Tel: 7676775624 | Mail: info@yellowandred.in

Language: EN KAN

    Follow us :


ಬೀರೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ, ಬಾಲ್ಯವಿವಾಹ ತಡೆಗಟ್ಟಿದ ಸಿಡಿಪಿಓ ತಂಡ.

Posted date: 02 Sep, 2021

Powered by:     Yellow and Red

ಬೀರೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ, ಬಾಲ್ಯವಿವಾಹ ತಡೆಗಟ್ಟಿದ ಸಿಡಿಪಿಓ ತಂಡ.

ಚನ್ನಪಟ್ಟಣ: ತಾಲ್ಲೂಕಿನ ದೇವರಹಳ್ಳಿ, ಮಂಕುಂದ ಗ್ರಾಮದ ನಡುವೆ ಇರುವ ದೊಡ್ಡಬೀರೇಶ್ವರ ಸ್ವಾಮಿ ದೇವಾಲಯದಲ್ಲಿ ಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಿದ್ದಲಿಂಗಯ್ಯ ಮತ್ತು ತಂಡ ಹಾಜರಾಗಿ ಬಾಲ್ಯವಿವಾಹವನ್ನು ತಡೆದು, ಬಾಲಕಿಯನ್ನು ರಕ್ಷಿಸಿ ತಾಲ್ಲೂಕಿನ ಲಾಳಾಘಟ್ಟ ಗ್ರಾಮದಲ್ಲಿರುವ ಬಾಲಮಂದಿರಕ್ಕೆ ಬಿಡಲಾಗಿದೆ.


ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದ 24 ವರ್ಷದ ಯುವಕ ಮತ್ತು ಮಂಡ್ಯ ಜಿಲ್ಲೆ ಮತ್ತು ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದ 17 ವರ್ಷದ ಬಾಲಕಿಯ ಮದುವೆಯನ್ನು ಮಂಡ್ಯದಲ್ಲಿ ನಿಶ್ಚಯ ಮಾಡಲಾಗಿತ್ತು. ಬಾಲಕಿಗೆ 17 ವರ್ಷವಾಗಿದ್ದರಿಂದ ಯಾರಾದರೂ ತೊಂದರೆ ಕೊಡಬಹುದು ಎಂಬ ಗುಮಾನಿಯ ಮೇಲೆ ಮಂಗಳವಾರ ರಾತ್ರಿ ಏಕಾಏಕಿ ಚನ್ನಪಟ್ಟಣ ತಾಲ್ಲೂಕಿನ ದೇವರಹಳ್ಳಿ ಬಳಿ ಇರುವ ದೊಡ್ಡಬೀರೇಶ್ವರ ದೇವಾಲಯಕ್ಕೆ ವರ್ಗಾಯಿಸಿಕೊಂಡಿದ್ದಾರೆ.


ಹೆಸರೇಳಲಿಚ್ಚಿಸದ ಮಾಹಿತಿದಾರರೊಬ್ಬರು ಚನ್ನಪಟ್ಟಣ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಸಿಡಿಪಿಓ ಸಿದ್ದಲಿಂಗಯ್ಯ ನವರು ಮೇಲ್ವಿಚಾರಕರಾದ ಸುರೇಖಾ, ಜಯಲಕ್ಷ್ಮಿ ಮತ್ತು ಎಂ ಕೆ ದೊಡ್ಡಿ ಪೋಲಿಸರ ಜೊತೆ ಬುಧವಾರ ಮುಂಜಾನೆ ಐದು ಗಂಟೆಗೆ ತೆರಳಿ ಮದುವೆ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು, ಮದುವೆಯನ್ನು ನಿಲ್ಲಿಸಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸಲಾಗಿ, ವಧುವಿಗೆ 18 ವರ್ಷ ಆಗದಿರುವುದರಿಂದ, ಪೋಷಕರಿಗೆ ಎಚ್ಚರಿಕೆ ನೀಡಿ ಆಕೆಯನ್ನು ಬಾಲಮಂದಿರಕ್ಕೆ ಬಿಡಲಾಗಿದೆ.


ಖಚಿತ ಮಾಹಿತಿ ಮೇರೆಗೆ ನಾವು ಮುಂಜಾನೆ ಐದು ಗಂಟೆಗೆ ದೇವಾಲಯದ ಬಳಿ ತೆರಳಿ ಮದುವೆಯನ್ನು ತಡೆದಿದ್ದೇವೆ. ಬಾಲಕಿಗೆ ಹದಿನೇಳು ವರ್ಷವಾದ್ದರಿಂದ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಬಾಲಕಿಯ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಕಲೆಹಾಕಿ, ಬಾಲಕಿಯನ್ನು ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಶಾಲೆಗೆ ಕಳುಹಿಸಿದರೆ ಮಾತ್ರ ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗುವುದು. ಒಂದು ವೇಳೆ ಮದುವೆ ಆಗಿ ಹೋಗಿದ್ದರೆ ವರ ಮತ್ತು ಪೋಷಕರ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಅದಕ್ಕಾಗಿಯೇ ತನಿಖೆ ಮಾಡಲಾಗುತ್ತಿದೆ.

*ಸಿದ್ದಲಿಂಗಯ್ಯ ಸಿಡಿಪಿಓ, ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑