Tel: 7676775624 | Mail: info@yellowandred.in

Language: EN KAN

    Follow us :


ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲ್ಲೂಕಿನಲ್ಲಿ ಸಕಲ ಸಿದ್ದತೆ:- ಬಿಇಓ ನಾಗರಾಜು

Posted date: 17 Jul, 2021

Powered by:     Yellow and Red

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲ್ಲೂಕಿನಲ್ಲಿ ಸಕಲ ಸಿದ್ದತೆ:- ಬಿಇಓ ನಾಗರಾಜು

ಚನ್ನಪಟ್ಟಣ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2021 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇದೇ ತಿಂಗಳ 19 ಮತ್ತು 22 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಈ ಬಾರಿ ಪರೀಕ್ಷಾ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳು ಒಎಂಆರ್ ಹಾಳೆಯಲ್ಲಿ ಶೇಡ್ ಮಾಡುವ ಮೂಲಕ ಉತ್ತರಿಸಬೇಕಾಗಿದೆ. ಕೊರೋನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಪರೀಕ್ಷೆಯನ್ನು ಅತ್ಯಂತ ಸರಳೀಕರಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳು ಗೈರು ಹಾಜರಾಗದೆ ಪರೀಕ್ಷೆಗೆ ಹಾಜರಾಗಬೇಕು , ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂದು ತಿಳಿಸಿದರು.


ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು , ತಾಲ್ಲೂಕಿನ 67 ಪ್ರೌಢಶಾಲೆಗಳ  ಸುಮಾರು 3,104 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ  ಎದುರಾಗಬಹುದಾದ ಆರೋಗ್ಯ ಮುನ್ನೆಚ್ಚರಿಕೆ,  ಸಾರಿಗೆ ವ್ಯವಸ್ಥೆ, ಪ್ರವೇಶ ಪತ್ರ , ಮಾಸ್ಕ್ , ಸ್ಯಾನಿಟೈಸರ್, ಪರೀಕ್ಷಾ ಕೇಂದ್ರಗಳ ಮಾಹಿತಿ ಸೇರಿದಂತೆ ಇನ್ನಿತರ ಎಲ್ಲಾ ಮಾಹಿತಿಗಳಿಗೆ ಉತ್ತರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ದೂರುಗಳಿದ್ದಲ್ಲಿ  ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ (ಮೊ.8970755998), ಬಿಇಓ  ಕಚೇರಿಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ (ಮೊ.9620479970), ಶಿಕ್ಷಣ ಸಂಯೋಜಕಿ ರಾಜಲಕ್ಷ್ಮಿ 99165 70167, ಶಿಕ್ಷಣ ಸಂಯೋಜಕ ಗಂಗಾಧರ ಮೂರ್ತಿ (ಮೊ.9844556219),  ಟಿಪಿಇಒ ಶಿವಣ್ಣ(ಮೊ.9845470996) , ಶಿಕ್ಷಣ ಸಂಯೋಜಕ ತಮ್ಮಣ್ಣ (ಮೊ.9986986368)ಇವರನ್ನು ನೇಮಕ ಮಾಡಲಾಗಿದ್ದು , ಇವರಿಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.


ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸಾಗಿಸಲು 7 ಮಾರ್ಗಗಳನ್ನು ರಚಿಸಿಕೊಳ್ಳಲಾಗಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೇಷನ್ ಮಾಡಲಾಗಿದೆ. ಆಸನ ವ್ಯವಸ್ಥೆ, ಗಾಳಿ ಬೆಳಕು, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು  ಸಮರ್ಪಕವಾಗಿ ಮಾಡಲಾಗಿದೆ. ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಗಳು, ಸ್ಥಾನಿಕ ಜಾಗೃತ ದಳ, ಕೊಠಡಿ ಮೇಲ್ವಿಚಾರಕರು, ಮೊಬೈಲ್ ಸ್ವಾಧೀನಾಧಿಕಾರಿ, ಸ್ಕೌಟ್&ಗೈಡ್ಸ್  ಸಿಬ್ಬಂದಿ, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಸುಮಾರು ನೂರೈವತ್ತಕ್ಕೂ ಹೆಚ್ಚು ಪರೀಕ್ಷಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ.  ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಆರೋಗ್ಯ ತಪಾಸಣಾ ಕೌಂಟರ್ ಗಳನ್ನು ಸ್ಥಾಪಿಸಲಾಗಿದ್ದು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ನರ್ಸ್ ಗಳ ತಂಡವನ್ನು ನಿಯೋಜಿಸಲಾಗಿದೆ.  ರಾಮಕೃಷ್ಣ ಮಿಷನ್, ರೋಟರಿ ಸಂಸ್ಥೆ ಬೆಂಗಳೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ  ಮೊದಲಾದ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ  ಎನ್ -95 ಮಾಸ್ಕ್ ಗಳನ್ನು ವಿತರಿಸಲಾಗಿದೆ. ವಲಸೆ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ತಾವು ಇರುವ ಜಾಗದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿರುವುದರಿಂದ ಬೇರೆ ತಾಲೂಕು, ಜಿಲ್ಲೆಗಳ 22 ವಿದ್ಯಾರ್ಥಿಗಳು ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ‌. ಅವರೆಲ್ಲರಿಗೂ ಪ್ರವೇಶ ಪತ್ರವನ್ನು ವಿತರಿಸಲಾಗಿದೆ ಎಂದಿದ್ದಾರೆ.


ಎಸ್ .ಎಸ್. ಎಲ್. ಸಿ ಪರೀಕ್ಷೆ ಬರೆಯುವ ತಾಲ್ಲೂಕಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೋಷಕರಿಗೆ ಸಲಹೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಅವರು ಪರೀಕ್ಷೆಗೆ ಬರುವಾಗ ನಿಮ್ಮ ಮಕ್ಕಳಿಗೆ ಒಂದು ಬಾಟಲಿಯಲ್ಲಿ ಕಾಯಿಸಿ ಆರಿಸಿದ ನೀರನ್ನು  ಕಳುಹಿಸಿಕೊಡಬೇಕು. ಜೊತೆಗೆ ಪರೀಕ್ಷೆ ಬೇಗ ಪ್ರಾರಂಭವಾಗುವುದರಿಂದ ಮಕ್ಕಳಿಗೆ ತಿಂಡಿ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮನೆಯಿಂದಲೇ ಮಾಡಬೇಕು, ಕೊರೊನಾ ರೋಗವಿದೆ ಎಂದು ಯಾವ ಪಾಲಕರು ಮತ್ತು ವಿದ್ಯಾರ್ಥಿಗಳು ಭಯಪಡುವ ಅವಶ್ಯಕತೆ ಇಲ್ಲ  ಕೋವಿಡ್ 19 ಕೊರೊನಾ ಇರುವ ಪ್ರಯುಕ್ತ ಪರೀಕ್ಷಾ ಕೇಂದ್ರದ ಒಳಗಡೆ ಪ್ರವೇಶಕ್ಕೆ ಯಾವುದೇ ಪಾಲಕರಿಗೆ ಅವಕಾಶ ನೀಡುವುದಿಲ್ಲ. ಪರೀಕ್ಷೆಗಳು ಪ್ರಾರಂಭವಾಗುವುದಕ್ಕಿಂತ ಮುಂಚೆ,  ಮಕ್ಕಳಿಗೆ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ರಿಂಗ್, ಥರ್ಮಲ್ ಸ್ಕ್ರೀನಿಂಗ್ ಹಾಗೂ ಮಾಸ್ಕ್ ವಿತರಣೆ ಇರುವುದರಿಂದ ಪರೀಕ್ಷಾ ಕೇಂದ್ರಕ್ಕೆ  ಸರಿಯಾದ ಸಮಯಕ್ಕೆ  ಬೆಳಿಗ್ಗೆ  8.30 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು.


 ಪರೀಕ್ಷಾ ಕೇಂದ್ರದಲ್ಲಿ  ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಹಾಕಿಕೊಳ್ಳುವುದು ಹಾಗೂ  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮರೆಯಬಾರದು. ಯಾವುದೇ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುವುದಿಲ್ಲ. ಇದರ ಬಗ್ಗೆ ಪಾಲಕರು ಸುಳ್ಳು ಸಂದೇಶಗಳನ್ನು ನಂಬಬಾರದು. ಸುಳ್ಳು ವದಂತಿಗಳನ್ನು ಹರಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ಪರೀಕ್ಷಾ ಕೇಂದ್ರಕ್ಕೆ  ನಿಮ್ಮ ಮಕ್ಕಳನ್ನು ಆದಷ್ಟು ಬೇಗ ನೀವೇ ಸುರಕ್ಷಿತವಾಗಿ ಕರೆದುಕೊಂಡು ಬಂದು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿಕೊಳ್ಳಿ ಎಂದಿರುವ ಅವರು ಪೋಷಕರು ಯಾವುದೇ ಕಾರಣಕ್ಕೂ ಹೆದರಿಕೆ , ಭಯಪಡಬಾರದು ನಿಮ್ಮ ಜೊತೆಗೆ ಶಿಕ್ಷಣ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ .

   

 *ಪ್ರವೇಶ ಪತ್ರ  ನೀಡದಿದ್ದಲ್ಲಿ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬನ್ನಿ*

ಹಲವು  ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಕಟ್ಟದಿರುವ ಕಾರಣ ನೀಡಿ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ನೀಡದೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರ ಸಿಗದಿದ್ದಲ್ಲಿ ನೇರವಾಗಿ ಬಿಇಓ ಕಚೇರಿಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಯೋಗೇಶ್ ರವರನ್ನು ಸಂಪರ್ಕಿಸಿ ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದು. ಇಲ್ಲವೇ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೂ ಅಂತಹ ವಿದ್ಯಾರ್ಥಿಗಳನ್ನು  ಪರೀಕ್ಷೆಗೆ ಕೂರಿಸಲಾಗುವುದು ಎಂದು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑