Tel: 7676775624 | Mail: info@yellowandred.in

Language: EN KAN

    Follow us :


ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ. ಗಂಭೀರ ಸ್ಥಿತಿಯಲ್ಲಿ ವಿದ್ಯಾರ್ಥಿನಿ. ಬೆಚ್ಚಿಬಿದ್ದ ಜನತೆ

Posted date: 25 Aug, 2021

Powered by:     Yellow and Red

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ. ಗಂಭೀರ ಸ್ಥಿತಿಯಲ್ಲಿ ವಿದ್ಯಾರ್ಥಿನಿ. ಬೆಚ್ಚಿಬಿದ್ದ ಜನತೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಹಪಾಠಿಯೊಬ್ಬನನ್ನು ಥಳಿಸಿ ಆತನ ಜೊತೆ ಮಾತನಾಡುತ್ತಾ ಕುಳಿತಿದ್ದ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕುಡುಕರ ತಂಡ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ಹೊರರಾಜ್ಯದಲ್ಲಿರುವ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.


*ಆರು ಮಂದಿ ಪಾನಮತ್ತ ಯುವಕರಿಂದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ, ದೌರ್ಜನ್ಯ.

ಲಲಿತಾದ್ರಿಪುರ ಹೊರವಲಯದಲ್ಲಿ ಮಂಗಳವಾರ ಸಂಜೆ ವೇಳೆ ಘಟನೆ.

ಅಪರಾಧ ಪ್ರಕರಣಗಳಿಂದ ಬೆಚ್ಚಿಬಿದ್ದ ಜನತೆ*


ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ದರೋಡೆ, ಅತ್ಯಾಚಾರ, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳು ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. 

ಹಾಗೆಯೇ ಇಂತಹ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿನ ಲೋಪದೋಷಗಳೂ ಕಾರಣವೇ ಎಂಬ ಅನುಮಾನ ನಾಗರಿಕರಲ್ಲಿ ಮೂಡಿದೆ.


ಇದಕ್ಕೆ ಉದಾಹರಣೆಯಾಗಿ ಸೋಮವಾರ ಸಂಜೆಯಷ್ಟೇ ವಿದ್ಯಾರಣ್ಯಪುರಂ ಮುಖ್ಯ ರಸ್ತೆಯಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿ, ಅಮಾಯಕ ಯುವಕನ ಮೇಲೆ ಗುಂಡು ಹಾರಿಸಿ ಬಲಿ ತೆಗೆದುಕೊಂಡಿದ್ದರು. ಈ ಪ್ರಕರಣ ಜನತೆಯ ಮನಸ್ಸಿನಲ್ಲಿ ಅಚ್ಚ ಹಸಿರಾಗಿರುವ ಸಂದರ್ಭದಲ್ಲಿ ಮಂಗಳವಾರ ಸಂಜೆ ಚಾಮುಂಡಿಬೆಟ್ಟದ ತಪ್ಪಲಿಗೆ ಹೊಂದಿಕೊಂಡಂತಿರುವ ಲಲಿತಾದ್ರಿಪುರ ಹೊರವಲಯದ ನಿರ್ಜನ ಪ್ರದೇಶದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅದರಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರಬಹುದಾದ ಆಘಾತಕಾರಿ ಹಾಗು ಶಂಕಾಸ್ಪದ ಘಟನೆ ನಾಗರಿಕರನ್ನು ಮತ್ತಷ್ಟು ನಿದ್ದೆಗೆಡುವಂತೆ ಮಾಡಿದೆ.


ನಗರದ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳು ತರಗತಿ ಮುಗಿದ ನಂತರ, ಸಂಜೆ ಮೋಟಾರ್ ಬೈಕ್‍ನಲ್ಲಿ ಲಲಿತಾದ್ರಿಪುರ ಹೊರವಲಯದ ನಿರ್ಜನ ಪ್ರದೇಶಕ್ಕೆ ತೆರಳಿ ಬಂಡೆಯೊಂದರ ಮೇಲೆ ಕುಳಿತು ಮಾತನಾಡುತ್ತಿದ್ದರು ಎನ್ನಲಾಗಿದೆ. ಆ ವೇಳೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮಾತನಾಡುತ್ತಿರುವುದನ್ನು ಗಮನಿಸಿದ ಆರು ಮಂದಿ ಪಾನಮತ್ತರಾಗಿದ್ದ ಯುವಕರ ತಂಡ, ತನ್ನ ಸ್ನೇಹಿತೆಯನ್ನು ಬಲಾತ್ಕರಿಸಲು ಮುಂದಾದ ಸಂದರ್ಭ ಆಕೆಯ ಸ್ನೇಹಿತ ಪಾನಮತ್ತ ಯುವಕರನ್ನು ತಡೆಯಲು ಹೋರಾಟ ನಡೆಸಿದ್ದಾನೆ. ಆ ಸಂದರ್ಭ ವಿದ್ಯಾರ್ಥಿಯನ್ನು ಚೆನ್ನಾಗಿ ಥಳಿಸಿದ ಯುವಕರು, ನಂತರ ವಿದ್ಯಾರ್ಥಿನಿ ಮೇಲೆ ಹಲ್ಲೆ ಹಾಗು ಸಾಮೂಹಿಕ ಅತ್ಯಾಚಾರ ನಡೆಸಿ ಅವರಿಬ್ಬರನ್ನೂ ಅಲ್ಲೇ ಬಿಟ್ಟು ತಮ್ಮ ಬೈಕ್‍ಗಳಲ್ಲಿ ಪರಾರಿಯಾದರು ಎನ್ನಲಾಗಿದೆ.


ಘಟನೆ ನಡೆದ ಬಳಿಕ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಹೇಗೋ ಸಾವರಿಸಿಕೊಂಡು ರಾತ್ರಿ 11ರ ವೇಳೆಗೆ ಮುಖ್ಯ ರಸ್ತೆಗೆ ತಲುಪಿದ ಸಂದರ್ಭದಲ್ಲಿ ಗಂಭೀರವಾಗಿ ನರಳಾಡುತ್ತಿದ್ದ ಇವರ ಪರಿಸ್ಥಿತಿಯನ್ನು ಕಂಡ ದಾರಿಹೋಕರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಘಟನೆಯಿಂದ ತೀರಾ ಅಸ್ವಸ್ಥಳಾಗಿರುವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಲಾಗಿದೆ.


ವಿದ್ಯಾರ್ಥಿನಿಯ ಗಂಭೀರ ಸ್ಥಿತಿಯ ಬಗ್ಗೆ ಆಲನಹಳ್ಳಿ ಠಾಣೆ ಪೊಲೀಸರಿಗೆ ಆಸ್ಪತ್ರೆ ಅಧಿಕಾರಿಗಳು ಸುದ್ದಿ ತಿಳಿಸಿದ ತಕ್ಷಣ ಠಾಣೆಯ ಇನ್‍ಸ್ಪೆಕ್ಟರ್ ರವಿಶಂಕರ್ ಆಸ್ಪತ್ರೆಗೆ ಧಾವಿಸಿ ಬಂದು, ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯಿಂದ ಘಟನೆ ಬಗ್ಗೆ ಹೇಳಿಕೆ ಪಡೆದಿದ್ದಾರೆ.


ಹೊರ ರಾಜ್ಯದಲ್ಲಿ ನೆಲೆಸಿರುವ ವಿದ್ಯಾರ್ಥಿನಿಯ ಪೋಷಕರಿಗೆ ಪೊಲೀಸರು ಸುದ್ದಿ ತಿಳಿಸಿದ್ದಾರೆ.


ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಘಟನೆ ಖಚಿತ ಪಡಿಸಿಕೊಳ್ಳಲು ಪೋಲಿಸರು ತನಿಖೆ ಆರಂಭಿಸಿದ್ದು, ಸಾಕ್ಷ್ಯಧಾರಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಸಿಪಿ ಶಶಿಧರ್, ಇನ್‍ಸ್ಪೆಕ್ಟರ್ ರವಿಕರ್, ಶಿವಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಎಫ್‍ಎಸ್‍ಎಲ್, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಆಲನಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಘಟನೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಬೀದಿದೀಪ ಬೇಕು ಎಂದು ಮನವಿ ಮಾಡಿದ್ದೆ. ಆದರೆ ಯಾರೂ ನನ್ನ ಮನವಿಯನ್ನು ಪರಿಗಣಿಸಲಿಲ್ಲ ಎಂದು ಸ್ಥಳಿಯ ನಿವಾಸಿ ಸಬಿತಾ ದೂರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑