Tel: 7676775624 | Mail: info@yellowandred.in

Language: EN KAN

    Follow us :


ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆ: ಸಚಿವೆ ಶಶಿಕಲಾ ಅ ಜೊಲ್ಲೆ

Posted date: 17 Jun, 2021

Powered by:     Yellow and Red

ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆ: ಸಚಿವೆ  ಶಶಿಕಲಾ ಅ ಜೊಲ್ಲೆ

ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ನೆರವು ನೀಡಲು ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ  ಶಶಿಕಲಾ ಅ ಜೊಲ್ಲೆ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು ಮಕ್ಕಳಿಗೆ ಮೂರುವರೆಸಾವಿರ ರೂ. ಹಾಗೂ ಉಚಿತ ಶಿಕ್ಷಣ, ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡಲಾಗುವುದು. 21 ವರ್ಷ ಪೂರೈಸಿದ ಹೆಣ್ಣುಮಕ್ಕಳಿಗೆ ಒಂದು ಲಕ್ಷ ರೂ. ನೆರವು ನೀಡಲಾಗುವುದು ಎಂದರು.


ಅನಾಥ ಮಕ್ಕಳನ್ನು ಪಾಲಕರು ಪೋಷಿಸಲು ಅಸಮರ್ಥರಾಗಿದ್ದರೆ ದಾನಿಗಳ ನೆರವಿನಿಂದ ಇವರಿಗೆ ಶಿಕ್ಷಣ, ತರಬೇತಿ, ಇನ್ನಿತರ ನೆರವು ಕಲ್ಪಿಸಲು ದತ್ತು ಪ್ರಕ್ರಿಯೆ ಕೈಗೊಳ್ಳಲು ಸಹ ಇಲಾಖೆ ಕ್ರಮಕೈಗೊಳ್ಳಲಿದೆ. ರಾಜ್ಯದಲ್ಲಿ ಕೋವಿಡ್‍ನಿಂದ ಪಾಲಕರು ಮೃತರಾಗಿ ಅನಾಥವಾಗಿರುವ 48 ಮಕ್ಕಳನ್ನು ಗುರುತಿಸಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳಿದರು.


ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಮಕ್ಕಳು ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸೋಂಕಿಗೆ ತುತ್ತಾದಲ್ಲಿ ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

 

 ಜಿಲ್ಲೆಯಲ್ಲಿ ಮೊದಲು ಹಾಗೂ ಎರಡನೇ ಅಲೆ ಸೇರಿದಂತೆ 2101  ಮಕ್ಕಳು ಕೋವಿಡ್ ಸೋಂಕಿತರಾಗಿದ್ದು, ಒಂದು ಮಗು ಬೇರೆ ಕಾರಣದಿಂದ ಸಾವನ್ನಪ್ಪಿದೆ. ಪೋಸ್ಟ್ ಕೋವಿಡ್ ಕುರಿತಂತೆ ತೊಂದರೆಯಿದ್ದಲ್ಲಿ ಅವುಗಳನ್ನು ಪರಿಶೀಲಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹ ತಿಳಿಸಲಾಗಿದೆ ಎಂದರು.

 

  ಕೋವಿಡ್ ಮೂರನೇ  ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಈ ಕುರಿತಂತೆ  ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಆರೋಗ್ಯ ಸಚಿವರ ಜೊತೆಗೂಡಿ ಚರ್ಚಿಸಲಾಗಿದೆ. ಮಕ್ಕಳಿಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ್ ವ್ಯವಸ್ಥೆ, ಐ.ಸಿ.ಯು ವ್ಯವಸ್ಥೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಇಲಾಖೆಯ ಪ್ರವಾಸ್ತವನೆಯನ್ನು ಒಪ್ಪಿದ ಕಾರಣ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಕುರಿತಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 50 ಐ.ಸಿ.ಯು ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಜಿಲ್ಲೆಯಲ್ಲಿ 9 ಸರ್ಕಾರಿ ಮಕ್ಕಳ ತಜ್ಞರಿದ್ದು, ಖಾಸಗಿ ಅವರೊಂದಿಗೆ ಚರ್ಚಿಸಿ ಅಲ್ಲಿಯ ಮಕ್ಕಳ ತಜ್ಞರ ಸೇವೆ ಸಹ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.


ಮೂರನೇ ಅಲೆಯ ಸಿದ್ದತೆಗೆ ಸಂಬಂಧಿಸಿದಂತೆ ಕೋವಿಡ್ ವಾರ್ಡ್ ಹಾಗೂ ಕೋವಿಡ್ ಕೇರ್ ಸೆಂಟರ್‌ ಗಳಲ್ಲಿ ಮಕ್ಕಳನ್ನು ದಾಖಲಿಸುವಾಗ ಪಾಲಕರಿಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಒಂದರಿಂದ 10 ವರ್ಷ ಹಾಗೂ 10 ರಿಂದ 18 ವರ್ಷದ ಮಕ್ಕಳನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪ್ರತ್ಯೇಕಿಸಲಾಗುವುದು. 10 ರಿಂದ 18 ವರ್ಷದ ಮಕ್ಕಳಿಗೆ ಸೋಂಕು ಪೀಡಿತವಾದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು ಎಂದರು‌‌.


ಜಿಲ್ಲೆಯಲ್ಲಿ 1934 ಅಪೌಷ್ಠಿಕ ಮಕ್ಕಳು ಹಾಗೂ 146 ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಇವರ ಮೇಲೆ ಹೆಚ್ಚಿನ ನಿಗಾ ವಹಿಸಲು ತಿಳಿಸಲಾಗಿದೆ. ಜಿಲ್ಲೆಯಲ್ಲಿರುವ ಅಮಗನವಾಡಿ ಮಕ್ಕಳಿಗೆ ಮನೆಗೆ ಆಹಾರ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.


  ಕೋವಿಡ್ ಸೋಂಕಿನಿಂದ ಇಬ್ಬರು ಅಂಗನವಾಡಿ  ಕಾರ್ಯಕರ್ತೆಯರು ಮರಣಹೊಂದಿದ್ದಾರೆ.  ತಲಾ 30 ಲಕ್ಷ ರೂ. ಪರಿಹಾರ ಪಾವತಿ ಪ್ರಕ್ರಿಯೆ ನಡೆಯುತ್ತಿದೆ.  ಶೇ 94  ಅಂಗನವಾಡಿ  ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗಿದೆ ಎಂದರು.


ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑