Tel: 7676775624 | Mail: info@yellowandred.in

Language: EN KAN

    Follow us :


ಒಂದೇ ವೇದಿಕೆಯಲ್ಲಿ ಮೂವರು ವೈರಿ ನಾಯಕರು ಕುತೂಹಲ ಕೆರಳಸಿದ ವೇದಿಕೆ

Posted date: 02 Sep, 2021

Powered by:     Yellow and Red

ಒಂದೇ ವೇದಿಕೆಯಲ್ಲಿ ಮೂವರು ವೈರಿ ನಾಯಕರು ಕುತೂಹಲ ಕೆರಳಸಿದ ವೇದಿಕೆ

ದಶಕದಿಂದೀಚೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಬದ್ದವೈರಿಗಳಾದ ಮೂವರು ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು, ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದರೆ, ಆಯಾಯ ಪಕ್ಷಗಳ ಮತದಾರರು ಮತ್ತು ಅಭಿಮಾನಿಗಳು ತಮ್ಮ ನಾಯಕ ಮಾತನಾಡುವಾಗ ಮತ್ತು ಬೇರೆ ನಾಯಕರು ತಮ್ಮ ನಾಯಕನ ಹೆಸರು ಹೇಳುವಾಗ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ತಮ್ಮ ಸಂತೋಷವನ್ನು ದುಪ್ಪಟ್ಟು ಮಾಡಿಕೊಂಡರು.


ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಗುರುವಾರ ಭಾರತ ಸಂವಿಧಾನ ಬಳಗ ಹಮ್ಮಿಕೊಂಡಿದ್ದ, ಕವಿ, ನಾಡೋಜ ಡಾ ಸಿದ್ದಲಿಂಗಯ್ಯ ನವರ ನೆನೆಯೋಣಾ ಬನ್ನಿ ಕಾರ್ಯಕ್ರಮದಲ್ಲಿ ಜೆಡಿಎಸ್ ಧುರೀಣ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ಡಿ ಕೆ ಸುರೇಶ್ ಮತ್ತು ಬಿಜೆಪಿ ಪಕ್ಷದ ಗುರುತರ ನಾಯಕ, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ರವರು ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದು, ಇಂದಿನ ರಾಜಕೀಯ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಡಿ ಕೆ ಸುರೇಶ್ ರವರು ಸಿ ಪಿ ಯೋಗೇಶ್ವರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ರವರ ಜೊತೆ ಮಾತನಾಡಿದರು. ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಮುಖಾಮುಖಿ ಮಾತನಾಡಲೇ ಇಲ್ಲ. ವೇದಿಕೆಯ ಮುಂಭಾಗ ಮತ್ತು ಉದ್ಘಾಟನೆ ಸಂದರ್ಭದಲ್ಲೂ ಈ ಇಬ್ಬರ ನಡುವೆ ಡಿ ಕೆ ಸುರೇಶ್ ಇರುವಂತೇ ನೋಡಿಕೊಂಡರು. ಆದರೆ ವೇದಿಕೆಯ ಮೇಲೆ ಮಾತನಾಡುವ ಸಂದರ್ಭದಲ್ಲಿ ಮೂವರು ನಾಯಕರು ಸಹ ಎಲ್ಲರ ಹೆಸರು ಹೇಳಿ ತಮ್ಮ ನಡುವೆ ಏನೂ ಇಲ್ಲಾ ಎಂಬಂತೆ ಬಿಂಬಿಸಿದರಾದರೂ ಏನೋ ಇದೆ ಎಂಬುದನ್ನು ಸಾರುವಂತಿತ್ತು.


ಮಾಧ್ಯಮದವರ ಮುಂದೆ ಸಿ ಪಿ ಯೋಗೇಶ್ವರ್ ಸಚಿವ ಸ್ಥಾನದ ಬಗ್ಗೆ ವ್ಯಂಗ್ಯ ಮಾತುಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಡಿ ಕೆ ಸುರೇಶ್ ಮಾತನಾಡಿದರೆ, ಹೆಚ್ ಡಿ ಕುಮಾರಸ್ವಾಮಿ ಯವರು ಸಿ ಪಿ ಯೋಗೇಶ್ವರ್ ಬಗ್ಗೆ ಏನೂ ಮಾತನಾಡದೆ ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿ ಅಸಮಾಧಾನ ಹೊರಹಾಕಿದರು. ಸಿ ಪಿ ಯೋಗೇಶ್ವರ್ ರವರು ಮಾಧ್ಯಮದವರ ಜೊತೆ ಏನು ಮಾತನಾಡದೆ ಹೊರಟಿದ್ದು ಮಾತ್ರ ಕುತೂಹಲ ಕೆರಳಿಸಿತು. ಕುಮಾರಸ್ವಾಮಿ ಯವರು ಜ್ಯೋತಿ ಬೆಳಗಿಸಿದರೆ, ಸುರೇಶ್ ರವರು ನಗಾರಿ ಬಾರಿಸಿದರು. ಯೋಗೇಶ್ವರ್ ರವರು ಆಧುನಿಕ ತಮಟೆಯನ್ನು ಭುಜಕ್ಕೆ ನೇತು ಹಾಕಿಕೊಂಡು ಬಾರಿಸಿದರು. ವಿಧಾನ ಪರಿಷತ್ ಸದಸ್ಯ ಅ ದೇವೇಗೌಡರು ಡಾ ಸಿದ್ದಲಿಂಗಯ್ಯ ರವರನ್ನು ಸ್ಮರಿಸಿದರು. ಮಾಜಿ ಉಪ ಸಭಾಪತಿ ಪುಟ್ಟಣ್ಣ ನವರ ಪುತ್ರ, ನವನಾಯಕ ಶಿಶಿರ ಪುಟ್ಟಣ್ಣ ನವರು ಬುದ್ದನ ವಿಗ್ರಹ, ಡಾ ಅಂಬೇಡ್ಕರ್ ಮತ್ತು ಸಿದ್ದಲಿಂಗಯ್ಯ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ

ಎಂಟತ್ತು ಬಾರಿ ಜನಪ್ರತಿನಿಧಿಯಾಗಿದ್ದವರು ಸಹ ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲಿಲ್ಲ. ಇದರಿಂದ ನಾವೆಲ್ಲರೂ ತಲೆತಗ್ಗಿಸುವಂತಾಗಿದೆ ಎಂದು ಉತ್ತರ ಕರ್ನಾಟಕ ಭಾಗದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿದ ಅವರು ಸಿದ್ದಲಿಂಗಯ್ಯ ರವರನ್ನು ನನ್ನ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಮಾಡಿದ್ದೆ. ಶೋಷಿತರ ಪರವಾಗಿ ಗೀತೆಗಳನ್ನು ಕಟ್ಟುವ ಮೂಲಕ ಸಮಾಜವನ್ನು ಎಚ್ಚರಗೊಳಿಸಿದರು. ವಿಶ್ವದಲ್ಲೇ ಯಾರೂ ರಚನೆ ಮಾಡದಂತಹ ಸಂವಿಧಾನವನ್ನು ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ್ದಾರೆ. ಇಂತಹ ನಾಯಕರ ಅನುಯಾಯಿ ಅಗಿದ್ದವರು ಡಾ ಸಿದ್ದಲಿಂಗಯ್ಯ ನವರು ಎಂದು ಶ್ಲಾಘಿಸಿದರು.


ಜ್ಞಾನಪ್ರಕಾಶ ಸ್ವಾಮೀಜಿಯವರು ಮಾತನಾಡಿ ಬುದ್ದಿ ಜಗವನ್ನಾಳುವುದಿಲ್ಲ, ಜ್ಞಾನ ಜಗತ್ತನ್ನು ಆಳುತ್ತದೆ. 1921 ರಲ್ಲಿ ಕೇವಲ 4,016 ಮತದಾರರಿದ್ದರು. ರಾಜರ 563 ಸೇರಿದಂತೆ ದೊಡ್ಡ ದೊಡ್ಡ ಜಮೀನ್ದಾರರು ಮಾತ್ರ ಮತದಾರರಾಗಿದ್ದರು. 1935 ರಲ್ಲಿ ಅಂಬೇಡ್ಕರ್ ರವರಿಂದ ದೇಶದ ಎಲ್ಲಾ ನಾಗರೀಕರು ಮತದಾರರಾಗುತ್ತಾರೆ ಇದನ್ನು ನೀವುಗಳು ಊಹಿಸಿಕೊಂಡರೆ ಅರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ದಲಿತರು ತಮಟೆ ಬಾರಿಸುವುದು, ಕ್ರಾಂತಿ ಗೀತೆ ಹಾಡುವುದು ಅವರ ಆಕ್ರೋಶವನ್ನು ವ್ಯಕ್ತಪಡಿಸಲು.

ದೇಶದಲ್ಲಿ ಸಂವಿಧಾನ ಇದ್ದರೂ ಸಹ ಅಕ್ರಮ, ಅನೈತಿಕ, ಅತ್ಯಚಾರ ನಿರಂತವಾಗಿರುವುದು, ಸಮಾಜವನ್ನು, ರಾಜಕೀಯವನ್ನು ಅಣಕಿಸುತ್ತಿದೆ. ಅಂದಿನ ಅಮೆರಿಕಾ ಅಧ್ಯಕ್ಷ ಒಬಾಮರವರು ನಾನು ಜಗತ್ತಿನ ಹಣೆ ಬರಹವನ್ನು ಬದಲಾಯಿಸುತ್ತೇನೆ. ಆದರೆ ಜ್ಞಾನದ ವಿಷಯ ಬಂದಾಗ ಅಂಬೇಡ್ಕರ್ ರವರಿಗೆ ಮಂಡಿಯೂರಿ ನಮಿಸುತ್ತೇನೆ ಎಂದರು.

ತುಂಡರಿಸುವ ಚಿನ್ನದ ಕತ್ತರಿಗಿಂತ, ಒಂದುಗೂಡಿಸುವ ಕಬ್ಬಿಣದ ಸೂಜಿಯಾಗಿರಬೇಕು. ಎಂಬುದು ಅಂಬೇಡ್ಕರ್ ರವರ ವಾದವಾಗಿತ್ತು. ಅದನ್ನು ನಾವೆಲ್ಲರೂ ಮುಂದುವರೆಸೋಣಾ ಎಂದು ಕರೆ ನೀಡಿದರು.


ಸಂಸದ ಡಿ ಕೆ ಸುರೇಶ್ ಮಾತನಾಡಿ ಸಿದ್ದಲಿಂಗಯ್ಯ ನವರು ತಮ್ಮ ಲೇಖನಿಯಿಂದ ಸಮಾಜವನ್ನು ಬಡಿದೆಬ್ಬಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಹಲವಾರು ದಲಿತ ದಮನ ನೀತಿಯನ್ನು ತೊಲಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದಾರೆ. ಪ್ರಾಧ್ಯಾಪಕರಾಗಿದ್ದ ಸಂದರ್ಭದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ದಲಿತರಿಗೆ ಶಿಕ್ಷಣದಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ನಿಮ್ಮ ಹಕ್ಕೊತ್ತಾಯಗಳನ್ನು ನಾವೆಲ್ಲರೂ ಒಗ್ಗೂಡಿ ನೆರವೇರಿಸುತ್ತೇವೆ. ಸಚಿವ ಸ್ಥಾನದ ಆಕಾಂಕ್ಷಿ ಸಿ ಪಿ ಯೋಗೇಶ್ವರ್ ರವರಿಗೆ ಶೀಘ್ರವಾಗಿ ಸಚಿವ ಸ್ಥಾನ ದೊರೆಯಲಿ ಎಂದು ಹಾಸ್ಯಾಸ್ಪದವಾಗಿ ಹೇಳಿದರು. ಹಲವಾರು ವರ್ಷಗಳ ನಂತರ ಚನ್ನಪಟ್ಟಣದಲ್ಲಿ ಮೂರು ಪಕ್ಷದ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಕರೆತಂದಿರುವುದು ನಿಮ್ಮ ಬಳಗದ ಹೆಚ್ಚುಗಾರಿಕೆ. ಇದರಿಂದಲೇ ಗೊತ್ತಾಗುತ್ತದೆ ಚನ್ನಪಟ್ಟಣ ಎಷ್ಟು ಸ್ಟ್ರಾಂಗ್ ಆಗಿದೆ ಎಂದು ನಗೆ ಚಟಾಕಿ ಹಾರಿಸಿದರು.


ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮಾತನಾಡಿ, ಸಿದ್ದಲಿಂಗಯ್ಯ ನವರು ನಮ್ಮವರು, ನಮ್ಮ ಜಿಲ್ಲೆಯವರು, ಇವರನ್ನು ಕೋವಿಡ್ ಬಲಿ ಪಡೆದದ್ದು ನಮ್ಮೆಲ್ಲರ ದುರ್ದೈವ‌. ಇವರ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೇಯಲ್ಲೇ ಕಾರ್ಯಕ್ರಮ ಆಚರಿಸುವಂತೆ ಮಾಡಲು ಶ್ರಮಿಸುತ್ತೇನೆ. ಸಿದ್ದಲಿಂಗಯ್ಯ ಮತ್ತು ನನ್ನ ಸಂಬಂಧ ಸಿನಿಮಾ ಫೀಲ್ಡ್ ನಿಂದಲೂ ಇತ್ತು. ಅವರ ಸಾವು ಕಾವ್ಯ ಜಗತ್ತಿಗೆ ಅದರಲ್ಲೂ ಕ್ರಾಂತಿಕಾರಿ ಕಾವ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ತಮ್ಮ ಹಕ್ಕೊತ್ತಾಯವನ್ನು ಶೀಘ್ರವಾಗಿ ಈಡೇರಿಸಲು ಸರ್ಕಾರದ ಜೊತೆ ಚರ್ಚಿಸುತ್ತೇನೆ ಎಂದರು.


ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ರವರು ಸಿದ್ದಲಿಂಗಯ್ಯ ನವರು ರಚಿಸಿದ ಗೀತೆಯನ್ನು ವೇದಿಕೆಯ ಮೇಲೆ ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ದಲಿತರು ಮತ್ತು ಅಲ್ಪಸಂಖ್ಯಾತರಿಗೆ ತಾಲ್ಲೂಕಿನಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿಕೊಡುವಂತೆ ಜೆಡಿಎಸ್ ನ ಎಸ್‌ ಎಸ್ಟಿ ವಿಭಾಗದ ಅಧ್ಯಕ್ಷ ಜಯಂತ್ ಚಾಲುಕ್ಯ ಹಕ್ಕೊತ್ತಾಯ ಮಂಡಿಸಿದರು.

ಡಾ ಅಪ್ಪಗೆರೆ ಸೋಮಶೇಖರ್ ರವರು ಡಾ ಸಿದ್ದಲಿಂಗಯ್ಯ ನವರ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು. ಮತ್ತೀಕೆರೆ ಹನುಮಂತಯ್ಯನವರು ಆಶಯ ನುಡಿಗಳನ್ನಾಡಿದರು. ಡಾ ಬಿ ಆರ್ ಶಿವಕುಮಾರ್ ಮತ್ತು ತಂಡದವರು ಕ್ರಾಂತಿ ಗೀತೆಗಳನ್ನು ಹಾಡಿದರು.


ಕಾರ್ಯಕ್ರಮದಲ್ಲಿ ಗಂಗಾಧರ, ಸಿದ್ದಲಿಂಗಯ್ಯ ನವರ ಧರ್ಮಪತ್ನಿ ರಮಾದೇವಿ, ಎಸ್ಸಿ ಎಸ್ಟಿ ರಾಜ್ಯಾಧ್ಯಕ್ಷ ರಾಂಪುರ ನಾಗೇಶ್, ಅಕ್ಕೂರು ಶೇಖರ್, ಕೋಟೆ ಸಿದ್ದರಾಮಯ್ಯ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑