Tel: 7676775624 | Mail: info@yellowandred.in

Language: EN KAN

    Follow us :


ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು

Posted date: 04 Oct, 2021

Powered by:     Yellow and Red

ಕಾಡು ಪ್ರಾಣಿಗಳಿಂದ ಬೆಳೆ ನಾಶ, ಅಮ್ಮಳ್ಳಿದೊಡ್ಡಿ ಗ್ರಾಮಸ್ಥರಿಂದ ರಸ್ತೆತಡೆ ಅಧಿಕಾರಿಗಳು ದೌಡು

ಚನ್ನಪಟ್ಟಣ: ಅ/04. ತಡರಾತ್ರಿ ಒಂಭತ್ತು ಆನೆಗಳು ಅಮ್ಮಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿಗೆ ನುಗ್ಗಿ ತೆಂಗು, ಬಾಳೆ ಮತ್ತು ಸೋತೆಕಾಯಿ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಗ್ರಾಮದ ಬಳಿ ಹಾದುಹೋಗಿರುವ ಚನ್ನಪಟ್ಟಣ-ಸಾತೂರು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.


ಒಂಭತ್ತು ಆನೆಗಳು ಒಟ್ಟಿಗೆ ದಾಂಗುಡಿ ಇಟ್ಟಿದ್ದು ಐವತ್ತಕ್ಕೂ ಹೆಚ್ಚು ತೆಂಗಿನ ಸಸಿಗಳು, ಎರಡು ಎಕರೆ ಬಾಳೆ ಮತ್ತು ಒಂದು ಎಕರೆಯಲ್ಲಿ ಬೆಳೆದಿದ್ದ ಸೋತೆಕಾಯಿ ಗಿಡಗಳನ್ನು ತಿಂದುತೇಗಿದ್ದಲ್ಲದೆ, ತುಳಿದು ನಾಶಪಡಿಸಿವೆ. ಇದರಿಂದ ಲಕ್ಷಾಂತರ ರೂಪಾಯಿಗಳು ನಸ್ಟವಾಗಿದೆ. ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಕಣ್ಣೊರೆಸುವ ತಂತ್ರ ಮಾಡುತ್ತಿವೆ. ರೈತನ ಗೋಳನ್ನು ಯಾರೂ ಕೇಳಲು ತಯಾರಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಮುಂಜಾನೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಬೆಂಬಲಕ್ಕೆ ಆಸುಪಾಸಿನ ಗ್ರಾಮಸ್ಥರು ಮತ್ತು ದಾರಿಹೋಕರು ಸಹ ಬೆಂಬಲ ನೀಡಿದರು. ತಾಲ್ಲೂಕಿನಾದ್ಯಂತ ಪ್ರತಿನಿತ್ಯವೂ ಒಂದೊಂದು ಗ್ರಾಮದ ತೋಟಗಳಲ್ಲಿ ಆನೆಗಳು ದಾಳಿ ಮಾಡುತ್ತಿವೆ. ತುಟ್ಟಿಯ ಕಾಲದಲ್ಲಿ ರೈತರು ಬದುಕುವುದೇ ದುಸ್ತರವಾಗಿರುವಾಗ, ಕಾಡು ಪ್ರಾಣಿಗಳಿಂದ ರೈತರ ಮತ್ತು ಜಾನುವಾರುಗಳ ಪ್ರಾಣ ಹಾಗೂ ಬೆಳೆಯನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ರೈತರು ತಮ್ಮ ಬೆಳೆ ರಕ್ಷಣೆಗೆ ವಿದ್ಯುತ್ ತಂತಿಬೇಲಿ ನಿರ್ಮಿಸಿ ಕಾಡು ಪ್ರಾಣಿಗಳು ಸತ್ತರೆ, ಅಧಿಕಾರಿಗಳು ರೈತರನ್ನು ಜೈಲು ಪಾಲು ಮಾಡುತ್ತಾರೆ. ರೈತನಿಗೆ ಕಾಡು ಪ್ರಾಣಿಗಳಿಂದ ಏನೇ ತೊಂದರೆಯಾದರೂ ಕೇಳುವವರೆ ಇಲ್ಲಾ ಎಂದು ಪ್ರತಿಭಟನಾಕಾರರು ದೂರಿನ ಸುರಿಮಳೆಗೈದರು.


ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಗೊಂಡ ಅರಣ್ಯಾಧಿಕಾರಿಗಳು, ಪೋಲೀಸರು ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಪ್ರತಿಭಟನಾಕಾರರು ಮಣಿಯದ ನಂತರ ಶಾಸಕ ಕುಮಾರಸ್ವಾಮಿ ಯವರ ಆದೇಶದ ಮೇರೆಗೆ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಮತ್ತು ಪೋಲಿಸ್ ಉಪ ವಿಭಾಗಾಧಿಕಾರಿ ಕೆ ಎನ್ ರಮೇಶ್ ರವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ, ಕುಮಾರಸ್ವಾಮಿ ಯವರು ಈ ವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಶಾಶ್ವತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಸಂದೇಶ ರವಾನಿಸಿದ್ದಾರೆ. ಅಧಿಕಾರಿಗಳು ಸಹ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದು, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆದುಕೊಂಡರು.


ಕಾವೇರಿ ವನ್ಯಜೀವಿ ಅರಣ್ಯಾಧಿಕಾರಿಗಳ ಬಳಿ ಹಿರಿಯ ಅಧಿಕಾರಿಗಳು ಚರ್ಚಿಸಿದ್ದು, ಅಲ್ಲಿಂದ ಆನೆಗಳು ಈ ಭಾಗಕ್ಕೆ ಬಾರದ ರೀತಿಯಲ್ಲಿ, ನಮ್ಮ ವಲಯದ ಸಿಬ್ಬಂದಿಗಳನ್ನೇ ಗಡಿಭಾಗಕ್ಕೆ ತಲಾ ನಾಲ್ಕು ಮಂದಿ ಸಿಬ್ಬಂದಿಗಳನ್ನು ಕ್ಯಾಂಪ್ ಗೆ ನೇಮಿಸಿ, ಆನೆಗಳು ಕಾವೇರಿ ಧಾಮ ದಾಟಿ ಬರದಂತೆ ತಡೆಯಲು ಯೋಜನೆ ರೂಪಿಸಲಾಗಿದೆ. ಇದು ಬ್ಯಾರಿಕೇಡ್ ನಿರ್ಮಾಣ ಆಗುವವರೆಗೂ ಮುಂದುವರೆಯುತ್ತದೆ. ನಷ್ಟವಾಗಿರುವ ರೈತರಿಗೆ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಲು ಸಹ ಕ್ರಮಕೈಗೊಳ್ಳಲಾಗಿದೆ.

-ದಿನೇಶ್ ವಲಯ ಅರಣ್ಯಾಧಿಕಾರಿ.


ಸ್ಥಳಕ್ಕೆ ಡಿಎಫ್ಓ ದೇವರಾಜು, ಎಸಿಎಫ್ ಸುರೇಂದ್ರ ಕಾವೇರಿ ವನ್ಯಜೀವಿ ವಿಭಾಗ ದ ಅಧಿಕಾರಿ ದೇವರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಬಿ ಶಿವಕುಮಾರ್, ಪ್ರೊಬೆಷನರಿ ಡಿವೈಎಸ್ಪಿ ಅನುಷಾರಾಣಿ, ಅಕ್ಕೂರು ಪಿಎಸ್ಐ ಸರಸ್ವತಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑