರಸ್ತೆ, ಎಂ ಜಿ ರಸ್ತೆ, ಡಿ ಟಿ ರಾಮು ವೃತ್ತ ಮತ್ತು ಪೇಟೆ ಬೀದಿ ಎಂದೇ ಹೆಸರಾದ ಜೆ ಸಿ ರಸ್ತೆಗಳು ಸಹ ಗರ ಬಡಿದಂತೆ ಬಾಗಿಲು ಬಡಿದು ನಿಂತಿವೆ. ವಿಶೇಷವಾಗಿ ಅಂಚೆ ಕಚೇರಿ ರಸ್ತೆ ಮತ್ತು ಎಂ ಜಿ ರಸ್ತೆಯ ಎರಡೂ ಭಾಗದ ಉದ್ದಗಲಕ್ಕೂ ಗಿಜಿಗುಡುತ್ತಿದ್ದ ಪುಟ್ಪಾತ್ ಅಂಗಡಿಗಳು ಪ್ಲಾಸ್ಟಿಕ್ ಕವರ್ ಗಳನ್ನು ಹೊದ್ದು ತಣ್ಣಗೆ ಮಲಗಿವೆ.


ಕಳೆದ ವರ್ಷ ಪ್ರಾರಂಭದ ಲಾಕ್ಡೌನ್ ಗೆ ಹೋಲಿಸಿದರೆ ಇಂದಿನ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಬಹುತೇಕ ಎಲ್ಲಾ ವರ್ಗದ ಜನರು ಅರ್ಥೈಸಿಕೊಂಡಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಸಹ ಅಗತ್ಯತೆ ಹೊರತುಪಡಿಸಿ ನಗರಕ್ಕೆ ಕಾಲಿಡಲು ಹಿಂದೆಮುಂದೆ ನೋಡುತ್ತಿರುವುದರಿಂದ, ಅವರಲ್ಲೂ ಜಾಗೃತಿ ಮೂಡಿರಿವುದು ಅರಿವಾಗುತ್ತಿದೆ.


ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗಿರೀಶ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಮೇಶ್ ರವರು ಎಲ್ಲಾ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾರ್ಗಸೂಚನೆ ಮತ್ತು ಖಡಕ್ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲಲ್ಲಿ ಪೋಲೀಸರು ಸಹ ನಗರದೆಲ್ಲೆಡೆ ಹದ್ದಿನ ಕಣ್ಣಿಟ್ಟಿರುವುದರಿಂದ ಜನರು ಬೀದಿಗಿಳಿಯಲು ಹೆದರುತ್ತಿರುವುದು ಸತ್ಯ.

ಒಟ್ಟಾರೆ ಕೊರೊನಾ ಸೋಂಕು ತಡೆಗಟ್ಟಲು ತಾಲ್ಲೂಕು ಆಡಳಿತವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದು, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸಹ ಸಾಥ್ ನೀಡಿರುವುದು ಒಳ್ಳೆಯ ಬೆಳವಣಿಗೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑