Tel: 7676775624 | Mail: info@yellowandred.in

Language: EN KAN

    Follow us :


ಸೋರುತಿಹುದು ಪೆಟ್ಟಾ ಶಾಲೆಯ ಮಾಳಿಗಿ. ವಿದ್ಯಾರ್ಥಿಗಳ ತಲೆಯ ಮೇಲೆ ತೂಗುಗತ್ತಿ

Posted date: 07 Sep, 2021

Powered by:     Yellow and Red

ಸೋರುತಿಹುದು ಪೆಟ್ಟಾ ಶಾಲೆಯ ಮಾಳಿಗಿ. ವಿದ್ಯಾರ್ಥಿಗಳ ತಲೆಯ ಮೇಲೆ ತೂಗುಗತ್ತಿ

ಚನ್ನಪಟ್ಟಣ, ಸೆ.೦೬: ನಗರದಲ್ಲಿನ ಸುವರ್ಣ ಮಹೋತ್ಸವ ಆಚರಣೆಯ ಹೊಸ್ತಿಲಲ್ಲಿರುವ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ಪಟ್ಟಣದ ಐದು ದೀಪಗಳ ವೃತ್ತ (ಡೂಂಲೈಟ್ ಸರ್ಕಲ್) ದಲ್ಲಿರುವ ಪೆಟ್ಟಾ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ 50  ವರ್ಷಕ್ಕೂ ಹೆಚ್ಚು ಇತಿಹಾಸವಿದ್ದು, ಈ ಶಾಲೆಯಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದಾರೆ. ಇಂತಹ ಶಾಲೆ ಇಂದು ಸಂಪೂರ್ಣ ಶಿಥಿಲವಾಗಿದ್ದು, ಮಳೆ ಬಂದರೆ ಮಳೆ ನೀರಿನ ಕಾಟ, ಬಿಸಿಲು ಬಂದರೆ ಛಾವಣಿ ಕಳಚಿಬೀಳುವ ಆತಂಕ ಉಂಟಾಗಿದ್ದು, ಸೋಮವಾರದಿಂದ ಆರಂಭವಾದ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ಕಂಪ್ಯೂಟರ್ ಕೊಠಡಿಯಲ್ಲಿ ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ನಡುವೆ  ಮಕ್ಕಳು ಅಂತರ ಇಲ್ಲದೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ ಒಂದೂವರೆ ವರ್ಷಗಳಿಂದ ಬಾಗಿಲು ಹಾಕಿದ್ದ ಶಾಲೆಗಳು ಸೋಮವಾರದಿಂದ ಆರಂಭವಾಗಿದ್ದು ಸರ್ಕಾರದ ಆದೇಶದಂತೆ 6 ಮತ್ತು 7 ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಆದರೆ ಆ ಮಕ್ಕಳು ಶಾಲೆಯಲ್ಲಿನ ಆರೇಳು ಕೊಠಡಿಗಳಲ್ಲಿ ಕುಳಿತುಕೊಳ್ಳಲಾಗದೆ ಕಂಪ್ಯೂಟರ್ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದು, ಇದರ ಜೊತೆ ಅಂತರ ಇಲ್ಲದೆ ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸಮಾಜ ಸೇವಕ ಸಿ.ಜಿ.ರಮೇಶ್‌ಕುಮಾರ್‌ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪಟ್ಟಣದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಪೆಟ್ಟಾ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು, ಈ ಶಾಲೆಯಲ್ಲಿನ ಛಾವಣಿ ಕುಸಿದು ಬೀಳುವ ಜೊತೆಗೆ ಮಳೆ ನೀರು ನೇರವಾಗಿ ಕೊಠಡಿಗೆ ಬೀಳುತ್ತಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಕಲಿಯಲು ಕಷ್ಟವಾಗಿದ್ದು, ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿಯಲ್ಲೂ ಸಹ ಈ ಶಾಲೆಯಲ್ಲಿ 148 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಸದ್ಯ 6 ಮತ್ತು 7 ನೇ ತರಗತಿಯಲ್ಲಿ 43 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿನ ಒಂದು ಕೊಠಡಿಯೂ ಚನ್ನಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ನೆಮ್ಮದಿಯಾಗಿ ಕುಳಿತು ಪಾಠ ಕೇಳಲು ಹೇಗೆ ಸಾಧ್ಯ. ಅಲ್ಲದೆ ಕೊರೋನಾ ಮಹಾಮಾರಿಯ ನಡುವೆ ಈ ಶಾಲೆಯಲ್ಲಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿಸಿದರೆ ಮಕ್ಕಳ ಆರೋಗ್ಯದ ಪಾಡೇನು ಎಂದು ಪೋಷಕರು ಆರೋಪ ಮಾಡಿದ್ದಾರೆ.


*148 ಮಕ್ಕಳಿದ್ದಾರೆ:* ಈ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಶಿಕ್ಷಣ ಇದ್ದು 148 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ 16 ಮಕ್ಕಳು ಇದೀಗ ಸರ್ಕಾರಿ ಶಾಲೆಗೆ ಸೇರಲು ಸಿದ್ದವಾಗಿದ್ದಾರೆ. ಖಾಸಗಿ ಶಾಲೆಗಳ ಡೊನೇಷನ್ ಹಾವಳಿಯಿಂದ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚಿಹೋಗುತ್ತಿವೆ ಎಂಬ ವಾತಾವರಣದಲ್ಲಿ ಇದೀಗ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾತಿ ಹೆಚ್ಚಾಗುತ್ತಿರುವುದು ಶ್ಲಾಘನೀಯವಾಗಿದೆ. ಆದರೆ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಉತ್ತಮ ಮೂಲಭೂತ ಸೌಲಭ್ಯಗಳೆ ಇಲ್ಲವಾದರೆ ಮಕ್ಕಳ ಪ್ರಾಣಕ್ಕೆ ಭದ್ರತೆ ಇಲ್ಲವಾದರೆ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಕಳುಹಿಸುತ್ತಾರೆ ಎಂಬುದು ಪೋಷಕರ ಪ್ರಶ್ನೆಯಾಗಿದೆ.


*ಮೂಲಭೂತ ಸೌಲಭ್ಯಗಳಿಲ್ಲ:*

ಖಾಸಗಿ ಶಾಲೆಯಲ್ಲಿ ಆಟದ ಮೈದಾನ, ಶಾಲಾ ಕಾಂಪೌಂಡ್, ಶೌಚಾಲಯ ಉತ್ತಮ ಪರಿಸರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪ್ರಶ್ನೆ ಮಾಡುವ ಸರ್ಕಾರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಈ ಸೌಲಭ್ಯಗಳನ್ನು ನೀಡದೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಿ ಎನ್ನುವುದು ಯಾವ ನ್ಯಾಯ. ಇಂದು ಸರ್ಕಾರಿ ಶಾಲೆಗಳಿಗೆ ಮರು ಜೀವ ಸಿಗುತ್ತಿದ್ದು ಪೋಷಕರೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ವಾತಾವರಣ ನಿರ್ಮಾಣವಾಗಿರುವಾಗ ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿ ಇಡಬೇಕಲ್ಲವೇ ಎಂದು ಪೋಷಕರು ಕಿಡಿಕಾರಿದ್ದಾರೆ.


*ಭದ್ರತೆಯಿಲ್ಲದ ಶಾಲೆ:* ಪೆಟ್ಟಾ ಶಾಲೆಯು ರಸ್ತೆಯ ಪಕ್ಕದಲ್ಲೇ ಇದ್ದು ಪ್ರತಿನಿತ್ಯ ನೂರಾರು ವಾಹನಗಳ ಸಂಚಾರವಿದೆ. ಅದರಲ್ಲೂ ಕೃಷಿ ಮಾರುಕಟ್ಟೆಗೆ ಟೆಂಪೋಗಳು, ಆಟೋಗಳ ಸಂಚಾರ ನಿರಂತರವಾಗಿರುತ್ತದೆ. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಪುಟ್ಟ ಮಕ್ಕಳು ರಸ್ತೆಗೆ ಬಂದರೆ ಅವರ ಪ್ರಾಣಕ್ಕೆ ಕುತ್ತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಭದ್ರತೆ ಇಲ್ಲ. ಶಾಲೆ ಹಿಂಭಾಗ ದೊಡ್ಡ ಸರ್ಕಾರಿ ಜಾಗವಿದ್ದು, ಕಸದ ರಾಶಿಯೇ ಬಿದ್ದಿದೆ. ಕಿಟಕಿ ತೆಗೆದರೆ ಶಾಲೆಗೆ ನೇರವಾಗಿ ಅಶುದ್ದ ಗಾಳಿ ಬರುತ್ತದೆ. ಇಂತಹ ಶಾಲೆಯಲ್ಲಿ ದಾಖಲಾತಿ ಮಾಡಲು ಪೋಷಕರು ಮುಂದೆ ಬರುವರೇ. ಈ ನಿಟ್ಟಿನಲ್ಲಿ ಈ ಶಾಲೆಯ ಸುತ್ತಾ ಕಾಂಪೌಂಡ್ ನಿರ್ಮಾಣ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


*ಅನೈತಿಕ ಚಟುವಟಿಕೆಗಳ ತಾಣ:*

ಈ ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೂ ತಾಣವಾಗಿದೆ. ಅಲ್ಲದೆ ಶಾಲೆಯ ಶೌಚಾಲಯದ ಬಾಗಿಲನ್ನು ಹೊಡೆದು ಅನೈತಿಕ ಚಟುವಟಿಕೆಗೆಳಿಗೆ ಬಳಕೆ ಮಾಡಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಇಲ್ಲಿ ಸಾಕಷ್ಟು ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

*ಬೀದಿನಾಯಿಗಳು ಮತ್ತು ಭಿಕ್ಷುಕರ ತಾಣ:*

ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಹಾಗೂ ಕಳೆದ ಒಂದೂವರೆ ವರ್ಷಗಳಿಂದ ಶಾಲೆಯನ್ನು ತೆರೆಯದ ಕಾರಣ ಇದೀಗ ಶಾಲೆಯ ಆವರಣ ಬೀದಿ ನಾಯಿಗಳ ವಾಸ ಸ್ಥಳವಾಗಿದೆ. ಇದೀಗ ಶಾಲೆ ಆರಂಭವಾಗಿದ್ದು, ಮಕ್ಕಳು ಶಾಲೆಗೆ ಬರುತ್ತಿರುವ ಕಾರಣ ನಾಯಿಗಳ ಭಯ ಸಹ ಉಂಟಾಗಿದೆ. ಅಲ್ಲದೆ ಶಾಲೆಯ ಆವರಣದಲ್ಲೆ ಕಸದ ರಾಶಿಯನ್ನು ಹಾಕುತ್ತಿದ್ದು ಇದರಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಮಾಂಸದ ತ್ಯಾಜ್ಯ ಇರುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ನಾಯಿಗಳು ಮಾಂಸದ ರುಚಿಗೆ ಬಿದ್ದಿದ್ದು ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈಗಾಗಲೆ ಮನೆಗಳ ಬಳಿಯೇ ಬೀದಿನಾಯಿಗಳ ಮಕ್ಕಳ ಮೇಲೆ ದಾಳಿ ಮಾಡಿದ ಉದಾಹರಣೆಗಳಿದೆ. ಈ ನಿಟ್ಟಿನಲ್ಲಿ ಇಲ್ಲಿನ ವಾತಾವರಣ ನೋಡಿದರೆ ಮಕ್ಕಳನ್ನು ಶಾಳೆಗೆ ಕಳಿಸುವುದು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.


*ಕ್ಯಾರೇ ಎನ್ನದ ಬಿಇಓ: ಶಾಲೆಯ ಸಮಸ್ಯೆಗಳ ಬಗ್ಗೆ ಶಾಲಾಭಿವೃಧ್ಧಿ ಸಮತಿ ಅಧ್ಯಕ್ಷರು ಹಾಗೂ ಸದಸ್ಯರು ಈಗಾಗಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ನೀಡಿದ್ದಾರೆ ನೀಡಿದ್ದಾರೆ. ಕಳೆದ ಸಾಲಿನಲ್ಲೇ ನಮ್ಮ ಪತ್ರಿಕೆಯು ನಗರದ ಸರ್ಕಾರಿ ಶಾಲೆಗಳ ಅಧೋಗತಿ ಮೇಲೆ ಬೆಳಕು ಚಲ್ಲಿತ್ತು. ಆದರೆ ಈ ಬಗ್ಗೆ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗದ ಬಿಇಓ ಮೌನವಹಿಸಿರುವುದು ಅವರ ಬೇಜವಾಬ್ದಾರಿತನವಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಅದೂ ಅಲ್ಲದೆ ನಾನು ಜಿಲ್ಲಾ ಪಂಚಾಯತಿಗೆ ಬರೆದಿದ್ದೇನೆ. ನಮ್ಮಲ್ಲಿ ಯಾವುದೇ ಫಂಡ್ ಇಲ್ಲ ಎಂಬ ಪೂರ್ವಯೋಜಿತ ಮಾತುಗಳನ್ನು ಆಡುತ್ತಾರೆ. ಇದುವರೆಗೂ ತಾಲ್ಲೂಕಿನಾದ್ಯಂತ ಇರುವ ಶಾಲೆಗಳ ರಿಪೇರಿಗಳ ಹೆಸರಿನಲ್ಲಿ ಹಣ ಲೂಟಿಯಾಗಿದ್ದು ಅಲ್ಲದೆ ಶಾಲೆಗಳ ರಿಪೇರಿ ಆಗಿದೆ ಎಂಬ ಮಾಹಿತಿಯೇ ಇವರ ಬಳಿ ಇಲ್ಲದಿರುವುದು ಇಲಾಖೆಯ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑