Tel: 7676775624 | Mail: info@yellowandred.in

Language: EN KAN

    Follow us :


ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

Posted date: 16 Sep, 2021

Powered by:     Yellow and Red

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು ತಮ್ಮ ಗ್ರಾಮ ಹಾಗೂ ವಾರ್ಡ್ಗಳಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಿದ್ದು, ಮೊದಲನೇ ಡೋಸ್ ಪಡೆಯದ 18 ವರ್ಷ ಮೇಲ್ಪಟ್ಟವರು ಹಾಗೂ ಎರಡನೇ ಡೋಸ್ ಪಡೆಯಲು ಅವಧಿ ಪೂರ್ಣಗೊಳಿಸಿರುವ ಅರ್ಹರು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಸಾವು ಸಂಭವಿಸುವ ಪ್ರಮಾಣ ಕಡಿಮೆ ಇರುತ್ತದೆ ಹಾಗೂ ತೀವ್ರತರ ತೊಂದರೆಗಳಿಗೆ ಒಳಗಾಗದೇ ಸಣ್ಣ ಪುಟ್ಟ ಲಕ್ಷಣಗಳೊಂದಿಗೆ ಗುಣಮುಖರಾಗುತ್ತಾರೆ ಎಂದು ಬಹಳಷ್ಟು ಅಧ್ಯಯನಗಳು ತಿಳಿಸಿವೆ. ಕೋವಿಡ್ ಲಸಿಕೆಯ ಪ್ರಾಮುಖ್ಯತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಂಭವನೀಯ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಈ ಹಿನ್ನಲೆಯಲ್ಲಿ ಪೋಷಕರು ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 8,31,302 ಜನಗಳ ಪೈಕಿ ಈಗಾಗಲೇ 6,51,297 ಜನರಿಗೆ ಕೋವಿಡ್ ಮೊದಲ ಡೋಸ್ ಲಸಿಕೆ ನೀಡಿ ಶೇ 78 ರಷ್ಟು ಸಾಧನೆ ಮಾಡಲಾಗಿದೆ. ಮೊದಲನೇ ಡೋಸ್ ಪಡೆಯದೇ ಇರುವ ಸಾರ್ವಜನಿಕರಿಗೆ ಹಾಗೂ ಎರಡನೇ ಡೋಸ್ ಪಡೆಯಲು ಬಾಕಿ ಇರುವವರಿಗೆ ಲಸಿಕೆ ನೀಡಲು ಪ್ರತಿ ಗ್ರಾಮ ಪಂಚಾಯಿತಿಗೆ ಎರಡು ತಂಡ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ 15 ತಂಡಗಳನ್ನು ನಿಯೋಜಿಸಲಾಗುವುದು. ಜಿಲ್ಲಾಡಳಿತ ಇದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಸಿಕೆ ನೀಡುವ ಕೆಲಸ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 7.30 ಕ್ಕೆ ಪ್ರಾರಂಭವಾಗಲಿದೆ. ಸಾರ್ವಜನಿಕರು ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆದು ಕೋವಿಡ್ ತಡೆಗಟ್ಟಲು ಹಮ್ಮಿಕೊಂಡಿರುವ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.


ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಇದಕ್ಕಾಗಿ ಹೊಸ ಜಿಲ್ಲಾಸ್ಪತ್ರೆಯಲ್ಲಿ 120 ಐಸಿಯು ಬೆಡ್‌ಗಳಲ್ಲಿ ಮಕ್ಕಳಿಗೆ 28 ಬೆಡ್ ಮೀಸಲಿಡಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಮಕ್ಕಳಿಗಾಗಿ 5  ಐ.ಸಿ.ಯು ಬೆಡ್ ಮೀಸಲಿಡಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ 100 ಬೆಡ್‌ಗಳ ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯಲು ಸ್ಥಳ ಗುರುತಿಸಲಾಗಿದೆ. ಇಲ್ಲಿ ಪೋಷಕರು ಉಳಿದುಕೊಳ್ಳಲು ಸಹ ವ್ಯವಸ್ಥೆ ಇರುತ್ತದೆ. ಶಿಕ್ಷಕರ ಮೂಲಕ ಪೋಷಕರಿಗೆ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳನ್ನು ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.


ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಇಳಿಮುಖವಾಗಿದ್ದು, ಕಳೆದ 15 ದಿನಗಳಿಂದ ಪಾಸಿಟಿವಿಟಿ ರೇಟ್ ಶೇ 0.13 ಇದೆ. 15 ದಿನಗಳಿಂದ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಎರಡು ಪ್ರಕರಣಗಳು ಮಾತ್ರ ಕಂಡು ಬಂದಿರುತ್ತದೆ. ಮಾಗಡಿ ತಾಲ್ಲೂಕಿನಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಉದ್ಘಾಟನೆಯಾಗಿರುತ್ತದೆ. ಉಳಿದ ಮೂರು ತಾಲ್ಲೂಕು ಆಸ್ಪತ್ರೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನದಲ್ಲಿ ಪ್ರಾರಂಭಿಸಲಾಗುವುದು ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಆರ್.ಸಿ.ಹೆಚ್. ಅಧಿಕಾರಿ ಡಾ: ಪದ್ಮಾ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑