Tel: 7676775624 | Mail: info@yellowandred.in

Language: EN KAN

    Follow us :


ಎಲ್ಲಾ ರಂಗಗಳಲ್ಲೂ ದುಡ್ಡಿನ ಮಹಿಮೆ ನಡೆಯುತ್ತಿದೆ: ಜಿ.ಟಿ.ದೇವೇಗೌಡ

Posted date: 26 Jul, 2021

Powered by:     Yellow and Red

ಎಲ್ಲಾ ರಂಗಗಳಲ್ಲೂ ದುಡ್ಡಿನ ಮಹಿಮೆ ನಡೆಯುತ್ತಿದೆ: ಜಿ.ಟಿ.ದೇವೇಗೌಡ

ದುಡ್ಡು ಎಂಬುದು ಯಾವ ರಂಗವನ್ನು ಬಿಟ್ಟಿಲ್ಲಾ, ಎಲ್ಲಾ ರಂಗದಲ್ಲೂ ಕಾಂಚಾಣದ್ದೇ ಸದ್ದು. ದುಡ್ಡು ಹೊರತುಪಡಿಸಿಯೂಬಜೀವನ ಇದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಶಾಸಕ ಜಿ ಟಿ ದೇವೇಗೌಡ ಅಭಿಪ್ರಾಯಪಟ್ಟರು. ಅವರು ಶನಿವಾರ ಸಂಜೆ ಮೈಸೂರಿನ ಇನ್ಸ್ಟಿಟ್ಯೂಟ್ ಇಂಜಿನಿಯರ್ ಸಭಾಂಗಣದಲ್ಲಿ ವಿಸ್ಮಯ ಬುಕ್ ಹೌಸ್ ಮತ್ತು ಅಲ್ಲಮ ರೀಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಮೈಸೂರು ರವರು ಹಮ್ಮಿಕೊಂಡಿದ್ದ, ಪತ್ರಕರ್ತ ಮತ್ತು ಲೇಖಕ ವೀರಭದ್ರಪ್ಪ ಬಿಸ್ಲಳ್ಳಿಯವರ ಲೋಕಾಂತದ ಮೊರೆತ, ನೆಲದ ನೆನಹು  ಇಂದ್ರ ಜಾಲ ಪುಸ್ತಕಗಳನ್ನು ಲೋಕಾರ್ಪಣೆ

ಗೊಳಿಸಿ ಮಾತನಾಡಿದರು.


ಸಮಾಜವಾದಿ ಹಿನ್ನೆಲೆಯ ವ್ಯಕ್ತಿಗಳಾದ ಮಾಜಿ ಸಿಎಂಗಳಾದ ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ, ರೈತ ಮುಖಂಡ ಎಂ.ಡಿ.ನಂಜುಂಡಸ್ವಾಮಿ, ಪ್ರೊ.ಕೆ.ರಾಮದಾಸ್, ಅವರ ವಿಚಾರಧಾರೆಗಳ ಬಗ್ಗೆ ವೀರಭದ್ರಪ್ಪ ಬಿಸ್ಲಳ್ಳಿ ಅಧ್ಯಯನ ಮಾಡಿ ಲೋಕಾಂತದ ಮೊರೆತ ಪುಸ್ತಕದಲ್ಲಿ ತಿಳಿಸಿದ್ದಾರೆ. ಆದರೆ ಎಲ್ಲಾ ಸಮಾಜವಾದಿಗಳನ್ನು ಇಂದು ಕಾಣಲು ಸಾಧ್ಯವಿಲ್ಲ. ಇಂದಿನ ಸಮಾಜ ಮತ್ತು ಯುವ ಪೀಳಿಗೆಗೆ ಅವರುಗಳ ವಿಚಾರಧಾರೆಗಳನ್ನು ತಿಳಿಸಬೇಕು ಎಂದು ಹೇಳಿದರು.

ಸಮಾಜವಾದಿ ಹಿನ್ನೆಲೆಯಿಂದ ಬಂದ ಮಾಜಿ ಸಿಎಂ ಜೆ.ಎಚ್. ಪಟೇಲರಲ್ಲಿ ಇದ್ದ ಚಾಣುಕ್ಯತೆ, ತಂತ್ರಗಾರಿಕೆ, ವಾಗ್ಮಿತ್ವ ಬೇರೆ ಯಾವ ಮುಖ್ಯಮಂತ್ರಿಯಲ್ಲೂ ಇರಲಿಲ್ಲ. ಜೆ.ಎಚ್.ಪಟೇಲರು ಸಿಎಂ ಆದಾಗ ನಾನು ಶಾಸಕನಾಗಿದ್ದೆ. ನನಗೆ ಅವರು ನೀಡಿದ್ದ ಬೆಂಬಲವನ್ನೂ ಮರೆಯಲು ಸಾಧ್ಯವಿಲ್ಲ ಎಂದರು.


ಎಸ್.ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದು, ಬಡವರಿಗೆ ನಿವೇಶನ ಹಂಚಿದ್ದು, ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಇಂದು ಅಂತಹ ನಾಯಕರು ವಿರಳ. ಅವರ ಕುರಿತು ಬರೆದಿರುವುದು ಸಂತೋಷ ತಂದಿದೆ ಎಂದರು.

ರೈತ ಮುಖಂಡ ಎಂ.ಡಿ. ನಂಜುಂಡಸ್ವಾಮಿ ಅವರು, ನಾನು ಎಪಿಎಂಸಿ ಅಧ್ಯಕ್ಷ ನಾಗಿದ್ದಾಗ ಮಾರುಕಟ್ಟೆಗೆ ಬರುತ್ತಿದ್ದರು. ತೂಕ ಸರಿ ಇಲ್ಲ ಎಂದು ಹೇಳುತ್ತಿದ್ದರು. ಅಂತಹವರ ಕುರಿತು ಎಷ್ಟು ಬರೆದರೂ ಸಾಲದು. ಪ್ರತಿ ರೈತರು ತಮ್ಮ ಮನೆಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಫೋಟೋ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತಮೆ ಸೇವೆ ಮಾಡಿದವರು ಮಾತ್ರ ಜನಮಾನಸದಲ್ಲಿ ಉಳಿಯಲ ಸಾಧ್ಯ. ಆದರೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ದುಡ್ಡಿನ ಮಹಿಮೆ ಬಂದು, ಸತ್ಯ, ಧರ್ಮ ಮತ್ತು ನಿಷ್ಠೆ ಎಲ್ಲವೂ ಗೌಪ್ಯವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ಗತಕಾಲ, ಪ್ರಸ್ತುತ ಘಟನೆಗಳನ್ನು ವಿಶ್ಲೇಷಣೆ ಮಾಡುವವರೇ ಹೆಚ್ಚಾಗಿದ್ದು, ಮುಂದೆ ಏನಾಗಬೇಕು ಎಂದು ಚಿಂತಿಸುವವರೇ ಇಲ್ಲ. ಹೀಗಾಗಿ ಭವಿಷ್ಯವಿಲ್ಲದೇ ಜನರು ಕಂಗಾಲಾಗುತ್ತಿದ್ದಾರೆ. ಎಲ್ಲ ರಾಜಕಾರಣಿಗಳು ಹಿಂದೆ ಹಾಗಾಗಿತ್ತು, ಹೀಗಾಗಿತ್ತು ಎಂದು ಗತಕಾಲವನ್ನು ಹೇಳುತ್ತಾರೆ. ಕೆಲವೊಮ್ಮೆ ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ವಿಶ್ಲೇಷಿಸುತ್ತಾರೆ. ಆದರೆ ಮುಂದೆ ಏನಾಗಬೇಕು, ಯಾವ ಅಂಶದತ್ತ ಗಮನ ನೀಡಬೇಕು ಎನ್ನುವ ದೂರದೃಷ್ಠಿ ಕುರಿತು ಮಾತನಾಡುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಚರಿತ್ರೆಯನ್ನೇ ಸಂಪೂರ್ಣವಾಗಿ ನೆಚ್ಚಿ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದಿನ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳು ಇರುತ್ತವೆ. ಆದ್ದರಿಂದ ಚರಿತ್ರೆಯ ಪಾಠವನ್ನು ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಮುಂದಿನ ಯೋಜನೆ ರೂಪಿಸಬೇಕು. ಆಗ ಮಾತ್ರ ರಾಜ್ಯ ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯ ಎಂದರು.


ಇಂದಿನ ರಾಜಕೀಯ ವ್ಯವಸ್ಥೆಯಿಂದ ಪ್ರಾಮಾಣಿಕವಾಗಿ ನಡೆಯುವವರನ್ನು ಆಯ್ಯೋ ಪಾಪ ಎಂದು ಹೇಳುವ ಮಟ್ಟಕ್ಕೆ ಸಮಾಜ ಅಧೋಗತಿಗೆ ಇಳಿದುಬಿಟ್ಟಿದೆ. ಇದು ನಮ್ಮ ವ್ಯವಸ್ಥೆ ಕುಸಿದು ಬಿದ್ದಿರೋದಕ್ಕೆ ಸಾಕ್ಷಿ. ವಿಧಾನಸೌಧದಲ್ಲಿಯೂ ವೈಯಕ್ತಿಕ ಚರ್ಚೆ ನಡೆಯುತ್ತಿದೆಯೇ ವಿನಾ, ಜನಪರ ಕಾಳಜಿ ಅಧಿವೇಶನದಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.

ಸೇವಾ ಮನೋಭಾವನೆ ಇರಬೇಕಾದ ಶಿಕ್ಷಣ, ಆರೋಗ್ಯ, ಪತ್ರಕಾ ರಂಗ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲವೂ ಹಣದ ಹಿಂದೆ ಬಿದ್ದಿವೆ. ಆದರೆ ಇಂದು ಕೊರೊನಾವೂ ಒಂದು ಪಾಠವಾಗಿದ್ದು, ಹಣವೇ ಪ್ರಧಾನ ಎನ್ನುವ ಪರಿಸ್ಥಿತಿಯನ್ನು ಹೋಗಲಾಡಿಸಿದೆ. ಮನುಷ್ಯ ಬಾಂಧವ್ಯ, ಆರೋಗ್ಯ ಮುಖ್ಯ. ಬಳಿಕ ಹಣ ಎನ್ನುವುದನ್ನು ತಿಳಿಸಿಕೊಟ್ಟಿದೆ ಎಂದು ವಿಶ್ಲೇಷಿಸಿದರು.


ಮಾಜಿ ಶಾಸಕ ವಾಸು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಮುಜಾಫರ್ ಅಸ್ಸಾದಿ ಪುಸ್ತಕಗಳ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಾಲರಾಜ್, ಪ್ರಗತಿಪರ ಕೃಷಿಕ ಚನ್ನಸ್ವಾಮಿ ವಡ್ಡಗೆರೆ, ಪ್ರಕಾಶಕ ಪ್ರಕಾಶ್ ಚಿಕ್ಕಪಾಳ್ಯ, ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ, ರೈತಮುಖಂಡ ಪಚ್ಚೆ ನಂಜುಂಡಸ್ವಾಮಿ ಇತರರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑