Tel: 7676775624 | Mail: info@yellowandred.in

Language: EN KAN

    Follow us :


ದಲಿತ ಸಂವೇದನೆಗಳಿಗೆ ದನಿ ಕೊಟ್ಟ ಮಹತ್ವದ ಕವಿ ಡಾ. ಸಿದ್ದಲಿಂಗಯ್ಯ

Posted date: 13 Jun, 2021

Powered by:     Yellow and Red

ದಲಿತ ಸಂವೇದನೆಗಳಿಗೆ ದನಿ ಕೊಟ್ಟ ಮಹತ್ವದ ಕವಿ ಡಾ. ಸಿದ್ದಲಿಂಗಯ್ಯ

ನಾಡೋಜ ಡಾ. ಸಿದ್ಧಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಚಿಂತನಶೀಲ ಕವಿ. ಇವರ ಕವಿತೆಗಳು ಅಕ್ಷರ ವಂಚಿತ ಶೋಷಿತ ಸಮುದಾಯದ ಸಂವೇದನೆಗಳಿಗೆ ಮಾತು ತಂದುಕೊಟ್ಟಿವೆ; ಸಿಟ್ಟು-ಸಂಕಟಗಳ ಮೌನರೂಪಕ್ಕೆ ಸ್ಫೋಟಕ ಶಕ್ತಿ ನೀಡಿ ಜಾಗೃತಗೊಳಿಸಿವೆ;

ಸಮಾನತೆಯ ಪರಿಕಲ್ಪನೆಯ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಚೋದಿಸಿವೆ. ಮಾತ್ರವಲ್ಲದೆ, ಸಹಜವಾಗಿ ಹೊರಹೊಮ್ಮಿರುವ ಇವರ ಅಭಿವ್ಯಕ್ತಿ ವಿಧಾನವು ಶ್ರೀಸಾಮಾನ್ಯನ ಮೆದುಳು ಮುಟ್ಟುವಷ್ಟು ಸರಳವಾಗಿದೆ; ಅವರೊಳಗೆ ವೈಚಾರಿಕ ಪ್ರಜ್ಞೆ ಅರಳಿಸುವಷ್ಟು ಸೂಕ್ಷ್ಮ ಸಂವೇದನಾ ಶಕ್ತಿ ಪಡೆದುಕೊಂಡಿದೆ. ಈ ಎಲ್ಲ ಸಮರ್ಥ ಗುಣಗಳನ್ನು ಸಿದ್ಧಿಸಿಕೊಂಡಿರುವ ಕಾರಣದಿಂದಾಗಿಯೇ ಇವರು ಪ್ರಮುಖ ಸಾಹಿತ್ಯ ಚಳವಳಿಯೊಂದರ ಬಹು ಮುಖ್ಯ ಕವಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

    ನಿರ್ಲಕ್ಷಿತ ಜನಾಂಗದಲ್ಲಿ ಜನಿಸಿ, ಬಡತನದ ಬೇಗೆಯಲ್ಲಿ ಪರಿತಪಿಸುತ್ತಾ ನೋವು-ಅವಮಾನ-ಹತಾಶೆಗಳಲ್ಲೇ ಮುದುಡಿಹೋಗಬಹುದಾಗಿದ್ದ ವ್ಯಕ್ತಿತ್ವವೊಂದು ಸಮಕಾಲೀನ ಸಾಹಿತ್ಯ ಚಳವಳಿಯೊಂದರ ರೂವಾರಿಯಾಗಿ ರೂಪುಗೊಂಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಇದು ಡಾ. ಸಿದ್ಧಲಿಂಗಯ್ಯ ಅವರು ಸ್ವಯಂ ಸಾಮಥ್ರ್ಯದಿಂದ ಗಳಿಸಿರುವ ಸಾಂಸ್ಕøತಿಕ ಶಕ್ತಿಗೆ ಒಂದು ಸ್ಪಷ್ಟ ಸಾಕ್ಷಿಯಾಗಿದೆ. ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮೊದಲಾದ ಪ್ರಕಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿಯ ಮೂಲಕ ಸಾಹಿತ್ಯಕ ದುಡಿಮೆಯನ್ನು ಡಾ. ಸಿದ್ದಲಿಂಗಯ್ಯನವರು ಮಾಡಿದ್ದಾರೆ. 

ಡಾ.ಸಿದ್ಧಲಿಂಗಯ್ಯನವರು ದೇವಯ್ಯ ಮತ್ತು ವೆಂಕಟಮ್ಮ ಅವರ ಹಿರಿಯ ಮಗನಾಗಿ ದಿನಾಂಕ: 03-02-1954ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಕನ್ನಡ ಎಂ.ಎ. ಪದವಿಯನ್ನು ಡಿ.ಎಲ್.ನರಸಿಂಹಾಚಾರ್ ಚಿನ್ನದ ಪದಕದೊಂದಿಗೆ ಪೂರೈಸಿರುವ ಇವರು ‘ಗ್ರಾಮದೇವತೆಗಳು’ ಎಂಬ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ.

ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರೂ ಆಗಿರುವ ಸಿದ್ಧಲಿಂಗಯ್ಯನವರು ತಮ್ಮ ವಿಶಿಷ್ಟ ಕಾವ್ಯಾಭಿವ್ಯಕ್ತಿಯ ಮೂಲಕ ಕವಿಗಳಾಗಿ ನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಸದಸ್ಯರಾಗಿರುವ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಲವು ವರ್ಷಗಳ ಕಾಲ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ತಾವು ರೂಪಿಸಿದ ವಿಶಿಷ್ಟ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡದ ಅಪೂರ್ವ ಸಾಹಿತಿ, ಸಾಹಿತ್ಯ ಪರಿಚಾರಕ ಡಾ.ಜಿ.ಪಿ.ರಾಜರತ್ನಂ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದು ಇವರ ಸಾಹಿತ್ಯ ಪ್ರೀತಿಗೊಂದು ಸ್ಪಷ್ಟ ನಿದರ್ಶನ. ಇದೀಗ ಇವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ ಡಾ.ಸಿದ್ಧಲಿಂಗಯ್ಯ ಅವರು ಸಕ್ರಿಯವಾಗಿ ದುಡಿದಿದ್ದಾರೆ. ತಮ್ಮ ಅನನ್ಯ ಸೇವೆಗಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉತ್ತಮ ಚಲನಚಿತ್ರ ಗೀತರಚನೆಕಾರರೆಂದು ರಾಜ್ಯ ಸರ್ಕಾರದ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ್‍ರಾಮ್ ಪ್ರಶಸ್ತಿ, ನಾಡೋಜ ಪ್ರಶಸ್ತಿ-ಹೀಗೆ ಡಾ.ಸಿದ್ಧಲಿಂಗಯ್ಯನವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಇವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಪಂಚಮ, ನೆಲಸಮ, ಅವತಾರಗಳು, ಏಕಲವ್ಯ, ಹಕ್ಕಿನೋಟ, ಕಪ್ಪು ಕಾಡಿನ ಹಾಡು, ಗ್ರಾಮದೇವತೆಗಳು, ಊರುಕೇರಿ ಭಾಗ 1 ಮತ್ತು 2, ಮೆರವಣ ಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಜನಸಂಸ್ಕøತಿ, ಉರಿಕಂಡಾಯ - ಇವು ಡಾ.ಸಿದ್ಧಲಿಂಗಯ್ಯ ಅವರ ಪ್ರಮುಖ ಕೃತಿಗಳು.

ಸದನದಲ್ಲಿ ಸಿದ್ಧಲಿಂಗಯ್ಯ, ಬತ್ತದ ಬೆಳದಿಂಗಳು ಡಾ.ಸಿದ್ಧಲಿಂಗಯ್ಯ, ದನಿಯಿಲ್ಲದವರ ದನಿ ನಾಡೋಜ ಡಾ.ಸಿದ್ಧಲಿಂಗಯ್ಯ ಮೊದಲಾದ ಪುಸ್ತಕಗಳು ಸಿದ್ಧಲಿಂಗಯ್ಯ ಅವರ ಬದುಕು, ಹೋರಾಟ, ಸೇವೆ ಮತ್ತು ಸಾಹಿತ್ಯವನ್ನು ಕುರಿತ ಕೃತಿಗಳಾಗಿವೆ.

ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಲಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಊರುಕೇರಿ ಆತ್ಮಕಥೆಯು ತಮಿಳು, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಿಗೆ ಭಾಷಾಂತರಗೊಂಡಿವೆ. ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದ ನಾಡಿನ ಇಂಥ ಹಿರಿಯ ಸಾಹಿತಿಗೆ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿರುವುದು ಹೆಮ್ಮೆಯ ಸಂಗತಿಯಾಗಿದೆ.


-ಎಸ್. ರುದ್ರೇಶ್ವರ

ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ

ರಾಮನಗರ.

ಮೊ :9880439669

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑