Tel: 7676775624 | Mail: info@yellowandred.in

Language: EN KAN

    Follow us :


ಚಂಡೀಗಢ ದಿಂದ ಚನ್ನಪಟ್ಟಣ ಕ್ಕೆ ಸೈಕಲ್ ನಲ್ಲಿ ಬಂದ ಕಳ್ಳಿಹೊಸೂರಿನ 47 ರ ನವಯುವಕ ಡಾ ದಿನೇಶ್

Posted date: 05 Oct, 2021

Powered by:     Yellow and Red

ಚಂಡೀಗಢ ದಿಂದ ಚನ್ನಪಟ್ಟಣ ಕ್ಕೆ ಸೈಕಲ್ ನಲ್ಲಿ ಬಂದ ಕಳ್ಳಿಹೊಸೂರಿನ 47 ರ ನವಯುವಕ ಡಾ ದಿನೇಶ್

ಚನ್ನಪಟ್ಟಣ: ಅ/05/21. ಸೈಕಲ್ ನಿಂದಲೇ ಜೀವನ ಆರಂಭಿಸಿದವರೂ ಸಹ 2000 ಇಸವಿಯಿಂದ 2018 ರವರೆಗೂ ಸೈಕಲ್‌ ಎಂದರೆ ಮೂಗುಮುರಿಯುವ ಜನರೇ ಹೆಚ್ವಾಗಿದ್ದರು. 2018 ರ ನಂತರ ಹಂತಹಂತವಾಗಿ ಸೈಕಲ್ ಹುಚ್ಚು ಹಿಡಿಸಿಕೊಂಡು ಸಾವಿರ ಬೆಲೆಯಿಂದ ಲಕ್ಷ ರೂಪಾಯಿ ಬೆಲೆ ಕೊಟ್ಟು ಖರೀದಿಸಿ, ಸೈಕಲ್ ತುಳಿಯುವ ಅಭ್ಯಾಸ ಹೊಂದಿದ ಯುವಕರು ಹೆಚ್ಚಾಗಿದ್ದಾರೆ. ಇವರ ಸಾಲಿಗೆ ದೂರದ ಚಂಡೀಗಢ ನಿವಾಸಿ ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಯ್ಯ (ಗಂಗಾಧರ)  ಲಕ್ಷ್ಮಮ್ಮ ರವರ ಪುತ್ರ ದಿನೇಶ್ ರವರು ಚಂಢೀಗಢ ರಾಜ್ಯದಿಂದ ನಾಲ್ಕು ರಾಜ್ಯಗಳನ್ನು ಹಾದು ಕರ್ನಾಟಕದ ಚನ್ನಪಟ್ಟಣ ತಾಲ್ಲೂಕಿನ ಸ್ವಗ್ರಾಮದವರೆಗೆ 2,435 ಕಿಲೋಮೀಟರ್ ದೂರವನ್ನು ಹದಿನಾರು ದಿನಗಳ ಕಾಲ ಕ್ರಮಿಸಿ ಬಂದಿದ್ದು ಸಾಹಸಗಾಥೆಯನ್ನು ಮೆರೆದಿದ್ದಾರೆ.


ದಿನೇಶ್ ರವರು ಮೂಲ ಹಳ್ಳಿಯವರಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು, ಗ್ರಂಥಾಲಯ ವಿಷಯದಲ್ಲಿ ಪಿಹೆಚ್ಡಿ ಪದವಿ ಗಳಿಸಿದ್ದಾರೆ. ಗ್ರಂಥಾಲಯದಲ್ಲಿ ಪದವಿ ಪಡೆಯುತ್ತಿದ್ದಾಗಲೇ ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಒಂದು ವರ್ಷ, ನಾಗಾರ್ಜುನ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಹತ್ತು ವರ್ಷಗಳ ಕಾಲ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ, ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಪಿಎಚ್ಡಿ ಪದವಿಯ ನಂತರ ದೂರದ ಪಂಜಾಬ್ ರಾಜ್ಯದ ರೋಪಾರ್ (ರೂಪ್ ನಗರ) ದ ಐಐಟಿ ಯಲ್ಲಿ ಗ್ರಂಥಪಾಲಕರಾಗಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯದ ಏರುಪೇರು ಮತ್ತು ವಾಯುಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ಮನಗಂಡ ದಿನೇಶ್ ರವರು, ಸೈಕಲ್ ತುಳಿಯುವ ಅಭ್ಯಾಸ ಮಾಡಿಕೊಂಡರು. ಹಂತಹಂತವಾಗಿ ಆದಂತಹ ಅಭ್ಯಾಸ ಸಾಧನೆಯತ್ತ ತಿರುಗಿತು. ಮೊದಲು ವಾರಾಂತ್ಯಕ್ಕೆ ಹತ್ತಾರು ಕಿಮೀ ನಿಂದ ಆರಂಭಿಸಿ, ನೂರಾರು ಕಿಮೀ, ದುರ್ಗಮ ಹಾದಿಯಲ್ಲಿ ಕ್ರಮಿಸಿ ಒಂದೇ ಬಾರಿ ಎರಡು ಸಾವಿರಕ್ಕೂ ಹೆಚ್ಚಿನ ಕಿಲೋಮೀಟರ್ ನ್ನು ಏಕಾಂಗಿಯಾಗಿ ತುಳಿಯುವ ಮೂಲಕ ತಾಲ್ಲೂಕಿನ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ನಗರಕ್ಕೆ ಆಗಮಿಸಿದ ಡಾ ದಿನೇಶ್ ರವರನ್ನು ತಾಲೂಕಿನ ಗಣ್ಯರನೇಕರು ಆತ್ಮೀಯವಾಗಿ ಬರಮಾಡಿಕೊಂಡರು.


ಕಳೆದ ಎರಡು ವರ್ಷಗಳ ಹಿಂದೆ ಚಂಡೀಗಢ ದ ಮೊಹಾಲಿಯಲ್ಲಿ ನಿವೇಶನ ಖರೀದಿಸಿ, ಅಲ್ಲೇ ಮನೆ ನಿರ್ಮಿಸಿ ಪತ್ನಿಪುತ್ರಿಯೊಂದಿಗೆ ವಾಸವಾಗಿರುವ ಅವರು ಪ್ರತಿವಾರದ ಒಂದು ದಿನ ಮೊಹಾಲಿಯ ತಮ್ಮ ಮನೆಯಿಂದ ರೂಪ್ ನಗರದ ಐಐಟಿ ವರೆಗೆ 40+40=80 ಕಿಮೀ ಸೈಕಲ್‌ ನಲ್ಲೇ ಹೋಗಿಬರುತ್ತಾರೆ. ಈಗಾಗಲೇ ರೂಪ್ ನಗರದಿಂದ ಶಿಮ್ಲಾ ವರೆಗೆ 360 ಕಿಮೀ, 100 ಕಿಮೀ ನ ನೈನಾದೇವಿ ಬೆಟ್ಟಕ್ಕೆ ಮೂರು ಬಾರಿ, 370 ಕಿಮೀ ದೂರದ ಪಾಂಗ್ ಡ್ಯಾಂ ವರೆಗೆ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿ ಹೋಗಿಬಂದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಬಿಡುವಿನ ವೇಳೆಯಲ್ಲಿ ಸೈಕಲ್ ಸವಾರಿಯಿಂದ ಆಗುವ ಲಾಭಗಳ ಬಗ್ಗೆ ಪುಂಖಾನುಪುಂಖವಾಗಿ ತಿಳಿಹೇಳುವ ಮೂಲಕ ಸೈಕಲ್ ಸವಾರಿಗೆ ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಅತ್ಯಂತ ದುರ್ಗಮ ಹಾದಿಯಾದ, ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ಮೊನಾಲಿ ಟು ಲಡಾಕ್ ನ ಲೇಕ್ ಕರ್ದುಂಗಾ ಪಾಸ್ ಗೆ ಸೈಕಲ್ ನಲ್ಲಿ ತೆರಳಬೇಕೆಂಬ ಮಹಾದಾಸೆಯಿದೆ. ಅದನ್ನು ಮಾಡಿಯೇ ತೀರುವುದಾಗಿ ಆತ್ಮವಿಶ್ವಾಸದಿಂದ ಉವಾಚಿಸುತ್ತಾರೆ.


ಚನ್ನಪಟ್ಟಣ ತಾಲ್ಲೂಕಿನಲ್ಲಿ ಈಗಾಗಲೇ ಡಾ ಮಲವೇಗೌಡ ಮತ್ತು ಡಾ ಶಂಕರ್ ರವರು ತಮ್ಮ ವೈದ್ಯ ವೃತ್ತಿಯ ಜೊತೆಗೆ ಸೈಕಲ್ ಸವಾರಿ ಮತ್ತು ವ್ಯವಸಾಯದಿಂದಲೇ ಜನಮನಗೆದ್ದಿದ್ಧಾರೆ. ವನಿತಾ ಸ್ಯಾರಿ ಸೆಲೆಕ್ಷನ್ ನ ವಿಜಯಕುಮಾರ್ ಗುಲೇಚಾ ಮತ್ತು ಯು ಸಿ ಪ್ರವೀಣ್ ರವರು ಸಹ ಹಿರಿಕಿರಿಯರ ಗುಂಪು ಕಟ್ಟಿಕೊಂಡು ಸೈಕಲ್ ತುಳಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಕೆಲವರು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಜಾಥಾವನ್ನು ಹಮ್ಮಿಕೊಂಡಿದ್ದಾರೆ. ಇವರ ಸಾಲಿಗೆ ನಮ್ಮ ತಾಲ್ಲೂಕಿನ ಮತ್ತೋರ್ವ ಸಾಹಸಿ ಜತೆಯಾದಂತಾಗಿದೆ.


ಸೈಕಲ್ ತುಳಿಯುವುದರಿಂದ ನಮಗೆ ದೈಹಿಕ ವ್ಯಾಯಾಮವಾಗುತ್ತದೆ. ಮನಸ್ಸು ಉಲ್ಲಸಿತವಾಗುತ್ತದೆ. ರೋಗರುಜಿನಗಳು ದೂರ ಓಡುತ್ತವೆ. ಆಯಸ್ಸು ಮತ್ತು ಆರೋಗ್ಯ ಸದೃಢವಾಗುತ್ತದೆ. ಜೊತೆಗೆ ವಾಯುಮಾಲಿನ್ಯ ಕಡಿಮೆಯಾಗುತ್ತದೆ. ಪ್ರತಿನಿತ್ಯವೂ ಹೊಲಗದ್ದೆ, ಮಾರುಕಟ್ಟೆ ಮತ್ತು ಸ್ಥಳೀಯ ಉದ್ಯೋಗಸ್ಥರು ಕಛೇರಿಗೆ ಸೈಕಲ್ ನಲ್ಲಿ ಹೋಗುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಎಳವೆಯಲ್ಲಿದ್ದಾಗಲೇ ಸೈಕಲ್ ತುಳಿಯುವುದರಿಂದಾಗುವ ಲಾಭಗಳನ್ನು ತಿಳಿಸಿಹೇಳುವ ಮೂಲಕ ಅವರನ್ನು ಸೈಕಲ್ ತುಳಿಯಲು ಪ್ರೇರೇಪಿಸಬೇಕು.

-ಡಾ ದಿನೇಶ್. ಗ್ರಂಥಪಾಲಕರು. ಐಐಟಿ ರೂಪ್ ನಗರ್. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑